[ನಿನ್ನೆ ಬರೆದ ಬರಹಕ್ಕೆ ನೂರಾರು ಜನರು ಫೋನ್ ಮಾಡಿ, ಒಳ್ಳೆಯ ಪ್ರಯತ್ನ ಮುಂದುವರಿಸು ಎಂದು ಆಶೀರ್ವದಿಸಿದರು. ಖ್ಯಾತ ವಿದ್ವಾಂಸರಾದ ಡಾ. ವೀರಣ್ಣ ರಾಜೂರ, ಡಾ. ಗುರುಪಾದ ಮರಿಗುದ್ದಿ, ಡಾ. ರಾಮಕೃಷ್ಣ ಮರಾಠೆ ಮೊದಲಾದ ವಿದ್ವಾಂಸರು, ಶರಣ ಶಂಕರ ಗುಡಸ ಅವರಂತಹ ಕೆಲವು ಅಧ್ಯಯನಾಸಕ್ತರು ಸಲಹೆ ಸೂಚನೆಗಳನ್ನು ನೀಡಿದರು. ದೀರ್ಘವಾದ ಲೇಖನವನ್ನು ಓದುವುದು ಸ್ವಲ್ಪ ಕಷ್ಟ, ಆದ್ದರಿಂದ ಸಂಕ್ಷಿಪ್ತವಾಗಿರಲಿ ಎಂದು ಕೆಲವರು ಹೇಳಿದರು. ಅಂತೆಯೆ ಇಂದು ಸಂಕ್ಷಿಪ್ತವಾಗಿ ಬರೆದಿರುವೆ]
ಸುರಭಿಯಿಂ ಸುಧೆಯಮೃತದಿಂ ಸ್ವಾಧು ಪುಷ್ಪದಿಂ
ಪರಿಮಳಂ ಚಿಂತಾಸುರತ್ನದಿಂ ಕಾಂತಿ ಸುರ
ತರುವನಿಂದಂ ಸುಫಲವಿಂದುವಿಂ ಚಂದ್ರಿಕೆಗಳುದಿಸುವಂದದಿ ಬಸವನ
ಪರಮ ಸುಜ್ಞಾನದಿಂದ ಮೂರ್ತಿವೆತ್ತಿಳೆಯ ಶಿವ
ಶರಣರಂತಃಕರಣ ಭವನಂಗಳೊಳಗೆ ವಿ
ಸ್ಫುರಿಸುವ ಮಹಾಜ್ಯೋತಿ ಚನ್ನಬಸವೇಶ್ವರರ ಚರಣಾಂಬುಜಕ್ಕೆ ಶರಣು||
ಶಿವತತ್ವ ಚಿಂತಮಣಿ ಕೃತಿಯಲ್ಲಿ ಲಕ್ಕಣ್ಣ ದಂಡೇಶನು ಹೇಳುವ ನುಡಿಗಳಿವು. ಸುರಧೇನುವಿನಿಂದ ಅಮೃತತ್ವರೂಪಕ್ಷೀರ, ಅಮೃತದಿಂದ ಸ್ವಾದು, ಪುಷ್ಪದಿಂದ ಪರಿಮಳ, ಚಿಂತಾಮಣಿಯಿಂದ ಕಾಂತಿ, ಸುರತರುವಿನಿಂದ ಸುಫಲ, ಚಂದ್ರನಿಂದ ಚಂದ್ರಿಕೆ ಹುಟ್ಟುವಂತೆ ಬಸವಣ್ಣನವರ ಪರಮ ಮೂರ್ತಸ್ವರೂಪ ಸುಜ್ಞಾನಮೂರ್ತಿ ಈ ಇಳೆಗೆ ಚನ್ನಬಸವಣ್ಣನವರ ರೂಪದಲ್ಲಿ ಜನಿಸಿತು ಎಂದು ಲಕ್ಕಣ್ಣ ದಂಡೇಶ ಹೇಳುತ್ತಾನೆ.
ಬಸವಣ್ಣನವರು ಬಾಲ್ಯದಲ್ಲಿಯೇ ಮುಂಜಿಯನ್ನು ತಿರಸ್ಕರಿಸಿ, ಕರ್ಮಲತೆ ಯಂತಿರ್ದ ಜನ್ನಿವಾರವಂ ಬಿಸುಟಿ ಎಂದು ಹರಿಹರ ಹೇಳುವಂತೆ, ಜನ್ನಿವಾರ ಹರಿದು ಬಾಗೇವಾಡಿಯ ಅಗ್ರಹಾರವನ್ನು ತೊರೆದು ಕೂಡಲಸಂಗಮಕ್ಕೆ ಹೊರಟು ನಿಂತಾಗ, ಬೆನ್ನಿಗೆ ನಿಂತವಳು ಸೋದರಿ ಅಕ್ಕನಾಗಮ್ಮ.
ಕೆಲವು ಕಾವ್ಯಗಳು ನಾಗಮ್ಮ ಬಸವಣ್ಣನವರ ತಂಗಿ ಎಂದೂ, ಕೆಲವು ಕಾವ್ಯಗಳು ಅಕ್ಕ ಎಂದೂ ಹೇಳಿವೆ. ಗೌರವ ಸೂಚಕ ಪದವಾಗಿ ಅಕ್ಕನಾಗಮ್ಮ ಪದ ಬಳಕಿಗೆ ಬಂದಿರಬಹುದೆಂದು ಕೆಲವರು ತರ್ಕಿಸಿದ್ದಾರೆ. ಏನೇ ಇರಲಿ ಅಕ್ಕನಾಗಮ್ಮ ಬಸವಣ್ಣನವರು ಅಗ್ರಹಾರ ಸಂಸ್ಕೃತಿಯನ್ನು ದಾಟಿ ಹೊರಬರುವಲ್ಲಿ ನಿರ್ವಹಿಸಿದ ಪಾತ್ರ ಮಾತ್ರ ಅನನ್ಯವಾದುದು.
ಬಸವಣ್ಣನವರು ಹೀಗೆ ಜನ್ನಿವಾರವನ್ನು ತಿರಸ್ಕರಿಸಿ ಅಕ್ಕನಾಗಮ್ಮನೊಂದಿಗೆ ಹೊರಟು ನಿಂತಾಗ ಅಗ್ರಹಾರದ ಸಮುದಾಯ ಅವರನ್ನು ಬಹಿಷ್ಕಾರ ಹಾಕಿರಬಹುದಾದ ಸಾಧ್ಯತೆ ಹೆಚ್ಚು. ಈ ವಿಷಯವಾಗಿ ಡಾ. ಫ.ಗು.ಹಳಕಟ್ಟಿ ಅವರು ತಮ್ಮ ಬಸವೇಶ್ವರ ಚರಿತ್ರೆಯಲ್ಲಿ ಹೇಳುವ ಮಾತುಗಳು ತುಂಬ ಮಾರ್ಮಿಕವಾಗಿವೆ. “ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ ವೃಥಾಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ. ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ. ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ ಕೂಡಲಸಂಗಮೇವನು ವಿಪ್ರಕರ್ಮವ ಬಿಡಿಸಿ ಅಶುದ್ಧನ ಶುದ್ಧನ ಮಾಡಿದನಾಗಿ” (ಬಸವೇಶ್ವರನ ವಚನಗಳು ೪ನೇ ಆವೃತ್ತಿ ಪುಟ ೧೩೯)
“ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ ನೆಂಟರು ಬಂದರೆ ಸಮಯವಿಲ್ಲೆಂಬೆ. ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು. ಸಮಯಾಚಾರಕ್ಕೆ ಒಳಗಾದಂದು? ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು. ಬಳಿಕ ಬಂಧುಗಳುಂಟೇ ಕೂಡಲಸಂಗಮದೇವಾ?” (ಬಸವೇಶ್ವರನ ವಚನಗಳು ೪ನೇ ಆವೃತ್ತಿ. ಪುಟ ೮೪)
“ವಿಪ್ರಕರ್ಮವ ಬಿಡಿಸಿ” ಎಂಬ ಶಬ್ದಗಳಿಂದ ಬಸವಣ್ಣನಿಗೆ ವಿಪ್ರಕರ್ಮಗಳು ಉಂಟಾಗಿದ್ದವೆಂಬ ಭಾವವು ವ್ಯಕ್ತವಾಗುತ್ತದೆ. ಮೌಂಜೀ ಬಂಧನವಾದ ಬಳಿಕ ವಿಪ್ರಕರ್ಮಗಳು ಒದಗುತ್ತವೆಯೇ ಹೊರ್ತು ಅದಕ್ಕೂ ಮೊದಲು ಬ್ರಾಹ್ಮಣರಲ್ಲಿ ಉಂಟಾಗಿರುವದಿಲ್ಲ. ಆದ್ದರಿಂದ ಬಸವೇಶ್ವರನಿಗೆ ಮೌಂಜೀ ಬಂಧನವು ಆಗಿತ್ತೆಂಬ ಭಾವವು ಇದರಲ್ಲಿ ಇದೆ.
ಈ ಶಬ್ದಗಳ ತರುವಾಯ “ಅಶುದ್ಧನ” ಎಂಬ ಶಬ್ದವಿರುತ್ತದೆ. ಮುಂಜಿಯಾದ್ದ ರಿಂದಲೇ ತಾನು ಅಶುದ್ಧನಾಗಿದ್ದೇನೆಂದು ಹೇಳುತ್ತಾನೆ. ಭೀಮಕವಿ ಮತ್ತು ಸಿಂಗಿರಾಜ ಇವರು ಹೇಳಿದಂತೆ ಬಸವೇಶ್ವರನು ಜನಿಸಿದ ಕೂಡಲೆ ಲಿಂಗಧಾರಣವಾಗಿದ್ದರೆ, ಹೀಗೆ ತಾನು ಅಶುದ್ಧನೆಂದು ಬಸವನು ಎಂದೂ ಹೇಳಿಕೊಳ್ಳುತ್ತಿದ್ದಿಲ್ಲ. ಅವನಿಗೆ ಜನಿವಾರ ಧಾರಣವಾದ್ದರಿಂದಲೇ ಅವನು ತಾನು ಅಶುದ್ಧನೆಂದು ಇಲ್ಲಿ ಹೇಳಿಕೊಂಡಿದ್ದಾನೆ.
“ಅಶುದ್ಧನ” ಈ ಶಬ್ದದ ತರುವಾಯ “ಶುದ್ಧನ ಮಾಡಿದನಾಗಿ” ಎಂಬ ಶಬ್ದಗಳು ಬಂದಿರುತ್ತವೆ. ಇವು ಅವನಿಗೆ ಲಿಂಗಧಾರಣ ವಿಧಿಯಾಯಿತೆಂಬುದನ್ನು ಸೂಚಿಸುತ್ತವೆ. ಈ ಎಲ್ಲ ಶಬ್ದಗಳನ್ನು ನಾವು ಒಟ್ಟಾರೆ ಅರ್ಥ ಮಾಡಿದಲ್ಲಿ ಬಸವೇಶ್ವರನಿಗೆ ಯಜ್ಞೋಪವೀತ ಧಾರಣವಾಗಿತ್ತು. ಅದರಿಂದ ಅವನು ತಾನು ಅಶುದ್ಧವಾದನೆಂದು ಭಾವಿಸಿದ್ದರಿಂದ ಲಿಂಗಧಾರಣ ಹೊಂದಿ ಶುದ್ಧನೆಂದು ಅವನು ತನ್ನನ್ನು ಕುರಿತು ಇಲ್ಲಿ ಹೇಳಿಕೊಳ್ಳುತ್ತಾನೆ.
ಎರಡನೆಯ ವಚನವಾದರೂ ಇದೇ ಭಾವವನ್ನು ಸೂಚಿಸುತ್ತದೆ. ಇಲ್ಲಿ ಅವನು ತನ್ನ ಬಂಧುಬಳಗವನ್ನು ಕುರಿತು ಹೇಳುತ್ತಾನೆ. ಬಸವನು ಯಜ್ಞೋಪವೀತವನ್ನು ತ್ಯಜಿಸಿ ಲಿಂಗಧಾರಣ ಮಾಡುವ ಕಾಲದಲ್ಲಿ ಅವರು ಅವನನ್ನು ಬಹಿಷ್ಕರಿಸಿದ ಹಾಗೆ ಈ ವಚನದಿಂದ ತೋರುತ್ತದೆ. ಅವನು ಅದರಲ್ಲಿ “ಅಂದೇಕೆ ಬಾರರು, ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು?” ಎಂದು ಆವೇಶದಿಂದ ಇಲ್ಲಿ ನುಡಿಯುತ್ತಾನೆ. ಇದರಲ್ಲಿ “ನೀರಿಂಗೆ ನೇಣಿಂಗೆ ಹೊರಗಾದಂದು” ಈ ಶಬ್ದಗಳು ಬಹಳ ಮಹತ್ವವಾದವುಗಳು. ಇದರಿಂದ ಬಸವೇಶ್ವರನು ಯಜ್ಞೋಪವೀತ ಧಾರಣನಾಗಿದ್ದು ಅವನು ಅದನ್ನು ಹಿಂದುಗಡೆ ತ್ಯಜಿಸಿ ಬಿಟ್ಟಿದ್ದರಿಂದಲೇ ಅವನು ಅದರಿಂದ ದೂರಾದೆನೆಂದು ಇಲ್ಲಿ ಹೇಳುತ್ತಾನೆ. ಹೀಗೆ ದೂರಾಗಿ ತಾನು “ಸಮಯಾಚಾರಕ್ಕೆ” ಅಂದರೆ ಲಿಂಗಾಯತ ಧರ್ಮಕ್ಕೆ ಒಳಗಾದನೆಂದು ಇಲ್ಲಿ ಹೇಳುತ್ತಾನೆ. ಇದರಿಂದ ಅವನಿಗೆ ಜನ್ನಿವಾರವಿತ್ತೆಂದು ತೋರುತ್ತದೆ. ಒಂದು ವೇಳೆ ಹುಟ್ಟಿದಾಗಲೇ ಲಿಂಗಧಾರಣವಾಗಿತ್ತೆಂದು ಭಾವಿಸಿದರೆ “ನೇಣಿಂಗೆ ದೂರಾದಂದು” ಈ ಶಬ್ದಗಳು ಬರುತ್ತಿದ್ದಿಲ್ಲ. ಅವನು ಇತರ ಬ್ರಾಹ್ಮಣ ಬಾಲಕರಂತೆಯೇ ಜನನ ಸಂಸ್ಕಾರವನ್ನು ಹೊಂದಿ ಮುಂದೆ ಯಜ್ಞೋಪವೀತವನ್ನು ಧಾರಣ ಮಾಡಿರಬೇಕು. ಆದ್ದರಿಂದಲೇ ಈ ಯಜ್ಞೋಪವೀತಕ್ಕೆ ತಾನು ಹೊರಗಾಗಿ ಸಮಾಯಾಚಾರಕ್ಕೆ ಒಳಗಾದೆನೆಂದು ಅಲ್ಲಿ ಹೇಳುತ್ತಾನೆ.” (ಡಾ. ಫ.ಗು.ಹಳಕಟ್ಟಿ : ಬಸವೇಶ್ವರ ಚರಿತ್ರೆ ಪು. ೨೪)
ಬಸವಣ್ಣನವರು ಯಜ್ಞೋಪವೀತವನ್ನು ತ್ಯಜಿಸುವ ಕಾಲದಲ್ಲಿ ಬಾಗೇವಾಡಿಯಲ್ಲಿದ್ದ ಬ್ರಾಹ್ಮಣ ಸಮಾಜದವರು ಸ್ವಾಭಾವಿಕವಾಗಿ ಬಹಿಷ್ಕಾರ ಹಾಕಿರಬಹುದಾದ ಸಾಧ್ಯತೆ ಇದೆ. ಹೀಗೆ ಬಹಿಷ್ಕೃತನಾದ ಬಸವಣ್ಣನವರು ಕೂಡಲಸಂಗಮಕ್ಕೆ ಬರುವಾಗ, ಜೊತೆಗೆ ಅಕ್ಕನಾಗಮ್ಮನು ಬರುತ್ತಾಳೆ. ಆಗಲೇ ಅವಳಿಗೆ ಮದುವೆಯಾಗಿತ್ತು. ಅವಳ ಗಂಡನ ಹೆಸರು ಶಿವದೇವ. ಪ್ರಾಯಶಃ ಬಾಗೇವಾಡಿಯಲ್ಲಿ ಮದುವೆಯಾಗಿದ್ದ ಕಾರಣಕ್ಕಾಗಿ, ಅಕ್ಕನಾಗಮ್ಮನ ಗಂಡ ಶಿವದೇವನ ಹೆಸರನ್ನು ಮುಂದಿನ ಕಾವ್ಯಕರ್ತರು ಬಿಟ್ಟಿರಬಹುದೆಂದು ಕಾಣುತ್ತದೆ.
ಬಸವಣ್ಣನವರ ಜೀವತಾವಧಿಯು ೩೬ ವರ್ಷವೆಂದೂ ಚೆನ್ನಬಸವಣ್ಣನವರ ಜೀವಿತಕಾಲವು ೨೪ ವರ್ಷವೆಂತಲೂ ಲಿಂಗಾಯತ ಗ್ರಂಥಗಳಿಂದ ತಿಳಿದುಬರುತ್ತದೆ. ಈ ವರ್ಷಗಳೆಲ್ಲವೂ ಸಂಭವನೀಯವೆಂದು ಬಹುತೇಕ ವಿದ್ವಾಂಸರು ಒಪ್ಪಿದ್ದಾರೆ. ಈ ವಿಷಯವನ್ನು ಒಪ್ಪಿಕೊಂಡಲ್ಲಿ, ಬಿಜ್ಜಳನ ತಂದೆ ಪೇರ್ಮಡಿಯು ೧೧೨೬ರಲ್ಲಿ ಆಳುತ್ತಿದ್ದ, ಆತನ ತರುವಾಗ ಅವನ ಮಗ ಬಿಜ್ಜಳನು ೧೧೪೭ ರಿಂದ ಮುಂದೆ ಕೆಲವು ವರ್ಷ ಮಹಾಮಂಡಳೇಶ್ವರನಾಗಿ ತರ್ದೆವಾಡಿಯನ್ನು ಆಳಿದನೆಂದು ತಿಳಿದು ಬರುತ್ತದೆ. ೧೧೫೫ರಲ್ಲಿ ಬಿಜ್ಜಳ ಸ್ವತಂತ್ರನಾಗಿ ಮೊದಲು ತರ್ದೆವಾಡಿಯಲ್ಲಿ ಆಮೇಲೆ ೧೧೬೨ರಲ್ಲಿ ಕಲ್ಯಾಣದಲ್ಲಿ ಚಕ್ರವರ್ತಿಯಾಗಿ ಆಳ್ವಿಕೆ ಮಾಡಿದನು. ಇವು ಐತಿಹಾಸಿಕ ಸಂಗತಿಗಳೇ ಆಗಿವೆ. ಬಿಜ್ಜಳನು ೧೧೫೫ರಲ್ಲಿ ಸ್ವತಂತ್ರಾಧಿಪತ್ಯವನ್ನು ವಹಿಸಿಕೊಂಡ ಸಂದರ್ಭದಲ್ಲಿ ಬಸವಣ್ಣನವರು ತರ್ದೆವಾಡಿ ನಾಡಿನ ಆಗಿನ ಮುಖ್ಯ ಗ್ರಾಮವಾದ ಮಂಗಳವಾಡಕ್ಕೆ ಬಂದಿರುವ ಸಾಧ್ಯತೆ ಇದೆ. ಈ ವಿಷಯಗಳನ್ನು ಡಾ. ಫ.ಗು.ಹಳಕಟ್ಟಿ ಅವರು ಇನ್ನಷ್ಟು ಸ್ಪಷ್ಟಗೊಳಿಸುವುದು ಹೀಗೆ : “ಬಸವಣ್ಣನವರು ಮಂಗಳವೇಡೆಗೆ ಬಂದು ಕರಣಿಕನಾಗಿ ಬಿಜ್ಜಳನ ಸೇವೆಯನ್ನಾರಂಭಿಸಿದರು.
ಈ ಕಾಲದಲ್ಲಿ ಅವನು ಚಿಕ್ಕವನಿರಬೇಕು. ಮೊದಲು ಅಂದರೆ ೧೬ ವರ್ಷ ಪಿತೃಗೃಹದಲ್ಲಿ, ಮುಂದೆ ೧೧೪೮ರಿಂದ ೧೧೫೫ರ ವರೆಗೆ ೭ ವರ್ಷ ಸಂಗಮದಲ್ಲಿ ಹೀಗೆ ೨೩ ವರ್ಷದವನಾಗಿರಬೇಕು. ಮುಂದೆ ೧೧೫೫ರಿಂದ ೧೧೬೮ರ ವರೆಗೆ ಅಂದರೆ ಸುಮಾರು ೧೨-೧೩ ವರ್ಷಗಳ ವರೆಗೆ ಆರಂಭದಲ್ಲಿ ತರ್ದೆವಾಡಿ ನಾಡು ಅಥವಾ ಮಂಗಳವಾಡದಲ್ಲಿ, ತರುವಾಯ ಕಲ್ಯಾಣದಲ್ಲಿ, ಲಿಂಗಾಯತ ಧರ್ಮೋದ್ಧಾರ ಕಾರ್ಯಗಳನ್ನು ನಡೆಯಿಸಿ ಕಡೆಗೆ ಅವನು ಕಪ್ಪಡಿಸಂಗಮನಾಥನಲ್ಲಿ ತನ್ನ ೩೬ನೆಯ ವಯಸ್ಸಿನಲ್ಲಿ ಐಕ್ಯನಾದನು. ಈ ಎಲ್ಲ ಸಂಗತಿಗಳನ್ನು ಅವಲೋಕಿಸಿದಲ್ಲಿ ಬಸವನು ಮರಣ ಹೊಂದಿದ ಕಾಲಕ್ಕೆ ಅವನು ಮಧ್ಯವಯಸ್ಕನಾಗಿರಬೇಕೆಂದು ಭಾವಿಸಿದಲ್ಲಿ ಅದು ಸಂಭವನೀಯವಾಗಿ ತೋರುತ್ತದೆ. ಲಿಂಗಾಯತ ಗ್ರಂಥಕಾರರು ಅವನು ೩೬ ವರ್ಷದವನಿದ್ದನೆಂದು ಹೇಳುವಲ್ಲಿ ತಥ್ಯಾಂಶವಿರಬೇಕೆಂದು ತೋರುತ್ತದೆ.”( ಡಾ. ಫ.ಗು.ಹಳಕಟ್ಟಿ : ಬಸವೇಶ್ವರ ಚರಿತ್ರೆ)
ಚನ್ನಬಸವಣ್ಣನವರು ಬಸವಣ್ಣನವರಿಗಿಂತ ೧೨ ವರ್ಷ ಚಿಕ್ಕವರು. ಆದ್ದರಿಂದ ಚನ್ನಬಸವಣ್ಣನವರು ಉಳವಿಯಲ್ಲಿ ಮರಣ ಹೊಂದುವ ಸಮಯದಲ್ಲಿ ಅವರಿಗೆ ಕೇವಲ ೨೪ (೩೬-೧೨) ವರ್ಷವಾಗಿರಬೇಕು. ಅಳಿಯ ಬಿಜ್ಜಳನ ದಂಡಿನೊಂದಿಗೆ ಕಾಳಗಗಳನ್ನು ಮಾಡುತ್ತ ಉಳಿವಿಯ ಅರಣ್ಯವನ್ನು ಪ್ರವೇಶಿಸಿ ಕಾದಾಡುತ್ತ ಲಿಂಗೈಕ್ಯರಾಗುವ ಪ್ರಸಂಗ ಅವರಿಗೆ ಬರುತ್ತದೆ. ಇದು ಚನ್ನಬಸವರ ತಾರುಣ್ಯ ಕಾಲ ಘಟ್ಟದ ೨೪ ವರ್ಷ ವಯಸ್ಸು. ಆದ್ದರಿಂದ ಚನ್ನಬಸವಣ್ಣನವರು ೧೧೪೪ನೆಯ (೧೧೬೮-೨೪) ಇಸ್ವಿಯಲ್ಲಿ ಜನಿಸಿದರೆಂದು ವಿದ್ವಾಂಸರು ಹೇಳುವುದರಲ್ಲಿ ಸತ್ಯಾಂಶವಿದೆ.
ಸಿಂಗಿರಾಜನ ಪುರಾಣದ ಪ್ರಕಾರ ಬಸವಣ್ಣನವರ ವಿವಾಹವಾಗುವ ಸಂದರ್ಭದಲ್ಲಿ ಅವರೊಂದಿಗೆ ಅಕ್ಕನಾಗಮ್ಮನ ಗಂಡ ಶಿವದೇವನು ಇದ್ದನೆಂದೂ, ವಿವಾಹದ ನಂತರ ಕೂಡಲಸಂಗಮದಿಂದ ಮಂಗಳವೇಡೆಗೆ ಕೂಡಿಯೇ ಹೋದರೆಂದು ಸಿಂಗಿರಾಜ ಸ್ಪಷ್ಟವಾಗಿ ದಾಖಲಿಸಿದ್ದಾನೆ.
ಬಸವಣ್ಣನವರು ಮಂಗಳವೇಡೆಗೆ ಬರುವಷ್ಟರಲ್ಲಿ ಚನ್ನಬಸವಣ್ಣನವರ ಜನನವಾಗಿತ್ತೆಂಬುದು ಈಗ ನಿರ್ವಿವಾದ. ಹೀಗಿದ್ದ ಪಕ್ಷದಲ್ಲಿ ಕೆಲವು ಕುಕವಿಗಳು ಚನ್ನಬಸವಣ್ಣನವರು ಕಲ್ಯಾಣದಲ್ಲಿ ಜನಿಸಿದರೆಂದು ಬರೆಯುತ್ತಾರೆ. ಡಾ. ಫ.ಗು.ಹಳಕಟ್ಟಿಯವರು ಒಂದು ಮಹತ್ವದ ಸಂಗತಿಯತ್ತ ನಮ್ಮ ಗಮನ ಸೆಳೆಯುತ್ತಾರೆ:
“ಜೈನರು ಚನ್ನಬಸವನ ವಿಷಯವಾಗಿ ಕಟ್ಟುಕಥೆಯನ್ನು ಹೇಗೆ ಹುಟ್ಟಿಸಿದ್ದಾರೋ ಹಾಗೆಯೇ ಲಿಂಗಾಯತರೂ ಕೂಡ ಹುಟ್ಟಿಸಿದ್ದಾರೆ. ಅವರ ಎಲ್ಲಾ ಗ್ರಂಥಗಳಲ್ಲಿ ಬಹುತರವಾಗಿ ಚನ್ನಬಸವನು ಕಕ್ಕಯ್ಯನ ಮಿಕ್ಕ ಪ್ರಸಾದದಿಂದ ಹುಟ್ಟಿದನೆಂದು ಹೇಳಲ್ಪಟ್ಟಿದೆ. ಇದಾದರೂ ಕಟ್ಟು ಕಥೆಯು. ಇಷ್ಟೇ ಅಲ್ಲ ಲಿಂಗಾಯತಧರ್ಮಕ್ಕೆ ಹೊರತಾದ್ದು. ಈ ಪುರಾಣಗಳಲ್ಲಿ ಹೇಳಲ್ಪಟ್ಟಿರುವುದೇನೆಂದರೆ, ಢೋಹರ ಕಕ್ಕಯ್ಯನು ಕಲ್ಯಾಣ ಪಟ್ಟಣದಲ್ಲಿರುವಾಗ್ಗೆ ಅವನ ಭೋಜನದ ಒಂದು ಅನ್ನದ ಅಗುಳನ್ನು ಒಂದು ಇರುವೆಯು ಕಚ್ಚಿಕೊಂಡು ಹೊರಗೆ ಒಯ್ಯುತ್ತಿತ್ತು. ಆಗ ಒಬ್ಬ ಜಂಗಮನು ಅದನ್ನು ಕಂಡು ಆ ಅಗುಳನ್ನು ತೆಗೆದುಕೊಂಡು ಹೋಗಿ ನಾಗಲಾಂಬಿಕೆಯ ಗೃಹದಲ್ಲಿ ಇಟ್ಟನು. ಅದನ್ನು ನಾಗಲಾಂಬಿಕೆಯು ಆಕಸ್ಮಾತ್ತಾಗಿ ಸ್ವೀಕರಿಸಲು ಅದರಿಂದ ಆಕೆಯ ಗರ್ಭವು ನಿಂತು ಚನ್ನಬಸವನನ್ನು ಹಡೆದಳು. ಈ ಪ್ರಕಾರ ಈ ಕಥೆಯದೆ. ಆದರೆ ಲಿಂಗಾಯತ ಆಚರಣೆಯ ಪ್ರಕಾರ ಆಹಾರವು ಪ್ರಸಾದವಾದ ಬಳಿಕ ಅದನ್ನು ಸೇವಿಸುವವನು ಎಂದೂ ಅದನ್ನು ಹೊರಗೆ ಚೆಲ್ಲಲಾರನು. ಜಾಗ್ರತೆಯಿಂದ ಅವನು ಅದನ್ನು ಭುಂಜಿಸಲೇಬೇಕು. ಒಂದು ವೇಳೆ ಅದು ಹೊರಗೆ ಬಿದ್ದು ಇರುವೆಯು ಅದನ್ನು ಗ್ರಹಿಸಿದ್ದಾದರೆ ಅದು ಪ್ರಸಾದವೆನಿಸಿಕೊಳ್ಳಲಾರದು. ಅದು ಮೈಲಿಗೆಯಾಯಿತು.
ಇಂಥ ಮೈಲಿಗೆಯ ಅಗುಳನ್ನು ಯಾವನೋ ಒಬ್ಬನು ತೆಗೆದುಕೊಂಡು ಹೋಗಿ ನಾಗಲಾಂಬಿಕೆಯ ಗೃಹದಲ್ಲಿ ಇಟ್ಟ ಬಳಿಕ ಅದು ಎಲ್ಲಿಂದ ಬಂದಿತು, ಅದು ಯಾರ ಪ್ರಸಾದವು, ಎಂಬುವುದರ ತಿಳಿವಳಿಕೆಯು ಸಹ ಇಲ್ಲದ ನಾಗಲಾಂಬಿಕೆಯು ಅದನ್ನು ಗ್ರಹಿಸಿದಲ್ಲಿ ಅದರ ಪ್ರಭಾವವು ಆಕೆಯಲ್ಲಿ ಉಂಟಾಗುವ ಬಗೆ ಹೇಗೆ? ಶಿವಶರಣರು ಬಾಹ್ಯ ಆಚರಣೆಗೆ ಮಹತ್ವವನ್ನು ಎಂದೂ ಕೊಡುವುದಿಲ್ಲ. ಅವರು ಭಾವ, ಮನಸ್ಸು, ಅಂತಃಕರಣ, ತಿಳಿವಳಿಕೆ ಇವುಗಳಿಗೆ ಯಾವಾಗಲೂ ಮಹತ್ವ ಕೊಡುವುದುಂಟು. ಏನೂ ತಿಳಿವಳಿಕೆ ಇಲ್ಲದೆ ಅಕಸ್ಮಾತ್ತಾಗಿ ನಾಗಲಾಂಬಿಕೆಯು ಗ್ರಹಿಸಿದ ಇಂಥ ಅನ್ನದ ಅಗಳಿನಿಂದ ಯಾವದಾದರೂ ಪರಿಣಾಮವಾದೀತೆಂದು ಅವರು ಗ್ರಹಿಸಲಾರರು. ಪ್ರಸಾದದ ಮಹತ್ವವನ್ನು ಅಜ್ಞಜನರಲ್ಲಿ ಹಬ್ಬಿಸುವ ಸಲುವಾಗಿ ಭೋಜನ ಪ್ರಿಯರಾದ ಜಂಗಮರು ಹುಟ್ಟಿಸಿದ ಕಟ್ಟು ಕಥೆ ಇದು, ಎಂದು ನಮಗೆ ತೋರುತ್ತದೆ. ಸ್ತ್ರಿಯರಿಗೆ ಮಕ್ಕಳಾಗಬೇಕೆಂಬ ಹಂಬಲವು ಬಹಳವಿರುವುದರಿಂದ ಅವರಲ್ಲಿ ಜಂಗಮ ಪ್ರಸಾದದ ಸಲುವಾಗಿ ಅಂಧ ಭಕ್ತಿಯನ್ನು ಉಂಟು ಮಾಡಲು ಇಂಥ ಕಥೆಯನ್ನು ಜಂಗಮರು ಹುಟ್ಟಿಸಿಯೂ ಇರಬಹುದು.
ಇಂಥ ಕಥೆಗಳು ಬಸವನು ಹುಟ್ಟಿದ ಬಳಿಕ ೧೦೦-೧೫೦ ವರ್ಷಗಳ ತರುವಾಯ ಬಹಳ ಉಂಟಾಗಿರುತ್ತವೆ. ಇಷ್ಟೇ ಅಲ್ಲ, ಅವನು ದುರ್ವ್ಯಾಪಾರಗಳಿಗೆ ಪ್ರವೃತ್ತರಾದ ಜಂಗಮರನ್ನು ಸಹ ಪ್ರೋತ್ಸಾಹಿಸುತ್ತಿದ್ದನೆಂಬ ಅರ್ಥವುಳ್ಳ ಕಥೆಗಳು ಸಹ ಕೆಲವು ಗ್ರಂಥಗಳಲ್ಲಿ ಬಂದಿವೆ. ಬಸವೇಶ್ವರನ ಕಾಲದಲ್ಲಿ ರೂಢವಾದ ಶಿವಶರಣರ ವಿಚಾರಗಳು ಸಮಾಜದಲ್ಲಿ ಹಿಂದುಗಡೆ ಲೋಪವಾಗಿ ಅವರು ರಚಿಸಿದ ಶ್ರೇಷ್ಠ ವಾಙ್ಮಯದ ಅಭ್ಯಾಸವು ಸಹ ನಿಂತುಹೋಯಿತು. ಆಗ ಅಜ್ಞ ಸಮಾಜದಲ್ಲಿ ತಮ್ಮ ವಿಷಯವಾಗಿ ಅಂಧಶ್ರದ್ಧೆಯನ್ನು ಹುಟ್ಟಿಸಲು ಪ್ರಯತ್ನಿಸಿ ತಮ್ಮ ಮನಸ್ಸಿಗೆ ಬಂದಂತೆ ರೇವಣಸಿದ್ಧೇಶ್ವರ, ಬಸವ, ಮುಂತಾದವರ ಚರಿತ್ರೆಗಳನ್ನು ಕೆಡಸಿದ್ದಾರೆ. ಈ ಉಭಯ ಮಹಾನುಭಾವರು ಸ್ತ್ರಿಲೋಲುಪರಾಗಿದ್ದರೆಂತಲೂ ಅಥವಾ ಅನೀತಿಗೆ ಆಸ್ಪದ ಕೊಟ್ಟಿದ್ದರೆಂತಲೂ ಸಹ ಅವರ ಪುರಾಣಗಳಲ್ಲಿ ಕಥೆಗಳು ಬಂದಿವೆ. ಇವೆಲ್ಲ ಸಂಗತಿಗಳನ್ನು ನಂಬಲು ಶಕ್ಯವಲ್ಲ. ರೇವಣಸಿದ್ಧೇಶ್ವರ, ಬಸವ, ಚನ್ನಬಸವ, ಸಿದ್ಧರಾಮ, ಪ್ರಭುದೇವ ಇವರೆಲ್ಲರೂ ಉದಾತ್ತ ಚರಿತ್ರೆಯುಳ್ಳವರು, ಅವರ ವಚನಗ್ರಂಥಗಳಲ್ಲಿ ಎಂಥ ಮಹತ್ತರವಾದ ವಿಚಾರಗಳಿರುತ್ತವೆಂಬುದು ವಾಚಕರ ನಿದರ್ಶನಕ್ಕೆ ಈಗ ಚನ್ನಾಗಿ ಬಂದಿರುತ್ತದೆ. ಇಂಥ ಗ್ರಂಥಗಳನ್ನು ನಾವು ನಂಬಬಹುದೇ ಹೊರತು ಅವರ ವಿಷಯವಾಗಿ ಹಿಂದುಗಡೆ ಹುಟ್ಟಿದಂಥ ನೀತಿಗೆ ಹೊರತಾದಂಥ ಕಥೆಗಳನ್ನೂ ಪುರಾಣಗಳನ್ನೂ ನಾವು ನಂಬಕೂಡದು. ಈ ಕಥೆಗಳಲ್ಲಿ ನಿಜ ಸಂಗತಿಗಳೊಡನೆ ಸುಳ್ಳು ಸಂಗತಿಗಳು ಸಹ ಬೆರೆತು ಹೋಗಿವೆ. ಆದರೆ ನಾವು ಈ ಸುಳ್ಳು ಸಂಗತಿಗಳಾವವೆಂಬುದನ್ನು ಚನ್ನಾಗಿ ಪರೀಕ್ಷಿಸಿ ಅಂಥವುಗಳನ್ನು ನಾವು ಸಮಾಜದ ಮುಂದಿಡಬೇಕು. ಈ ವಿಷಯವಾಗಿ ಲಿಂಗಾಯತ ಸಮಾಜದವರು ಜಾಗ್ರತೆಪಡುವದು ಈ ಕಾಲದಲ್ಲಿ ಬಹು ಅವಶ್ಯವಾಗಿರುತ್ತದೆ. ಇಲ್ಲದಿದ್ದರೆ ಲಿಂಗಾಯತ ಸಮಾಜದ ಮಹತ್ತರ ಇತಿಹಾಸಕ್ಕೆ ಕುಂದುಂಟಾಗುವುದು.
ಡೋಹರ ಕಕ್ಕಯ್ಯನ ಮಿಕ್ಕಪ್ರಸಾದದಿಂದ ಚನ್ನಬಸವನು ಹುಟ್ಟಿದನೆಂಬ ಕಥೆಯು ಎಷ್ಟು ಅಸಂಭಾವ್ಯವಾಗಿದೆಂಬುದು ಕೆಳಗಿನ ಸಂಗತಿಯಿಂದಲೂ ತಿಳಿದು ಬರುತ್ತದೆ. ಚನ್ನಬಸವನು ಕಲ್ಯಾಣದಲ್ಲಿ ಹುಟ್ಟುವ ಸಂಭವವೇ ಇಲ್ಲವೆಂಬುದನ್ನು ವಾಚಕರು ಮೊದಲು ಲಕ್ಷಿಸಬೇಕು ಹೀಗೆಯೇ ಅವನು ೨೪ ವರ್ಷ ವಯಸ್ಸಾಗುವ ವರೆಗೆ ಜೀವಿಸಿದ್ದರಿಂದ ಅವನು ಹುಟ್ಟಿದ್ದು ಬಸವನು ಯಜ್ಞೋಪವೀತವನ್ನು ತ್ಯಜಿಸುವ ಪೂರ್ವದಲ್ಲಿಯೇ ಎಂಬುದನ್ನೂ ಕೂಡ ಅವರು ಚನ್ನಾಗಿ ತಿಳಿದು ನೋಡಬೇಕು. ಅಂದರೆ ಅವನೂ ಅವನ ತಂದೆತಾಯಿಗಳೂ ಅವನು ಹುಟ್ಟಿದಾಗ ಬ್ರಾಹ್ಮಣ ಸಮಾಜದಲ್ಲಿದ್ದರು ಎಂದು ತಿಳಿಯಬೇಕಾಗುತ್ತದೆ. ಆದರೆ ಅವರು ಸನಾತನಿಗಳು, ಕರ್ಮಠರು. ಇಂಥ ಬ್ರಾಹ್ಮಣರ ಮನೆಯಲ್ಲಿ ಕಕ್ಕಯ್ಯನಂಥ ಢೋರನಿಗೆ ಪ್ರವೇಶ ದೊರೆಯುವುದು ತೀರಾ ಅಸಂಭವ. ಮತ್ತು ಇಂಥವನ ಪ್ರಸಾದವನ್ನು ನಾಗಲಾಂಬಿಕೆಯು ಸೇವಿಸುವದಂತೂ ಮತ್ತಿಷ್ಟು ಅಸಂಭವವು. ಬಸವನು ಯಜ್ಞೋಪವೀತವನ್ನು ತೆಗೆದುಹಾಕಿ ಲಿಂಗಧಾರಿಯಾದ ಮಾತ್ರಕ್ಕೆ ಯಾವ ಸಮಾಜದವರು ಅವನನ್ನು ಹಿಂಸಿಸಿದರೋ ಅಂಥವರು ಒಬ್ಬ ಢೋರರವನು ಒಬ್ಬ ಬ್ರಾಹ್ಮಣ ಪ್ರತಿಷ್ಠಿತರ ಮನೆಯಲ್ಲಿ ಹೀಗೆ ಸಂಬಂಧವಿಡಗೊಡಲು ಎಂದಾದರೂ ಒಪ್ಪಬಹುದೋ? ಈ ಎಲ್ಲ ಸಂಗತಿಗಳನ್ನು ನಾವು ವಿಚಾರ ಮಾಡಿದಲ್ಲಿ ಚನ್ನಬಸವನು ಢೋರ ಕಕ್ಕಯ್ಯನ ಪ್ರಸಾದಿಂದ ಹುಟ್ಟಿದನೆಂಬುದು ತೀರ ಅಸಂಭಾವ್ಯವಾಗಿ ತೋರುತ್ತದೆ.” (ಡಾ. ಫ.ಗು.ಹಳಕಟ್ಟಿ : ಬಸವೇಶ್ವರ ಚರಿತ್ರೆ)
ಹೀಗೆ ಡಾ. ಫ.ಗು.ಹಳಕಟ್ಟಿ ಅವರು ಚನ್ನಬಸವಣ್ಣನವರ ಜನನದ ವಿಷಯದಲ್ಲಿ ಇರುವ ಎಲ್ಲ ಸಂದೇಹಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇದನ್ನು ಆಧುನಿಕ ವಿದ್ವತ್ ವಲಯ ಬಹುತೇಕ ಒಪ್ಪಿಕೊಂಡಿರುವುದು ಗಮನಿಸುವ ಅಂಶ.
ಚನ್ನಬಸವಣ್ಣನವರ ಬಾಲ್ಯದ ಬದುಕು ತನ್ನ ಸೋದರಮಾವ ಬಸವಣ್ಣ ನವರೊಂದಿಗೆ ಹೆಚ್ಚು ಕಾಲ ಕಳೆಯಿತು. ಬಸವಣ್ಣನವರು ಪಂಚಪರುಷ ಮೂರ್ತಿಗಳಾಗಿದ್ದರು. ಹೀಗಾಗಿ ಅವರ ನಡೆ-ನುಡಿಗಳೆಲ್ಲವೂ ಚನ್ನಬಸವಣ್ಣನವರ ಮೇಲೆ ಅಗಾಧವಾದ ಪ್ರಭಾವ-ಪರಿಣಾಮವನ್ನು ಬೀರಿದವು. ಲೋಕವನ್ನೆ ಬೆಳಗಲು ಬಂದ ಬಸವಣ್ಣನವರ ದಿವ್ಯಪ್ರಭೆಯ ಭವ್ಯತೇಜ ಚನ್ನಬಸವಣ್ಣನವರ ಬದುಕನ್ನು ರೂಪಿಸಿತು. ಅಕ್ಕನಾಗಮ್ಮ ಚನ್ನಬಸವಣ್ಣನವರ ನೆರಳಾಗಿ, ಬಸವಣ್ಣನವರ ಬೆನ್ನ ಹಿಂದಿನ ಶಕ್ತಿಯಾಗಿ ನಿಂತು ಇಡೀ ಶರಣ ಚಳುವಳಿಯನ್ನು ಮುನ್ನಡೆಸಿದ ಮಹಾಮಾತೆ. ಅಕ್ಕನಾಗಮ್ಮನ ಅಂತಃಕರಣದಲ್ಲಿ, ಸೋದರಮಾವ ಬಸವಣ್ಣನವರ ಪ್ರೀತಿಯ ಕಾರುಣ್ಯದಲ್ಲಿ ಅರಳಿದ ಚನ್ನಬಸವಣ್ಣನವರು ಅವಿರಳಜ್ಞಾನಿಗಳಾಗಿ ರೂಪುಗೊಂಡರು. ಬಸವಣ್ಣನವರೇ ಚನ್ನಬಸವಣ್ಣನವರಿಗೆ ಲಿಂಗದೀಕ್ಷೆಯನ್ನು ಮಾಡುತ್ತಾರೆಂದು ವಿರೂಪಾಕ್ಷ ಪಂಡಿತ ಹೇಳುತ್ತಾನೆ. ಇದರಿಂದ ಲಿಂಗವನ್ನು ಧರಿಸಿದ ಯಾರೂ ಬೇಕಾದರೂ ಲಿಂಗದೀಕ್ಷೆ ಕೊಡಬಹುದಾಗಿತ್ತು ಎಂಬುದನ್ನು ಇದರಿಂದ ತಿಳಿಯಬಹುದು. ಇಂದು ಪಟ್ಟಾಧ್ಯಕ್ಷರಿಂದ ಮಾತ್ರ ಲಿಂಗದೀಕ್ಷೆ ಪಡೆಯಬೇಕೆಂಬ ನಂಬಿಕೆ ಹೆಚ್ಚಾಗಿದೆ. ಈ ಘಟನೆಗಳನ್ನು ಗಮನಿಸಿದಾಗ, ಬಸವಣ್ಣನವರು ಚನ್ನಬಸವಣ್ಣನವರಿಗೆ ಲಿಂಗದೀಕ್ಷೆಯನ್ನು ಕರುಣಿಸುತ್ತಾರೆ. ಮುಂದೆ ಚನ್ನಬಸವಣ್ಣನವರು ಸಿದ್ಧರಾಮೇಶ್ವರರಿಗೆ ಲಿಂಗದೀಕ್ಷೆ ಮಾಡಿದ ಘಟನೆ ಶೂನ್ಯಸಂಪಾದನೆಗಳಲ್ಲಿ ಬರುತ್ತದೆ.
ಇತ್ತೀಚೆಗೆ ಕೆಲವು ವಿದ್ವಾಂಸರು ಚನ್ನಬಸವಣ್ಣನವರು ೬೮ ವರ್ಷಗಳವರೆಗೆ ಬದುಕಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಆದರೆ ಈವರೆಗೆ ನಮ್ಮ ಕಾವ್ಯಗಳು ನಂಬಿಕೊಂಡು ಬಂದಂತೆ, ಚನ್ನಬಸವಣ್ಣನವರ ಆಯುಷ್ಯ ಕೇವಲ ೨೪ ವರುಷ ಎಂಬುದು ನಿರ್ವಿವಾದ. ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರರು ತಮ್ಮ ೧೯ನೇ ವಯಸ್ಸಿನಲ್ಲಿಯೇ ‘ಜ್ಞಾನೇಶ್ವರಿ’ ಎಂಬ ಮಹಾಗ್ರಂಥವನ್ನು ರಚಿಸಿದಂತೆ, ಚನ್ನಬಸವಣ್ಣನವರು ಎಳೆ ವಯಸ್ಸಿನಲ್ಲಿಯೇ ಅಗಾಧ ಪಾಂಡಿತ್ಯ ಪ್ರತಿಭೆಯನ್ನು ಹೊಂದಿದ್ದರು. ಹೀಗಾಗಿ ವಚನಗಳ ರಚನೆ ಮಾತ್ರವಲ್ಲದೆ, ಲಿಂಗಾಯತ ಶಾಸ್ತ್ರ ಗ್ರಂಥಗಳ ರಚನೆಯನ್ನೂ ಮಾಡಿದರು. ಅತ್ಯಂತ ಚಿಕ್ಕವಯಸ್ಸಿನಲ್ಲಿ ಎಂತಹ ಗಂಡಾಂತರವನ್ನು ಅವರು ಎದುರಿಸಿದರು ಎಂಬುದು ಇಂದಿಗೂ ಮೈಜುಮ್ಮೆನ್ನುತ್ತದೆ. ಕಣ್ಣಮುಂದೆಯೇ ಸಾವಿರಾರು ಶರಣರನ್ನು ಕಗ್ಗೊಲೆ ಮಾಡುತ್ತಿದ್ದಾಗ, ವಚನ ಕಟ್ಟುಗಳನ್ನು ಸಂರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ ಧೀಮಂತ ನಾಯಕ ಚನ್ನಬಸವಣ್ಣನವರು.
ಬಸವಣ್ಣನವರು ಕಲ್ಯಾಣದಿಂದ ಗಡಿಪಾರು ಆದ ತರುವಾಯ ಚನ್ನಬಸವಣ್ಣನವರ ಹೆಗಲ ಮೇಲೆ ಎರಡು ಮಹತ್ವದ ಜವಾಬ್ದಾರಿಗಳು ಬಿದ್ದವು. ಒಂದು ಬಸವಣ್ಣನವರು ನಿರ್ವಹಿಸುತ್ತಿದ್ದ ಪ್ರಧಾನ ಮಂತ್ರಿಯ ಹುದ್ದೆ ನಿರ್ವಹಣೆ, ಅಂತೆಯೆ ಅವರನ್ನು ಚಿಕ್ಕದಣ್ಣಾಯಕರು ಎಂದು ಕರೆಯುತ್ತಿದ್ದರು. ಅಲ್ಲಮಪ್ರಭು ಏರಿದ ಶೂನ್ಯಸಿಂಹಾಸನದ ಎರಡನೆಯ ಪೀಠಾಧಿಕಾರಿಯಾಗಿ ಚನ್ನಬಸವಣ್ಣನವರು ಆರೋಹಣ ಮಾಡುವ ಪ್ರಸಂಗ ಬರುತ್ತದೆ. ಶೂನ್ಯಪೀಠದ ಎರಡನೆಯ ಅಧಿಪತಿ ಆಗಿ ಇಡೀ ಲಿಂಗಾಯತ ಧರ್ಮಸಂಸತ್ತನ್ನು ಮುನ್ನಡೆಸುವ ಮಹಾಮಣಿಹ ಚನ್ನಬಸವಣ್ಣವರದಾಗಿತ್ತು ಎಂಬುದು ಗಮನಾರ್ಹ ಸಂಗತಿ.