[ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಶ್ರಾವಣಮಾಸದ ಈ ಚಿಂತನಮಾಲೆ ಆರಂಭಿಸಿದಾಗ, ನನ್ನೊಳಗೆ ಒಂದು ತಿಂಗಳ ಕಾಲ ಈ ಚಿಂತನ ಮಾಲೆ ಮುಂದುವರೆಯುವುದೇ? ಎಂಬ ಒಂದು ಅಳುಕಿತ್ತು. ಆಡಾಡತ ಹದಿನಾರು ಚಿಂತನೆಗಳು ಬಂದವು. ಈ ನಡುವೆ ಕರಣ ಹಸಿಗೆ, ಘಟಚಕ್ರ, ಮಿಶ್ರಾರ್ಪಣ ಕುರಿತು ಬರೆದಾಗ ಸಾಮಾನ್ಯ ಜನರಿಗೆ ಒಂದಿಷ್ಟು ಓದಲು ಕಠಿಣವೆನಿಸಿದರೂ, ಲಿಂಗಪೂಜೆಯ ಯೋಗ ಸಾಧನೆ ಮಾಡುವ ಅನೇಕ ಸಾಧಕರು ತುಂಬ ಖುಷಿಯಿಂದ ಈ ಬರಹವನ್ನು ಸ್ವಾಗತಿಸಿದರು. ಕೆಲವರು ಈ ಚಿಂತನೆಗಳು ತುಂಬ ತಾತ್ವಿಕವಾದವು ಎಂದರು. ಆದರೆ ಈ ತಾತ್ವಿಕ ಭಾಗಗಳೇ ಅನೇಕರ ಮನಸ್ಸಿನಾಳಕ್ಕೆ ಹೋದವು ಎಂಬುದು ಸಂತೋಷದ ಸಂಗತಿ. ಉಳವಿಯಲ್ಲಿ ಆಶ್ರಮ ಸ್ಥಾಪಿಸಿ ನಿತ್ಯ ನಿರಂತರ ವಚನ ಸಂಶೋಧನೆ, ಅಧ್ಯಾತ್ಮಿಕ ಸಾಧನೆ ಮಾಡುತ್ತಿರುವ ಪೂಜ್ಯ ಚನ್ನಬಸವಾನಂದ ಶ್ರೀಗಳ ಅನೇಕ ಶಿಷ್ಯರು ಫೋನ್ ಮಾಡಿ ಇವೆಲ್ಲ ಮೌಲಿಕ ವಿಚಾರಗಳು. ನಮ್ಮ ಸಾಹಿತ್ಯ ವಲಯ ಈವರೆಗೆ ಇವುಗಳನ್ನು ಉಪೇಕ್ಷಿಸಿತ್ತು, ಇಂತಹ ಸಂಗತಿಗಳತ್ತ ನಮ್ಮ ಗಮನ ಸೆಳೆದ ತಮಗೆ ಶರಣು ಎಂದು ಹೇಳಿದಾಗ ನನ್ನ ಚಿಂತನ ಮಾಲೆ ಸಾರ್ಥಕ್ಯ ಕಂಡಿತು ಎಂದು ಭಾವಿಸಿದ್ದೇನೆ. ದೇಶ-ವಿದೇಶಗಳಲ್ಲಿ ವಾಸಿಸುತ್ತಿರುವ ಶರಣ ಸಾಹಿತ್ಯ ಅಭಿಮಾನಿಗಳು ನನ್ನ ನಿರೀಕ್ಷೆ ಮೀರಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ವಯಸ್ಸಾದ ಹಿರಿಯರು, ಫೋನ್ ನಲ್ಲಿ ಓದುವುದು ತುಂಬ ಕಷ್ಟ. ಆದ್ದರಿಂದ ಆದಷ್ಟು ಬೇಗ ಪುಸ್ತಕ ರೂಪದಲ್ಲಿ ಪ್ರಕಟಿಸಿ ಎಂಬ ಸದಾಶಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಓದುಗ ದೊರೆಗಳಿಗೆ ನನ್ನ ಅನಂತ ಶರಣು ಶರಣಾರ್ಥಿಗಳು.]
ಶಿವಯೋಗಿ ಸಿದ್ಧರಾಮಗೆ
ಅವಿರಳ ಶಿವಲಿಂಗದೀಕ್ಷೆಯಂ ಸಂತಸದಿಂ
ಭುವಿಯರಿಯೆ ಚೆನ್ನಬಸವಂ
*ತವೆ ಇತ್ತುದ ಪೇಳ್ವೆ ಶರಣಜನ ಮುದವೆಯ್ದಲ್ *
(ಶೂನ್ಯಸಂಪಾದನೆ : ಸಿದ್ಧರಾಮೇಶ್ವರ ಗುರುಕರುಣ ಪೀಠಿಕಾ ಪದ್ಯ)
ಶೂನ್ಯಸಂಪಾದನೆ ಕನ್ನಡ ಸಾಹಿತ್ಯದಲ್ಲಿಯೇ ಒಂದು ಅತ್ಯಪೂರ್ವ ಮಹಾಗ್ರಂಥ. ಅದಕ್ಕೆ ಸರಿದೊರೆಯಾಗಿ ನಿಲ್ಲಬಲ್ಲ ಸಾಹಿತ್ಯ ಭಾರತೀಯ ಸಾಹಿತ್ಯ ಪರಂಪರೆಯಲ್ಲಿಯೇ ಇಲ್ಲ. ದಾರ್ಶನಿಕರಾಗಿದ್ದ ಡಾ. ಗುರುದೇವ ರಾನಡೆ ಅವರು ತಮ್ಮ ಕನ್ನಡ ಸಂತರ ಪರಮಾರ್ಥ ಪಥ ಗ್ರಂಥದಲ್ಲಿ ಈ ಶೂನ್ಯ ಸಂಪಾದನೆಯನ್ನು ಗ್ರೀಕ್ ದೇಶದ ಪ್ರಾಚೀನ ತತ್ವಜ್ಞಾನದ ಮಹಾಗ್ರಂಥ ಪ್ಲೇಟೋನ ಸಂಭಾಷಣೆಗಳಿಗೆ ಹೋಲಿಸಿದ್ದಾರೆ. ಬಸವ-ಚನ್ನಬಸವರನ್ನು ಗ್ರೀಕ್ ದೇಶದ ದಾರ್ಶನಿಕರಷ್ಟೇ ವ್ಯಕ್ತಿತ್ವದವರೆಂದು ಗುರುದೇವ ರಾನಡೆ ಅವರು ಹೇಳಿರುವುದು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ. ಅವರ ಮಾತುಗಳಲ್ಲಿಯೇ ಕೇಳುವುದಾದರೆ:
“ಹಿರಿಯ ಕನ್ನಡ ಅನುಭಾವಿಗಳಲ್ಲಿಯೂ ಪ್ರಪಂಚದ ಬೇರೆ ಅನೇಕ ಅನುಭಾವಿಗಳಲ್ಲಿಯೂ ಕೆಲ ಹೋಲಿಕೆಗಳನ್ನು ನಾವು ಕಾಣಬಲ್ಲೆವು. ಉದಾಹರಣಾರ್ಥವಾಗಿ, ನಾವು ಗ್ರೀಕ ದಾರ್ಶನಿಕರಾದ ಸಾಕ್ರೆಟೀಸ್, ಪ್ಲೇಟೋ ಹಾಗು ಫೀಡೋ ಇವರನ್ನು ತೆಗೆದುಕೊಂಡರೆ, ಇವರ ಪ್ರತಿನಿಧಿಗಳನ್ನು ನಾವು ಕಲ್ಯಾಣದ ‘ಅನುಭವ ಮಂಟಪ’ದಲ್ಲಿ ಕಾಣಬಹುದು. ಪ್ರಭುದೇವರು ಸಾಕ್ರೆಟೀಸನನ್ನು, ಬಸವೇಶ್ವರರು ಪ್ಲೇಟೋನನ್ನು, ಚೆನ್ನಬಸವರು ಫೀಡೋನನ್ನು ಪ್ರತಿನಿಧಿಸುವರು. ನಾನು ‘ಶೂನ್ಯಸಂಪಾದನೆ’ ಗ್ರಂಥವನ್ನು ಓದುತ್ತಿರುವಾಗ, ಪ್ಲೇಟೋನ ಗ್ರಂಥಗಳ ಸಂಪೂರ್ಣವಾದ ಅಧ್ಯಯನವನ್ನು ಮಾಡಿದ ಶ್ರೀ ಜುಯೆಟ್ ಹಾಗು ಬರ್ನೆಟ್ ಅವರಂಥ ಪಂಡಿತರು ಬರೆದಂತೆ ಈ ಅನುಭಾವಿಗಳನ್ನು ಕುರಿತು ಒಂದು ವ್ಯಾಪಕವಾದ ಗ್ರಂಥ ಬರೆಯಲು ಬರಲರಿಯದೇ ಎಂದೆನಿಸಿತು. ಅದೊಂದು ಅಸಾಮಾನ್ಯ ಕೆಲಸ. ‘ಶೂನ್ಯಸಂಪಾದನೆಯಲ್ಲಿಯ ಸಂವಾದಗಳು ಬಹುಮಟ್ಟಿಗೆ ಪ್ಲೇಟೋನ ಸಂವಾದಗಳ ಮಾದರಿಯಿಂದ ರಚಿಸಲಾಗಿರುವವು. ….. ನಾವು ಕ್ರಿಸ್ತನ ಕಾಲದೆಡೆ ತೆರಳಿದೆವೆಂದರೆ, ಕ್ರಿಸ್ತನ ಧರ್ಮವಿಚಾರದ ಬೆಳವಣಿಗೆಯನ್ನು ಅರುಹುವ ಕ್ರಿಸ್ತಧರ್ಮದ ನಾಲ್ವರು ಹಿರಿಯ ಪ್ರತಿನಿಧಿಗಳಾದ ಏಸೂಕ್ರಿಸ್ತ, ಸೇಂಟಪಾಲ್, ಸೇಂಟ ಆಗಸ್ಟಾಯಿನ್ ಮತ್ತು ಮಾರ್ಟಿನ್ ಲ್ಯೂಥರ್ ಇವರನ್ನು ‘ಅನುಭವ ಮಂಟಪ’ವನ್ನು ಅಲಂಕರಿಸಿದ ಮಹಾಮಹಿಮರಾದ ಪ್ರಭುದೇವ, ಬಸವಣ್ಣ, ಸಿದ್ಧರಾಮ ಮತ್ತು ಚೆನ್ನಬಸವ ಈ ಕನ್ನಡ ಅನುಭಾವಿಗಳು ತುಂಬಾ ಹೋಲುವರು ಎಂಬುದು ಕಂಡುಬರುವುದು.” (ಗುರುದೇವ ರಾನಡೆ : ಕನ್ನಡ ಸಂತರ ಪರಮಾರ್ಥ ಪಥ ಪು. ೧೦)
ಗುರುದೇವ ರಾನಡೆ ಅವರಂತಹ ಶ್ರೇಷ್ಠ ದಾರ್ಶನಿಕರು ಶೂನ್ಯಸಂಪಾದನೆ ಕೃತಿ ಕುರಿತು ಹೇಳಿರುವ ಈ ನುಡಿಗಳು ಅಕ್ಷರಶಃ ನಿಜವಾಗಿವೆ. ಕನ್ನಡ ಅನುಭಾವ ಸಾಹಿತ್ಯಕ್ಕೆ ಅತ್ಯಂತ ಶ್ರೇಷ್ಠವಾದ ಕೊಡುಗೆಯಾಗಿ ಈ ಶೂನ್ಯಸಂಪದನೆ ದಕ್ಕಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ವರೆಗೆ ಒಟ್ಟು ನಾಲ್ಕು ಶೂನ್ಯಸಂಪಾದನೆಗಳು ನಮಗೆ ದೊರಕಿವೆ. ಶಿವಗಣ ಪ್ರಸಾದಿ ಮಹಾದೇವಯ್ಯ, ಗುಮ್ಮಳಾಪುರದ ಸಿದ್ಧಲಿಂಗದೇವರು, ಹಲಗೆಯಾರ್ಯ ಮತ್ತು ಗುಳೂರು ಸಿದ್ಧವೀರಣ್ಣೊಡೆಯರು ಈ ನಾಲ್ವರು ರಚಿಸಿದ ಶೂನ್ಯಸಂಪಾದನೆಗಳಲ್ಲಿ ಇಂದು ಹೆಚ್ಚು ಜನಪ್ರಿಯವಾದುದು ಗೂಳೂರು ಸಿದ್ಧವೀರಣ್ಣೊಡೆಯರದು. ಇನ್ನೂ ವಿಶೇಷವೆಂದರೆ ಗುಮ್ಮಳಾಪುರದ ಸಿದ್ಧಲಿಂಗದೇವರು, ಗೂಳೂರು ಸಿದ್ಧವೀರಣ್ಣೊಡೆಯರು ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ಪರಮಶಿಷ್ಯರು, ಅವರ ಪೀಠವನ್ನು ಅಲಂಕರಿಸಿದ ಮಠಾಧೀಶರಾಗಿದ್ದರು.
ಮೊದಲನೆಯ ಶೂನ್ಯಸಂಪಾದನೆ ಬಂದಾಗ, ಸಿದ್ಧರಾಮೇಶ್ವರರಿಗೆ ಲಿಂಗದೀಕ್ಷಾ ಪ್ರಸಂಗ ಇರಲಿಲ್ಲ. ಅದನ್ನು ಮನಗಂಡು ಮುಂದಿನ ಶೂನ್ಯಸಂಪಾದನಕಾರರು ಸಿದ್ಧರಾಮದೇವರ ಗುರುಕರುಣ ಎಂಬ ಹೊಸ ಸಂಪಾದನೆಯನ್ನು ಸೇರಿಸುತ್ತ ಬಂದರು, ಅದರಲ್ಲೂ ಗುಮ್ಮಳಾಪುರದ ಸಿದ್ಧಲಿಂಗದೇವರು ೧೫೦ಕ್ಕೂ ಹೆಚ್ಚು ಸಿದ್ಧರಾಮರ ವಚನಗಳನ್ನು ಬಳಸಿ, ಅದನ್ನು ಇನ್ನಷ್ಟು ವರ್ಣರಂಜಿತಗೊಳಿಸಲು ಪ್ರಯತ್ನಿಸಿದರು.
ಮೂಲತಃ ನಾಥಪಂಥೀಯನಾದ್ದ ಸಿದ್ಧರಾಮೇಶ್ವರರು ಸೊನ್ನಲಾಪುರ (ಈಗಿನ ಸೊಲ್ಲಾಪುರ)ದಲ್ಲಿ ಕೆರೆ ಕಟ್ಟಿಸುತ್ತ, ದೇವಾಲಯ ಕಟ್ಟಿಸುತ್ತ ಲೋಕೋದ್ಧಾರ ಕಾರ್ಯಗಳನ್ನು ಮಾಡುತ್ತಿದ್ದರು. ಅವರನ್ನು ಒಮ್ಮೆ ಅಲ್ಲಮಪ್ರಭುದೇವರು ಭೇಟಿ ಮಾಡುತ್ತಾರೆ. ಈ ಪ್ರಸಂಗವೂ ಶೂನ್ಯಸಂಪಾದನೆಯಲ್ಲಿ ವಿಸ್ತಾರವಾಗಿ ಬಂದಿದೆ. (ಇಲ್ಲಿ ಚೆನ್ನಬಸವಣ್ಣನವರ ಮಹತ್ವವನ್ನು ಮಾತ್ರ ಅನುಲಕ್ಷಿಸಿರುವುದರಿಂದ ಈ ವಿಷಯವಾಗಿ ಇಲ್ಲಿ ಹೆಚ್ಚು ಚರ್ಚಿಸಿಲ್ಲ) ಕೊನೆಗೆ ಅಲ್ಲಮಪ್ರಭುದೇವರು ಸಿದ್ಧರಾಮರನ್ನು ಕಲ್ಯಾಣ ಪಟ್ಟಣಕ್ಕೆ ಕರೆದುಕೊಂಡು ಬರುತ್ತಾರೆ. ಮಹಾಜ್ಞಾನಿ ಚನ್ನಬಸವಣ್ಣನವರಿಂದ ಲಿಂಗದೀಕ್ಷೆಯನ್ನು ಕೊಡಿಸುತ್ತಾರೆ. ಈ ವಿಷಯವಾಗಿ ಪ್ರಸ್ತುತ ಶೂನ್ಯಸಂಪಾದನೆಯಲ್ಲಿ ಬರುವ ವಿಚಾರವನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.
ಇಷ್ಟಲಿಂಗಧಾರಣೆ ಮಾಡಿಕೊಳ್ಳಬೇಕೆಂದು ಅಲ್ಲಮರ ಮಾತುಗಳಿಂದ ಸಿದ್ಧರಾಮರಿಗೆ ಅನ್ನಿಸತೊಡಗಿತು. ಅದರ ನೆಲೆ ಕಲೆಗಳೇನು? ಎಂದು ಅಲ್ಲಮರನ್ನು ಪ್ರಶ್ನಿಸಿದಾಗ, ಅಲ್ಲಮರು ಇದಕ್ಕೆ ಸರಿಯಾದ ಉತ್ತರ ನಿನಗೆ ಕಲ್ಯಾಣದ ಅನುಭವ ಮಂಟಪದಲ್ಲಿಯೇ ದೊರೆಯುವುದು, ಬಾ ನನ್ನ ಜೊತೆ ಎಂದು ಕರೆದುಕೊಂಡು ಕಲ್ಯಾಣದಂಗಳಕ್ಕೆ ಬರುತ್ತಾರೆ.
ಚಾಮರಸನು ತನ್ನ ಪ್ರಭುಲಿಂಗಲೀಲೆಯಲ್ಲಿ ‘ಆನೆ ಕೆಸರಿನಲ್ಲಿ ಬಿದ್ದರೆ, ಅದು ತನ್ನ ಭುಜಬಲದ ಪರಾಕ್ರಮದಿಂದ ತಾನೇ ಮೇಲೆ ಎದ್ದು ಬರುತ್ತದೆ. ಹಾಗೆ ನೀನು ತಪ್ಪಿದ ನಿನ್ನ ನಿಜವನ್ನು ನೀನೆ ಸಾಧಿಸಿಕೊಂಡರೆ, ನೀನೇ ಸದ್ಯೋನ್ಮುಕ್ತನಾಗುವಿ’ ಎಂದು ಅಲ್ಲಮ ಸಿದ್ಧರಾಮರಿಗೆ ಹೇಳಿದಾಗ, ಸ್ಥಾವರಲಿಂಗಪೂಜೆಯಲ್ಲಿ ಲೋಕಕಲ್ಯಾಣದ ಕನಸು ಕಂಡಿದ್ದ ಸಿದ್ಧರಾಮರು, ಇಷ್ಟಲಿಂಗಪೂಜೆಯ ಮೂಲಕ ಆತ್ಮೋನ್ನತಿಯ ಮಾರ್ಗವನ್ನು ಕಾಣಬೇಕೆಂದು ಅಲ್ಲಮರೊಂದಿಗೆ ಕಲ್ಯಾಣಕ್ಕೆ ಬರುತ್ತಾರೆ.
ಸಿದ್ಧರಾಮರು ಅಲ್ಲಮನನ್ನೇ ಪ್ರಶ್ನಿಸಿ ಲಿಂಗದ ಬಗೆಗಿನ ನನ್ನ ಗೊಂದಲಗಳನ್ನು ಮೊದಲು ಪರಿಹರಿಸಿ ಎಂದು ಕೇಳುತ್ತಾರೆ. ಇಷ್ಟಲಿಂಗ (ಹೊರಗಿನ ಲಿಂಗ)ದಿಂದ ಅಂತರಂಗದ (ಒಳಗಿನ ಪ್ರಾಣಲಿಂಗ)ದ ಮರ್ಮವನ್ನು ತಿಳಿಯಲು ಸಾಧ್ಯವೇ? ಕೈಯೊಳಗಿನ ಲಿಂಗ ಪ್ರಾಣದೊಳಗೆ ವೇದ್ಯವಾದ ಪರಿ ತಿಳಿಸು ಎಂದು ಕೇಳುತ್ತಾರೆ. ಆಗ ಅಲ್ಲಮಪ್ರಭುದೇವರು ಬಸವಣ್ಣನವರ ಕಡೆ ಮುಖ ಮಾಡಿ, ‘ಸಂಗನ ಬಸವಣ್ಣಾ ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ, ಮಾತೆಯಿಲ್ಲದ ಜಾತನ, ಗಮನವಿಲ್ಲದ ಗಮ್ಯನ ಠಾವ ತೋರಿಸು’ ಎಂದು ಹೇಳುತ್ತಾರೆ. ಅಂದರೆ ಶೂನ್ಯತತ್ವ ಪರಿಕಲ್ಪನೆಯ ತ್ರಿಗುಣಾತೀತ ಮಹಾಲಿಂಗದ ನಿಲುವು ಏನು ಹೇಳು ಎಂದು ಅಲ್ಲಮರು ಕೇಳುತ್ತಾರೆ.
ಎನ್ನ ಕಾಯದ ಕರಸ್ಥಲದಲ್ಲಿ ಅಲ್ಲಮನನ್ನು, ಎನ್ನ ಮನದ ಕರಸ್ಥಲದಲ್ಲಿ ಚನ್ನಬಸವಣ್ಣನ, ಎನ್ನ ಅರಿವಿನ ಕರಸ್ಥಲದಲ್ಲಿ ಮಡಿವಾಳಯ್ಯನ ಕಂಡೆನು. ಸ್ಥೂಲ ಸೂಕ್ಷ್ಮ ಕಾರಣ ಈ ಮೂರೂ ದೇಹಗಳು ಈ ಮೂವರಿಂದ ಪಾವನಗೊಂಡವು. ಇದರಿಂದ ಒಳಗೆ ಹೊರಗೆಂಬ, ಹೊರಗು ಒಳಗೆಂಬ ಭೇದವಿಲ್ಲದಾಯಿತು ಎಂದು ಬಸವಣ್ಣನವರು ಹೇಳುತ್ತಾರೆ. ಮುಂದುವರಿದು, ಸಮಯ ವಿರುದ್ಧಕ್ಕಂಜಿ ವಿನಯವ ನುಡಿವೆ, ಕೊಂದರೆ ಕೊಲ್ಲು, ಕಾಯ್ದರೆ ಕಾಯಿ ನಮ್ಮವರೆಂದು ನಿಯಮ ಸಡಿಸಲು ಸಾಧ್ಯವಿಲ್ಲ. ನಿಯಮಗಳ ಪರಿಪಾಲನೆಯಲ್ಲಿ ಕಟ್ಟುನಿಟ್ಟಾಗಿರಬೇಕು. ಅದಕ್ಕಾಗಿ ಲಿಂಗವಿಲ್ಲದ ಸಿದ್ಧರಾಮರು ಹೀಗೆ ಕೇಳಬಹುದೇ? ಎನ್ನುತ್ತಾರೆ.
ಬಸವಣ್ಣನವರ ಈ ಭೇದಭಾವವನ್ನು ಕಂಡು ಸಿದ್ಧರಾಮದೇವರು “ಬೆಳಗು ಬೆಳಗು ಹಳಚುವಲ್ಲಿ ಕತ್ತಲೆ ಉಳಿಯಬಲ್ಲುದೆ ಅಯ್ಯಾ? ಶರಣರು ಶರಣರು ಮಹಾನುಭಾವಗೋಷ್ಠಿಯಂ ಮಾಡುವಲ್ಲಿ. ಸಂಗದೊಳಿರ್ದವರ ಅಜ್ಞಾನವಳಿದು ನಿಜವನೈದುವರಯ್ಯಾ! ನಿಮ್ಮ ಮಹಾನುಭಾವದ ಸೋಂಕಿನ ಸೆರಗಿನೊಳಗಿರ್ದು ನಾನು ಪರಮಸುಖಿಯಾಗಿ ಮಡಿವಾಳನ ಪಾದದಲ್ಲಿ ಮನಮಗ್ನನಾದೆನು ಕಾಣಾ ಪ್ರಭುವೆ, ಕಪಿಲಸಿದ್ಧ ಮಾಲ್ಲಿಕಾರ್ಜುನಾ.”
ಎಲ್ಲ ಕಡೆಯಿಂದ ಬೆಳಕು ಬಂದಾಗ, ಕತ್ತಲೆ ಉಳಿಯುವುದೇ? ಶರಣರು ಶರಣರು ಕೂಡಿ ಅನುಭಾವ ಗೋಷ್ಠಿ ಮಾಡುತ್ತಿರುವಾಗ ಅಲ್ಲಿದ್ದವರೆಲ್ಲ ಅಜ್ಞಾನಿಗಳೆಲ್ಲರೂ ಜ್ಞಾನಿಗಳಾಗುವರೆ. ಆದ್ದರಿಂದ ಮಡಿವಾಳನ ಚರಣದಲ್ಲಿ ಮಗ್ನನಾಗಿರುವೆ ಎನ್ನುತ್ತಾರೆ. ಸಿದ್ಧರಾಮರ ಉತ್ತರದಿಂದ ತಕ್ಷಣ ಎದ್ದು ನಿಂತ ಚನ್ನಬಸವಣ್ಣನವರು ತುಂಬ ಸ್ವಾರಸ್ಯವಾಗಿ ದೇಹದ ಮೇಲೆ ಎಲ್ಲಿಯವರೆಗೆ ಲಿಂಗ ಇರುವುದಿಲ್ಲವೋ ಅಲ್ಲಿಯವರೆಗೆ ಪ್ರಾಣದಲ್ಲಿ ಅದರ ಪರಿಣಾಮವನ್ನು ಕಾಣಲು ಸಾಧ್ಯವಿಲ್ಲ. ಸ್ಥೂಲ ಸೂಕ್ಷ್ಮ ಕಾರಣ ಶರೀರಗಳಿಗೆ ಕ್ರಮವಾಗಿ ತ್ಯಾಗಾಂಗ, ಯೋಗಾಂಗ, ಭೋಗಾಂಗದ ಇಷ್ಟ, ಪ್ರಾಣ, ಭಾವಲಿಂಗಗಳು ಪ್ರತಿಷ್ಠಾಪನೆ ಆಗಬೇಕು. ಒಂದು ಬಿಟ್ಟು ಒಂದಂಗ ತೋರಲಾರದು, ಅಷ್ಟೊಂದು ಸಂದು ಭೇದವಿಲ್ಲದಿಪ್ಪ ನಿಲುವು ಮಡಿವಾಳಯ್ಯನವರದು. ಇಂತಹ ನಿಲುವು ನಿನಗೆ ಹೇಗೆ ಸಾಧ್ಯವಾಗುವುದು ಸಿದ್ಧರಾಮ ಎಂದು ಕೇಳುತ್ತಾರೆ.
ಆಗ ಸಿದ್ಧರಾಮರು: ತನು ಉಂಟೆಂಬ ಭಾವ ಮನದಲ್ಲಿಲ್ಲ, ಮನ ಉಂಟೆಂಬ ಭಾವ ಅರಿವಿನಲ್ಲಿಲ್ಲ, ಅರಿವು ಉಂಟೆಂಬ ಭಾವ ನುಡಿಯೊಳಗಿಲ್ಲ. ತನು ಮನ ಜ್ಞಾನವೆಂಬ ತ್ರಿವಿಧವು ಏಕಾರ್ಥವಾದ ಬಳಿಕ ಯಾವ ತನುವಿನ ಮೇಲೆ ಸ್ವಾಯತವ ಮಾಡುವೆನು? ಎನ್ನ ಕಾಯವೆ ಬಸವಣ್ಣನು. ಎನ್ನ ಪ್ರಾಣವೇ ಪ್ರಭುದೇವರು. ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಒಳಹೊರಗೆಂಬುದಿಲ್ಲ ಕಾಣಾ ಚೆನ್ನಬಸವಣ್ಣಾ ಎನ್ನುತ್ತಾರೆ.
ಚನ್ನಬಸವಣ್ಣ ಸಿದ್ಧರಾಮರ ಕೌತುಕದ ಉತ್ತರಕ್ಕೆ ಪ್ರತಿಕ್ರಿಯೆಯಾಗಿ ಅಂಗವಿಲ್ಲ ಎನ್ನುವಲ್ಲಿ ಅಂಗದ ಶಂಕೆ ಹುಟ್ಟುವುದು, ಲಿಂಗ ಇಲ್ಲ ಎಂಬ ಮಾತಿನಲ್ಲಿಯೇ ಲಿಂಗದ ಶಂಕೆ ಬಿಡದು, ಇಲ್ಲ ಎನ್ನುವುದು ಕೇವಲ ಮರೆವು ಮಾತ್ರವಲ್ಲ, ಇದೆ ಎಂಬುದಕ್ಕೂ ಮರೆವು ಇದೆ. ‘ಇಲ್ಲ’ ಮತ್ತು ‘ಇದೆ’ ಎಂಬ ಶಂಕೆ ಅಳಿಯದೆ ಪ್ರಾಣಲಿಂಗದ ಸಂಬಂಧ ಸ್ವಯವಾಗದು ನಿನಗೆ ಎಂದು ತೀಕ್ಷ್ಣವಾಗಿ ಹೇಳುತ್ತಾರೆ.
ಇಂತಹ ತಾತ್ವಿಕ ಪ್ರಶ್ನೆಯನ್ನು ಎತ್ತಿದಾಗ ತಕ್ಷಣ ಸಿದ್ಧರಾಮರು ತನುವಿದ್ದು ತನುವಿಲ್ಲ. ಮನವಿದ್ದು ಮನವಿಲ್ಲ. ಭಾವವಿದ್ದು ಭಾವವೆಂಬ ಬುದ್ಧಿಯಿಲ್ಲ. ನೀನೆಂಬುದುಂಟಾಗಿ ಭೃತ್ಯಾಚಾರವಿಲ್ಲ. ನಾನೆಂಬುದುಂಟಾಗಿ ಅಹಂಕಾರವಿಲ್ಲ. ಕಪಿಲಸಿದ್ಧಮಲ್ಲಿನಾಥಯ್ಯನಲ್ಲಿ ಲಿಂಗಸಂಗ ನಿರ್ಲೇಪವೆಂಬುದನಿದಿರಿಂಗೆ ನುಡಿದು ಹೇಳಬಾರದು ಕಾಣಾ ಚೆನ್ನಬಸವಣ್ಣ ಇದ್ದು ಇಲ್ಲದಂತಿರುವ, ಇಲ್ಲದಿದ್ದರೂ ಇದ್ದಂತಿರುವ ಈ ನಾನು ನನ್ನಿಂದ ನಾನೇ ಎಲ್ಲ ಎಂಬಂತಹ ಅಹಂಕಾರದ ಪರದೆಯನ್ನು ತೆರೆದು ನೋಡು, ಆಗ ಲಿಂಗಸಂಗವಾದ ಪರಿ ನಿನಗೆ ಕಾಣುತ್ತದೆ ಎನ್ನುತ್ತಾನೆ.
ಈ ಇಬ್ಬರ ವಾದದ ನಡುವೆ, ಅಲ್ಲಮರು ನಡುವೆ ಬಾಯಿ ಹಾಕುತ್ತಾರೆ. ಸಿದ್ಧರಾಮ ಈಗಾಗಲೇ ಲಿಂಗಸ್ವರೂಪವೇ ಆಗಿದ್ದಾನೆ. ಆತನಿಗೆ ಬೇರೆ ಲಿಂಗದ ಅವಶ್ಯಕತೆ ಇಲ್ಲ ಎನ್ನುವುದರ ಭಾವ ಅಲ್ಲಮರದು. ಅದಕ್ಕಾಗಿ ಚೆನ್ನಬಸವಣ್ಣನವರನ್ನು ಉದ್ದೇಶಿಸಿ- ನಿಮ್ಮನರಿದ ಶರಣಂಗೆ ಶಿವಪೂಜೆಯ ಮಾಡುವ ದಂದುಗವೇಕೋ? ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೊ? ಬೇಟದ ಮರುಳಿಂಗೆ ಲಜ್ಜೆ ಮುನ್ನೇಕೋ? ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೋ? ಗುಹೇಶ್ವರ ಲಿಂಗವು ಪ್ರಾಣವಾಗಿಪ್ಪ ಸಿದ್ಧರಾಮಯ್ಯಂಗೆ ಕುರುಹು ಮುನ್ನೇಕೋ ಚೆನ್ನಬಸವಣ್ಣ? ಎಂದು ಕೇಳುತ್ತಾ ಆಕಾಶವನಡರುವಂಗೆ ಅಟ್ಟುಗೋಲ ಹಂಗೇಕೋ? ಸಮುದ್ರವ ದಾಂಟುವಂಗೆ ಹರಿಗೋಲ ಹಂಗೇಕೋ? ಸೀಮೆಯ ಮೀರಿದ ನಿಸ್ಸೀಮಂಗೆ ಸೀಮೆಯ ಹಂಗೇಕೋ? ಗುಹೇಶ್ವರ ಲಿಂಗದಲ್ಲಿ ನಿಸ್ಸೀಮ ಸಿದ್ಧರಾಮಯ್ಯಂಗೆ ಲಿಂಗವೆಂದೇನು ಹೇಳಾ ಚೆನ್ನಬಸವಣ್ಣಾ?’
ಆಕಾಶಕ್ಕೆ ನೆಗೆಯುವ ಸಾಮರ್ಥ್ಯ ಇರುವವನಿಗೆ ಉದ್ದ ಕೋಲಿನ ಅವಶ್ಯಕತೆ ಏಕೆ? ಹನುಮನಂತೆ ಸಮುದ್ರವನ್ನೇ ದಾಟುವ ಸಾಮರ್ಥ್ಯವುಳ್ಳವನಿಗೆ ಸಮುದ್ರ ದಾಟಬೇಕೆನ್ನುವ ಹರಿಹೋಲಿನ ಹಂಗೇಕೋ ಸ್ವಯಂಭು ಲಿಂಗಸ್ವರೂಪವೇ ಆಗಿರುವ ಸಿದ್ಧರಾಮನಿಗೆ ಮತ್ತೆ ಲಿಂಗ ಎಂದರೆ ಏನು? ಎಂಬುದನ್ನು ಸ್ಪಷ್ಟವಾಗಿ ತಿಳಿಸು ಚನ್ನಬಸವಣ್ಣಾ ಎಂದು ಪ್ರಭುದೇವರು ಹೇಳುತ್ತಾರೆ.
ಇದಕ್ಕೆ ಚನ್ನಬಸವಣ್ಣನವರು ನೀಡುವ ಉತ್ತರ ಅತ್ಯಂತ ಮನೋವೇದ್ಯವಾಗಿದೆ : ಆಕಾಶದಲಾಡುವ ಪಟಕ್ಕಾದರು ಮೂಲಸೂತ್ರವಿರಬೇಕು. ಕಲಿಯಾದಡು ಕಜ್ಜವಿಲ್ಲದೆಯಾಗದು, ಭೂಮಿಇಲ್ಲದೆ ಬಂಡಿ ನಡೆವುದೆ? ಅಂಗಕ್ಕೆ ಲಿಂಗಸಂಗವಿಲ್ಲದೆ ನಿಸ್ಸಂಗವಾಗಬಾರದು, ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೇ ಪ್ರಭುವೆ? ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚಕೆಳಗಿಪ್ಪುದು ನೋಡಾ! ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ, ಹೇಮಗಿರಿಯ ಸಂಚ ತಪ್ಪದು ನೋಡಾ! ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ, ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ? ಮಣ್ಣು ಮರನನುಳಿದು ತೋರುವ ಹಣ್ಣು ರುಚಿಯುಂಟೆ? ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು ಅಂತಿರಲಯ್ಯಾ ಪ್ರಭುವೆ.
ಆಕಾಶದಲ್ಲಾಡುವ ಪಟಕ್ಕಾದರೂ ಒಂದು ಮೂಲಸೂತ್ರವಿರಬೇಕು. ಎಂತಹ ಶೂರನಿದ್ದರೂ ಕೈಯಲ್ಲಿ ಆಯುಧವನ್ನು ಹಿಡಿಯಲೇಬೇಕು. ಭೂಮಿ ಇಲ್ಲದೇ ಹೋದರೆ ಬಂಡಿ ಸಾಗುವುದೇ ಹಾಗೆ ಅಂಗಕ್ಕೆ ಲಿಂಗ ಸಂಗ ಇಲ್ಲದೇ ಹೋದರೆ ಅದು ವ್ಯರ್ಥ . ಹೀಗಾಗಿ ಸಿದ್ಧರಾಮ ಲಿಂಗವಿಲ್ಲದ ನಿಸ್ಸಂಗಿ ಆಗಿದ್ದಾನೆ ಎಂದು ಪ್ರತಿಕ್ರಿಯಿಸುತ್ತಾರೆ.
ಇಷ್ಟೆಲ್ಲ ವಿವರಣೆ ನೀಡಿದರೂ ಅಲ್ಲಮರು ಸುಮ್ಮನಿರದೆ : ‘ಕಾಯವೆ ಸಕಲ, ಪ್ರಾಣವೆ ಸಕಲನಿಃಕಲ, ಭಾವವೆ ನಿಃಕಲಲಿಂಗವಾಗಿರ್ದು, ಮತ್ತೆ ಬೇರೆ ಆಯತ ಸ್ವಾಯತ ಸನ್ನಿಹಿತವೆಂಬುದಿಲ್ಲ ನೋಡಾ. ಶಿವಶಕ್ತಿಸಂಬಂಧವೇ ದೇಹದೇಹಿಗಳಾಗಿರ್ದ ಬಳಿಕ, ಗುಹೇಶ್ವರಲಿಂಗದಲ್ಲಿ ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚೆನ್ನಬಸವಣ್ಣಾ?’ ಲಿಂಗಸ್ವರೂಪಿಯೇ ಆಗಿರುವ ಸಿದ್ಧರಾಮರು ಮತ್ತೊಂದು ಇಷ್ಟಲಿಂಗವನ್ನು ಕಟ್ಟುಕೊಂಡು ಅರಿಯಬೇಕಾದ ಪ್ರಮೇಯ ಇಲ್ಲ ಎನ್ನುತ್ತಾರೆ. ಇದಕ್ಕೆ ಚನ್ನಬಸವಣ್ಣನವರು ತುಂಬ ತಾತ್ವಿಕವಾದ ಉತ್ತರವನ್ನು ನೀಡುತ್ತಾರೆ.
ಆಚಾರ ಅಂಗದ ಮೇಲೆ ಆಯತವಾದುದೆ ಇಷ್ಟಲಿಂಗ. ಆ ಇಷ್ಟಲಿಂಗವಿಡಿದಿರುವುದೇ ಪ್ರಾಣಲಿಂಗ ಸ್ವಾಯತ. ಪ್ರಾಣ ಲಿಂಗ ಹುಟ್ಟಲಾರದೆ, ಇಷ್ಟಲಿಂಗವ ಕಾಣಬಾರದು. ಈ ಭೇದವ ಭೇದಿಸಬಲ್ಲರೆ, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯರು ಪ್ರಭು, ಅಲ್ಲದೆ, ತಿಳಿಯಾದ ತುಪ್ಪಕ್ಕೆ ಮತ್ತು ಗಟ್ಟಿಯಾದ ತುಪ್ಪಕ್ಕೆ ಭೇದ ಇದೆಯೇ? ದೀಪಕ್ಕೆ ಮತ್ತು ಬೆಳಕಿಗೆ ಭಿನ್ನತೆ ಇದೆಯೆ? ಹಾಗೆ ಆತ್ಮಕ್ಕೂ ದೇಹಕ್ಕೂ ಭಿನ್ನತೆ ಇಲ್ಲ. ಅದಕ್ಕಾಗಿ ಅಂಗಲಿಂಗದ ಸಂಬಂಧವಾಗಬೇಕು. ಹೀಗಾಗದವರನ್ನು ಶರಣರು ಮೆಚ್ಚಲಾರರು ಎನ್ನುತ್ತಾನೆ. ಮುಂದುವರಿದು ಮದುವೆಯಾಗದೆ, ಸತಿಸಂಗದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ. ದೀಪವಿಲ್ಲದೆ ಕಣ್ಣಿಗೆ ಬರೀ ಕತ್ತಲೆ ಕಾಣುತ್ತದೆ. ಹೀಗೆ ಅಂಗನನ್ನು ಬಿಟ್ಟು ಆತ್ಮನಿಲ್ಲ. ಶಕ್ತಿಯನ್ನು ಬಿಟ್ಟು ಶಿವನಿಲ್ಲ, ಆದ್ದರಿಂದ ಕಾರಣ, ಸ್ಥೂಲ, ಸೂಕ್ಷ್ಮ ಎಂಬ ಮೂರು ಶರೀರದಲ್ಲಿ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಎಂಬ ತ್ರಿವಿಧಲಿಂಗ ಸಂಬಂಧ ಬೇಡವೆಂದು ಹೇಳಿದರೆ ಶರಣರು ಒಪ್ಪುವುದಿಲ್ಲ. ಸಿದ್ಧರಾಮನಂತಹ ಇಷ್ಟಲಿಂಗ ಸಂಬಂಧವಿಲ್ಲದವರ ಮುಖ ನೋಡಲಾಗದು ಎನ್ನುತ್ತಾನೆ.
ಈ ಚರ್ಚೆ ನಡೆದಾಗಲೇ ಮೋಳಿಗೆ ಮಾರಯ್ಯನವರು ಮಧ್ಯೆ ಪ್ರವೇಶಿಸಿ ಪ್ರಾಣಲಿಂಗ ಸಂಬಂಧ ಕುರಿತು ಮೂರು ವಚನಗಳನ್ನು ಹೇಳುತ್ತಾರೆ. ಎಳ್ಳಿನೊಳಗೆ ಎಣ್ಣೆ ಇರುತ್ತದೆ, ಆದರೆ ಅದನ್ನು ಗಾಣಕ್ಕೆ ಹಾಕಿದಾಗಲೇ ಗೋಚರವಾಗುವುದು, ಹಣ್ಣು ತಿಂದಾಗ ಅದರಲ್ಲಿ ರಸವಿರುವುದನ್ನು ಗುರುತಿಸಬಹುದು. ನಾಟಕದ ರಂಗ ಪರದೆಯನ್ನು ಸರಿದಾಗ ನಿಜರೂಪ ಕಾಣುವಂತೆ ಸಿದ್ಧರಾಮ ಲಿಂಗಸ್ವರೂಪಿಯೇ ಆಗಿದ್ದರೂ, ತನ್ನ ಲಿಂಗಸ್ವರೂಪವನ್ನು ಅರಿತುಕೊಳ್ಳಲಾದರೂ ಆತ ಇಷ್ಟಲಿಂಗವನ್ನು ಧರಿಸಲೇಬೇಕು ಎಂದು ಚನ್ನಬಸವಣ್ಣನವರ ಪರವಾಗಿ ಮಾರಯ್ಯ ಶರಣರು ನಿಂತುಕೊಳ್ಳುತ್ತಾರೆ.
ಇದೇ ಸಂದರ್ಭದಲ್ಲಿ ದಾಸಿಮಯ್ಯ, ಮೆರೆಮಿಂಡದೇವ, ಉರಿಲಿಂಗಪೆದ್ದಿ, ರಾಯಸದ ಮಂಚಣ್ಣ, ಢಕ್ಕೆಯ ಬೊಮ್ಮಣ್ಣ, ಅಮುಗಿದೇವಯ್ಯ, ಶಿವನಾಗಿಮಯ್ಯ, ತೆಲುಗು ಬೊಮ್ಮಣ್ಣ ಮೊದಲಾದ ಶರಣರು ಒಂದೊಂದು ವಚನವನ್ನು ಹೇಳಿ, ಸಿದ್ಧರಾಮರಿಗೆ ಇಷ್ಟಲಿಂದ ಅವಶ್ಯಕತೆ ಇದೆ ಎಂಬುದನ್ನು ಒತ್ತಿ ಎತ್ತಿ ಹೇಳುತ್ತಾರೆ. ಈ ಸ್ವಾರಸ್ಯಕರ ಚರ್ಚೆ ಹಾಗೇ ಮುಂದುವರಿಯುತ್ತದೆ. ಅಲ್ಲಮರು ಸಿದ್ಧರಾಮರ ಯೋಗಮಾರ್ಗವೇ ಶ್ರೇಷ್ಠ ಇರುವಾಗ ಮತ್ತೆ ಲಿಂಗ ಕಟ್ಟುವ ಅವಶ್ಯಕತೆ ಇಲ್ಲವೆಂದಾಗ ಚನ್ನಬಸವಣ್ಣನವರು ತುಂಬ ಕಠೋರವಾಗಿ ಕಠಿಣ ಪದಗಳನ್ನು ಉಪಯೋಗಿಸಿ ಜರಿಯುತ್ತಾರೆ. ಹಣೆಯಲ್ಲೊಂದು ಕಣ್ಣು ಇಟ್ಟುಕೊಂಡವನೆಂದು ಹೇಳುವ ವ್ಯಕ್ತಿಯೂ ಲಿಂಗ ಕಟ್ಟಿರದಿದ್ದರೆ, ಅವನ ಮನೆಯಲ್ಲಿ ಮಾಡಿದ ಅಡುಗೆ ನಾಯಿಯ ಮಾಂಸದಂತೆ, ಶಿವಭಕ್ತರಲ್ಲದವರ ಮನೆಯಲ್ಲಿ ಉಂಡರೆ, ಜನ್ಮಜನ್ಮಾಂತರದಲ್ಲಿ ನಾಯಿಯ ಯೋನಿಯಲ್ಲಿ ಹುಟ್ಟುವುದು ತಪ್ಪದು, ಇದನ್ನು ಕಂಡು ಎನ್ನ ಮನ ಸೊಗಸದು ಎಂದು ಹೇಳುತ್ತಲೇ : ಲಿಂಗವಿಲ್ಲದ ನಡೆವನ, ಲಿಂಗವಿಲ್ಲದ ನುಡಿವನ, ಲಿಂಗವಿಲ್ಲದೆ ಉಗುಳುನುಂಗಿದರೆ ಅಂದಂದಿಂಗೆ ಕಿಲ್ಬಿಷವಯ್ಯಾ! ಏನೆಂಬೆನೇನೆಂಬೆ? ಲಿಂಗವಿಲ್ಲದೆ ನುಡಿವವನ, ಲಿಂಗವಿಲ್ಲದೆ ನಡೆವವನ ಅಂಗ ಲೌಕಿಕ, ಮುಟ್ಟಲಾಗದು, ಲಿಂಗವಿಲ್ಲದೆ ನುಡಿವ ಶಬ್ದ ಸೂತಕವ ಕೇಳಲಾಗದು, ಲಿಂಗವಿಲ್ಲದೆ ಗಮಿಸಿದರೆ, ಆ ನಡೆನುಡಿಗೊಮ್ಮೆ ವ್ರತಗೇಡಿ ಎಂದು ಉಗ್ರವಾಗಿ ಅಲ್ಲಮರ ನಿಲುವನ್ನು ಖಂಡಿಸುತ್ತಾರೆ. ಈ ನಡುವೆ ಬಸವಣ್ಣ ಏನೋ ಸಮಜಾಯಿಸಿ ಹೇಳಲು ಬರುತ್ತಾರೆ. ಆಗಲೂ ಚನ್ನಬಸವಣ್ಣನವರು ಇನ್ನಷ್ಟು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸುತ್ತಾರೆ.
“ಕಾಯಾನುಭಾವಿಗಳು ಕಾಯದಲ್ಲೆ ಮುಕ್ತರು, ಜೀವಾನುಭಾವಿಗಳು ಜೀವದಲ್ಲೆ ಮುಕ್ತರು, ಪ್ರಾಣಾನುಭಾವಿಗಳು ಪ್ರಾಣದಲ್ಲೆ ಮುಕ್ತರು, ಪವನಾನುಭಾವಿಗಳು ಪವನದಲ್ಲೆ ಮುಕ್ತರು. ಲಿಂಗಾನುಭಾವಿಗಳಿಗೆಂತು ಸರಿಯೆಂಬೆ? ನಿರವಯ ಸ್ವಯಂಜ್ಯೋತಿ ಪ್ರಕಾಶವಾಗಿಪ್ಪರು ಲಿಂಗದಲ್ಲಿ, ಕೂಡಲಚೆನ್ನಸಂಗಾ ನಿಮ್ಮ ಶರಣರು!” ದೇಹವನ್ನು ವಜ್ರಕಾಯ ಮಾಡಿಕೊಂಡವರು, ಉಸಿರನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟವರು ಇವರಿಗೆಲ್ಲ ಇಷ್ಟಲಿಂಗದಲ್ಲಿಯೇ ಸ್ವಯಂಜ್ಯೋತಿ ಪ್ರಕಾಶ ಇದೆ ಎಂಬುದು ಗೊತ್ತಾಗುವುದಿಲ್ಲವಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ.
[ಮುಂದೆ ಸಿದ್ಧರಾಮ ಮೆತ್ತಗಾಗಿ, ಲಿಂಗವನ್ನು ಧರಿಸಲು ಮಾನಸಿಕವಾಗಿ ಸಿದ್ಧನಾಗಿ, ತನಗೆ ಲಿಂಗದೀಕ್ಷೆ ನೀಡಬೇಕೆಂದು ಚನ್ನಬಸವಣ್ಣನವರಲ್ಲಿ ವಿನಂತಿಸಿಕೊಳ್ಳುತ್ತಾನೆ. ಈ ಪ್ರಸಂಗವನ್ನು ನಾಳೆ ಗಮನಿಸೋಣ…]