ಚನ್ನಬಸವ ಪುರಾಣವು ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಹೊಸ ರೂಪ-ಆಕೃತಿಯನ್ನು ನೀಡುವ ಕೃತಿಯಾಗಿದೆ. ಈ ವಿಷಯವಾಗಿ ಉಪಮೆ-ಉಪಮಾನಗಳ ಕುರಿತು ಸಿದ್ಧಾರೂಢರ ಜೀವನದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಿದ್ಧಾರೂಢರು ಒಮ್ಮೆ ಸಂಚಾರಕಾಲದಲ್ಲಿ ಅಲಮಯ್ಯ ಎಂಬ ಶಾಸ್ತ್ರಿ ಹೇಳುತ್ತಿದ್ದ ಪುರಾಣ ಕಾರ್ಯಕ್ರಮ ಕೇಳಲು ಬಂದರು. ಅಂದು ಶಾಸ್ತ್ರಿ ಚನ್ನಬಸವ ಪುರಾಣದಲ್ಲಿಯ ಈಶ್ವರನ ಪಂಚ ವಿಂಶತಿಯು, ಘನತರ ಲೀಲೆಯೊಳಗೆ ಅಂಧಕನ ಹಗೆತನವೆಂಬುದೊಂದು ಕಥೆಯನ್ನು ಹೇಳುತ್ತಿದನು. ಅದರೊಳಗೆ ಒಂದು ಅಲಂಕಾರ ಬಂದಿತು. ಅದೇನಂದರೆ, ‘ಮನಸಿಜಾರಿಯ ಮುಂದೆ, ಎಸೆದುದು ಮನಸಿಜನ ಸೊಕ್ಕಾನೆ, ಅದುವೆ ಮಾಮರವಾಗಿ ಎಸೆದುದು” ಇದರಲ್ಲಿ ಮರಕ್ಕೂ ಮತ್ತು ಆನೆಗೂ ಉಪಮೆಯ ಉಪಮಾನ ಇರುವದೆಂದೂ, ಮತ್ತು ಆ ಮರದ ಮೇಲೆ ಮಧು-ಮಿತ್ರರೆಂಬ ಎರಡು ಚದುರ ಪಕ್ಷಿಗಳು ಸಂತೋಷದಿಂದ ಮಾತನಾಡುತ್ತಿದ್ದವು ಆ ಮೃದು ಭಾಷಣದೊಳಗಿಂದ ಒಂದು ಉರುತರದ ವಿದ್ಯುತ್ ಶಬ್ದವು ಹೊರಟಿತು ಎಂದು ಶಾಸ್ತ್ರಿ ಹೇಳುತ್ತಿರುವಾಗ, ತಕ್ಷಣ ಸಿದ್ಧಾರೂಢರು ‘ಶಾಸ್ತ್ರಕೋವಿದರೆ, ನೀವು ಮರಕ್ಕೂ ಆನೆಗೂ ಹೋಲಿಸಲು ಅದು ಸರಿ ಹೋಯಿತು. ಪರಂತು ವಿದ್ಯುತ್ ಎಂಬುದನ್ನು ಮರಕ್ಕೊ ಗಜಕ್ಕೊ? ಯಾವುದಕ್ಕೆ ಹೋಲಿಸುವಿರಿ?’ ಎಂದು ಕೇಳಿದರು. ಶಾಸ್ತ್ರಿ ಕಾವ್ಯಮೀಮಾಂಸೆಯ ಒಳನೋಟ ತಿಳಿಯದೆ ಮೌನವಾದನು. ‘ಶಾಸ್ತ್ರಿಗಳೆ! ನೀವು ಆ ವಿದ್ಯುತ್ ಶಬ್ದವನ್ನು ಮರಕ್ಕೆ ಹೋಲಿಸುತ್ತೇವೆಂದರೆ, ಅದು ಜಡವಲ್ಲವು. ಅದು ಕಾರಣ ಅದು ಸಲ್ಲದು. ಇನ್ನು ಗಜಕ್ಕೆ ಹೋಲಿಸುವದು ಸಾಧ್ಯವಿಲ್ಲ’ ಎಂದರು ಸಿದ್ಧಾರೂಢರು. ಆಗ ಶಾಸ್ತ್ರಿಯು ಎಚ್ಚತ್ತುಕೊಂಡು ‘ಇದಕ್ಕೆ ಪರಿಹಾರ ತಾವೇ ಹೇಳಬೇಕೆಂದು’ ಬಿನ್ನವಿಸಿಕೊಂಡನು.
ಆಗ ಸಿದ್ಧಾರೂಢರು ‘ಇರುವೆ ಮೊದಲು ಆನೆ ಕಡೆಯಾಗಿ ಎಲ್ಲ ಪ್ರಾಣಿಗಳ ತನುಭಾವ ದರ್ಪಣದಲ್ಲಿ ಚಿದಾಭಾಸನಿಗೆ ನೀನು ಹೇಳುವ ವಿದ್ಯುತ್ತನ್ನು ಹೋಲಿಸಿದರೆ, ಅದು ಸರಿ ಹೋಗುವದು. ಹೇಗಂದರೆ ಮೇಘದಲ್ಲಿಯ ವಿದ್ಯುತ್ತಿನಿಂದ ಮಿಂಚು ಹುಟ್ಟಿ ಪೃಥ್ವಿ ಮೇಲಿರುವ ಸಮಸ್ತ ವಸ್ತುಗಳನ್ನು ಪ್ರಕಾಶಿಸಿ, ಬಳಿಕ ತಕ್ಷಣ ತನ್ನ ನಿಜಾಶ್ರಯವಾದ ಮೇಘದಲ್ಲಿ ಲಯಿಸುವಂತೆ, ಚಿದಾಭಾಸನು ಕೂಟಸ್ಥನಲ್ಲಿ ಕಲ್ಪಿತವಾದ ಬುದ್ದಿ ಎಂಬ ದರ್ಪಣದಲ್ಲಿ ಹೊಳೆದು, ಹದಿನಾಲ್ಕು ಅಧಿದೇವತೆಗಳಿಂದ ಭಾಸಿತಗಳಾದ, ಭೌತಿಕ ವಸ್ತುಗಳನ್ನು ಮತ್ತು ತ್ರಿಪುಟಿಗಳನ್ನು ಏಕಕಾಲಕ್ಕೆ ಪ್ರಕಾಶಿಸಿ, ಆ ಬಳಿಕ ತಾನು ತನ್ನ ಆಶ್ರಯವೆನಿಪ ಕೂಟಸ್ಥನಲ್ಲಿ ಕೂಡುವನು. ಅದು ಕಾರಣ, ವಿದ್ಯುತ್ತಿನ ಉಪಮಾನವು, ಆ ಮತ್ತೇಭ (ಮದಗಜ) ನಲ್ಲಿ ಅಡಗಿದ ಚಿದಾಭಾಸನಿಗೆ ಹೋಲಿಸಿದರೆ, ಅದು ಸರಿಹೋಗುವದು’ ಎಂದು ಹೇಳಿದರು. ಸಿದ್ಧಾರೂಢರ ಚನ್ನಬಸವ ಪುರಾಣದ ಈ ವಿಶ್ಲೇಷಣೆಗೆ ನೆರೆದ ಜನರೆಲ್ಲ ದಂಗಾಗಿ ಹೋದರೆಂಬ ಕತೆ ಬರುತ್ತದೆ.
೧೨ನೇ ಶತಮಾನದಲ್ಲಿ ಜರುಗಿದ ಸಮಾಜೋಧಾರ್ಮಿಕ ಕ್ರಾಂತಿಯ ನೇತೃತ್ವ ವಹಿಸಿದ ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣನವರು ಅವಿರಳಜ್ಞಾನಿ, ಷಟ್ಸ್ಥಲ ಚಕ್ರವರ್ತಿ ಎಂದು ಖ್ಯಾತರಾದವರು. ಹರಿಹರ-ರಾಘವಾಂಕರು ಚೆನ್ನಬಸವಣ್ಣನವರನ್ನು ಕುರಿತು ಕಾವ್ಯಗಳನ್ನು ಬರೆಯದ ಕಾರಣ ತಿಳಿಯುವುದಿಲ್ಲ. ಆದರೆ ವಿರೂಪಾಕ್ಷ ಪಂಡಿತ ‘ಚನ್ನಬಸವ ಪುರಾಣ’ ಕೃತಿಯ ಮೂಲಕ ಚನ್ನಬಸವಣ್ಣನವರ ಕುರಿತು ಒಂದು ಪೂರ್ಣಪ್ರಮಾಣದ ಮಹಾಕಾವ್ಯವನ್ನು ರಚಿಸಿದ.
೮೮ ವರ್ಷಗಳ ಹಿಂದೆ ಪ್ರೊ. ಎಸ್.ಎಸ್.ಬಸವನಾಳರಿಂದ ಶಾಸ್ತ್ರಶುದ್ಧವಾಗಿ ಸಂಪಾದನೆಗೊಂಡು, ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಿಂದ ಪ್ರಕಟವಾಗಿದ್ದ ವಿರೂಪಾಕ್ಷ ಪಂಡಿತ ವಿರಚಿತ “ಚನ್ನಬಸವ ಪುರಾಣ”ದ ಪರಿಷ್ಕರಣ ಕೃತಿಯನ್ನು (೧೦೫೦ ಪುಟ ವ್ಯಾಪ್ತಿಯ ಬೃಹತ್ ಕೃತಿ). ಡಾ. ವೀರಣ್ಣ ರಾಜೂರ ಅವರು ಧಾರವಾಡ ಮುರುಘಾಮಠದ ಬಾಲಲೀಲಾಮಹಾಂತಶಿವಯೋಗೀಶ್ವರ ಗ್ರಂಥಮಾಲೆಯ ಮೂಲಕ ಆಗು ಮಾಡಿದ್ದಾರೆ. ಅವರಿಗೆ ವಂದನೆ-ಅಭಿನಂದನೆಗಳು.
ಷಟ್ಸ್ಥಲಜ್ಞಾನಿಯಾಗಿ, ವಿಜಯನಗರದ ಹಿರಿಯಮಠದಲ್ಲಿ ಗುರುವಾಗಿದ್ದ ಸಿದ್ಧವೀರೇಶನ ಶಿಷ್ಯ ವಿರೂಪಾಕ್ಷಪಂಡಿತ. ‘ಅತ್ಯುರುತಶಿವಾಚಾರ ಸಂಪನ್ನ ಸುಹೃತ್ಯವಿಪ್ರತತಿವಾರ್ಧಿವಡಬಂ’ ಆದ ಈತನ ಬಳಿಗೆ ಸಕಲ ಶಿವಭಕ್ತ ಸಂಕಲವೂ ಬಂದು ‘ಧರೆಯೊಳಗೆ ಸಕಲ ಶರಣರ ಕಥೆಗಳಂ ಕವೀಶ್ವರರೊಲ್ದುಪೇಳ್ದರೀ ಚೆನ್ನಬಸವೇಶ್ವರನ ಚರಿತೆಯನದೊರ್ವರುಂ ಪೇಳೆದಿಲ್ಲೆ ಮಗದಂ’ ಎಂದು ಕೇಳಿಕೊಳ್ಳಲು, ವಿರೂಪಾಕ್ಷಪಂಡಿತನು ಜಗತ್ಸೇವ್ಯವಾದ ವಿನೂತನ ಕಾವ್ಯ ‘ಚನ್ನಬಸವಪುರಾಣ’ವನ್ನು ರಚಿಸಿದ. ಸಾಕ್ಷಾತ್ ವಿರೂಪಾಕ್ಷನೇ ತನ್ನಿಂದ ಈ ಕಾವ್ಯವನ್ನು ಹೇಳಿಸುತ್ತಿದ್ದಾನೆಂದು ಕವಿ ಭಾವಿಸಿದ. ಕಾವ್ಯವು ವಾರ್ಧಕ ಷಟ್ಪದಿಯ ೨೯೦೦ ಪದ್ಯಗಳನ್ನು ಒಳಗೊಂಡು ೬೩ ಸಂಧಿಗಳಲ್ಲಿ ಹಬ್ಬಿಹರಡಿದೆ. ಕವಿಯು ವಿರಕ್ತನಾಗಿ, ತನ್ನ ಗುರುವಿನ ಸ್ಥಾನದಲ್ಲಿ ಪಟ್ಟ್ಟಾಧಿಕಾರ ಪಡೆದಿರಬಹುದು. ಅಂತೆಯೆ ಏನೋ ! ತನ್ನ ಸಾಂಸಾರಿಕ ಸಂಬಂಧಗಳೊಂದನ್ನು ಆತ ಕಾವ್ಯದಲ್ಲಿ ಹೇಳಿಕೊಂಡಿಲ್ಲ. ಈ ಕಾವ್ಯದ ಹೆಸರನ್ನು ನೋಡಿ, ಇದು ಕೇವಲ ಚೆನ್ನಬಸವಣ್ಣನ ಸಮಗ್ರ ಜೀವನಚರಿತ್ರೆಯೆಂದು ತಿಳಿಯಬಾರದು. ಐದು ಕಾಂಡಗಳಲ್ಲಿ ವಿಸ್ತಾರವಾಗಿರುವ ಈ ಕಾವ್ಯದ ಮೊದಲ ಕಾಂಡದಲ್ಲಿ ಚೆನ್ನಬಸವಣ್ಣನ ಅವತಾರ, ಮಹತ್ವ, ಪವಾಡಗಳು, ವ್ಯಕ್ತಿತ್ವ ಇತ್ಯಾದಿಗಳ ವಿವರಗಳು ದೊರೆಯುತ್ತವೆ ! ಮುಂದಿನ ಮೂರು ಕಾಂಡದಲ್ಲಿ ಪರಮೇಶ್ವರನ ಪಂಚವಿಂಶತಿ ಲೀಲೆಗಳು ವರ್ಣಿತವಾಗಿವೆ; ಮೂರನೆಯ ಕಾಂಡದಲ್ಲಿ ಲಿಂಗಾಯತ ಧರ್ಮದ ಮಹತ್ವ ಷಟ್ಸ್ಥಲ ವಿವೇಚನೆ, ಪುರಾತನರು, ವಿರಕ್ತರು, ಅಮರಗಣಗಳು, ಕಾಲಜ್ಞಾನ ಇತ್ಯಾದಿಗಳು ತುಂಬಿವೆ. ಕಾಲಜ್ಞಾನವನ್ನು ಹೇಳುವಾಗ ಚೆನ್ನಬಸವಣ್ಣನ ವೃತ್ತಾಂತವೂ ಬರುತ್ತದೆ. ಆದ್ದರಿಂದ ಇಲ್ಲಿ ಕಾವ್ಯಾಂಶಕ್ಕಿಂತಲೂ ಧರ್ಮ ನಿರೂಪಣೆ ಪ್ರಮುಖವಾಗಿದೆ. ‘ಲಿಂಗಾಯತ ಪುರಾತನರ ಮತ್ತು ಕವಿಗಳ ಕಾಲವನ್ನು ನಿರ್ಣಯಿಸುವುದಕ್ಕೆ ಈ ಗ್ರಂಥವು ಬಹಳ ಉಪಯುಕ್ತವಾಗಿದೆ’ ಎಂಬ ಕವಿಚರಿತೆಕಾರ ಆರ್. ನರಸಿಂಹಾಚಾರ್ ಅವರ ಅಭಿಪ್ರಾಯ ಗಮನಾರ್ಹವಾದುದು. ವಿಜಯನಗರಕ್ಕೆ ಸಂಬಂಧಿಸಿದಂತೆ ಹಲವು ಐತಿಹಾಸಿಕ ಘಟನೆಗಳು ಇಲ್ಲಿ ಪ್ರಸ್ತಾಪಿತವಾಗಿವೆ. ಧರ್ಮವೀರನೊಬ್ಬನ ಜೀವನವೃತ್ತಾಂತವನ್ನು ಒಳಗೊಂಡ ಕಾವ್ಯದಲ್ಲಿ ಅಷ್ಟಾದಶವರ್ಣನೆಗಳೂ, ನವರಸನಿರೂಪಣೆಯೂ ಬರಲೇಬೇಕೆಂಬ ಕವಿಯ ಕೆಚ್ಚಿನ ಫಲವಾಗಿ ಕಥೆಯ ಏಕಮುಖತೆಗೆ ಭಂಗ ಬಂದಿದೆ ಎಂದು ಭಾಸವಾದರೂ ಕಾವ್ಯದೃಷ್ಟಿಯಿಂದ ಆಗಿರುವ ಈ ನಷ್ಟವನ್ನು ಧರ್ಮದೃಷ್ಟಿಯಿಂದ ನಡೆದಿರುವ ನಿರೂಪಣೆ ತುಂಬಿಕೊಟ್ಟಿದೆ. ಬರಿಯ ರಸವತ್ಕಾವ್ಯವನ್ನು ಕೇಳುವುದಕ್ಕಿಂತ ಹೆಚ್ಚು ಶ್ರದ್ಧೆಯಿಂದ, ಭಕ್ತಿಯಿಂದ ಜನ ಇದನ್ನು ಕೇಳುತ್ತಾರೆ. ಶಿ.ಶಿ. ಬಸವನಾಳರು ಜೈಮಿನಿಭಾರತವು ಜನಪ್ರಿಯವಾಗಿರುವುದಕ್ಕೂ ಇದೇ ಕಾರಣ ಎಂದು ಸೂಚಿಸುತ್ತಾರೆ. ಚೆನ್ನಬಸವಪುರಾಣವು ಜೈಮಿನಿಭಾರತಕ್ಕಿಂತ ಸರ್ವೋತ್ಕೃಷ್ಟವಾಗಿದೆ ಎಂಬುದು ಶಿ.ಶಿ. ಬಸವನಾಳರ ಅಭಿಪ್ರಾಯ. ಪಾಂಡಿತ್ಯ, ಪ್ರತಿಭೆ, ಕಲ್ಪನಾ ಶಕ್ತಿಗಳಲ್ಲಿ ಲಕ್ಷ್ಮಿಶ ಕವಿಗಿಂತ ವಿರೂಪಾಕ್ಷ ಪಂಡಿತ ಹೆಚ್ಚು ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.
ವಿರೂಪಾಕ್ಷಪಂಡಿತನ ಪ್ರಕೃತಿವರ್ಣನೆ ಮನೋಹರವಾಗಿ ಹೃದಯಂಗಮವಾಗಿದೆ. ಆತನ ಕಾವ್ಯದ ಒಂಬತ್ತನೆ ಸಂಧಿಯೆಲ್ಲವೂ ಸೂರಾಸ್ತ, ಸೂರ್ಯೋದಯ, ಚಂದ್ರೋದಯ, ಬೆಳದಿಂಗಳಿನ ವರ್ಣನೆಗೆ ಮೀಸಲಾಗಿದೆ. ವಿರೂಪಾಕ್ಷ ಪಂಡಿತನ ದೇಶಪ್ರೇಮ ತುಂಬುಹೊಳೆಯಾಗಿ ಹರಿದಿದೆ. ವಿರೂಪಾಕ್ಷಪಂಡಿತನು ಪ್ರತಿಭೆ ಪಾಂಡಿತ್ಯಗಳನ್ನು ಸಮರಸವಾಗಿ ಬೆರೆಸಿ, ತನ್ನ ಕಾವ್ಯಕರ್ಮಕ್ಕೆ ಇದನ್ನು ಸಾಧನವಾಗಿ ಬಳಸುತ್ತಾನೆ. ಇದರಿಂದ ಆತನ ಕಾವ್ಯಕ್ಕೆ ಒಂದು ಹೊಳಪು ಬಂದಿದೆ.
ಪ್ರೊ. ಬಸವನಾಳರು ತಮ್ಮ ಅಪಾರ ಪಾಂಡಿತ್ಯ, ಪರಿಶ್ರಮ, ಸಂಶೋಧನ ಸಾಮರ್ಥ್ಯ, ವಿಮರ್ಶನ ಶಕ್ತಿಗಳ ಮೂಲಕ ವಿರೂಪಾಕ್ಷ ಪಂಡಿತರ ಚೆನ್ನಬಸವ ಪುರಾಣ’ವನ್ನು ಶಾಸ್ತçಶುದ್ಧವಾಗಿ ಪರಿಷ್ಕರಿಸಿದ್ದಾರೆ. ಇವರ ಪರಿಷ್ಕರಣ ಕೃತಿಗಳಲ್ಲಿಯೇ ಈ ಕೃತಿ ಅಗ್ರಸ್ಥಾನ ಪಡೆದಿದೆ. ಬಸವನಾಳರು ಅಚ್ಚಕಟ್ಟಾಗಿ ಸಂಸ್ಕರಿಸಿದ ೧೦೩೨ ಪುಟಗಳ ಬೃಹತ್ ಗಾತ್ರದ ಈ ಮಹಾಕೃತಿಯನ್ನು ಧಾರವಾಡದ
ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ’ಯ `ಸಾಹಿತ್ಯ ಸಮಿತಿ’ ಶಾಖೆ ೧೯೩೩ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಿಸಿತ್ತು. ಈ ಪುರಾಣ ಕಾವ್ಯದ ಪರಿಷ್ಕರಣದ ಆವಶ್ಯಕತೆ, ಪ್ರಕಟಣೆಯ ಉದ್ದೇಶಗಳನ್ನು ಮುನ್ನುಡಿಯಲ್ಲಿ ಹೀಗೆ ವಿವರಿಸಿದ್ದಾರೆ ‘ವೀರಶೈವ ವಾಙ್ಮಯ ಶಾಖೆಯೊಂದನ್ನು ಏರ್ಪಡಿಸಿದರು. ವಾಙ್ಮಯವನ್ನು ಪ್ರಸಾರ ಮಾಡುವ ಅನೇಕ ಸಾಧನಗಳಲ್ಲಿ ಪುರಾತನ ಗ್ರಂಥಗಳನ್ನು ಪರಿಶೋಧಿಸಿ, ಚೆನ್ನಾಗಿ ಅಚ್ಚು ಮಾಡಿಸುವುದು ಒಂದಾಗಿರುವುದು. ಚೆನ್ನಬಸವ ಪುರಾಣವನ್ನು ಪ್ರಸಿದ್ಧಿಸುವ ಕಾರ್ಯವನ್ನು ೧೯೩೨ನೆಯ ಇಸ್ವಿಯಲ್ಲಿ ಆರಂಭಿಸಿದರು. ಈ ಗ್ರಂಥವನ್ನೇ ಮೊದಲು ಪ್ರಸಿದ್ಧಿಸಲು ಹಲವು ಕಾರಣಗಳುಂಟು. ಇದರಲ್ಲಿ ವೀರಶೈವ ತತ್ವಗಳೂ ಪರಶಿವನ ಲೀಲೆಗಳೂ ಸಾಮಾನ್ಯಜನರಿಗೆ ತಿಳಿಯುವಂತೆ ವರ್ಣಿತವಾಗಿರುವುದಲ್ಲದೆ ಎಷ್ಟೋ ಐತಿಹಾಸಿಕ ಸಂಗತಿಗಳೂ ಅಡಕವಾಗಿರುವವು. ಈ ಮೊದಲೇ ಇದು ಸಾಮಾನ್ಯ ಜನರಲ್ಲಿ ಸಹ ಪ್ರಚುರವಾಗಿದ್ದರೂ ಇದರ ಶುದ್ಧವಾದ ಪ್ರತಿಯು ದೊರೆಯುವುದಿಲ್ಲ. ಇತ್ತಿತ್ತಲಾಗಿ ಶಾಲೆಗಳ ಅಭ್ಯಾಸ ಕ್ರಮದಲ್ಲಿ ಈ ಗ್ರಂಥ ಭಾಗಗಳನ್ನು ಸೇರಿಸುತ್ತಿರುವುದರಿಂದ ಶುದ್ಧ ಪ್ರತಿಯ ಅಭಾವವು ವಿಶೇಷವಾಗಿ ಅನಿಸಹತ್ತಿತು. ಇನ್ನು ಮೇಲೆ ಕಾಲೇಜುಗಳ ಅಭ್ಯಾಸ ಕ್ರಮದಲ್ಲಿ ಸಹ ಇದರ ಭಾಗಗಳನ್ನು ಸೇರಿಸಬಹುದಾಗಿದೆ. ಇವೇ ಮುಂತಾದ ಕಾರಣಗಳಿಂದ ವಾಙ್ಮಯ ಶಾಖೆಯವರು ಈ ಗ್ರಂಥವನ್ನು ಮೊದಲು ಹೊರಗೆಡವಿದ್ದಾರೆ’ ಎಂದು ಹಾಲಬಾವಿ ವೀರಭದ್ರಪ್ಪನವರು ಹೇಳಿರುವುದು ಕೃತಿಯ ಮಹತ್ವವನ್ನು ತಿಳಿಸುತ್ತದೆ.
‘ಚೆನ್ನಬಸವ ಪುರಾಣ’ಕ್ಕೆ ಬಸವನಾಳರು ವಿಸ್ತಾರವಾದ, ಅಭ್ಯಾಸಪೂರ್ಣವಾದ ಪ್ರಸ್ತಾವನೆ ಬರೆದಿದ್ದಾರೆ. ಈ ಪ್ರಸ್ತಾವನೆ ಬಸವನಾಳರು ವಿಮರ್ಶೆ ಹಾಗೂ ಸಂಶೋಧನೆ ಕ್ಷೇತ್ರಗಳಿಗೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಅವರು ತಾವೊಬ್ಬ ಸಮರ್ಥ ಸಂಶೋಧಕ, ವಸ್ತುನಿಷ್ಠ ವಿಮರ್ಶಕ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಈ ಪ್ರಸ್ತಾವನೆಯಲ್ಲಿ ಕವಿಯ ಹೆಸರು, ಕಾಲ, ಸ್ಥಾನ, ಮತ ಇತ್ಯಾದಿಗಳ ವಿವರ; ಗ್ರಂಥದ ಮಹತ್ವ, ಪ್ರಶಸ್ತಿ; ವಿಷಯ ವರ್ಣನೆಗಳ ವೈಶಿಷ್ಟö್ಯ; ಗ್ರಂಥದ ಛಂದಸ್ಸು ಅಲಂಕಾರ, ರಸ ವಿವೇಚನೆ; ಕವಿ-ಕಾವ್ಯದ ಮೇಲೆ ಪೂರ್ವಕವಿಗಳ ಛಾಯೆ ಮೊದಲಾದವುಗಳನ್ನು ಕುರಿತು ಚರ್ಚಿಸಲಾಗಿದೆ. ಜೊತೆಗೆ ಜೈಮಿನಿ ಭಾರತ, ಚೆನ್ನಬಸವ ಪುರಾಣಗಳನ್ನು ತೌಲನಿಕವಾಗಿ ವಿಮರ್ಶಿಸಲಾಗಿದೆ.
ವಿದ್ವಜ್ಜನರ ಮೆಚ್ಚುಗೆಗೆ ಪಾತ್ರವಾದ, ಓದುಗರ ಅಪಾರ ಜನಪ್ರಿಯತೆಯನ್ನು ಗಳಿಸಿದ ‘ಚೆನ್ನಬಸವ ಪುರಾಣ’, ಬಸವನಾಳರ ವಿಶಿಷ್ಟ ಸಾಧನೆಯ ಸಂಪಾದನೆಯ ಕೃತಿಯಾಗಿದೆ. ಈ ಕೃತಿಯನ್ನು ಮೀರಿಸುವ ಆವೃತ್ತಿ ಇನ್ನೂವರೆಗೆ ಪ್ರಕಟವಾಗಿಲ್ಲ. ಈ ಕೃತಿಯ ಶ್ರೇಷ್ಠತೆಯನ್ನು “ಚೆನ್ನಬಸವ ಪುರಾಣದ ಮುದ್ರಣ, ಕಟ್ಟು, ಚಿತ್ರಗಳು ನೇತ್ರಗಳಿಗೆ ಆನಂದದಾಯಕವಾಗಿವೆ. ವೀರಶೈವ ಪುರಾಣಗಳಲ್ಲಿ ಇಷ್ಟು ಅಂದವಾಗಿ ಮುದ್ರಿಸಿರುವ ಪುರಾಣವನ್ನು ನಾನು ನೋಡಿಲ್ಲ. ಈ ಕಾರ್ಯವು ಸ್ತುತ್ಯವಾಗಿದೆ. ಶೋಧನದ ವಿಷಯದಲ್ಲಿಯೂ ಹಲವು ಕೈಬರಹದ ಪ್ರತಿಗಳನ್ನು ಸಂಪಾದಿಸಿ, ವಿಮರ್ಶಿಸಿ ಕಾರ್ಯವನ್ನು ನಿರ್ವಹಿಸಿರುವುದು ಶ್ಲಾಘನೀಯವಾಗಿದೆ. ಸಂಸ್ಥೆಯವರು ಈ ಗ್ರಂಥವನ್ನು ಇಷ್ಟು ಮುದ್ದಾಗಿ ಮುದ್ರಿಸಿ ವೀರಶೈವರಿಗೆ ಮಾತ್ರವೇ ಅಲ್ಲದೆ ಕನ್ನಡಿಗರಿಗೆಲ್ಲ ಉಪಕಾರ ಮಾಡಿದ್ದಾರೆಂಬುದರಲ್ಲಿ ಸಂದೇಹವಿಲ್ಲ” ಎಂದು ಆರ್. ನರಸಿಂಹಾಚರ‍್ಯರು ಮುಕ್ತಕಂಠದಿಂದ ಪ್ರಶಂಸಿಸಿದ್ದು ಬಸವನಾಳರ ಸಂಪಾದನ ಚತುರಮತಿಗೆ ಗೌರವ ತಂದುಕೊಟ್ಟಂತಾಗಿದೆ.
ಏನೇ ಇರಲಿ, ವಿರೂಪಾಕ್ಷ ಪಂಡಿತರ ಈ ಮಹಾಪುರಾಣದಲ್ಲಿ ವಿಜಯ ನಗರ ಕಾಲದ ಅನೇಕ ಚಾರಿತ್ರಿಕ ಐತಿಹಾಸಿಕ ಘಟನೆಗಳ ಪ್ರಸ್ತಾಪ ಬರುತ್ತದೆ. ಮುಖ್ಯವಾಗಿ ವಿಜ್ಞಾನದ ಅಂಶಗಳು ಇಲ್ಲಿ ಮೊದಲ ಬಾರಿಗೆ ನಿರೂಪಿತಗೊಂಡಿವೆ ಎಂಬುದನ್ನು ಡಾ. ಸ.ಜ.ನಾಗಲೋಟಿಮಠ ಮೊದಲಾದ ವೈದ್ಯವಿಜ್ಞಾನಿಗಳು ಗುರುತಿಸಿದ್ದರು. ಹುಟ್ಟುವ ಮಗುವಿನ ಗುಣಲಕ್ಷಣಗಳನ್ನು ನಿರೂಪಿಸುವ ಚಕ್ರಗತಿಯ ವಿವರಣೆಯನ್ನು ಕವಿ ಇಂದಿನ ವೈದ್ಯವಿಜ್ಞಾನಕ್ಕೂ ಸವಾಲವೆನ್ನುವ ರೀತಿಯಲ್ಲಿ ಕೊಟ್ಟಿರುವುದು ಆಶ್ಚರ್ಯದ ಸಂಗತಿಯಾಗಿದೆ. ಎಲ್ಲಕ್ಕೂ ಮಿಗಿಲಾಗಿ ಐದು ಸಾವಿರ ವರ್ಷಗಳ ಇತಿಹಾಸವಿದೆಂದು ಸುಳ್ಳು ಹೇಳುತ್ತಿರುವ ರಂಭಾಪುರಿ ಪೀಠವು ೧೬ನೇ ಶತಮಾನದಲ್ಲಿ ಬಾಳೇಹಳ್ಳಿಯಲ್ಲಿ ಸ್ಥಾಪಿತವಾದ ಘಟನೆಯನ್ನು ವಿರೂಪಾಕ್ಷ ಪಂಡಿತ ಮೊದಲ ಬಾರಿಗೆ ಇಲ್ಲಿ ಚಾರಿತ್ರಿಕ ನೆಲೆಯಲ್ಲಿ ನಿರೂಪಿಸಿದ್ದಾನೆ. ಹೀಗಾಗಿ ಇದೊಂದು ಇತಿಹಾಸ-ಚರಿತ್ರೆ-ಶಿವನ ಲೀಲೆ ಎಲ್ಲವನ್ನೂ ಒಳಗೊಂಡ ಒಂದು ಪರಿಪೂರ್ಣ ಮಹಾಕಾವ್ಯವೆಂದೇ ಹೇಳಬೇಕು.
ಧಾರವಾಡ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಶರಣ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಸ್ಥಾಪಿಸಿದ ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯು ಕನ್ನಡ ಸಾಹಿತ್ಯವನ್ನು ಸಿರಿವಂತಗೊಳಿಸುವ ಅನೇಕ ಮೌಲಿಕ ಮಹಾಕಾವ್ಯಗಳನ್ನು ಪ್ರಕಟಿಸಿದೆ. ಅದರಲ್ಲಿ ಭೀಮಕವಿ ಬಸವಪುರಾಣ, ವಿರೂಪಾಕ್ಷ ಪಂಡಿತರ ‘ಚನ್ನಬಸವ ಪುರಾಣ’ ಅತ್ಯಂತ ಪ್ರಮುಖವಾಗಿವೆ.
ನಮ್ಮ ದಿನಮಾನದ ಶ್ರೇಷ್ಠ ವಿದ್ವಜ್ಜನರಾದ ಡಾ. ವೀರಣ್ಣ ರಾಜೂರ ಅವರು ಶರಣ ಸಾಹಿತ್ಯ ಸಂಸ್ಕೃತಿಯ ಪ್ರಕಟಣೆಗಾಗಿ ತಮ್ಮ ಸಮಸ್ತ ಬದುಕನ್ನು ಮೀಸಲಾಗಿರಿಸಿದವರು. ಡಾ. ರಾಜೂರ ಅವರು ಮುರುಘಾಮಠದ ಪ್ರಸಾರಾಂಗ ಪ್ರಕಟಣೆಯ ನಿರ್ದೇಶನ ಹೊತ್ತ ನಂತರ ಈಗ ಇಲ್ಲಿ ಸಾಹಿತ್ಯದ ಸುಗ್ಗಿ ನಡೆಯುತ್ತಿದೆ. ಎಂಟು-ಹತ್ತು ದಶಕಗಳ ಹಿಂದೆ ಪ್ರಕಟವಾಗಿ, ಜನಮಾನಸದಿಂದ ದೂರಾಗಿದ್ದ, ಜನಪ್ರಿಯ ಮೌಲಿಕ ಗ್ರಂಥಗಳನ್ನು ಮರುಪರಿಷ್ಕರಣೆಗೆ ಒಳಪಡಿಸಿ ಪ್ರಕಟಿಸುವ ಒಂದು ಶ್ರಮಸಾಧ್ಯವಾದ ಕಾರ್ಯವನ್ನು ಡಾ. ವೀರಣ್ಣ ರಾಜೂರ ಅವರು ಅತ್ಯಂತ ಶ್ರದ್ಧೆ ನಿಷ್ಠೆಯಿಂದ ಪೂರೈಸುವ ಮೂಲಕ ಡಾ. ಎಂ. ಎಂ. ಕಲಬುರ್ಗಿ ಅವರ ನಿಜವಾದ ಉತ್ತರಾಧಿಕಾರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ವಿರೂಪಾಕ್ಷ ಪಂಡಿತ ಬರೆದ ಈ ಮಹಾಪುರಾಣವನ್ನು ಸಾಮೂಹಿಕ ನೆಲೆಯಲ್ಲಿ ಪ್ರೊ. ಶಿ.ಶಿ. ಬಸವನಾಳರು ಶಾಸ್ತ್ರಶುದ್ಧ ನೆಲೆಯಲ್ಲಿ ಸಂಪಾದಿಸಿ, ಲೋಕಕ್ಕೆ ಪರಿಚಯಿಸಿದ್ದರು. ಈ ಕೃತಿ ಪ್ರಕಟವಾಗಿ ಒಂಬತ್ತು ದಶಕಗಳ ನಂತರ ಹಿರಿಯ ವಿದ್ವಾಂಸರಾದ ಡಾ. ವೀರಣ್ಣ ರಾಜೂರ ಅವರ ಪುಸ್ತಕ ಪ್ರೀತಿ, ಧಾರವಾಡ ಮುರುಘಾಮಠದ ಪೂಜ್ಯ ಶ್ರೀಗಳ ಶರಣ ಸಂಸ್ಕೃತಿ ಕಾಳಜಿ ಕಾರಣವಾಗಿ ಇದು ಮತ್ತೊಮ್ಮೆ ಅತ್ಯಂತ ಸುಂದರವಾಗಿ ಪ್ರಕಟವಾಗಿರುವುದು ಸಮಸ್ತ ಸಮಾಜಾಭಿಮಾನಿಗಳು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.