ಓನಿ ಹೊನ್ನಾವರದ ಹೊನ್ನಾಂಬವೊಡೆಯರುಂ
ಭಾವಿಸೈಗನ ಹಳ್ಳಿಯಲಿ ಕನ್ನಿದೇವಯ್ಯ
ಗೋವೆಯಲ್ಲಿ ಬಿಲ್ವಪತ್ರೆಯ ವೀರಣಯ್ಯ ಹುಬ್ಬಳ್ಳಿಯಲ್ಲಿ ಬಸವಣ್ಣನು
ಆ ವೂರ ಗಂದಿಗಂ ಭೈರಿಸೆಟ್ಟಿಯರೆಸವ
ನಾ ವಿಶೇಷವ ಭಕ್ತ ಉಳುವೆಯ ಮಹಾಮನೆಯ
ನಾವಾರಿದಾಸೋಹಿ ಹರಿಯಪ್ಪರಾಣಿಯರ ಶರಣಾಂಬುಜಕ್ಕೆ ಶರಣು
(ಲಕ್ಕಣ್ಣ ದಂಡೇಶನ ‘ಶಿವತತ್ವ ಚಿಂತಾಮಣಿ’ ಸಂಧಿ ೩೮ ಪದ್ಯ ೧೪೪)
ಹಿರಿಯ ವಿದ್ವಾಂಸರಾದ ಡಾ. ಡಿ. ವಿ. ಪರಮಶಿವಮೂರ್ತಿ ಅವರು ಇತ್ತೀಚೆಗೆ ಶಾಸ್ತ್ರಶುದ್ಧವಾಗಿ ಸಂಪಾದಿಸಿ ಪ್ರಕಟಿಸಿದ ಲಕ್ಕಣ್ಣ ದಂಡೇಶನ ‘ಶಿವತತ್ವ ಚಿಂತಾಮಣಿ’ ಕೃತಿಯ ನೂತನ ಪುರಾತನರು ಸಂಧಿಯಲ್ಲಿ ಬರುವ ಮೇಲಿನ ಪದ್ಯ ಒಂದು ಚಾರಿತ್ರಿಕ ಸಂಗತಿಯತ್ತ ನಮ್ಮ ಗಮನ ಸೆಳೆಯುತ್ತದೆ.
ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪರ್ಯಾಯ ಪದವೇ ‘ಮಹಾಮನೆ’ ಈ ಮಹಾಮನೆ ಕಲ್ಯಾಣ ಕ್ರಾಂತಿಯ ತರುವಾಯ ಚನ್ನಬಸವಣ್ಣನವರ ಜೊತೆಗೆ ಉಳವಿಗೆ ಬಂದು ಸ್ಥಳಾಂತರಗೊಂಡಿರುವ ಎಲ್ಲ ಸಾಧ್ಯತೆಗಳಿವೆ. ಈ ಕುರಿತು ಗಂಭೀರವಾದ ಸಂಶೋಧನೆ ಮಾಡಿ ನನ್ನ ಗಮನ ಸೆಳೆದ ಡಾ. ಬಿ. ನಂಜುಂಡಸ್ವಾಮಿ ಅವರು “ಬಸವಣ್ಣನವರ ಮಹಾಮನೆ ಉಳಿವಿಗೆ ಸ್ಥಳಾಂತರಗೊಂಡಿತ್ತಾ?” ಎಂಬ ಲೇಖನ ಬರೆದಿದ್ದಾರೆ. (`ಚಿತ್ಕಳೆ’ ಸಂಪಾದಕ ಡಾ. ಬಿ. ನಂಜುಂಡಸ್ವಾಮಿ ೨೦೦೩, ಪ್ರಕಾಶಕರು, ಶ್ರೀ ಅಕ್ಕಮಹಾದೇವಿ ಸಮಾಜ, ತುಮಕೂರು, ಪು. ೨೪)
ಇದಕ್ಕೆ ಪೂರಕವಾದ ಇನ್ನೂ ಒಂದೆರಡು ಅಂಶಗಳೆಂದರೆ ಸುತ್ತೂರು ಮಠದ ಪೂಜ್ಯ ಶ್ರೀ ಜಗದ್ಗುರು ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಂಪಾದಿಸಿ ಪ್ರಕಟಿಸಿದ ‘ವೃಷಭೇಂದ್ರ ವಿಳಾಸ’ ಕೃತಿಯಲ್ಲಿಯೂ ಮಹಾಮನೆಯ ಉಳವಿಗೆ ಬಂದ ಬಗ್ಗೆ ಕೆಲವು ಸೂಚನೆಗಳಿವೆ. ಮೈಸೂರು ಭಾಗದಲ್ಲಿ ೧೮ನೇ ಶತಮಾನದಲ್ಲಿ ನಂಜುಂಡ ಭಾಗವತನೆಂಬ ಕವಿ ‘ಶೂನ್ಯಸಿಂಹಾಸನ’ ಎಂಬ ಕಾವ್ಯಕೃತಿಯನ್ನು ಬರೆದಿದ್ದಾನೆ. ಈ ಕೃತಿಯಲ್ಲಿಯೂ ಕಲ್ಯಾಣದ ಮಹಾಮನೆ ಉಳವಿಯಲ್ಲಿ ಮಠವಾಗಿ ಪರಿವರ್ತನೆಯಾಯಿತೆಂದು ಬರೆಯಲಾಗಿದೆ. ಈ ಕೃತಿ ಇನ್ನೂ ಹಸ್ತಪ್ರತಿ ರೂಪದಲ್ಲಿದ್ದು, ಪ್ರಕಟವಾಗಬೇಕಾಗಿದೆ.
ಇವೆಲ್ಲಕ್ಕೂ ತುರಾಯಿ ಎಂಬಂತೆ ಸೋದೆ ಸದಾಶಿವರಾಯನು ‘ಉಳವಿ ಮಹಾತ್ಮೆ’ ಎಂಬ ಕಾವ್ಯವನ್ನು ರಚಿಸಿದ್ದು, ಪ್ರಾಯಶಃ ಕಲ್ಯಾಣ ಕ್ರಾಂತಿಯ ತರುವಾಯ ಶರಣರೆಲ್ಲರು ಚನ್ನಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ಪಟ್ಟಣದಿಂದ ಉಳವಿಗೆ ಹೇಗೆ ಬಂದರು ಎಂಬುದರ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಡಾ. ಆರ್. ಸಿ.ಹಿರೇಮಠ ಅವರು ಷಟ್ಸ್ಥಲ ಪ್ರಭೆಯಲ್ಲಿ ಒಂದು ದಾರಿಯನ್ನು ತೋರಿಸಿದ್ದರು, ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ‘ಅವಿರಳ ಜ್ಞಾನಿ ಚನ್ನಬಸವಣ್ಣನವರು’ ಕೃತಿಯಲ್ಲಿ ಬೇರೆಯದೇ ಆದ ದಾರಿ ತೋರಿಸಿದ್ದರು. ಈ ಎರಡೂ ದಾರಿಗಳ ಬಗ್ಗೆ ವಿದ್ವಾಂಸರಲ್ಲಿ ಸಹಮತವಿರಲಿಲ್ಲ. ಆದರೆ ಡಾ. ಬಿ. ಆರ್. ಹಿರೇಮಠ ಅವರು ಸಂಶೋಧಿಸಿ ಪ್ರಕಟಿಸಿದ ‘ಸೋದೆಯ ಸದಾಶಿವರಾಯನ ಕೃತಿಗಳು’ ಎಂಬ ಕೃತಿಯಲ್ಲಿ ಸದಾಶಿವರಾಯ ಬರೆದ ೧೮ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ ಚಾರಿತ್ರಿಕವಾಗಿ ಗಮನ ಸೆಳೆಯುವುದು ಈ ‘ಉಳವಿ ಮಹಾತ್ಮೆ’.
ಶರಣರ ದಂಡಿನ ದಾರಿಯ ಬಗ್ಗೆ ಸದಾಶಿವರಾಯ ಆರ್. ಸಿ.ಹಿರೇಮಠ, ಎಚ್. ತಿಪ್ಪೇರುದ್ರಸ್ವಾಮಿ ಅವರಿಗಿಂತ ಬೇರೆಯಾದ ಒಂದು ಮಾರ್ಗವನ್ನು ಕುರಿತು ವಿವರವಾಗಿ ಬರೆದಿದ್ದಾನೆ. ಇದು ಹೆಚ್ಚು ಸತ್ಯವೆನಿಸುತ್ತದೆ.
ಸೋದೆ ಅಥವಾ ಸ್ವಾದಿ ಅರಸು ಮನೆತನ ಆರಂಭದ ಘಟ್ಟದಲ್ಲಿ ವಿಜಯನಗರದ ಆಧೀನ ಸಂಸ್ಥಾನವಾಗಿ, ವಿಜಯನಗರದ ಪತನಾನಂತರ ಸ್ವತಂತ್ರ ಅರಸು ಮನೆತನವಾಗಿ ಆಡಳಿತ ನಡೆಸಿತು. ಅಂದಿನ ಸೋದೆಯನ್ನು ಇಂದು ಸೋಂದೆ ಎಂದು ಕರೆಯುತ್ತಾರೆ. ಈ ಅರಸು ಮನೆತನದವರು ಲಿಂಗಾಯತರು. ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಈ ಅರಸು ಮನೆತನದಲ್ಲಿ ಸದಾಶಿವರಾಯ ಎಂಬ ರಾಜನು (ಕ್ರಿ.ಶ.೧೬೭೪-೧೬೯೮)ರ ಆಳ್ವಿಕೆ ಮಾಡಿದ್ದು, ಕನ್ನಡಿಗರ ಇತಿಹಾಸದಲ್ಲಿ ದಾಖಲಾಗಿದೆ. ರಾಜನಾಗಿದ್ದ ಸದಾಶಿವರಾಯ ಸ್ವತಃ ಕವಿಯೂ ಆಗಿದ್ದ ಎಂಬುದು ವಿಶೇಷ. ಆತ ಬರೆದ ಸದಾಶಿವ ನೀತಿ ಎಂಬ ಕೃತಿ ಲೋಕಮನ್ನಣೆ ಪಡೆದಿದೆ. ಈ ಸದಾಶಿವರಾಯನ ಒಟ್ಟು ೧೮ ಗ್ರಂಥಗಳು ಈಗ ದೊರೆತಿವೆ. ಆತ ಬರೆದ ‘ಉಳುವೆಯ ಮಹಾತ್ಮೆ’ ಈ ಚಾರಿತ್ರಿಕ ಕಾವ್ಯದಲ್ಲಿ ಒಟ್ಟು ೭೩ ಪದ್ಯಗಳಿವೆ. ಇವುಗಳಲ್ಲಿ ೬೦ ಕಂದಪದ್ಯಗಳಿದ್ದರೆ, ೫ ಶ್ಲೋಕ, ೨ ವಾರ್ಧಕ ಷಟ್ಪದಿ, ೫ ಮಲ್ಲಿಕಾಮಾಲ ವೃತ್ತ, ೧ ತ್ರೋಟಕ ವೃತ್ತಗಳಿವೆ. “ಕಲ್ಯಾಣ ಕ್ರಾಂತಿಯ ತರುವಾಯದ ಶಿವಶರಣರ ದಂಡಿನ ದಾರಿಯನ್ನು ಉಳುವೆಯ ಚಾರಿತ್ರಿಕ ಕುರುಹುಗಳನ್ನು ಚಿತ್ರಿಸುವ ಅತ್ಯಂತ ಮಹತ್ವದ ಕೃತಿಯಿದಾಗಿದೆ. ಇಲ್ಲಿಯವರೆಗೆ ಅಜ್ಞಾತವಾಗಿದ್ದ ಪೂರ್ವಾರ್ಧದ ಶರಣರ ದಂಡಿನ ದಾರಿ ಈ ಕೃತಿಯ ಮೂಲಕ ಪ್ರಥಮ ಸಲ ಬೆಳಕಿಗೆ ಬರುತ್ತಿದೆ. ಉತ್ತರಾರ್ಧದ ದಾರಿಯನ್ನು ಉಳಿದ ಕೃತಿಗಳಿಗಿಂತ ತೀರ ಭಿನ್ನವಾಗಿ ಇಲ್ಲಿ ಹೇಳಲಾಗಿದೆ” (ಬಿ. ಆರ್. ಹಿರೇಮಠ : ಸೋದೆ ಸದಾಶಿವರಾಯನ ಕೃತಿಗಳು ಪ್ರಸ್ತಾವನೆ ಪು. ೨೩)
ಕಾಲವು ಬರೆ ಕಲ್ಯಾಣ
ಲೀಲೆಯ ಭೋಗಗಳು ತೀರೆ ಚೆನ್ನಬಸವಾದಿ
ಮೂಲ ಗಣಂಗಳು ಎಲ್ಲರು
ಆಲೋಚಿಸಿ ಪುಣ್ಯಭೂಮಿ ಉಳುವೆಯು ಎಂದು (ಪದ್ಯ ೬)
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಎಲ್ಲ ಗಣಂಗಳು ಕೂಡಿ ನಾವು ಇನ್ನು ಮುಂದೆ ಎಲ್ಲಿಗೆ ಹೋಗಬೇಕೆಂದು ಆಲೋಚನೆ ಮಾಡಿ, ಕೊನೆಗೆ ಉಳವಿಯ ಕಡೆಗೆ ಹೋಗಬೇಕೆಂದು ತೀರ್ಮಾನಿಸುತ್ತಾರೆ.
ವರ ಪರವತಾಬಾದಿ ಪೆರಜಾಬಾದಿಯಿಂ
ನೆರೆಕೇಳಕೂರು ಬಡದಳವು ಸತ್ತಿಗೆರೆಯು
ಮುರುಗೋಡು ಹೂಬಳ್ಳಿ ಬಂಕಾಪುರಕೆಯ್ದಿ ಹಾನಗಲ್ಲಿಗೆ ಬಂದರು
ಭರದಿಂದ ಮಳಿಗೆ ಜಾಂಗಲ ಕ್ಷೇತ್ರದಲ್ಲಿಹ
ಸಿರಿಧರ್ಮ ವಾಹಿನಿ ತೀರಸ್ಥ ರಾಮೇಶ
ಚರಣಗಳನೀಕ್ಷಿಸಲಲ್ಲಿಂದ ಘಟ್ಟವನಿಳಿದು ಸೋದೆಪರಕೈತಂದರು (ಪದ್ಯ ೭)
(ಬಿ. ಆರ್. ಹಿರೇಮಠ : ಸೋದೆ ಸದಾಶಿವರಾಯನ ಕೃತಿಗಳು ಪು. ೭೩)
ಚನ್ನಬಸವಣ್ಣನವರು ತಮ್ಮ ದಂಡನ್ನು ಕಟ್ಟಿಕೊಂಡು ಮೊದಲು ಕಲಬುರ್ಗಿ ಜಿಲ್ಲೆಯ ಪರವತಾಬಾದ, ಪೇರಜಾಬಾದ, ಕೊಳಕೂರ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಡದಳ, ಸತ್ತಿಗೆರೆ, ಮುರುಗೋಡ, ಹುಬ್ಬಳ್ಳಿ, ಬಂಕಾಪುರ, ಹಾನಗಲ್ಲು, ಮಳಗೆ, ಜಾಂಗಲ ಕ್ಷೇತ್ರ(ಜಗಳಬೆಟ್ಟ)ಕ್ಕೆ ಬಂದು ಅಲ್ಲಿಂದ ಘಟ್ಟವನ್ನು ಇಳಿದು ಶಿರ್ಶಿ ತಾಲೂಕಿನ ಸೋದೆಗೆ ಬರುತ್ತಾರೆ.
ಎಲ್ಲಾ ಪ್ರಮಥ ಗಣಂಗಳು
ಎಲ್ಲಾಪುರದಲ್ಲಿ ಯೋಚಿಸಿ ತಾವು
ಎಲ್ಲಾ ಕ್ಷೇತ್ರದೊಳುತ್ತಮ
ಎಲ್ಲ ಫಲವೀವುದುಳುವೆಯೆಂದಾಡಿದರು. (ಪದ್ಯ ೧೧)
ಸೋದೆಯಿಂದ ಹೊರಟ ಶರಣರು ಯಲ್ಲಾಪೂರ ತಾಲೂಕಿನ ತುಂಬೆಯ ಬೀಡಿಗೆ ಬರುತ್ತಾರೆ. ನಂತರ ಯಲ್ಲಾಪುರದಲ್ಲಿ ವಸತಿ ಉಳಿದು, ಆಲೋಚನೆ ಮಾಡುತ್ತಾರೆ, ನಾವು ಸುರಕ್ಷಿತವಾಗಿ ನೆಲೆ ನಿಲ್ಲಲು ಉಳುವೆಗೆ ಹೋಗುವುದೇ ಶ್ರೇಯಸ್ಕರವೆಂದು ನಿರ್ಣಯಿಸುತ್ತಾರೆ.
ತದನಂತರ ಅಂಜನಾನದಿಯನ್ನು ದಾಟಿ, ಕರಿಹೊಳೆ ತೀರಕ್ಕೆ ಬರುತ್ತಾರೆ. ಅಲ್ಲಿ ಕರಿಹೊಳೆಮಠದಲ್ಲಿ ಕೆಲವು ದಿನ ನಿಂತು ಕೊನೆಗೆ ಉಳವಿಯನ್ನು ತಲುಪುತ್ತಾರೆ.
ಶಶಿಧರನ ಶರಣರೆಲ್ಲರು
ವಸುಧೆಯೊಳತ್ಯಧಿಕ ಉಳುವೆಯ ಸುಕ್ಷೇತ್ರಕೆ
ಕುಶಲದಲಿ ಬಂದು ನೆಲೆಸಲು
ಬಸವಣ್ಣನ ಪಾದವಲ್ಲಿ ಪರಿಶೋಭಿಸಿತು (ಪದ್ಯ ೩೨)
ಇಡೀ ವಸುಧೆಯೊಳಗೆ ಅಧಿಕವೆನಿಸುವ ಸುಕ್ಷೇತ್ರ ಉಳುವೆಯೆಂದು ಕವಿ ಬಣ್ಣಿಸುತ್ತಾನೆ. ಇಲ್ಲಿ ಶರಣರು ಬಂದು ಕುಶಲದಿಂದ ನೆಲಸಲು ಬಸವಣ್ಣನವರ ಚರಣಗಳು ಪರಿಶೋಭಿಸಿದವು ಎನ್ನುತ್ತಾನೆ.
ಆಗ ಉಳವಿಯಲ್ಲಿ ನೂರಾರು ಗವಿಗಳಿದ್ದವು. ಅಂತಹ ಒಂದು ಗವಿಯನ್ನು ಮೊದಲು ಗುರುತಿಸಿದ ಹಡಪದ ಅಪ್ಪಣ್ಣನವರು ತಮಗೆ ಬೇಕೆಂದು ವಾಸಿಸಲು ಸಿದ್ಧತೆ ಮಾಡಿಕೊಳ್ಳುವ ಪರಿಯನ್ನು ಕವಿ ಹೀಗೆ ಹೇಳುತ್ತಾನೆ:
ಮೃಡಪೂಜೆಗೆ ಯೋಗ್ಯವಾಗಿಹ
ಕಡುಸೋಜಿಗವಾದ ಗವಿಯ ಕಂಡಾಕ್ಷಣವೆ
ಹಡಪದ ಅಪ್ಪಣ್ಣನಲ್ಲಿಯೆ
ಬಿಡದೆ ಆವಾಸವನು ಮಾಡಿದರಾಗ (ಪದ್ಯ ೩೧)
ಉಳವಿಯಲ್ಲಿ ಆ ಕಾಲದಲ್ಲಿ ಏನೇನು ಇದ್ದವು ಎಂಬುದರತ್ತ ಕವಿ ನಮ್ಮ ಗಮನ ಸೆಳೆಯುತ್ತಾನೆ. ಚನ್ನಯ್ಯನ ತೀರ್ಥವನ್ನು ಗುರುತಿಸಿದ ಪದ್ಯ ಹೀಗಿದೆ-
ಮತಿಯುತ ಶರಣನು ಭಜಿಸಲು
ಕ್ಷಿತಿಯಳಗಾಕ್ಷಣವೆ ಗಂಗೆಯುದ್ಭವಿಸಿ ಮಹಾ
ಪತಿತರ ಪಾವನ ಮಾಡಿದ
ಹಿತಕರ ಚೆನ್ನಯ್ಯನ ತೀರ್ಥವಾದುದು ಸತ್ಯ (ಪದ್ಯ ೩೯)
ಚನ್ನಯ್ಯನ ತೀರ್ಥವೆಂದು ಶರಣರು ಅದನ್ನು ಗುರುತಿಸುತ್ತಾರೆ. ಹಾಗೆಯೇ ಅಲ್ಲಿ ಕರಿಯ ವಿಭೂತಿ ಗುಡ್ಡವೇ ಇತ್ತು, ಆ ಭಸ್ಮವನ್ನು ಶರಣರೆಲ್ಲರು ಧರಿಸಿಕೊಂಡರು ಎಂದು ಕವಿ ಮತ್ತೊಂದು (ಪದ್ಯ ೪೦) ಪದ್ಯದಲ್ಲಿ ಹೇಳುತ್ತಾನೆ.
ಎಲ್ಲಾ ಗಣಗಳು ಕೂಡಿ ಇಹರೆ ಯವ ಗವಿ ಅತಿಯೋಗ್ಯವು
ಅಲ್ಲಿ ಯೋಚಿಸಿ ಆಗ ನಡೆದರು ಅಧಿಕ ಸಂಭ್ರಮದಿಂದಲಿ
ಮಲ್ಲಿಕಾಸ್ತ್ರನ ಮೈಯನುರುಹಿದ ಮಾಸದಾಶಿವಲಿಂಗವಂ
ಬಿಲ್ವಪತ್ರೆಗಳಿಂದಲರ್ಚಿಸಿ ಬೇಗ ಮಠಕೈ ತಂದರು
ಮಹಾಮನೆ ಗವಿ ನೋಡಲ್ ಮಹಾಪಾತಕ ನಾಶನ
ಮಹಾಗಣಂಗಳಿಂತೆಂದು ಹರುಷಿತರಾದರು (ಪದ್ಯ ೪೩)
ಚನ್ನಬಸವಣ್ಣನವರ ಜೊತೆಗೆ ಏಳುನೂರಾ ಎಪ್ಪತ್ತು ಗಣಂಗಳು ಹೋಗಿರುವ ಸಾಧ್ಯತೆ ಇದೆ. ಎಲ್ಲರೂ ತಮಗೆ ಸರಿಕಂಡ ಗವಿಗಳನ್ನು ಆಯ್ಕೆ ಮಾಡಿಕೊಂಡರು. ಮಹಾಮನೆ ಗವಿ ಎಲ್ಲರೂ ಶರಣ ಸಂಗೋಷ್ಠಿ ಮಾಡಲು ಉಪಯೋಗವಾಗು ವುದೆಂದು ಸಂತೋಷಪಟ್ಟರು.
ಏಳು ನೂರೆಪ್ಪತ್ತು ಗವಿಗಳೊಳು ಗಣನಿಕರ
ವ್ಯಾಳ ಭೂಷಣನ ಪೂಜಿಸುತ ಬಹು ಸುಖದಿಂದ
ಪೇಳಲಾಗಮ ವಾಕ್ಯದರ್ಥದಿಂ ಶಿಷ್ಯರನು ಪಾವನವ ಮಾಡುತಿರ್ದ
(ಪದ್ಯ ೫೫)
ಏಳುನೂರೆಪ್ಪತ್ತು ಜನ ಶರಣರು ಉಳವಿಗೆ ಬಂದರೆಂಬ ಸಂಗತಿ ಇಲ್ಲಿ ಗಮನ ಸೆಳೆಯುತ್ತದೆ.
ಮೃಡ ಶರಣರ ವಸ್ತ್ರವೆಲ್ಲವ
ಕಡುಶುಚಿಯನು ಮಾಡಲಿಕೆ ಭಕ್ತಿಗಳಿಂದ
ಪೊಡವಿಯೊಳುಳುವೆಯ ಕ್ಷೇತ್ರದಿ
ಮಡಿವಾಳಯ್ಯಗಳ ತೀರ್ಥವಾಯಿತು ಆಗ (ಪದ್ಯ ೪೬)
ಶರಣರು ಉಳವಿಗೆ ಬರುವಷ್ಟರಲ್ಲಿ ಪ್ರಾಯಶಃ ಮಡಿವಾಳ ಮಾಚಿದೇವರು ಲಿಂಗೈಕ್ಯರಾಗುತ್ತಾರೆ. ಅದಕ್ಕಾಗಿ ಶರಣರೆಲ್ಲರು ತಮ್ಮ ವಸ್ತ್ರ ತೊಳೆವ ನೀರಿನ ಹೊಂಡಕ್ಕೆ ಮಡಿವಾಳಯ್ಯಗಳ ತೀರ್ಥವೆಂದು ಕರೆದುದನ್ನು ಕವಿ ಬಣ್ಣಿಸುತ್ತಾನೆ.
ಶರಣರು ಉಳವಿಯಲ್ಲಿ ನೆಲೆನಿಂತ ಮೇಲೆ ‘ಮೂಡಲು ಪಡವಲು ತೆಂಕಲು ಕೂಡಿದ ಬಡಗಲಿನ ಬಹಳ ದೇಶಗಳಿಂದ ಪಾಡುತ…ಬಂದವರುರ ಭಕ್ತಿ ಮುಕ್ತಿಯ ಪಡೆದು’ ಎಂದು ಎಲ್ಲ ದಿಕ್ಕುಗಳಿಂದಲೂ ಜನಸಮೂಹ ಉಳವಿಯತ್ತ ಬಂದ ಉಲ್ಲೇಖವನ್ನು ಇಲ್ಲಿ ಗುರುತಿಸಬಹುದು. ಚನ್ನಬಸವಣ್ಣನವರಂತೂ ಇದನ್ನು ಅಭಿನವ ಕಲ್ಯಾಣವನ್ನಾಗಿ ರೂಪಾಂತರಿಸಿದರು.
ಲಕ್ಷ ತೊಂಬತ್ತಾರು ಸಾವಿರ ಸುಜಂಗಮಕೆ
ಭಕ್ಷ್ಯಪರಮಾನ್ನ ಘರತ ಸಕ್ಕರೆ ರಸಾಯನವ
ಇಕ್ಷುಸಿಯಾಳ ಮಾವಿನಪಣ್ಣು ದಾಳಿಂಬ ಮೊದಲಾದ ಫಲವು ಸಹಿತ
ಅಕ್ಷಯಗಳಾದವರ ಪಂಚಪರುಷಗಳಿಂದ
ಸುಕ್ಷಮಾನ್ವಿತರಾಗಿ ನೀಡಿ ತೃಪ್ತಿಯ ಬಡಿಸಿ
ನಕ್ಷತ್ರಪತಿ ಚೂಡನಾಮಗಳ ಜಪಿಸುತಲಿದ್ದ ಚೆನ್ನಬಸವೇಶ್ವರ (ಪದ್ಯ ೫೬)
ಪ್ರತಿನಿತ್ಯ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರಿಗೆ ದಾಸೋಹ ಒದಗಿಸುವ ಮಹಾಮಣಿಹವನ್ನು ಚನ್ನಬಸವಣ್ಣನವರು ಉಳವಿಯಲ್ಲಿ ಮುಂದುವರೆಸಿದರು ಎಂಬುದನ್ನು ಈ ಪದ್ಯ ತಿಳಿಸುತ್ತದೆ.
ಶರಣರು ಬಂದು ನಿಂತ ಮೇಲೆ ಉಳವಿ ಕಾಶಿಕ್ಷೇತ್ರಕ್ಕಿಂತಲೂ ಪವಿತ್ರವಾಯಿತು ಎಂದು ಕವಿ ಹೇಳುತ್ತಾನೆ. ‘ಕಾಶಿಗೆ ಮಿಗಿಲಾದ ಕ್ಷೇತ್ರ ಉಳುವೆಯೆಂದರು’ ಎಂದು ಬರೆಯುತ್ತ, ಆ ಕಾಲದಲ್ಲಿ ಮರಣ ಹೊಂದಲು ಕಾಶಿಗೆ ಹೋಗುವ ಅನೇಕರು ಉಳವಿಯತ್ತ ಬರತೊಡಗಿದರು ಎಂದು ಮುಂದಿನ ಪದ್ಯದಲ್ಲಿ ನಿರೂಪಿಸುತ್ತಾನೆ-
ಕಾಶಿಯಲಿ ಮರಣವಾಗಲು
ಭಾಸುರದರುಣಾದ್ರಿಯನು ಸ್ಮರಣೆಯ ಮಾಡೆ
ಶ್ರೀಗಿರಿಯ ಶಿಖರವೀಕ್ಷಿಸ
ಲಾಗುವ ಸನ್ಮುಕ್ತಿ ಫಲವು ಉಳುವೆಯಲಹುದು (ಪದ್ಯ ೬೪)
ಕಾಶಿಯಲ್ಲಿ ಮರಣ ಹೊಂದಿದಾಗ ಸಿಗುವ ಮುಕ್ತಿ, ಶ್ರೀಶೈಲದ ಶಿಖರ ನೋಡಿದಾಗ ಸಿಗುವ ಸದ್ಮುಕ್ತಿ ಫಲ ಈ ಉಳವಿಯನ್ನು ಸಂದರ್ಶನ ಮಾಡುವುದರಿಂದ ದೊರೆಯವುದೆಂದು ಇಲ್ಲಿ ಹೇಳಲಾಗಿದೆ.
ಉಳವಿ ಕ್ಷೇತ್ರದಲ್ಲಿ ನಂತರ ಚನ್ನಬಸವಣ್ಣನವರು ಅಕ್ಕನಾಗಮ್ಮನ ಕಣ್ಣೆದುರೆ ಲಿಂಗೈಕ್ಯರಾಗುವ ಹೃದಯವಿದ್ರಾವಕ ಸನ್ನಿವೇಶ ನಿರ್ಮಾಣವಾಗುತ್ತದೆ. ಹೆತ್ತ ತಾಯಿಯ ಮುಂದೆ ಮಗ ಲಿಂಗೈಕ್ಯನಾಗುವುದು ನಿಜಕ್ಕೂ ಕರುಳು ಹಿಂಡುವ ಘಟನೆಯೇ ಆಗಿದೆ. ಹೊನ್ನ ಅರಳಿಯ ಮರವೊಂದನ್ನು ಚನ್ನಬಸವಣ್ಣನವರು ಉಳವಿಯಲ್ಲಿ ನೆಟ್ಟು, ತಾವಿನ್ನು ಕೂಡಲಚೆನ್ನಸಂಗಮ ಸಾನ್ನಿಧ್ಯಕ್ಕೆ ಹೋಗುವೆವು ಎಂದು ಹೇಳುತ್ತಾರೆ. ಹೀಗೆ ಇಚ್ಛಾಮರಣಿಯಂತೆ ಹೇಳಿ ಲಿಂಗೈಕ್ಯರಾದ ತದನಂತರ ಎಲ್ಲ ಶರಣರು ಚನ್ನಬಸವಣ್ಣನವರ ಸ್ಮರಣೋತ್ಸವ ಮಾಡಲು ರಥೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ಕವಿ ಹೇಳುತ್ತಾನೆ-
ಸಿರಿಮಾಘ ಶುದ್ಧ ಹುಣ್ಣಿಮೆ
ವರ ದಿವಸದಿ ಭಕ್ತಿಯಿಂದ ಬಸವೇಶ್ವರ
ಪರಮರಥೋತ್ಸವ ವೀಕ್ಷಿಸೆ
ಧರೆಯೊಳಗಾತಂಗೆ ಭಕ್ತಿ ಮುಕ್ತಿಗಳಹವು (ಪದ್ಯ ೬೦)
ಪ್ರತಿವರ್ಷ ಮಾಘಮಾಸದಲ್ಲಿ ಬರುವ ಭಾರತ ಹುಣ್ಣಿಮೆ ಸಂದರ್ಭದಲ್ಲಿ ಇಂದಿಗೂ ಈ ರಥೋತ್ಸವ ನಡೆದುಕೊಂಡು ಬಂದಿರುವುದನ್ನು ಗಮನಿಸಬಹುದು.
ಸಕಲ ಪಾಶದಿಂದಲಾದ ವಿಕಲಮನವ ತೊಳೆವುದಕೆ
ಪ್ರಕಟ ತೀರ್ಥಯಾತ್ರೆಯೊಂದ ಹೋಗದಿದ್ದರು
ಭಕುತಿಯಿಂದ ಉಳುವೆ ವಾಸ ಮಾಡಿದವಂಗೆ
ಭಕುತಿ ಮುಕುತಿ ಫಲಗಳಹವೆಂಬುದು ಶಾಸ್ತ್ರಸಿದ್ಧವು (ಪದ್ಯ ೬೫)
ಬೆಳಗಾಗಲಾವ ಮನುಜರು
ಉಳುವೆಗೆ ನಾ ಹೋಗಿ ಇಹೆನೆಂಬವರು
ಇಳೆಯೊಳು ಚೆನ್ನಬಸವೇಶನ
ಕಳೆಯೋಳಗೇಕಾರ್ಥವನು ಪಡೆದವರು ಸತ್ಯ (ಪದ್ಯ ೬೬)
ಮೇಲಿನ ಎರಡೂ ಪದ್ಯಗಳಲ್ಲಿ ಮುಕ್ತಿ ಅಪೇಕ್ಷೆ ಇದ್ದವರು ಉಳವಿಗೆ ಹೋಗಿ ನೆಲಸಬೇಕೆಂದು ಕವಿ ಹೇಳುತ್ತಾನೆ. ಈ ಉಳವಿ ಮಹಾತ್ಮೆಯನ್ನು ಸಕಲ ಲೋಕವನ್ನೇ ಕಾಗದವನ್ನಾಗಿ ಮಾಡಿಕೊಂಡು ಸಪ್ತ ಸಾಗರಗಳನ್ನೇ ಧೌತಿ ಮಾಡಿಕೊಂಡು ಕಲ್ಪತರುವನ್ನೇ ಲೇಖನಿಯನ್ನಾಗಿ ಮಾಡಿಕೊಂಡು ಬರೆಯಲು ಹೊರಟರೆ ಮುಗಿಯದು ಎನ್ನುತ್ತಾನೆ. ಮರದ ಮೇಲಿನ ಮಳೆ ಹನಿಗಳನ್ನು ಲೆಕ್ಕ ಹಾಕಬಹುದು, ಬೆಳೆದಿರುವ ಸಿರಿಧಾನ್ಯಗಳನ್ನು ಲೆಕ್ಕ ಹಾಕಬಹುದು, ಹೊಳೆವ ನಕ್ಷತ್ರಗಳನ್ನು ಲೆಕ್ಕ ಹಾಕಬಹುದು, ಆದರೆ ಉಳವಿಯ ಸುಕ್ಷೇತ್ರ ಮಹಿಮೆ ಹೇಳುವುದು ಅಷ್ಟು ಸುಲಭವಲ್ಲ ಎನ್ನುತ್ತಾನೆ ಕವಿ.
ಬಾಲಲೀಲಾ ಮಹಾಂತ ಶಿವಯೋಗಿಗಳ ಬದುಕಿನಲ್ಲಿ ಒಂದು ಘಟನೆ ದಾಖಲಾಗಿದೆ. ಒಮ್ಮೆ ಮುಳಗುಂದದ ಭಕ್ತರೆಲ್ಲರು ಶಿವಯೋಗಿಗಳ ಹತ್ತಿರ ಬಂದು ನಾವೆಲ್ಲ ಉಳವಿಯ ರಥೋತ್ಸವ ನೋಡಲು ಹೋಗುತ್ತಿದ್ದೇವೆ, ತಾವು ದಯಮಾಡಿಸಬೇಕು ಎಂದು ವಿನಂತಿಸಿಕೊಳ್ಳುತ್ತಾರೆ. ಆಗ ಬಾಲಲೀಲಾ ಮಹಾಂತ ಶಿವಯೋಗಿಗಳು ಎಲ್ಲರ ಭಕ್ತರನ್ನು ತಮ್ಮ ಮಠದಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಮಗೆ ಇಲ್ಲಿಯೇ ಉಳವಿಯ ರಥೋತ್ಸವವನ್ನು ತೋರಿಸುತ್ತೇವೆ ಎನ್ನುತ್ತಾರೆ. ಭಕ್ತರೆಲ್ಲರಿಗೂ ಆಶ್ಚರ್ಯವಾಗುತ್ತದೆ. ಹೇಗೆ ತೋರಿಸುತ್ತಾರೆ ಎಂದು ಸೋಜಿಗಗೊಳ್ಳುತ್ತಾರೆ. ಸಾಯಂಕಾಲ ೫ ಗಂಟೆಯ ಹೊತ್ತಿಗೆ ಬಾಲಲೀಲಾ ಮಹಾಂತ ಶಿವಯೋಗಿಗಳು ಮಠದ ಅಂಗಳಕ್ಕೆ ಬಂದು, ಲಿಂಗಪೂಜೆ ಮಾಡತೊಡಗುತ್ತಾರೆ. ಉಳವಿಯಲ್ಲಿ ರಥೋತ್ಸವ ಮಾಡುವ ಎಲ್ಲ ಚಿತ್ರಗಳು ಶಿವಯೋಗಿಗಳ ಲಿಂಗದಲ್ಲಿ ಭಕ್ತರು ಕಣ್ಣಾರೆ ಕಂಡು ಭಕ್ತಿಯಿಂದ ಶಿವಯೋಗಿಗಳಿಗೆ ಶರಣಾಗುತ್ತಾರೆ. ಇದು ಶಿವಯೋಗಿಗಳ ಲಿಂಗಪೂಜಾ ಶಕ್ತಿಗೆ ಒಂದು ಉಜ್ವಲ ನಿದರ್ಶನವಾಗಿದೆ.