ಅಭಿಯಾನ: ಚಾಮರಾಜನಗರದಲ್ಲಿ ದಾಖಲೆ ಸೃಷ್ಟಿಸಲಿರುವ ಬಸವ ಸಂಘಟನೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಜಿಲ್ಲೆಯ 500 ಹಳ್ಳಿಗಳಲ್ಲಿ ಅಭಿಯಾನದ ಭರ್ಜರಿ ಪ್ರಚಾರ

ಚಾಮರಾಜನಗರ

ರಾಜ್ಯದಲ್ಲಿ ಭರದಿಂದ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ಬರುತ್ತಿದೆ.

ಲಿಂಗಾಯತ ಸಮುದಾಯ ಕಡಿಮೆಯಿರುವ ಜಿಲ್ಲೆಗಳಲ್ಲಿಯೂ ಸಭಾಂಗಣ ತುಂಬಿ, ನೂರಾರು ಜನ ಸಾಮರಸ್ಯದ ಮೆರವಣಿಗೆಯಲ್ಲಿ ಸಾಗಿದ್ದಾರೆ. ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಹತ್ತಾರು ಸಾವಿರ ಜನ ನೆರೆದು ಈ ನಾಡಿನಲ್ಲಿ ಬಸವಣ್ಣನವರ ಪ್ರಭಾವವೆಷ್ಟಿದೆ ಎಂದು ತೋರಿಸಿದರು.

ಇದಕ್ಕೆ ಸಮಾನವಾಗಿ ಸೆಪ್ಟೆಂಬರ್ 24ರಂದು ಅಭಿಯಾನ ನಡೆಸಲು ಚಾಮರಾಜನಗರ ಜಿಲ್ಲೆಯ ಬಸವ ಸಂಘಟನೆಗಳು ಎರಡು ತಿಂಗಳಿಂದ ದುಡಿಯುತ್ತಿವೆ.

ಉತ್ತರದ ಬೀದರಿನಿಂದ ದಕ್ಷಿಣದ ಚಾಮರಾಜನಗರಕ್ಕೆ ಬಂದಷ್ಟೂ ಬಸವತತ್ವ ಕರಗುತ್ತದೆ ಎಂಬ ಸಾಮಾನ್ಯ ಮಾತಿದೆ. ಈ ಕಲ್ಪನೆ ಸದ್ಯದಲ್ಲೇ ಸುಳ್ಳಾಗಲಿದೆ ಎನ್ನುವುದು ಇಲ್ಲಿಯ ಬಸವ ಸಂಘಟನೆಗಳ ಮಾತು.

ಅಭಿಯಾನಕ್ಕೆ ನಡೆದಿರುವ ಕೆಲವು ಸಿದ್ಧತೆಗಳನ್ನು ಗಮನಿಸಿ:

  • ಜಿಲ್ಲೆಯ ಐದು ತಾಲೂಕುಗಳ 500 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆದಿದೆ. ಹಳ್ಳಿಗಳಲ್ಲಿ ಅಭಿಯಾನದ ಬಗ್ಗೆ 10X8 ಅಡಿಯ ಫ್ಲೆಕ್ಸ್ ಹಾಕಲಾಗಿದೆ. ಬೇರೆ ಬೇರೆ ಹಳ್ಳಿಗಳಿಂದ ಶರಣ ಶರಣೆಯರು ಸ್ವಂತ ಖರ್ಚಿನಿಂದ 200 ಬಸ್ಸುಗಳಲ್ಲಿ ಬರುವ ನಿರೀಕ್ಷೆಯಿದೆ. ಒಂದು ಲಕ್ಷದ ಐವತ್ತು ಸಾವಿರ ಸ್ಟಿಕರ್, ಕರ ಪತ್ರ ಮುದ್ರಿಸಿ ಹಂಚಲಾಗಿದೆ.
  • ಜಿಲ್ಲೆಯ ಬಹುತೇಕ ಮಠಾಧೀಶರು ಟೊಂಕಕಟ್ಟಿಕೊಂಡು ಅಭಿಯಾನದ ಕೆಲಸಕ್ಕೆ ಇಳಿದಿದ್ದಾರೆ. ಮನೆ ಮನೆಗೆ ಹೋಗಿ ತಾವೇ ಕರಪತ್ರ ಹಂಚಿ, ಹಳ್ಳಿ ರಸ್ತೆಗಳಲ್ಲಿ ಮೈಕ್ ಹಿಡಿದುಕೊಂಡು ಅಭಿಯಾನದ ಬಗ್ಗೆ, ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಮಠಾಧೀಶರು ತಾವೇ ಎರಡು ಲಕ್ಷ ದಾಸೋಹ ಸಂಗ್ರಹಿಸಿ ಅಭಿಯಾನಕ್ಕೆ ನೀಡಿದ್ದಾರೆ. ಪಡುಗೂರು, ಚಾಮರಾಜನಗರ, ಮರಿಯಾಲ, ಮೂಡಗೂರು, ಕಬ್ಬಳ್ಳಿ, ಕುಂತೂರು, ಯಳಂದೂರು, ಗೌಡಳ್ಳಿ, ಕೆಸ್ತೂರು, ಚಿಕ್ಕಿಂದವಾಡಿ, ಸಾಲೂರು, ಮುಡಿಗುಂಡ, ಗುಂಡೆಗಾಲ ಮುಂತಾದ ಮಠಗಳ ಶ್ರೀಗಳು ಸ್ವತಃ ಅಭಿಯಾನದ ಪ್ರಚಾರಕ್ಕೆ ಇಳಿದಿದ್ದಾರೆ.
  • ಅಭಿಯಾನದ ತಯಾರಿ ವಿವಿಧ ಕಾಯಕ ಗುಂಪುಗಳನ್ನು ತಲುಪಿದೆ. ವಕೀಲ, ವೈದ್ಯ, ಅಂಗನವಾಡಿ ಕಾರ್ಯಕರ್ತರ, ಗ್ರಾಮ ಲೆಕ್ಕಿಗರ, ಸಹಕಾರ ಸಂಘಗಳ ಮುಖ್ಯಸ್ಥರ, ಶಿಕ್ಷಕರ, ಹಾಲಿನ ಡೇರಿ ಸಂಘಗಳ ಮುಖ್ಯಸ್ಥರ ಜೊತೆ ಕೊನೆಗೆ ಪೋಲೀಸರ ತಂಡಗಳ ಜೊತೆಗೂ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಸಭೆ ನಡೆದಿದೆ.

ಜಿಲ್ಲೆಯಲ್ಲಿ ಸಮುದಾಯದ ಪೋಲೀಸರ ಸಂಖ್ಯೆಯೇ 1000 ದಾಟುತ್ತದೆ. ಈ ಎಲ್ಲಾ ಕಾಯಕ ತಂಡಗಳಿಗೆ ಅಭಿಯಾನಕ್ಕೆ ಜನ ಸೇರಿಸುವ ಸಾಮರ್ಥ್ಯವಿದೆ.

  • ಐದು ತಾಲೂಕುಗಳ ಸಮಿತಿಗಳಲ್ಲಿ ಕನಿಷ್ಠ 50 ಜನ ಅಭಿಯಾನಕ್ಕೆ ದುಡಿಯುತ್ತಿದ್ದಾರೆ. ಜಿಲ್ಲಾ ಸಮಿತಿಯಲ್ಲಿ 70-100 ಜನ ದುಡಿಯುತ್ತಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಹತ್ತಾರು ಬಸವ ಪರ ಸಂಘಟನೆಗಳು, ಸಮಾಜಗಳು ಅಭಿಯಾನಕ್ಕೆ ಕೈ ಜೋಡಿಸಿವೆ.
  • ಜೆಎಸ್ಎಸ್ ಕಾಲೇಜಿನ ಆವರಣದಲ್ಲಿ ಸಮಾವೇಶಕ್ಕೆ ಬರುವ 25,000 ಜನರಿಗೆ ಬೇಕಾದ ಸೌಕರ್ಯ ಒದಗಿಸಲು ಸಿದ್ಧತೆ ನಡೆಯುತ್ತಿದೆ. 200 ಫ್ಲಡ್ ಲೈಟ್, 4 ಬೃಹತ್ ಜನರೇಟರ್, 5,000 ಕುರ್ಚಿಗಳನ್ನು ಹಾಕಿಸಲಾಗುತ್ತಿದೆ. ಎಲ್ಲಾ ಕೆಲಸಗಳೂ ಸುತ್ತೂರು ಶ್ರೀಗಳ ಬೆಂಬಲದಿಂದ ಭರದಿಂದ ನಡೆಯುತ್ತಿವೆ.

ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್ರಿಚ್ ಮಹದೇವಸ್ವಾಮಿ ಹಳ್ಳಿ “ಹಳ್ಳಿಗಳಲ್ಲಿಯೂ ಬಸವ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕೆಲವು ತಿಂಗಳ ಹಿಂದೆ ಅಭಿಯಾನದ ಮಾತು ಶುರುವಾದಾಗ ಇಡೀ ರಾಜ್ಯದಲ್ಲಿ, ನಮ್ಮ ಜಿಲ್ಲೆಯಲ್ಲಿ ಕಾರ್ಯಕ್ರಮ ಈ ಪ್ರಮಾಣದಲ್ಲಿ ನಡೆಯುತ್ತೆ ಅನ್ನುವ ಕಲ್ಪನೆಯೇ ಇರಲಿಲ್ಲ.

ನಾಡಿನ ಬಸವಾಭಿಮಾನಿಗಳಿಗೆ ಮುನ್ನೆಲೆಗೆ ಬರಲು ಅವಕಾಶ ಸಿಕ್ಕಿರಲಿಲ್ಲ. ಅದು ಈಗ ಅಭಿಯಾನದ ಮೂಲಕ ದೊರೆತಿದೆ,” ಎನ್ನುತ್ತಾರೆ.

ಅಭಿಯಾನದಲ್ಲಿ ಎದ್ದು ಕಾಣುತ್ತಿರುವದೆಂದರೆ ಬಸವ ಸಂಘಟನೆಗಳ ಒಗ್ಗಟ್ಟು. ಅಭಿಯಾನ ಯಾವುದೇ ಒಂದು ಸಂಘಟನೆಯ ಸಾಧನೆಯಾಗದೆ ಎಲ್ಲಾ ಸಂಘಟನೆಗಳ ಸಾಮೂಹಿಕ ಕಾರ್ಯಕ್ರಮವಾಗಿದೆ.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಯತ್ನದಿಂದ ಶುರುವಾದ ಅಭಿಯಾನದ ಎಲ್ಲಾ ತಾಲೂಕು ಸಮಿತಿಗಳಲ್ಲಿ ವೀರಶೈವ ಮಹಾಸಭಾ ಸದಸ್ಯರೇ ಅಧ್ಯಕ್ಷರಾಗಿದ್ದಾರೆ. ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ನೌಕರರ ಸಂಘಗಳಂತಹ ಹಲವಾರು ಸಂಘಟನೆಗಳು ಕೈ ಜೋಡಿಸಿವೆ.

ಅಭಿಯಾನ ಕೇವಲ ಹಬ್ಬವಾಗಿ ಮಾತ್ರ ನಡೆಯುತ್ತಿಲ್ಲ. ಬಸವತತ್ವದ ಸ್ವಾಮೀಜಿಗಳು, ಸಂಘಟನೆಗಳ ಕಾರ್ಯಕರ್ತರು ಈ ಅವಕಾಶ ಬಳಸಿಕೊಂಡು ಸೈದ್ಧಾಂತಿಕ ಜಾಗೃತಿ ಮೂಡಿಸುತ್ತಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯ ಬಗ್ಗೆ, ಜನಗಣತಿಯಲ್ಲಿ ಲಿಂಗಾಯತ ಎಂದು ಪೆನ್ನಿನಲ್ಲೇ ಬರೆಸಿ ಎಂದು ಹಳ್ಳಿ ಹಳ್ಳಿಗಳಲ್ಲಿ ತಿಳಿ ಹೇಳುತ್ತಿದ್ದಾರೆ.

“ಎಸ್ ಎಂ ಜಾಮದಾರ್, ಸಾಣೇಹಳ್ಳಿ ಶ್ರೀಗಳಂತವರ ಚಿಂತನೆ ಅಭಿಯಾನದ ಮೇಲೆ ಬಹಳ ಪ್ರಭಾವ ಬೀರಿದೆ. 24ರಂದು ಸಮಾವೇಶದ ವೇದಿಕೆಯಿಂದ ಇಡೀ ರಾಜ್ಯಕ್ಕೆ ದೊಡ್ಡ ಸಂದೇಶ ಹೋಗಲಿದೆ,” ಎಂದು ಎನ್ರಿಚ್ ಮಹದೇವಸ್ವಾಮಿ ಹೇಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
5 Comments
  • ಚಾಮರಾಜ ನಗರದಲ್ಲಿ ಅದ್ಬುತವಾದ ಸಂಘಟನೆಗೆ, ವಿವಿಧ ಸ್ಥಳಗಳಿಂದ ಬರುತ್ತಿರುವ ತಮ್ಮೆಲ್ಲರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿ ಎಂದು ಹಾರೈಸುತ್ತಾ. ಎಲ್ಲರಿಗೂ ಶುಭವಾಗಲಿ.

  • ಚಾಮರಾಜನಗರ ಜಿಲ್ಲೆಯಲ್ಲಿ ಜರುಗಲಿರುವ ಬಸವ ಸಂಸ್ಕೃತಿ ಅಭಿಯಾನ ನಿಮ್ಮೆಲ್ಲರ ಪ್ರಯತ್ನಕ್ಕೆ ನಿರೀಕ್ಷೆ ಮೀರಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸುವೆ .👍✌️🌹🤝🙏 ಸಂಗನಗೌಡ ಗುರುಪಾದಪ್ಪ ಪಾಟೀಲ .
    ಮೊ- 9632207444 ಅಥಣಿ 591304 ಬೆಳಗಾವಿ ಜಿಲ್ಲೆ .

  • ಬೀದರ ಬಸವನಾಡಿನಿಂದ ಚಾಮರಾಜನಗರದ ವರೆಗೆ ಬಸವಸಂಸ್ಕೃತಿ ಒಂದೇ ಸಮಾನವಾಗಿ ನಡೆದಿದೆ. ಜೈ ಬಸವೇಶ.

  • ನಿಮ್ಮೆಲ್ಲರ ಪ್ರಯತ್ನ ಸಫಲವಾಗಲಿ. ಬಸವಣ್ಣ ಉಳಿದವರಿಗೂ ಸದ್ಬುದ್ದಿಯನ್ನು ನೀಡಲಿ. ಲಿಂಗಾಯತನಾಗಿರುವ ನನ್ನದು ಸಂಪೂರ್ಣ ಬೆಂಬವಿದೆ.

  • ಚಾಮರಾಜನಗರದಲ್ಲಿ ಈ ಅಭಿಯಾನ ಯಶಸ್ವಿಯಾದರೆ, ಬಸವ ತತ್ವದ ಒಂದು ಮುಕುಟ ಬೀದರ್ ,ಇನ್ನೊಂದು ಮುಕುಟ ಚಾಮರಾಜನಗರ ಜಿಲ್ಲೆಯೇ ಆಗಲಿದೆ , ಚಾಮರಾಜನಗರ ಜಿಲ್ಲೆಯ ಎಲ್ಲ ಬಸವಪರ ಸಂಘಟನೆಗಳಿಗೆ ಹಾಗೂ ಪೂಜ್ಯರಿಗೆ ಶರಣು ಶರಣಾರ್ಥಿಗಳು.

    ಬೆಂಗಳೂರಿನಲ್ಲಿ‌ನಡೆಯುವ ಸಮಾರೋಪ ಸಮಾರಂಭಕ್ಕೆ ಚಾಮರಾಜನಗರ ಜಿಲ್ಲೆಯ ಜನ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಬೇಕು.

Leave a Reply

Your email address will not be published. Required fields are marked *