ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ಆರೋಪಿಯನ್ನು ಭೇಟಿಯಾಗಿ ಸೃಷ್ಟಿಸಿರುವ ವಿವಾದ ಈಗ ಇನ್ನೊಂದು ತಿರುವು ಪಡೆದುಕೊಳ್ಳುತ್ತಾ ಇದೆ.
ಅನೇಕ ನೆಟ್ಟಿಗರು ಸಿಂಹ ಆರೋಪಿ ನವೀನ್‌ರನ್ನು ಬೇಟಿಯಾಗಿರುವುದು “ಲಿಂಗಾಯತ ದ್ವೇಷದಿಂದಲೇ” ಎಂದು ಕೇಳಿದ್ದಾರೆ.
“ಒಬ್ಬ ದಿಟ್ಟ ಲಿಂಗಾಯತ ಪ್ರತಿಭಾವಂತೆ, ಸಾಮಾಜಿಕ ಕಾರ್ಯಕರ್ತೆ, ಜನಪರ ಪತ್ರಕರ್ತೆಯ ಕೊಲೆ ಪ್ರಕರಣದ ಆರೋಪಿಯನ್ನು ಮೆರೆಸೋದು ಯಾರನ್ನು ಮೆಚ್ಚಿಸೋಕೆ ಪ್ರತಾಪ್ ಸರ್..? ಆರ್‌ಎಸ್‌ಎಸ್ ನಾಯಕರನ್ನು ಮೆಚ್ಚಿಸಬೇಕು ಅಂದರೆ ಬಸವಣ್ಣನ ಲಿಂಗಾಯತವನ್ನು ದ್ವೇಷಿಸಲೇಬೇಕು ಅಲ್ವಾ..? ನಿಮ್ಮ ಈ ನಡೆ ಇತ್ತೀಚಿನ ನಿಮ್ಮ ಲಿಂಗಾಯತ ವಿರೋಧಿ ಹೇಳಿಕೆಗಳಿಗೆ ತಾಳೆಯಾಗುವಂತಿದೆ’ ಎಂದು ಎಂದು ಚಿರಂಜೀವಿ ಗೌಡ ಎನ್ನುವವರು ಪ್ರಶ್ನಿಸಿದ್ದಾರೆ.

“ಲಂಕೇಶ್ ಲಿಂಗಾಯತರು. ಅವರಿಗೆ ಹೀಗೆ ಮಾಡಿದವನ ಜೊತೆ ಹೋಗಿ ಬರ್ತಿಡಿಯಾ,” ಎಂದು ಇನ್ನೊಬ್ಬರು ಕೇಳಿದ್ದಾರೆ.
ಅನೇಕ ನೆಟ್ಟಿಗರು ಗೌರಿಯ ಲಿಂಗಾಯತ ಹಿನ್ನಲೆಯಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರೂ, ಕೆಲವರು ಹತ್ಯೆಯಾದ ಪತ್ರಕರ್ತೆಯ ಧರ್ಮಕ್ಕೂ ಈ ಘಟನೆಗೂ ಸಂಬಂಧವಿಲ್ಲವೆಂದು ಸಿಂಹರನ್ನು ಬೆಂಬಲಿಸಿದ್ದಾರೆ.
ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಭೇಟಿಯಾದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
‘ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್‌ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ’ ಎಂದು ಪ್ರತಾಪ್ ಸಿಂಹ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬೆನ್ನಲ್ಲೇ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನಿಮ್ಮ ಸ್ನೇಹಿತನೇ ಎಂದು ಪ್ರಶ್ನಿಸಿದ್ದಾರೆ.
‘ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
‘ಇದು ಗೋಡ್ಸೆ ಆರಾಧಕರ (ಬಿಜೆಪಿಯವರ) ಅಸಲಿ ಮುಖವಾಗಿದೆ. ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ ಎಂಬುವುದಕ್ಕೆ ಇದೊಂದು ನಿದರ್ಶನ’ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಅಂಗೈನಲ್ಲಿರುವ ಹುಣ್ಣನ್ನು ನೋಡಲು ಕನ್ನಡಿ ಬೇಕೆ ?
ಲಿಂಗಾಯತರು ಆಚಾರ, ಆಹಾರ , ವಿಹಾರ, ಧರ್ಮ ಆಚರಣೆ ಮತ್ತು ವಿಚಾರಗಳಿಂದ ಲಿಂಗಾಯತ ರಾಗಬಹುದೇ ಹೊರತು ಕಂದಾಚಾರದ ವಿರುದ್ಧ ಹೋರಾಡುವ ಮೂಲಕ ಮಾತ್ರವೇ ಲಿಂಗಾಯತರಾಗಲು ಸಾಧ್ಯವಿಲ್ಲ. ಗೌರಿ ಲಂಕೇಶ್ ತನ್ನನ್ನು ತಾನೇ ಎಂದೂ ಲಿಂಗಾಯತ ಎಂದು ಹೇಳಿಕೊಳ್ಳಲಿಲ್ಲ. ಅವರ ತಂದೆಯೂ ಅಷ್ಟೇ. ಹಿಂದುತ್ವವನ್ನು ಬೈದು ಹೀಯಾಳಿಸುವುದರ ಮೂಲಕ ಅವರು ಸಮಾಜ ಸುಧಾರಕರಾಗ ಬಹುದೇ? ಯಾರನ್ನೇ ಆಗಲಿ ಹೊಗಳಬೇಕಾದರೆ ಪೂರ್ವಾಪರ ಆಲೋಚನೆ ಮಾಡಬೇಕಾಗುತ್ತದೆ.
ಕೊಲೆ ಆರೋಪಿಯನ್ನೂ ಮೀರಿಸಬಲ್ಲೆ ಎ೦ದು ಸಿಂಹ ಬೆದರಿಸುವಂತಿದೆ ?!