ಚನ್ನ ಬಸವಣ್ಣ ಚರಿತ್ರೆ 26: ಪ್ರಾಣಲಿಂಗಿ, ಶರಣ, ಐಕ್ಯಸ್ಥಲ

[ಶ್ರಾವಣಮಾಸದ ಪರ್ಯಂತರ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಚಿಂತನೆ ಮಾಡುವ ಬಯಕೆ ಇಷ್ಟು ಬೇಗ ಮುಗಿಯುತ್ತದೆ ಎಂದು ನಾನು ಭಾವಿಸಿರಲಿಲ್ಲ. ಕರ್ನಾಟಕದ ತುಂಬ ಅನೇಕ ಶರಣ ತತ್ವಾನುಯಾಯಿಗಳು ನನ್ನ ಈ ಬರಹಗಳನ್ನು ಕುರಿತು ತುಂಬ ಮೆಚ್ಚುಗೆಯ ಮಾತುಗಳನ್ನಾಡಿದರು. ಕೆಲವರು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ, ನಮಗೆ ಪ್ರತಿ ಕಳಿಸಿ ಎಂದು ವಿಳಾಸ ಕೊಟ್ಟರು. ಕೆಲವು ಹಿರಿಯ ವಿದ್ವಾಂಸರು ಬರವಣಿಗೆಯಲ್ಲಿ ಆಗಾಗ ಬರುವ ಕೆಲವು ವಿಚಾರಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಹೀಗೆ ನಿನ್ನ ವಿಚಾರಗಳನ್ನು ಬದಲಾಯಿಸಿಕೊ ಎಂದು ಹೇಳಿದರು. ಆ ಎಲ್ಲ ಹಿರಿಯ ವಿದ್ವಜ್ಜನರ ಅಭಿಪ್ರಾಯಗಳನ್ನು ನಾನು ಮನಸಾ ಒಪ್ಪಿಕೊಂಡು, ನನ್ನ ಬರವಣಿಗೆಯಲ್ಲಿ ಬದಲಾವಣೆ ಮಾಡಿಕೊಂಡಿರುವೆ. ಪುಸ್ತಕ ರೂಪದಲ್ಲಿ ಪ್ರಕಟಿಸುವ ಸಂದರ್ಭದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವೆ. ನಾಡಿನ ಹಿರಿಯ ಪರಮಪೂಜ್ಯರು ತಮ್ಮ ಹರುಷ ವ್ಯಕ್ತಪಡಿಸಿ, ಆಶೀರ್ವದಿಸಿದ್ದಾರೆ. ಒಟ್ಟಾರೆ, ಅನೇಕ ಮಹನೀಯರು ನನ್ನನ್ನು ನಿತ್ಯ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ನಡುವೆ ಒಂದಿಬ್ಬರು ನನ್ನ ಬರಹಗಳನ್ನು ಕದ್ದು ತಮ್ಮ ಹೆಸರಿನಲ್ಲಿ ಬೇರೆ ಬೇರೆ ಗ್ರೂಫ್ ಗಳಲ್ಲಿ ಹಾಕಿರುವ ಸಂಗತಿ ಗಮನಕ್ಕೆ ಬಂದಿತು. ಒಬ್ಬರ ಬರಹವನ್ನು ಕೃತಿಚೌರ್ಯ ಮಾಡುವುದು ತಪ್ಪು ಎಂಬ ಭಾವನೆ ಅವರಲ್ಲಿ ಇಲ್ಲ. ಉಡಾಫೆಯ ಇಂತಹ ಜನರು ಕೇಳಲು ಹೋದರೆ, ವಿತಂಡವಾದವನ್ನೇ ಮಾಡುತ್ತಾರೆ. ಇಂತವರ ನಡುವೆಯೂ ನನ್ನನ್ನು ಪ್ರೋತ್ಸಾಹಿಸಿದ, ಪ್ರೇರೇಪಿಸಿದ ಎಲ್ಲ ಪೂಜ್ಯರಿಗೆ, ಹಿರಿಯರಿಗೆ, ವಿದ್ವಜ್ಜನರಿಗೆ, ಸಾಮಾನ್ಯ ಓದುಗರಿಗೆ ಅನಂತ ಶರಣು ಶರಣಾರ್ಥಿಗಳನ್ನು ಸಲ್ಲಿಸುವೆ.]

ಪ್ರಾಣಲಿಂಗಿಸ್ಥಲ

ಅಲ್ಲಿಂದತ್ತ ಲಿಂಗಪೂಜಕನೆನಿಸುವೆ,
ಅಭ್ಯಾಸವಿಡಿದಲ್ಲಿಂದತ್ತ ಲಿಂಗಭಕ್ತನೆನಿಸುವೆ.
ಸದಾಚಾರವಿಡಿದಲ್ಲಿಂದತ್ತ ಲಿಂಗಪ್ರಸಾದಿಯೆಂದೆನಿಸುವೆ.
ಅರ್ಪಿತವಿಡಿದಲ್ಲಿಂದತ್ತ ಪ್ರಾಣಲಿಂಗಿ ಯೆಂದೆನಿಸುವೆ.
ಪ್ರಾಣಲಿಂಗವಿಡಿದಲ್ಲಿಂದತ್ತ ಲಿಂಗೈಕ್ಯನೆಂದೆನಿಸುವೆ.
ಉಭಯಜ್ಯೋತಿವಿಡಿದಲ್ಲಿಂದತ್ತ
“ಸರ್ವಾಂಗಲಿಂಗೇನ ಸಹ ಮೋದತೇ” [ಎಂದೆನಿಸುವೆ]
ಇದು ಕಾರಣ, ಕೂಡಲಚೆನ್ನಸಂಗ ಲಿಂಗವಿಡಿದಲ್ಲಿಂದತ್ತತ್ತ.

ನಾಲ್ಕನೆಯ ಪ್ರಾಣಲಿಂಗಿಸ್ಥಲಕ್ಕೆ ಬಂದಾಗ ಮತ್ತಷ್ಟು ಬದಲಾವಣೆಯನ್ನು ಕಾಣುತ್ತೇವೆ. ನಾನು ಯಾರು? ನಾನು ದೇವರಿಂದ ಭಿನ್ನವಾಗಿದ್ದೇನೆಯೆ? ಎಲ್ಲವೂ ದೇವನ ಕರುಣೆ ಎಂದಾಗ ನಾನು ಭಗವಂತನಿಂದ ಭಿನ್ನವಾಗಿರಲು ಹೇಗೆ ಸಾಧ್ಯ? ಸಂಸಾರ ಸಾಗರದಲ್ಲಿ ತೆರೆಯೊಂದು ಎದ್ದ ಬಳಿಕ, ಆ ತೆರೆ ಸಾಗರದಿಂದ ಬೇರೆಯಾಗಿರಲು ಹೇಗೆ ಸಾಧ್ಯ? ತೆರೆಯ ಒಳಗಿರುವುದೆಲ್ಲ ನೀರು ತಾನೆ? ನಾವು ತೆರೆಯ ಕಡೆಗೆ ಲಕ್ಷವಿಟ್ಟು ಗಮನಿಸಿದಾಗ ತೆರೆಗಳು ಒಂದೇ ತೆರನಾಗಿಲ್ಲ. ಕೆಲವು ದೊಡ್ಡವು, ಕೆಲವು ಸಣ್ಣ ತೆರೆಗಳು ಮೂಡಿಬರುವುದನ್ನು ಕಾಣುತ್ತೇವೆ. ದೊಡ್ಡ ತೆರೆಗಳಲ್ಲಿ ಮಾತ್ರ ನೀರು ಸಣ್ಣ ತೆರೆಗಳಲ್ಲಿ ನೀರಿಲ್ಲವೆಂದು ಹೇಳಲು ಸಾಧ್ಯವೆ? ಎಲ್ಲ ತೆರೆಗಳಲ್ಲಿ ನೀರು ಇದೆ ಎಂಬುದು ಅರಿವಾದಾಗ ಅದೇ ಸಾಕ್ಷಾತ್ಕಾರ. ಹಾಗೆ, ಈ ದೇಹ ಮತ್ತು ಮನಸ್ಸು ಶೂನ್ಯಸಾಗರದಲ್ಲಿ ತೆರೆ ಇದ್ದ ಹಾಗೆ. ಶೂನ್ಯ ಸಾಗರ, ಅದು ಅಸಂಖ್ಯ ಜೀವರಾಶಿಯ ನಿಬಿಡತೆ; ಅದರಲ್ಲಿ ನಾನು ಎಂಬುದು ಒಂದು ತೆರೆಯಾಗಿ ಉದ್ಭವಿಸುವುದು. ತೆರೆಯಲ್ಲೇನಿದೆ? ದಟ್ಟವಾದ ಜೀವರಾಶಿಯ ಜಾಗ್ರತ ಅಸ್ತಿತ್ವ. ತೆರೆ ಸಾಗರದಿಂದ ಭಿನ್ನವಲ್ಲ; ತೋರಿಕೆಗೆ ಮಾತ್ರ ಭಿನ್ನ.

ನೋಡಲು ನಾವು ಬೇರೆ ಬೇರೆಯಾಗಿ ಕಾಣುತ್ತೇವೆ. ಆದರೆ ಒಳಗೆ ಲಿಂಗವೆ. ಒಳಗೆಲ್ಲ ಸತ್ಯ, ಆಕಾರದಲ್ಲಿ ನಾನು ಬೇರೆ, ನೀನು ಬೇರೆ. ಇದೊಂದು ಭಾವ. ಮೂಲತಃ ನಾನು ಪ್ರಾಣಲಿಂಗದಿಂದ ಭಿನ್ನವಾಗಿಲ್ಲ. ನಾನು ಪ್ರಾಣಲಿಂಗದ ಒಂದು ಅಂಶ. ಅದರ ಒಂದು ರೂಪ; ಒಂದು ಕಿರಣ ಇದ್ದ ಹಾಗೆ. ನಾನು ಮೂಲತಃ ಶೂನ್ಯ ಎಲ್ಲ ವಿಚಾರಗಳನ್ನು, ಭಾವನೆಗಳನ್ನು ತೆಗೆದುಹಾಕಿದಾಗ ಉಳಿಯುವುದೇ ನಾನು. ಇದನ್ನು ಪ್ರಾಣಲಿಂಗಸ್ಥಲ ಅಂತ ಕರೆಯುವುದು.

ಪ್ರಾಣಲಿಂಗಸ್ಥಲದಲ್ಲಿ ದೇವಾನುಸಂಧಾನ ಪ್ರಾರಂಭ. ಲಿಂಗ ಒಂದು ರೀತಿಯಲ್ಲಿ ನಿಷ್ಕಲ. ಅದು ಶೂನ್ಯಲಿಂಗ. ಇಂತಹ ಒಂದು ಶೂನ್ಯಲಿಂಗದ ಅನುಸಂಧಾನ ಪ್ರಾರಂಭವಾಗುವುದು ಪ್ರಾಣಲಿಂಗಸ್ಥಲದಲ್ಲಿ.

ನಾನು ದೇವನಿಂದ ಭಿನ್ನವಾಗಿಲ್ಲ. ದೇವರು ನನ್ನಿಂದ ಭಿನ್ನವಾಗಿಲ್ಲ; ಮೂಲತಃ ನಾನು ದೇವರು ಭಗವಂತ ಸರ್ವವ್ಯಾಪಿಯಾಗಿ ರುವುದರಿಂದ ಆತ ನನ್ನಿಂದ ಭಿನ್ನವಾಗಿರಲು ಸಾಧ್ಯವಿಲ್ಲ. ದೇವರು ಸರ್ವವ್ಯಾಪಿ; ಸರ್ವಜ್ಞ. ನನ್ನಲ್ಲಿ, ನಿನ್ನಲ್ಲಿ ಎಲ್ಲ ಕಡೆಗೂ ದೇವನಿದ್ದಾನೆ. ಇಂಥ ಭಾವ ಬಂದಾಗ ಅದನ್ನು ಪ್ರಾಣಲಿಂಗಿ ಎಂದು ಕರೆಯುವುದು. ಇದು ಅನುಸಂಧಾನದಿಂದ ಬರುವ ಭಾವ. ಕಣ್ಣುಮುಚ್ಚಿ ಮಾಡುವಾಗಿನ ದೇವಭಾವ. ಕಣ್ಣು ತೆಗೆದಾಗ ಕೂಡ ಅದೇ ಭಾವ ಸಹಜವಾಯಿತೆಂದರೆ, ನಾನು ಪ್ರಾಣಲಿಂಗಸ್ಥಲದ ಹಂತ ತಲುಪಿದ್ದೇನೆ ಎಂಬರ್ಥ.

ವಿಶ್ವವೆಲ್ಲ ಸೃಷ್ಟಿಕರ್ತನ ಆವಾಸವೆಂಬ ಭಾವನೆಯುಳ್ಳ ನಿರ್ಲಿಪ್ತಸ್ಥಿತಿಯ ಪ್ರಸಾದಿಯ ಜೀವನ ಈ ಸ್ಥಲದಲ್ಲಿ ಅಂತರ್ಮುಖವಾಗುವುದು. ಬ್ರಹ್ಮಾಂಡದ ಶಕ್ತಿಯೆಲ್ಲ ಪಿಂಡಾಂಡದಲ್ಲಿಯೂ ಅಡಗಿರುವುದನ್ನು ಕಂಡುಕೊಂಡ ಅವನು ಅಂತರಂಗದಲ್ಲಿಯೇ ಶಿವನ ಇರುವನ್ನು ಅನುಭವಿಸುತ್ತಾನೆ, ಹಾಗು ಅದನ್ನು ಅನುಭವವೇದ್ಯವಾಗಲು ಪ್ರಾಣಲಿಂಗಪೂಜೆಯನ್ನು ಕೈಕೊಳ್ಳುತ್ತಾನೆ. ಆಗ ಅವನಿಗೆ ತನ್ನ ಕರದಲ್ಲಿರುವ ಇಷ್ಟಲಿಂಗ ಸ್ವರೂಪವು ತನ್ನಂತರಂಗದಲ್ಲಿ ಇರುವುದು ಕಾಣುತ್ತದೆ. ತನ್ನ ಪ್ರಾಣಶಕ್ತಿಯನ್ನು ಲಿಂಗದಲ್ಲಿಯೂ, ಆ ಲಿಂಗಶಕ್ತಿಯನ್ನು ಪ್ರಾಣದಲ್ಲಿಯೂ ನಿಲ್ಲಿಸಿ ಈ ಎರಡರ ಅಭೇದವನ್ನು ಅನುಸಂಧಾನ ಮಾಡುತ್ತಾನೆ. ಇದೇ ಪ್ರಾಣಲಿಂಗ ಪೂಜೆಯಾಗುತ್ತದೆ. ಪ್ರಾಣಲಿಂಗಿಸ್ಥಲದಲ್ಲಿ ಶಿವನ ಆದಿಶಕ್ತಿ, ಸಾಧಕನ ಅನುಭವ ಭಕ್ತಿಗಳು ಸಮನ್ವಯಗೊಳ್ಳುವದರಿಂದ ಸಾಧಕನ ಪ್ರಾಣ ಚೇತನವು ಲಿಂಗ ಚೇತನವಾಗುವುದು. ಮನವು ಸಂಕಲ್ಪ, ವಿಕಲ್ಪಗಳಿಂದ ಬಿಡುಗಡೆ ಪಡೆದು ಮಾಯಾ ಮಲದಿಂದ ನಿವೃತ್ತಿಯಾಗುವುದು. ಅವನ ಶರೀರವು ಮಾಂಸಪಿಂಡದಿಂದ ರೂಪಾಂತರ ಪಡೆದು ಮಂತ್ರಪಿಂಡವಾಗುವುದು. ತೃಪ್ತನಾದ ಪ್ರಾಣಲಿಂಗಿಯು ಲಿಂಗಾನಂದದ ನಿತ್ಯಾನಂದದಲ್ಲಿ ಮೈಮರೆಯುವನು.

ಭಕ್ತ, ಮಾಹೇಶ್ವರ, ಪ್ರಸಾದ, ಪ್ರಾಣಲಿಂಗ ಸ್ಥಲಗಳನ್ನು ಸಂಕ್ಷೇಪಿಸುವುದಾದರೆ- ೧. ಭಕ್ತ : ದೇವನಿದ್ದಾನೆ ಎಂಬ ದೃಢವಾದ ನಂಬಿಕೆ. ೨. ಮಾಹೇಶ್ವರ: ಆಕರ್ಷಣೆಗಳಿಗೆ ವಿಚಲಿತವಾಗದ ದೃಢಮನಸ್ಸು, ೩. ಪ್ರಸಾದಿ : ಎಲ್ಲವೂ ಪ್ರಸಾದಮಯ ಮತ್ತು ೪. ಪ್ರಾಣಲಿಂಗಿಸ್ಥಲ: ನಾನು ದೇವರು; ದೇವರಿಂದ ನಾನು ಭಿನ್ನವಾಗಿಲ್ಲ.

ಶರಣಸ್ಥಲ

ಕಾಯ ಬ್ರಹ್ಮಚಾರಿಯಾದಡೇನಯ್ಯಾ,
ಆಸೆ ಬ್ರಹ್ಮಚಾರಿಯಾಗದನ್ನಕ್ಕರ?
ಶಬ್ದ ಮೌನಿಯಾದಡೇನಯ್ಯಾ,
ನೆನಹು ಮೌನಿಯಾಗದನ್ನಕ್ಕರ?
ತನು ಬೋಳಾದಡೇನಯ್ಯಾ,
ಮನ ಬೋಳಾಗದನ್ನಕ್ಕರ?
ಇದು ಕಾರಣ- ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಸ್ಥಲ ವಾರಿಗೆಯೂ ಅಳವಡದು.

ಸೃಷ್ಟಿವಿನ್ಯಾಸಕ್ಕೆ ಕಾರಣವಾದ ಶಿವನ ಚಿದಂಶವೇ ತಾನೆಂಬ ಅನುಭವ ಸಾಧಕನಿಗೆ ಶರಣಸ್ಥಲದಲ್ಲಾಗುವುದು. ಇದುವರೆಗೆ ಬುದ್ಧಿಗಗೋಚರವಾದ ಸತ್ಯದ ಸ್ವರೂಪವನ್ನು ಶರಣ ಅನುಭವಿಸುವನು. ಅವನ ಜೀವನದ ಸರ್ವಸ್ವವೂ ಶಿವನಿಗೆ ಅರ್ಪಿತವಾಗುವುದು ಹಾಗು ಇದು ಅವನ ಕ್ರಿಯೆಗಳಲ್ಲಿಯೂ ವ್ಯಕ್ತವಾಗುವುದು. ಶಿವನ ಪರಾಶಕ್ತಿ ಹಾಗೂ ಸಾಧಕನ ಆನಂದ ಭಕ್ತಿಗಳ ಸಮನ್ವಯದಿಂದ ಶರಣಸ್ಥಲಕ್ಕೇರಿದ ಸಾಧಕನು ಪರಿಪೂರ್ಣಾನಂದದ ನಿಬ್ಬೆರಗಿನ ಸ್ಥಿತಿಯಲ್ಲಿರುವನು. ಅವನ ಅಂತಃಕರಣಗಳೆಲ್ಲವೂ ಪರಿಶುದ್ಧಗೊಂಡು ಆಣವ ಮಲದಿಂದ ಬಿಡುಗಡೆ ಪಡೆಯುವವು. ಆತ್ಮಜ್ಞಾನವು ಆತ್ಮಾನುಭವವಾಗಿ ಪರಿವರ್ತನೆಗೊಳ್ಳುವದು. ಶರಣಸತಿ, ಲಿಂಗಪತಿ ಭಾವದಿಂದ ಲಿಂಗಾನಂದದಲ್ಲಿಯೇ ತಲ್ಲೀನನಾಗುವನು.

ನಾನು ದೇವನಿಂದ ಭಿನ್ನವಾಗಿಲ್ಲ ಎಂದಾಗ, ಜಗತ್ತು ನನ್ನಿಂದ ಭಿನ್ನವಾಗಿರಲು ಹೇಗೆ ಸಾಧ್ಯ? ಜಗವೊಂದು ದೇವನ ರೂಪ; ವೀರವಿರಾಗಿಣಿ ಅಕ್ಕಮಹಾದೇವಿ ತನ್ನ ಒಂದು ಸುಂದರ ವಚನದಲ್ಲಿ
‘ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ
ತರುವಿನೊಳಗಾಡುವ ಖಗ ಮೃಗವೆಲ್ಲಾ ನೀನೆ…

ಭಗವಂತ ಸರ್ವಭರಿತ ಎಂದು ಹೇಳುತ್ತಾಳೆ. ‘ಲಿಂಗಮಧ್ಯೇ ಜಗತ್ ಸರ್ವಂ’. ಶರಣಸ್ಥಲ ಬಹಳ ಅದ್ಭುತವಾದುದು. ಅದು ಅದ್ಭುತವಾದುದೆಂದೇ ಶರಣರು ‘ಶರಣ’ ಪದ ಬಳಕೆ ಮಾಡಿದರು. ಶರಣ ಶಬ್ದದಲ್ಲಿ ವಿಶಾಲತೆಯ ಭಾವವಿದೆ.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಧಃ ಕಸ್ಯಸ್ವಿದ್ಧನಮ್||

ಕೇವಲ ಒಂದು ಈಶಾವಾಸ್ಯ ಎಷ್ಟು ಸುಂದರ! ಷಟ್ಸ್ಥಲದ ಆರೂ ಸ್ಥಲಗಳನ್ನು ಅದರಲ್ಲಿ ಹೆಣೆಯಬಹುದು. ಜಗವೆಲ್ಲ ಲಿಂಗ; ಜಗತ್ತು ಲಿಂಗದ ಅಭಿವ್ಯಕ್ತರೂಪ. ಇದು ಭಗವಂತನ ಲೀಲೆ. ಯಾವಾಗ ಜಗದಲ್ಲಿಯ ವಿಶ್ವರೂಪ ದರ್ಶನವಾಗುವುದೋ ಆಗ ಸಾಧಕ ‘ಶರಣ’ ಪದವಿ ಪಡೆಯುತ್ತಾನೆ.

ಇದು ದೇವ. ಇದು ನಾನು ಎಂಬ ಭೇದ ಭಾವವಳಿದಾಗ ಐಕ್ಯಸ್ಥಿತಿ. ಆಗ ಏನೂ ಇಲ್ಲ. ‘ನಾನು’ ಎಂಬುದು ಸಂಪೂರ್ಣವಾಗಿ ನಾಶವಾಗುವುದು. ಯಾವುದು ಉಳಿಯುವುದೋ ಅದು ಮಹಾಮೌನ ಅಥವಾ ಶೂನ್ಯ. ಅದು ಐಕ್ಯಸ್ಥಲದ ಸಮರಸಭಾವ.

ಮನುಷ್ಯ ಐಕ್ಯವಾಗುವ ಶರಣಸ್ಥಲಕ್ಕೆ ಬಂದು ಎಲ್ಲವನ್ನೂ ಅನುಭವಿಸಬೇಕು. ಜಗತ್ತನ್ನು, ಜಗತ್ತಿನಲ್ಲಿರುವ ವಸ್ತುಗಳನ್ನು ಭಗವದ್ ದೃಷ್ಟಿಯಿಂದ ಅವಲೋಕಿಸುವುದು. ಸಣ್ಣದು ದೊಡ್ಡದು ಎಂಬ ವ್ಯತ್ಯಾಸ ಬೇಡ. ಎಲ್ಲವೂ ದೇವರ ಕೊಡುಗೆ, ಇಂತಹ ಒಂದು ವಿಶಾಲದೃಷ್ಟಿ ಮನುಷ್ಯನ ಮನದಲ್ಲಿ ಉಂಟಾದಾಗ, ಅದನ್ನು ಶರಣಾನುಭವ ಎಂದು ತಿಳಿಯುವುದು.

ಭಕ್ತಿ ಶ್ರದ್ಧೆಯಾಗಿ ನಿಷ್ಠೆಯಾಗುವುದು. ಪ್ರಸಾದಿಸ್ಥಲದಲ್ಲಿ ಅವಧಾನ ಭಕ್ತಿ ಪ್ರಸಾದಿಯಲ್ಲಿ ಅವಧಾನ ಭಕ್ತಿಯಾಗುವುದು. ನೆನಪಿಡಿ, ಇದನ್ನು ನೀವು ಗಳಿಸಿದ್ದರೂ ಅದು ನಿಮ್ಮದಲ್ಲ. ಮತ್ತೊಂದು, ಇದರಿಂದ ನೀವು ದೊಡ್ಡವರಾಗುತ್ತೀರಿ ಎಂದು ತಿಳಿದಿದ್ದರೆ ಅದು ತಪ್ಪು. ಇದು ಪ್ರಸಾದಿ ಅವಧಾನ ಎಂದು ಸುಂದರವಾದ ಪದ ಬಳಕೆ ಮಾಡಿದ್ದಾರೆ. ಅವನೇ ನಾನು; ನಾನೇ ಅವನು; ನಾನು ಅವನಿಂದ ಭಿನ್ನವಲ್ಲ ಎಂಬ ಭಾವ ಅಳವಟ್ಟಾಗ ‘ಅನುಭವ’. ಭಗವಂತನಾನಂದದಿಂದ ಬಂದ ಭಾವ ಅದು, ಅನುಭವ. ಇದು ಅನುಭವ ಭಕ್ತಿ. ಶರಣಸ್ಥಲದಲ್ಲಿ ಬಂದಾಗ ಎಲ್ಲವೂ, ದೇವನರೂಪವಾಗಿಯೇ ಕಾಣುವುದು. ಹೀಗಾದಾಗ ಯಾರನ್ನು ದ್ವೇಷಿಸುವುದು? ಅವನಿಗೆ ಅಂತಹ ಭಾವ ಬರುತ್ತದೆ. ಎಲ್ಲವೂ ಲಿಂಗದ ವಿಸ್ತಾರವಾದ ರೂಪವಾದಾಗ ಯಾವುದನ್ನು ಮೋಹಿಸುವುದು? ಯಾವುದನ್ನು ದ್ವೇಷಿಸುವುದು? ದ್ವೇಷ ಭಾವನೆ ಮನದಿಂದ ಮಾಯವಾದಾಗ ಆತ ‘ಆನಂದಜಂಗಮ’ ನೆಂದೆನಿಸಿಕೊಳ್ಳುತ್ತಾನೆ. ಆನಂದ ರೂಪ ತಾಳುವುದು ಅಂದರೆ ಸಾಧಕ ಸದಾ ಆನಂದದಿಂದ ಇರುತ್ತಾನೆ. ಪ್ರಸನ್ನತೆಯಿಂದ ಜೀವಿಸುತ್ತಾನೆ. ಭಕ್ತನ ಮನದಲ್ಲಿ ಪ್ರಸನ್ನತೆಯ ಭಾವವಿದ್ದರೆ ಆತ ಶರಣ. ಭಕ್ತಿ ದ್ವೈತವಾಗಿರದೆ ಸಮರಸವಾಗಿರುವುದು. ಆಗ, ಎಲ್ಲವೂ ಮರೆಯಾಗುವುದು. ‘ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ, ಜ್ಞಾನ ನಷ್ಟ- ಇಂತು ಪಂಚನಷ್ಟದೊಳಗೆ ನಾನು ನಷ್ಟವಾದೆನು! ಆ ನಷ್ಟದೊಳಗೆ ನೀನೂ ನಷ್ಟವಾದೆ’ ಎಂದು ಶರಣ ಮಡಿವಾಳ ಮಾಚಿದೇವರು ಹೇಳಿದರು. ಅಂದರೆ ಶೂನ್ಯ.

ಸುಖಮಯ ಬದುಕಿಗಾಗಿ ಷಟ್ಸ್ಥಲ ಮಾರ್ಗದ ಸಾಧನೆ ಬಹಳ ಮುಖ್ಯ. ಬಡವ-ಶ್ರೀಮಂತ, ಹಳ್ಳಿಯ ರೈತ ಶಹರದಲ್ಲಿರುವ ಉದ್ಯಮಿ, ಕಲಿತವ, ಕಲಿಯದೆ ಇದ್ದವನೆಂಬ ಯಾವ ಭೇದವಿಲ್ಲದೆ, ಷಟ್ಸ್ಥಲ ಮಾರ್ಗ ಎಲ್ಲರಿಗೂ ಮುಕ್ತವಾಗಿದೆ. ಎಲ್ಲರಿಗೂ ಕೂಡ ಷಟ್ಸ್ಥಲ ಮಾರ್ಗ ಸುಲಭಸಾಧ್ಯವಾದುದು. ದೃಢವಾದ ಮನಸ್ಸು ಬೇಕಷ್ಟೆ.

ಪ್ರಾಣಲಿಂಗ ಸ್ಥಲದಲ್ಲಿ ನಾವು ಅರ್ಪಣ ಮಾಡುವೆವು. ಮೊದಲು ಇದು ನನ್ನದು. ಈಗ ನಿನ್ನದು ಅಷ್ಟೆ. ಅದೆ ಪೂಜೆ. ಹೂವನ್ನು ತರುವಾಗ ನನ್ನದು, ಲಿಂಗದ ಮೇಲೇರಿಸಿದಾಗ ಭಗವಂತನದು. ಪ್ರಾಣವೇ ಲಿಂಗ, ಲಿಂಗವೇಪ್ರಾಣ. ಉಪಚಾರಗಳು, ಕೇಳುವುದು, ಮುಟ್ಟುವುದು, ಮೂಸಿಸುವುದು, ರುಚಿಸುವುದು, ನೋಡುವುದು ಇವು ಐದು. ಕೊನೆಯಲ್ಲಿ ಇವು ನನ್ನವು ಅಲ್ಲ ಎಂದು ಭಾವಿಸುವುದು. ಮೊದಲು ನನ್ನವು ಆಗಿದ್ದವು. ಕೊಟ್ಟ ಬಳಿಕ ಅವು ಲಿಂಗದ ವಸ್ತುಗಳು. ಅವುಗಳನ್ನು ನಾನು ಅನುಭವಿಸುವಾತ. ಶರಣ ಸ್ಥಲಕ್ಕೆ ಬಂದಾಗ, ಪ್ರಸಾದ ಸ್ವೀಕಾರ ಮಾಡಿದ ಬಳಿಕ ನಾದವನ್ನು ಲಿಂಗಕ್ಕೂ ಕೇಳಿಸುವುದು. ನಾನೂ ಕೇಳುವುದು. ಆ ನಾದದ ಆನಂದದಲ್ಲಿ ಮಗ್ನನಾಗುವುದು. ಅದು ಶರಣ ಸ್ಥಲ. ಪೂಜೆ ಮಾಡುವಾಗ ಎಲ್ಲವನ್ನೂ ಕೊಟ್ಟನಂತರ ಒಂದು ಕ್ಷಣ ಸಂತೋಷ ಆಗುವುದು. ನೋಟದಲ್ಲಿ ಶಬ್ದದಲ್ಲಿ, ಸ್ಪರ್ಶ, ರೂಪ ರಸ ಮುಂತಾದವುಗಳಲ್ಲಿ ದೇವರೂಪ. ಆಗ ಮಹದಾನಂದ. ಅಂಥ ಆನಂದದಲ್ಲಿ ಮಗ್ನನಾಗಿ ಬಿಟ್ಟನಂತರ ಏನೂ ಇಲ್ಲ. ಇಷ್ಟಲಿಂಗದಲ್ಲಿ ತನ್ಮಯಭಾವ. ಅದು ಐಕ್ಯಸ್ಥಲ. ಸಾವಿರಾರು ವರ್ಷಗಳ ಹಿಂದೆ ಬಾಳಿ ಬದುಕಿದ ಪತಂಜಲ ಮಹರ್ಷಿಗಳು ‘ದೃಶ್ಯಾನುವಿದ್ಧ ಸವಿಕಲ್ಪ ಸಮಾಧಿ’ ಎಂದು ಕರೆದರು. ದೃಶ್ಯದೊಳಗೆ ಅನುವಿದ್ದವಾದ ಸಮಾಧಿ ಅದು. ಸವಿಕಲ್ಪಿತವಾದ ಬಹಳ ಅದ್ಭುತವಾದ ಸಮಾಧಿ ಅದು; ಇದು ಐಕ್ಯಸ್ಥಲ.

ಪ್ರತಿಯೊಬ್ಬ ಭಕ್ತ ದಿನನಿತ್ಯ ಪೂಜೆ ಮಾಡುತ್ತಾನೆ. ಇದು ಧಾರ್ಮಿಕ ಪೂಜೆ. ಸಾಧನಾ ಮಾಡುವವ ಮಾಡುವ ಪೂಜೆ ಇದಲ್ಲ. ಧರ್ಮಾನುಯಾಯಿ ಇಷ್ಟಾದರೂ ಮಾಡಬೇಕೆಂದು ಮಾಡುವ ಪೂಜೆ ಮಾತ್ರ. ಆದರೆ ಸಾಧಕನಿಗೆ ಅದು ಸಾಧನಾಲಿಂಗ. ಅದು ವಿಸ್ತಾರವಾಗಿಯೂ ವಿಶಾಲವಾಗಿಯೂ ಆಗಿರುವುದು. ಇದು ಷಟ್ಸ್ಥಲದಲ್ಲಿದ್ದಾಗ, ಇಷ್ಟಲಿಂಗ, ಭಾವಲಿಂಗ ಮತ್ತು ಪ್ರಾಣಲಿಂಗ ಪೂಜೆ. ಇಷ್ಟಲಿಂಗದಲ್ಲಿ ಆರು, ಭಾವ ಪ್ರಾಣಲಿಂಗಗಳಲ್ಲಿ ಆರಾರು ಪೂಜೆಗಳನ್ನು ಮಾಡಬೇಕಾಗುವುದು.

ಐಕ್ಯಸ್ಥಲ

ತ್ರಿವಿಧವಿರಹಿತಲಿಂಗ,
ಆಗಮವಿರಹಿತ ಪ್ರಸಾದಿ,
ಲಿಂಗವಿಲ್ಲದ ಜಂಗಮ ಜಂಗಮವಿಲ್ಲದ ಲಿಂಗ,
ಇದ ಕೇಳಿ ಗುರುವಿಲ್ಲದ ಶಿಷ್ಯ, ಶಿಷ್ಯನಿಲ್ಲದ ಗುರು,
ಇವೆಲ್ಲವ ಕಂಡು ಯುಕ್ತಿಯಿಲ್ಲದ ಭಕ್ತಿ,
ಭಕ್ತಿಯಿಲ್ಲದ ಯುಕ್ತಿ ನೋಡಯ್ಯಾ!
ಇದು ಐಕ್ಯಸ್ಥಲ ವಲ್ಲ, ನಿಃಸ್ಥಲ ನಿರವಯ
ಕೂಡಲಚೆನ್ನಸಂಗಾ ನಿಮ್ಮ ಶರಣ.

ಸಾಧಕನ ಕೊನೆಯ ಹಂತ ಐಕ್ಯಸ್ಥಲ. ಆನಂದ ಭಕ್ತಿಯಿಂದ ಲಿಂಗಸ್ವರೂಪವೇ ತಾನೆಂದು ಕಂಡುಕೊಂಡ ಶರಣ, ಸಮಸರಭಕ್ತಿಯಿಂದ ಲಿಂಗದಲ್ಲಿ ಬೆರೆತು ತಾನೂ ಲಿಂಗವಾಗಿ ಪರಿಣಮಿಸುವನು, ಇದೇ ಲಿಂಗಾಂಗ ಸಾಮರಸ್ಯ. ಚಿಚ್ಛಕ್ತಿ ಹಾಗೂ ಸಮರಸ ಭಕ್ತಿಗಳ ಸಾಮರಸ್ಯದಿಂದ ಸಾಧಕನ ವ್ಯಕ್ತಿಗತ ಆತ್ಮವು ಪರಮಾತ್ಮನಲ್ಲಿ ಸಮರಸವಾಗಿ ಮಹಾಲಿಂಗಸ್ವರೂಪವನ್ನು ಪಡೆಯುವುದು. ಐಕ್ಯಸ್ಥಲದಲ್ಲಿರುವ ಸಾಧಕನು ಸುಖದುಃಖ, ಜನನ-ಮರಣಗಳಿಗೆ ಅತೀತನಾಗಿ ನಿರ್ಲಿಪ್ತನಾಗುವನು. ತಾನುಂಡ ಪರಮಾನಂದವನ್ನು, ಜಂಗಮಸ್ವರೂಪಿಯಾಗಿ ಸಕಲ ಜೀವಾತ್ಮರಿಗೆ ದಾಸೋಹಗೈಯುತ್ತ ವಸಂತಗಾಳಿಯಂತೆ ಸಂಚರಿಸುವನು.

ಷಟ್ಸ್ಥಲದ ಶಿವಯೋಗ ಸಾಧನೆಯು ಆತ್ಮ-ಪರಮಾತ್ಮರ ಸಾಮರಸ್ಯವನ್ನು ಸಾಧಿಸಿಕೊಡುತ್ತದೆ. ಶಿವಯೋಗಿಯ ಪವಿತ್ರ ಮನದಲ್ಲಿ ಪರಮಾತ್ಮನ ನಾದ ಬಿಂದು ಕಲೆಗಳಿಂದ ಕೂಡಿದ ದೇವ ಪ್ರಕಾಶ ತುಂಬಿರುವದರಿಂದ ಅವನು ಎಲ್ಲೆಲ್ಲಿಯೂ ಪರಮಾತ್ಮನನ್ನು ಕಾಣುವನು. ಶಿವಾರ್ಪಿತಗೊಂಡ ಶಿವಯೋಗಿಯ ನಿಷ್ಕಾಮ ಕರ್ಮಗಳು ಅವನನ್ನು ಬಾಧಿಸವು. ಹಗಲು ರಾತ್ರಿಗಳು ಆಕಾಶವನ್ನು ಬಾಧಿಸದಂತೆ, ಕರ್ಮಫಲಗಳು ಶಿವಯೋಗಿಯನ್ನು ಬಾಧಿಸವು.

ಉಪದೇಶ ನಷ್ಟವಾದಡೆ, ಗುರುವೆಂಬೆ
ಗಮನ ನಷ್ಟವಾದಡೆ ಜಂಗಮವೆಂಬೆ
ಭಾವನಷ್ಟವಾದಡೆ ಲಿಂಗವೆಂಬೆ
ಮನ ನಷ್ಟವಾದಡೆ ಪ್ರಸಾದಿಯೆಂಬೆ
ಆಚಾರ ನಷ್ಟವಾದಡೆ ಐಕ್ಯನೆಂಬೆ
ಇಂತೀ ಷಡುಸ್ಥಲ ನಿಂದ ನಿಲುವಿನ ಪರಿಭಾವ
ಪಥವ ಕೂಡಲಚನ್ನಸಂಗಾ, ನಿಮ್ಮ ಶರಣ ಬಲ್ಲ.

ನುಡಿಗಿಂತ ನಡೆಯೆ ಅಧಿಕವಾಗಲು ಉಪದೇಶ ನಷ್ಟವಾಗುವುದು. ಇಂಥವನು ಗುರು, ಪರಿಪೂರ್ಣ ಜ್ಞಾನದಿಂದ ಕೂಡಿ ಜ್ಞಾನಾನಂದನಾಗಿ, ಗಮ್ಯಸ್ಥಾನ ಮುಟ್ಟಿ, ಗಮನ ನಷ್ಟವಾದವನು, ಜಂಗಮನು. ಭಾವನಷ್ಟವಾಗಿ ನಿರ್ಭಾವವಾದವನು ಸ್ವಯಂ ಲಿಂಗಸ್ವರೂಪನು. ಮನಸ್ಸು ನಷ್ಟವಾಗಿ ಲಿಂಗದಲ್ಲಿ ಲೀನವಾದವನು ಭಕ್ತನು. ಅರ್ಪಿತ ನಷ್ಟವಾಗಿ ಪ್ರಸಾದ ಕಾಯನಾದವನು ಪ್ರಸಾದಿಯು. ಆಚಾರ ನಷ್ಟವಾಗಿ ತೃಪ್ತಿಯಿಂದ ಕೂಡಿದ ಆನಂದದಿಂದ ಲಿಂಗದಲ್ಲಿ ಕೂಡಿ ಲಿಂಗವಾದವನು ಐಕ್ಯನು. ಹೀಗೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯಸ್ಥಲ ನಿಲುವಿನ ಅನುಭಾವ ಪಥವನ್ನು ಅರಿತವನೆ ಶರಣನೆಂದು ಚನ್ನಬಸವಣ್ಣನವರು ಮೇಲ್ಕಾಣಿಸಿದ ವಚನದಲ್ಲಿ ಷಡುಸ್ಥಲದ ಸಾಧಕನ ನಿಲುವನ್ನು ವಿವರಿಸಿದ್ದಾರೆ.

ಷಟ್ಸ್ಥಲ ಧ್ವಜಗೀತೆ

ಏರುತಿದೆ, ಹಾರುತಿದೆ ಷಟ್ಸ್ಥಲಧ್ವಜವು ಮೆರೆಯುತಿದೆ
ವಿಶ್ವಜೀವರನು ತನ್ನಯ ಗರ್ಭದಿ
ಹೊತ್ತ ಬಸವಧ್ವಜ ಹಾರುತಿದೆ              ||ಪ||

ಸಮತಾ ತತ್ವವ ಜಗದಲಿ ಸಾರಿದ
ಸತ್ಯ ಅಹಿಂಸೆಯ ನಡೆಯಲಿ ತೋರಿದ
ದಯವೇ ಧರ್ಮದ ಮೂಲವೆಂದುಲಿದ
ಕಲ್ಯಾಣಧ್ವಜವು ಹಾರುತಿದೆ               ||೧||

ಮೋಳಿಗೆ ಮಾರಯ್ಯ ಮಡಿವಾಳ ಮಾಚಯ್ಯ
ಮಾದರ ಚನ್ನಯ್ಯ ಡೋಹರ ಕಕ್ಕಯ್ಯ
ಹರಳಯ್ಯ ಮೊದಲಾದ ಭಕ್ತರನೆಲ್ಲ
ಜಂಗಮಸ್ಥಲಕೆ ಎತ್ತಿದ ಧ್ವಜವು                ||೨||

ವ್ಯೋಮಕಾಯ ಸಿದ್ಧ ಅಲ್ಲಮಪ್ರಭುವು
ವೀರ ಗಣಾಚಾರಿ ಅಂಬಿಗರ ಚೌಡಯ್ಯ
ಕಾಯಕಜ್ಯೋತಿ ನುಲಿಯ ಚಂದಯ್ಯ
ಅಗಣಿತ ಮಹಿಮರ ಪ್ರೀತಿಯ ಧ್ವಜವು          ||೩||

ಕ್ರಾಂತಿಯ ಗಂಗೋತ್ರಿ ಅಕ್ಕನಾಗಾಯಿ
ನಿರಂಜನ ಜ್ಯೋತಿ ನೀಲಮ್ಮ ತಾಯಿ
ಸತ್ಯಕ್ಕ ಲಿಂಗಮ್ಮ ಶರಣೆ ಮುಕ್ತಾಯಿ,
ಜ್ಞಾನಗುರು ಅಕ್ಕಮಹಾದೇವಿ ಧ್ವಜವು            ||೪||

ವಚನ ಸಾರದ ಹಾಲ್ಹೊಳೆ ಹರಿಸಿದ
ವಾದಭೇದವನು ಕಾಲಲಿ ಮೆಟ್ಟಿದ
ಕಾಯಕ ಕೈಲಾಸ ಮಂತ್ರ ಬೋಧಿಸಿದ
ಕರುಣಾಳು ಗುರುಚನ್ನಬಸವನ ಧ್ವಜವು         ||೫||

[ಈ ಗೀತೆಯನ್ನು ರಚಿಸಿದವರು ಶರಣರಾದ ವಿ. ಸಿದ್ಧರಾಮಣ್ಣನವರು. ಪ್ರತಿಯೊಬ್ಬ ಲಿಂಗಾಯತರು ತಾವು ಮಾಡುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭದಲ್ಲಿ ಷಟ್ಸ್ಥಲ ಧ್ವಜಾರೋಹಣ ಮಾಡುತ್ತ ಕಡ್ಡಾಯವಾಗಿ ಈ ಗೀತೆಯನ್ನು ಹಾಡಿದರೆ, ಕಾರ್ಯಕ್ರಮಕ್ಕೊಂದು ಔಚಿತ್ಯಪ್ರಾಪ್ತವಾಗುತ್ತದೆ]

Share This Article
Leave a comment

Leave a Reply

Your email address will not be published. Required fields are marked *