ಚನ್ನಬಸವಣ್ಣ ಚರಿತ್ರೆ 4: ಕರಣ ಹಸಿಗೆಯಲ್ಲಿರುವ ವಿಸ್ತಾರವಾದ ದೇಹಜ್ಞಾನ

ಆದಿ ಅನಾದಿ ಆತ್ಮವಿವೇಕ
ಅನುಭಾವಸಂಬಂಧ ಎಂತಿಪ್ಪುದೆಂದಡೆ;
ಆದಿಯೆ ದೇಹ, ಅನಾದಿಯೆ ಆತ್ಮ.
ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ.
ಆ ಪರಮಪ್ರಣವದ ಪರಮಪ್ರಕಾಶವೆ ಚಿಚ್ಭಕ್ತಿ.
ಆ ಚಿಚ್ಭಕ್ತಿಯ ಸುವರ್ಣಪ್ರಭೆಯ
ಮೇಲಣ ಪರಮನಾದವೆ ಸುನಾದಬ್ರಹ್ಮ.
ಆ ಸುನಾದಬ್ರಹ್ಮದ ಮೇಲಣ ಸೂಕ್ಷ್ಮಲಿಂಗವೆ
ನಾದಬಿಂದು ಕಳಾತೀತವಾದ ಜ್ಯೋತಿರ್ಮಯಲಿಂಗ.
ಆ ಲಿಂಗದಿಂದೊಗೆದ ದೇಹೇಂದ್ರಿಯ ಮನಃ
ಪ್ರಾಣಾದಿಗಳೆಲ್ಲ ಆ ಲಿಂಗದ ಉಪಕರಣಂಗಳಾದ ಕಾರಣ
ಆ ಮನಃ ಪ್ರಾಣಾದಿಗಳೆಲ್ಲ
ಆ ಪರವಸ್ತುವಿಗೆ ಭಿನ್ನವೆಂಬ
ಅಜ್ಞಾನಿಯ ಮೆಚ್ಚ ಕೂಡಲಚೆನ್ನಸಂಗಯ್ಯ.

ಆತ್ಮಜ್ಞಾನಿಗಳಾಗಿದ್ದ ಚನ್ನಬಸವಣ್ಣನವರು ಕೇವಲ ಧರ್ಮಸಂಹಿತೆಯನ್ನು ಮಾತ್ರ ರಚನೆ ಮಾಡಲಿಲ್ಲ. ಈ ಧರ್ಮವನ್ನು ಪರಿಪಾಲಿಸಬೇಕಾದ ಭಕ್ತರು ತಮ್ಮ ದೇಹದ ಬಗೆಗಿನ ಜ್ಞಾನವನ್ನು ಅರಿತುಕೊಳ್ಳಲಿ ಎಂಬ ಕಾರಣಕ್ಕಾಗಿ ‘ಕರಣ ಹಸಿಗೆ’ ಎಂಬ ವೈದ್ಯಲೋಕಕ್ಕೆ ವಿಸ್ಮಯವೆನ್ನಬಹುದಾದ ಮಹತ್ವದ ಕೃತಿಯೊಂದನ್ನು ರಚನೆ ಮಾಡಿದರು.

ಕರಣ ಹಸಿಗೆ ಎಂಬ ಎರಡು ಪದಗಳಿವೆ. ಕರಣ ಎಂದರೆ ಸಾಧನ ಅಥವಾ ತತ್ವಗಳು ಎಂದರ್ಥ. ಹಸಿಗೆ ಎಂದರೆ ವಿಭಾಗವೆಂದರ್ಥ. ದೇಹದಲ್ಲಿರುವ ಸಾಧನಗಳು ಅಥವಾ ತತ್ವಗಳ ವಿಭಾಗ ಕ್ರಮವನ್ನು ಅಧ್ಯಯನ ಮಾಡುವುದೇ ಕರಣ ಹಸಿಗೆಯ ಮೂಲ ಉದ್ದೇಶವಾಗಿದೆ.

ದೇಹವೇ ದೇವಾಲಯ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ ಶರಣರು, ಈ ದೇಹವು ಆತ್ಮಲಿಂಗದ ಜಂಗಮ ದೇವಾಲಯವೆಂದು ಪರಿಭಾವಿಸಿದರು. ಈ ದೇಹದ ರಚನೆ ಹೇಗೆ ಆಗುತ್ತದೆ? ಈ ದೇಹದಲ್ಲಿರುವ ತುಂಬಿರುವುದೇನು? ದೇಹವು ಹೇಗೆ ಕೆಲಸ ಮಾಡುತ್ತದೆ? ದೇಹದ ರಚನೆ, ಅದರಲ್ಲಿಯ ಪ್ರತಿಯೊಂದು ಅಂಗ ವ್ಯವಸ್ಥೆಯನ್ನೂ ವಿವರಿಸುವ ಕ್ರಮಬದ್ಧವಾದ, ಶಾಸ್ತ್ರೀಯ ನಿರೂಪಣಾ ಶಾಸ್ತ್ರ ರಚನೆಯ ಒಂದು ವಿನಮ್ರ ಪ್ರಯತ್ನವನ್ನು ಚನ್ನಬಸವಣ್ಣನವರು ಈ ಕರಣ ಹಸಿಗೆಯಲ್ಲಿ ಮಾಡಿದ್ದಾರೆ.

ವಿರಕ್ತಮಠಗಳ ಮಠಾಧೀಶರ ಪಟ್ಟಾಭಿಷೇಕ ಸಂದರ್ಭದಲ್ಲಿ ಸ್ವಾಮಿಗಳಿಗೆ ಕೊಡುವ ಪ್ರಮುಖ ಕೃತಿಗಳಲ್ಲಿ ಕರಣ ಹಸಿಗೆಯೂ ಒಂದು. ಸ್ವಾಮಿಗಳು ಲಿಂಗಾನುಸಂಧಾನದೊಂದಿಗೆ ದೇಹದ ಅಸ್ತಿತ್ವ ಕುರಿತಾಗಿಯೂ ಚಿಂತನೆ ಮಾಡುತ್ತಿರಲಿ ಎಂಬ ಉದ್ದೇಶದಿಂದ ಈ ಗ್ರಂಥವನ್ನು ಗುರುಗಳು ನೀಡುವ ಪರಂಪರೆ ಜಾರಿಯಲ್ಲಿ ಬಂದಿದೆ.

ಇಲ್ಲಿಯವರೆಗೆ ಚನ್ನಬಸವಣ್ಣನವರ ಕರಣ ಹಸಿಗೆ ಕೃತಿಗೆ ಸೂಕ್ತವಾದ ವ್ಯಾಖ್ಯಾನಗಳು ಇನ್ನೂ ರಚನೆಯಾಗಿಲ್ಲ. ಈಗಾಗಲೇ ಕೆಲವರು ಪ್ರಯತ್ನ ಮಾಡಿದ್ದರೂ ಅವುಗಳಿಂದ ಅಧ್ಯಾತ್ಮಪರವಾದ ತಿಳುವಳಿಕೆ ಹೆಚ್ಚಾಗುವುದೇ ವಿನಃ ವೈದ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವ್ಯಾಖ್ಯಾನಗಳು ಇನ್ನೂ ಬಂದಿಲ್ಲ. ಇಮ್ಮಡಿ ಶಿವಬಸವ ಸ್ವಾಮಿಗಳು ಸಂಪಾದಿಸಿ ಪ್ರಕಟಿಸಿದ ಕರಣ ಹಸಿಗೆಯು ಶಿವಾನುಭವ ಮುಮುಕ್ಷುಗಳಿಗೆ ಪಠ್ಯವಾಗಿ ರಚನೆಯಾಗಿರುವುದರಿಂದ, ಮೂಲಕ್ಕಿಂತ ಟೀಕಾಕಾರನ ವಿವರಣೆಯೇ ಜಟೀಲ ಎನಿಸುತ್ತದೆ. ವಿಷಯ ಸುಲಭಗ್ರಾಹ್ಯವೆನಿಸುವುದಿಲ್ಲ. ನಮ್ಮ ನಾಡಿನ ಹಿರಿಯ ವೈದ್ಯವಿಜ್ಞಾನಿಗಳಾಗಿದ್ದ ಡಾ. ಸ.ಜ.ನಾಗಲೋಟಿಮಠ ಅವರು ಈ ಕರಣ ಹಸಿಗೆಯನ್ನು ವೈದ್ಯಕೀಯ ನೆಲೆಯಲ್ಲಿ ವಿಶ್ಲೇಷಿಸಿ ಪುಸ್ತಕ ಬರೆಯುವ ಸಂಕಲ್ಪ ಮಾಡಿದ್ದರು. ಆದರೆ ಅವರು ಆಕಸ್ಮಿಕವಾಗಿ ಲಿಂಗೈಕ್ಯರಾದ ಕಾರಣ, ಅದೊಂದು ದೊಡ್ಡ ಕೊರತೆ ಉಳಿದುಕೊಂಡಿತು.

ಡಾ. ಸ.ಜ.ನಾಗಲೋಟಿಮಠ ಅವರೊಂದಿಗೆ ನಾನು ಮತ್ತು ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಆಗಾಗ ಈ ಕರಣ ಹಸಿಗೆ ಕುರಿತು ಬಹಳಷ್ಟು ಚರ್ಚೆ ಮಾಡುತ್ತಿದ್ದೆವು. ಈ ವಿಷಯವಾಗಿ ಅವರೂ ತುಂಬ ಮುತುವರ್ಜಿ ವಹಿಸಿ ಓದಿ, ವಿಶ್ಲೇಷಣೆ ಮಾಡುತ್ತಿದ್ದರು. ಆಗ ವರ್ತಮಾನ ಪತ್ರಿಕೆಗಳಲ್ಲಿ ಬ್ರಿಟಿಷ್ ವೈದ್ಯ ವಿಜ್ಞಾನಿಗಳು ಗರ್ಭದಲ್ಲಿರುವ ಶಿಶುವಿಗೆ ಕಿವಿ ಕೇಳುತ್ತದೆ ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರು. ಈ ವಿಷಯವನ್ನು ಚನ್ನಬಸವಣ್ಣನವರು ತಮ್ಮ ಕರಣ ಹಸಿಗೆಯಲ್ಲಿ ದಾಖಲಿಸಿದ್ದಾರೆ, ಹೀಗಾಗಿ ಚನ್ನಬಸವಣ್ಣನವರ ಈ ಕರಣ ಹಸಿಗೆ ಕೇವಲ ತತ್ವಜ್ಞಾನದ ಗ್ರಂಥವಲ್ಲ, ಇಂದಿನ ವೈದ್ಯಶಾಸ್ತ್ರದ ವಿವರಗಳು ಹಾಗೂ ಕರಣ ಹಸಿಗೆಯಲ್ಲಿ ಉಲ್ಲೇಖಿತ ಸಂಗತಿಗಳು ಒಂದೇ ಆಗಿವೆ. ಹೀಗಾಗಿ ಕರಣ ಹಸಿಗೆ ವೈದ್ಯಕೀಯ ಅಧ್ಯಯನ ಮಾಡುವವರಿಗೆ ಪ್ರಮುಖ ಆಕರ ಗ್ರಂಥವೂ ಆಗಿದೆ ಎಂಬುದನ್ನು ಡಾ. ಸ.ಜ.ನಾಗಲೋಟಿಮಠ ಅವರು ಮೇಲಿಂದ ಮೇಲೆ ಹೇಳುತ್ತಿದ್ದರು.

ಅಲೆಕ್ಸಿಸ ಕೆರೆಲ ಎಂಬ ಪಾಶ್ಚಿಮಾತ್ಯ ವಿದ್ವಾಂಸ ‘‘Man, the Unknown’’ ಎಂಬ ಗ್ರಂಥವನ್ನು ರಚಿಸಿದ್ದಾನೆ. ಮನುಷ್ಯ ದೇಹದ ಆಕಾರ ಮತ್ತು ಗಾತ್ರ, ದೇಹದ ಹೊರ ಮತ್ತು ಒಳಮೈಗಳು, ದೇಹದ ರಚನೆ-ದೇಹದ ಕಣಗಳು, ರಕ್ತ-ಜೈವಿಕ ಮಾಧ್ಯಮ ಮೊದಲಾದ ವಿಷಯಗಳ ಕುರಿತು ಈ ಗ್ರಂಥ ಅಪರೂಪವೆನ್ನುವ ಮಾಹಿತಿಗಳನ್ನು ನಮಗೆ ನೀಡುತ್ತದೆ. ಈ ಗ್ರಂಥ ರಚನೆ ಕಾರಣವಾಗಿ ಅವರಿಗೆ ಜಗತ್ ಪ್ರಸಿದ್ಧವಾದ ನೊಬೆಲ್ ಪ್ರಶಸ್ತಿ ಬಂದಿತು. ಈ ಗ್ರಂಥವನ್ನು ಕು.ಶಿ. ಹರಿದಾಸಭಟ್ಟ ಮತ್ತು ಉ. ಲಕ್ಷ್ಮೀನಾರಾಯಣಾಚಾರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಾಯಶಃ ಚನ್ನಬಸವಣ್ಣನವರು ಈ ಕಾಲಘಟ್ಟದಲ್ಲಿದ್ದರೆ, ಅವರಿಗೂ ಇಂತಹ ಮಹೋನ್ನತ ಪ್ರಶಸ್ತಿ ಬರುವ ಸಂಭವವಿತ್ತು. ಅಷ್ಟೊಂದು ಸೂಕ್ಷ್ಮವಾದ ವಿವರಗಳನ್ನು ಕರಣ ಹಸಿಗೆಯಲ್ಲಿ ಅವರು ಕಟ್ಟಿಕೊಟ್ಟಿದ್ದಾರೆ.

ವಿಶ್ವದೊಳಗಿನ ಎಲ್ಲ ವಸ್ತುಗಳಿಗಿಂತಲೂ ಅದ್ಭುತವಾಗಿ ಮನುಷ್ಯನ ಸೃಷ್ಟಿಯಾಗಿದೆ. ವಿಶ್ವದೊಳಗಿದ್ದೂ ವಿಶ್ವಾತೀತನಾಗಬಲ್ಲ, ತನ್ನಂತರಂಗದೊಳಗೆ ಅಖಿಲಾಂಡಕೋಟಿ ಬ್ರಹ್ಮಾಂಡಗಳನ್ನು ಸೃಷ್ಟಿಸಬಲ್ಲ, ಅಣು ಪರಮಾಣುವಿನಂತೆ ಪರಮ ಶಕ್ತಿಯುತವಾದುದು ಈ ಮನುಷ್ಯ ಸೃಷ್ಟಿ. ಈ ಮನುಷ್ಯ ದೇಹ ಮತ್ತು ಪ್ರಕೃತಿ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಅಂತೆಯೆ ಪ್ರಣವದುತ್ಪತ್ತಿಯಿಂದ ಈ ಕರಣ ಹಸಿಗೆಯನ್ನು ಚನ್ನಬಸವಣ್ಣನವರು ಪ್ರಾರಂಭ ಮಾಡುತ್ತಾರೆ.

ಆಧುನಿಕ ಶಿಕ್ಷಣ ಪಡೆದ ವಿಶ್ವವಿದ್ಯಾಲಯದ ವಿದ್ವಾಂಸರಿಗೆ ಕಬ್ಬಿಣದ ಕಡಲೆಯಾದ ಈ ಕರಣ ಹಸಿಗೆ ಕುರಿತು ವಿವರಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ೧೬ನೇ ಶತಮಾನದಲ್ಲಿ ವಿರೂಪಾಕ್ಷ ಪಂಡಿತ ಬರೆದ ಚನ್ನಬಸವ ಪುರಾಣದ ೫೮ನೇ ಸಂಧಿಯಲ್ಲಿ ಈ ಕರಣ ಹಸಿಗೆಯ ಕುರಿತು ಸುದೀರ್ಘವಾದ ವ್ಯಾಖ್ಯಾನವನ್ನು ಮಾಡಿದ್ದಾನೆ. ಸಿದ್ಧರಾಮೇಶ್ವರನಿಗೆ ಲಿಂಗದೀಕ್ಷೆ ಕೊಡುವ ಸಂದರ್ಭದಲ್ಲಿ ಈ ಕರಣ ಹಸಿಗೆಯನ್ನು ಚನ್ನಬಸವಣ್ಣನವರು ವಿವರಿಸುವ ಸಂದರ್ಭ ಅಲ್ಲಿದೆ. ಓದುಗರು ಇದನ್ನು ಸಾವಧಾನಚಿತ್ತದಿಂದ ಅವಲೋಕಿಸಿದರೆ ಅರ್ಥವಾಗುವುದು ಎಂದು ಭಾವಿಸಿದ್ದೇನೆ.

ಚನ್ನಬಸವಣ್ಣನವರು ಲಿಂಗದೀಕ್ಷೆ ಪಡೆದ ಸಿದ್ಧರಾಮನಿಗೆ ಈ ಕರಣ ಹಸಿಗೆಯ ವಿವರ ಹೇಳುವೆ ಲಕ್ಷ್ಯಗೊಟ್ಟು ಕೇಳು ಎಂದು ವಿವರಿಸುತ್ತಾರೆ. ಸತ್ ಕರ್ಮಾಚಾರಿಗಳು ಸ್ವರ್ಗವನ್ನುಭವಿಸಿ, ಪಾಪಿಗಳು ಯಮಲೋಕದಲ್ಲಿ ನಕರಯಾತನೆಯನ್ನುಭವಿಸಿ, ಹಾಗೆ ಫಲಾನುಭವವು ತೀರಿದ ನಂತರ ಆಯೆರಡು ವಿಧದವರೂ ಕೂಡ ಜನ್ಮದ ಬಾಗಿಲಾದ ಆಕಾಶ, ವಾಯು, ಅಗ್ನಿ, ಜಲ, ಪೃಥ್ಯಿ ಎಂಬ ಐದು ಭೂತಗಳಲ್ಲಿ ಸೇರಿ, ಗಿಡ ಬಳ್ಳಿ ಮೊದಲಾದುವುಗಳಾಗಿ ಜನಿಸಿ, ಅವುಗಳ ಸಾರವಾದ ಅನ್ನರೂಪದಿಂದ ಪ್ರಾಣಿಗಳ ದೇಹದಲ್ಲಿ ಸೇರಿ, ರೇತಸ್ಸಾಗಿ ಪರಿಣಮಿಸಿ, ಅದರಿಂದ ಪಿಂಡವಾಗಿ ಮರಳಿ ಹುಟ್ಟುವರು. ಈ ಎಲ್ಲ ಜಾತಿಗಳೂ ಸೇರಿ ೮೪ ಲಕ್ಷ ಜೀವರಾಶಿಗಳಾಗುವುವು ಹೇಗೆಂದರೆ ಗಿಡ ಮರ ಬಳ್ಳಿ ಮೊದಲಾದ ಉದ್ಭಿಜ್ಜಗಳಲ್ಲಿ ೨೦ ಲಕ್ಷ ಭೇದವು, ಮಂತ್ರಜಗಳಾದ ದೇವತೆಗಳಲ್ಲಿ ೧೪ ಲಕ್ಷ ಭೇದವು. ಅಂಡಜಗಳಾದ ಪಕ್ಷಿಸರ್ಪಾದಿಗಳಲ್ಲಿ ೨೦ ಲಕ್ಷ ಭೇದವು. ಸ್ವೇದಜಗಳಾದ ಕ್ರಿಮಿಕೀಟಾದಿಗಳಲ್ಲಿ ೧೧ ಲಕ್ಷ ಭೇದವು. ಜರಾಯುಜಗಳಾದ ಮಾನವ ಜಾತಿಗಳಲ್ಲಿ ೯ ಲಕ್ಷ ಭೇಧವು ಪಶುಮೃಗಾದಿಗಲ್ಲಿ ೧೦ ಲಕ್ಷ ಭೇದವು ಇರುವುವು. ಜೀವನು ಮಂತ್ರಜಗಳ ಹೊರತು ಉಳಿದ ನಾಲ್ಕು ಬಗೆಯ ಜನ್ಮಗಳಲ್ಲಿ ಬಂದು ಅಯಾಯ ಜಾತಿಗೆ ವಿಹಿತವಾದ ನಡೆಗಳನ್ನಾಚರಿಸಿ, ಅಳಿದು, ಗೋಜನ್ಮವನ್ನು ಪಡೆದು, ಅಲ್ಲಿಂದ ಮಾನವಜನ್ಮಕ್ಕೆ ಬರುವನು. ಆ ಜನ್ಮಾದಿ ವಿವರಣೆ ಹೀಗಿದೆ – ಸ್ತ್ರೀಯರು ಋತುಕಾಲದಲ್ಲಿ ಪುರಷನೊಡನೆ ಕೊಡಲಾಗಿ, ಅವಳ ಶೋಣಿತವೂ ಪುರುಷನ ವಿರ‍್ಯವೂ ಒಂದುಗೂಡುವವು. ಅದು ೫ ದಿನಕ್ಕೆ ಮಾಂಸದ ಉಂಡೆಯುಂತಾಗುವುದು. ೨೦ ದಿನಕ್ಕೆ ಇಟ್ಟಿಯಾಗುವುದು. ೨೫ ದಿನಕ್ಕೆ ಅವಯವಗಳು ಮೂಡುವುವು. ೧ ತಿಂಗಳಗೆ ಶಿರಸ್ಸು ಹುಟ್ಟುವುದು. ೨ನೆ ತಿಂಗಳಗೆ ತೋಳ್ತೊಡೆಗಳು, ತಿಂಗಳು ೩ ಕ್ಕೆ ಕೈಕಾಲು ಬೆರಳುಗಳೂ, ೪ ಕ್ಕೆ ಮುಖ ಕಣ್ಣು ಕಿವಿಗಳು ಗುದ ಮೇಢ್ರ ರೋಮಗಳು, ೫ ಕ್ಕೆ ನವದ್ವಾರಗಳು ಹೊಟ್ಟೆಯೂ, ೬ ಕ್ಕೆ ಉಗುರು ತಲೆಕೂದಲು ಮೂಡುವುವು. ೭ ಕ್ಕೆ ಅವಯವದ ಸಂಧಿಬಂಧಗಳು ಬಲಿದು ಚೈತನ್ಯವು ಹುಟ್ಟಿ ತಾಯಿಯುಂಡ ಅನ್ನದ ರಸವು ಹೊಕ್ಕುಳ ನಾಳದ್ವಾರದಿಂದ ಆ ಶಿಶುವಿನ ಉದರಕ್ಕೆ ಸೇರುವುದು. ತಿಂಗಳು ೮ ರಲ್ಲಿ ಗರ್ಭಕೋಶದೊಳಗೆ ಬಚ್ಚಲ ಹುಳುವಿನಂತೆ ಒದ್ದಾಡುತ್ತ, ತನ್ನ ಜನ್ಮಸ್ಥಿತಿಯನ್ನು ಪರಿಭಾವಿಸಿ ದುಃಖಿಸುತ್ತಿರುವುದು. ಒಂಬತ್ತನೆಯ ತಿಂಗಳಲ್ಲಿ ಶಿವಧ್ಯಾನ ಪರವಾಗಿ ಮುಂದೆ ಮುಕ್ತನಾಗುವೆನೆಂದು ನೆನೆಯುತ್ತಿದ್ದು ನವಮಾಸ ತುಂಬಿದ ಬಳಿಕ ಸೂತಿಕಾವಾಯುವಿನಿಂದ ಧೊಪ್ಪನೆ ಬಡಿಯಲ್ಪಟ್ಟು, ಬಲುನೊಂದು. ತಲೆಕೆಳಗಾಗಿ, ಪರ‍್ವವಿವೇಕವನ್ನು ಮರೆದು ಮೂರ್ಛೆಗೊಂಡು, ಯೋನಿದ್ವಾರದಿಂದ ತಲೆ ಮುಂದಾಗಿ ತೂರಿ ಬರುವುದು. ಸ್ತ್ರೀಯು ರಜಸ್ವಲೆಯಾಗಿ ಸ್ನಾನಗೊಂಡ ಒಂದನೆಯ ದಿನದಲ್ಲಿ ಪುರುಷಸಂಗದಿಂದ ಪಿಂಡವು ನಿಂತರೆ, ಕುಲಗೇಡಿಯಾದ ಸ್ತ್ರೀಶಿಶುವು ಜನಿಸುವುದು. ಎರಡನೆಯ ದಿನದಲ್ಲಿ ನಿಂತ ಪಿಂಡವು ಪಾಪಿ, ಮೂರನೆಯ ದಿನದಲ್ಲಿ ಕಳ್ಳ, ೪ ರಲ್ಲಿ ಕಪಟ, ೫ ರಲ್ಲಿ ಮತಿವಂತ , ೬ ರಲ್ಲಿ ವ್ರತಭಷ್ಟ, ೭ರಲ್ಲಿ ದಯಾಶಾಲಿ, ೮ ರಲ್ಲಿ ದರಿದ್ರ, ೯ ರಲ್ಲಿ ಶ್ರೀಮಂತ, ೧೦ ರಲ್ಲಿ ಕಾಮುಕ, ೧೧ ರಲ್ಲಿ ವೈರಾಗ್ಯಶಾಲಿ, ೧೨ ರಲ್ಲಿ ಕೋಪಿಷ್ಟ, ೧೩ ರಲ್ಲಿ ಪಂಡಿತ, ೧೪ ರಲ್ಲಿ ರೋಗಿ, ೧೫ ರಲ್ಲಿ ರಾಜ ೧೬ ರಲ್ಲಿ ಶಿವಯೋಗಿಯಾಗಿ ಜನಿಸುವನು. ಸ್ತ್ರೀ ಪುರುಷರು ಸಂಭೋಗ ಸಮಯದಲ್ಲಿ ಅನ್ಯರಲ್ಲಿ ಮನಸ್ಸಿಟ್ಟದ್ದರೆ ಜನಿಸುವವನು ಜಾರನಾಗುವನು. ಶಿವಧ್ಯಾನತತ್ಪರರಾಗಿದ್ದರೆ ಭಕ್ತ ಸಂಪನ್ನನಾಗಿ ಹುಟ್ಟುವನು. ಸರ‍್ಯೋದಯ ಕಾಲಕ್ಕೆ ಹುಟ್ಟದವನು ಅತ್ಯಂತ ಕೋಪಿಯು, ಮಧ್ಯಾಹ್ನದಲ್ಲಿ ಜನಿಸಿದವನು ಪಾಪಿಯು, ಸಾಯಂಕಾಲದಲ್ಲಿ ಹುಟ್ಟಿದನು ಮನಸ್ತಾಪವುಳ್ಳನಾಗುವನು. ರಾತ್ರಿಯಲ್ಲಿ ಹುಟ್ಟಿದವನು ಶಾಂತ್ಯಾದಿ ಸದ್ಗುಣ ಭರಿತನಾಗುವನು. ಸಂಯೋಗ ಕಾಲದಲ್ಲಿ ಪುರುಷ ವಿರ‍್ಯವು ಹೆಚ್ಚಾದರೆ ಪಿಂಡವು ಗಂಡಾಗುವುದು, ಮಹಿಳೆಯ ಶೋಣಿತವು ಹೆಚ್ಚಾಗಿದ್ದರೆ ಹೆಣ್ಣಾಗುವುದು. ಎರಡು ಸಮನಾಗಿದ್ದರೆ ನಪುಂಸಕನಾಗುವುದು. ಈ ಸ್ಥೂಲ ಶರೀರದಲ್ಲಿ ಪಿತ್ತವು ಒಂದು ಬಳ್ಳವೂ, ಶ್ಲೇಷ್ಮವು ಎರಡು ಬಳ್ಳವೂ, ಮಾಂಸವು ಇಪ್ಪತ್ತು ಸಾವಿರ ಫಲದ ತೂಕವೂ, ಕೊಬ್ಬು ೧೦ ಸಾವಿರ ಫಲದ ತೂಕವು, ರಕ್ತವು ೧೫ ಸಾವಿರ ಫಲದ ತೂಕವೂ, ಮಜ್ಜೆಯು ೩ ಸಾವಿರ ಫಲದ ತೂಕವು, ರೇತಸ್ಸು ೧೨ ಸಾವಿರ ಫಲದ ತೂಕವು, ಇರುವುವು ಮೂರೂವರೆ ಕೋಟಿ ರೋಮಗಳಿರುವುವು. ೩೬೦ ಮೂಳೆಗಳಿರುವುವು. ಈ ಸಪ್ತಧಾತುಗಳಲ್ಲಿ ನರಗಳು ರೇತಸ್ಸು ಮೂಳೆ ರೋಮಗಳು ಸಹ ತಂದೆಯಂಶವು ಚರ್ಮ ಮಾಂಸ ರಕ್ತಗಳು ತಾಯ ಅಂಶಗಳು, ಮೇಲೆ ಹೇಳಿದ ಆಕಾಶಾದ ಪಂಚಭೂತಗಳನ್ನು ಒಂದೊಂದನ್ನೆರಡೇರಡಾಗಿ ಭಾಗಿಸಿ, ಪ್ರತಿಯೊಂದರ ಮೊದಲಭಾಗವನ್ನೂ ಮಹಾಭೂತವನ್ನಾಗಿಟ್ಟು, ಉಳಿದ ಒಂದೊಂದು ಭಾಗವನ್ನು ಎರಡೆರಡು ಭಾಗವನ್ನಾಗಿ ಮಾಡಿ, ಆ ಭಾಗಗಳನ್ನೇ ಮತ್ತೇ ೪-೪ ಭಾಗವನ್ನಾಗಿ ಮಾಡಿ, ಆ ೪ ಭಾಗವನ್ನು ಅದರದರ ಎರಡನೆ ಭಾಗದಲ್ಲಿ ಸೇರಿಸದೆ, ಉಳಿದುವುಗಳ ಎರಡೆರಡನೆಯ ಭಾಗದಲ್ಲಿ ಒಂದೊಂದನ್ನು ಕೂಡಿಸಿದರೆ, ೨೫ ತತ್ವಗಳಾಗುವುವು. ಹೇಗೆಂದರೆ-ಆಕಾಶದ ಎರಡನೆ ಭಾಗವು ಜ್ಞಾತೃವು, ವಾಯುವಿನ ೨ ನೇ ಭಾಗದಲ್ಲಿ ಕೂಡಿರುವುದೇ ಮನಸ್ಸು, ತೇಜಸ್ಸಿನ ೨ನೆ ಭಾಗದಲ್ಲಿ ಸೇರಿದುದೇ ಬುದ್ದಿಯು ಜಲದ ೨ ಭಾಗದಲ್ಲಿ ಸೇರಿದುದೇ ಚಿತ್ತವು, ಭೂಮಿಯ ೨ನೆ ಭಾಗದಲ್ಲಿ ಬೆರೆದುದೇ ಅಹಂಕಾರವು. ಇವು ಆಕಾಶದ ಪಂಚೀಕರಣಗಳು ಹೀಗೆಯೇ ವಾಯುವಿನ ದ್ವಿತೀಯ ಭಾಗವನ್ನು ಇತರ ಭೂತಗಳ ದ್ವಿತೀಯ ಭಾಗದೊಡನೆ ಕೂಡಿಸುತ್ತ ಹೋದರೆ ಪ್ರಾಣ-ಅಪಾನ-ಸಮಾನ-ಉದಾನ-ವ್ಯಾನವೆಂಬ ಪಂಚವಾಯುಗಳು; ಅಗ್ನಿಯಿಂದ-ನೇತ್ರ, ಶೋತ್ರ, ತ್ವಕ್ಕು, ಜಿಹ್ವಾ, ರೂಪ, ರಸ, ಗಂಧ ಎಂಬ ವಿಷಯಗಳು, ಪೃಥ್ವಿಯಿಂದ- ವಾಕ್ಕು, ಪಾಣಿ, ಪಾದ, ವಾಯು, ಉಪಸ್ಥ, ಎಂಬ ೫ ರ‍್ಮೇಂದ್ರಿಯಗಳು ಉದಿಸಿದುವು. ಇನ್ನು ಪಿಂಡಾಂಶ ಪಂಚೀಕರಣವೆಂತೆದರೆ-ಪಂಚಭೂತಗಳೇ ಪಂಚಾಂಶ ಪಂಚೀಕೃತವಾಗಿ ದೇಹವೆನಿಸುವುವು. ದೇಹದಲ್ಲಿರುವ ಅಸ್ಥಿ, ತೊಕ್ಕು, ನಾಡಿ, ಮಾಂಸ, ರೋಮ-ಇವೈದು ಪೃಥ್ವಿಯಿಂದಾದಂಶಗಳು. ಹಸಿವು, ನೀರಡಿಕೆ, ನಿದ್ರೆ, ಅಲಸ್ಯ, ಸಂಗ ಇವಿಷ್ಟೂ ಅಗ್ನಿಯಿಂದಾದ ಗುಣಗಳು, ಕೂಡುವುದು, ಅಗಲುವುದು, ಸುತ್ತುವುದು, ಹಾರುವುದು, ನಡೆಯುವುದು, ಇವಿಷ್ಟೂ ವಾಯುವಿನಿಂದಾದ ಗುಣಗಳು. ಅಜ್ಞಾನ, ಪ್ರೀತಿ, ದ್ವೇಷ, ನಾಚಿಕೆ, ಭಯ ಇವಿಷ್ಟೂ ಆಕಾಶದಿಂದಾದ ಗುಣಗಳು. ಹೀಗೆ ಸ್ಥೂಲದೇಹದಲ್ಲಿರುವ ಪಂಚಭೂತಗಳ ೨೫ ಗುಣಗಳಲ್ಲದೆ, ಸೂಕ್ಷö್ಮದೇಹದ ಪ್ರತಿಯೊಂದು ಭೂತದ ಸೂಕ್ಷಾö್ಮಂಶಗಳನ್ನೂ ಅದರದರ ವಿಷಯಗಳಿಂದ ಗುಣಿಸುವಾಗ ೭೫ ವಿಭೇದ ಗುಣಗಳು ಉಂಟಾಗುವುವು. ಹೇಗೆಂದರೆ ಭೂಮಿಗೆ ೫ ವಿಷಯಗಳಿರುವುದರಿಂದ, ಅದಕ್ಕೆ ೫ x ೫= ೨೫ ಗುಣಗಳು, ಜಲಕ್ಕೆ ೫ ವಿಷಯಗಳಿರುವುದರಿಂದ, ಅದಕ್ಕೆ ೫ x ೪ = ೨೦ ಗುಣಗಳು, ವಾಯುವಿಗೆ ೨ ವಿಷಯಗಳಿರುವುರಿಂದ ಅದಕ್ಕೆ ೫ x ೩= ೧೫ ಗುಣಗಳು, ಆಕಾಶಕ್ಕೆ ೧ ವಿಷಯವಿರುವುದರಿಂದ ಅದಕ್ಕೆ ೫ x ೨= ೧೦ ಗುಣಗಳು. ಆಕಾಶಕ್ಕೆ ೧ ವಿಷಯವಿರುವುದರಿಂದ ಅದಕ್ಕೆ ೫ x ೧= ೫ ಗುಣಗಳು ಅಂತೂ ೭೫ ಮಿಶ್ರಗುಣಗಳಾದುವು. ಇನ್ನು ಭೂತಪಂಚೀಕರಣವು ಹೇಗೆಂದರೆ- ಪೃಥ್ವಿಯಲ್ಲಿರುವ ಪೃಥಿವ್ಯಂಶವೇ ವಾಯು, ಪೃಥ್ವಿಯಲ್ಲಿಯ ಜಲಾಂಶವೇ ಗಂಧ, ಅದರ ಆಕಾಶಾಂಶವೇ ಚಿತ್ತವು. ಇದರಂತೆಯೇ ಜಲಭೂತದಲ್ಲಿ ಕ್ರಮವಾಗಿ ಗುಹ್ಯ, ರಸ, ಜಿಹ್ವಾ, ಅಪಾನ, ಬುದ್ದಿ, ಎಂಬಿವುಗಳೂ, ಅಗ್ನಿಯಲ್ಲಿ ಪಾದ, ರೂಪ, ನೇತ್ರ, ಉದಾನ, ಅಹಂಕಾರವೆಂಬಿವುಗಳು, ವಾಯುವಿನಲ್ಲಿ ಪಾಣಿ, ಸ್ಪರ್ಶ ತ್ವಕ್ಕು ವ್ಯಾನ, ಮನಸ್ಸು ಎಂಬಿವುಗಳು ಆಕಾಶದಲ್ಲಿ ವಾಕ್ಕು, ಶಬ್ದ, ಶೋತ್ರ, ಸಮಾನ, ಜ್ಞಾನವೆಂಬಿವುಗಳು ಪಂಚೀಕೃತಗಳು.

ಬಳಿಕ ಜ್ಞಾನೇಂದ್ರಿಯಗಳು ಅವುಗಳ ವಿಷಯ, ಭೂತ, ಅಧಿದೇವತೆ ಮೊದಲಾದ ವಿಷಯಗಳು ಹೇಗೆಂದರೆ- ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ ಎಂಬಿವುಗಳೇ ಜ್ಞಾನೇಂದ್ರಯಗಳು. ಇವುಗಳಲ್ಲಿ ಶ್ರೋತ್ರಕ್ಕೆ ಅಕಾಶ ಭೂತ, ದಿಕ್ಕುಗಳು ಆಧಿದೇವತೆ, ಶಬ್ದವೇ ವಿಷಯ, ಅಕ್ಷರಾತ್ಮಕ, ಅನಕ್ಷರಾತ್ಮಕ- ಇವೆರಡು ಶಬ್ದಭೇದಗಳು. ತ್ವಕ್ಕಿಗೆ ವಾಯು ಭೂತ, ಇಂದ್ರ ಅಧಿದೇವತೆ, ಸ್ವರ್ಶವೇ ವಿಷಯ, ಶೀತ-ಉಷ್ಣ-ಮೃದು-ಕಠಿನ- ಇವೇ ಸ್ಪರ್ಶಭೇದಗಳು. ನೇತ್ರಕ್ಕೆ- ಅಗ್ನಿ ಭೂತ, ಸರ‍್ಯನು ಅಧಿದೇವತೆ, ರೂಪೇ ವಿಷಯ, ಶ್ವೇತ-ಪೀತ-ಹರಿತ-ಕಪೋತ-ಕೃಷ್ಣ-ಮಾಂಜಿಷ್ಟ ವೆಂಬಿವಾರೇ ರೂಪಭೇದಗಳು. ಜಿಹ್ವೇಂದ್ರಯಕ್ಕೆ-ಜಲವೇ ಭೂತ, ವರುಣನು ಆಧಿದೇವತೆ, ರಸವೇ ವಿಷಯ, ಮಾಧರ‍್ಯ-ಲವಣ ಆಮ್ಲ-ತಿಕ್ತಕಟು ಕಷಾಯ-ಎಂಬಿವಾರು ರಸಭೇದಗಳು. ಘ್ರಾಣೇಂದ್ರಿಯಕ್ಕ ಪೃಥ್ವಿಯೇ ಭೂತ, ಅಶ್ವಿನಿದೇವತೆಗಳು ಆಧಿದೇವತೆ, ಗಂಧವೆ ವಿಷಯ, ಸುಗಂಧ-ದುರ್ಗಂಧವೆಂಬೆರಡು ಗಂಧಭೇದಗಳು.

ಇನ್ನೂ ಕರ್ಮೇಂದ್ರಿಯಗಳಿಗೆ ಹೇಗೆಂದರೆ-ವಾಕ್ಕು, ಪಾದ, ಪಾಣಿ, ವಾಯು, ಗುಹ್ಯ, ಎಂಬಿವೇ ಕರ್ಮೇಂದ್ರಿಯಗಳು. ಇವುಗಳಲ್ಲಿ ವಾಕ್ಕಿಗೆ ನಾಗವಾಯುವು, ಸರಸ್ವತಿ ಆಧಿದೇವತೆ, ಸುವಾಕ್ಯ ದರ‍್ವಾಕ್ಯಗಳೇ ವಿಷಯವು. ಪಾಣಿಂದ್ರಿಯಕ್ಕೆ ಕರ‍್ಮವಾಯು, ಇಂದ್ರನಧಿದೇವತೆ ದಾನ-ಆದಾನವೆಂಬ ವಿಷಯವು. ಪಾದೇಂದ್ರಿಯಕ್ಕೆ ಕೃಕರವಾಯು ವಿಷ್ಣುವಧಿದೇವತೆ, ಗಮನಾಗಮನಗಳ ವಿಷಯವು. ಪಾಯ್ವಿಂದ್ರಿಯಕ್ಕೆ ದೇವದತ್ತವಾಯು ಮೃತ್ಯುವಧಿದೇವತೆ, ಸರ್ಜನ ವಿಸರ್ಜನ ವಿಷಯಗಳು ಗುಹ್ಯೇಂದ್ರಿಯಕ್ಕೆ ಧನಂಜಯವಾಯು, ಬ್ರಹ್ಮನು ಅಧಿದೈವ, ಆನಂದ ಆನಾನಂದಗಳೇ ವಿಷಯವು.

ಇನ್ನು ದಶವಾಯುಗಳ ಸ್ಥಾನರ‍್ಮಾದಿಗಳು ಹೇಗೆಂದರೆ- ಪ್ರಾಣ ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕರ‍್ಮ, ಕೃಕರ, ದೇವದತ್ತ, ಧನಂಜಯ, ಎಂಬಿವೇ ದಶವಾಯುಗಳು. ಇವುಗಳಲ್ಲಿ ಪ್ರಾಣವಾಯುವಿಗೆ- ಇಂದ್ರನೀಲವರ್ಣ, ಹೃದಯದಲ್ಲಿ ನೆಲೆ, ಇದು ಪದದ ಹೆಬ್ಬೆರಳಿನಿಂದ ಹಿಡಿದು ತಲೆಕೂದಲ ತುದಿಯವರೆಗೂ ದೇಹದಲ್ಲಿ ವ್ಯಾಪಿಸಿ, ಉಚ್ಚ್ವಾಸನಿಶ್ವಾಸಗಳನ್ನು ಮಾಡಿಸುತ್ತ, ಆಹಾರವನ್ನು ಜೀರ್ಣಗೊಳಿಸುತ್ತಿರುವುದು. ಆಪಾನವಾಯುವು ಹಸುರುಬಣ್ಣ. ಇದು ಗುದಸ್ಥಾನದಲ್ಲಿದ್ದು ಮಲಮೂತ್ರವಿಸರ್ಜನಗಳನ್ನು ಮಾಡಿಸುತ್ತ, ಗುದದ್ವಾರವನ್ನು ಮುಚ್ಚಿ ಅನ್ನ ರಸವನ್ನು ವ್ಯಾಪನಗೊಳಿಸುತ್ತಿರುವುದು. ಸಮಾನವಾಯುವು ಕಪ್ಪು ಬಣ್ಣ, ಇದು ನಾಭಿಸ್ಥಾನದಲ್ಲಿದ್ದು ಆಪಾದಮಸ್ತಕವಾಗಿ ದೇಹದಲ್ಲೆಲ್ಲ ವ್ಯಾಪಿಸಿ, ಅನ್ನರಸವನ್ನು ರೋಮಗಳಿಗೆಲ್ಲ ಏರಿಸುವುದು. ಉದಾನವಾಯುವು-ಎಳೆ ಮಿಂಚಿನಬಣ್ಣ, ಇದು ಕೊರಲಿನಲ್ಲಿದ್ದು, ಸೀನು, ಕೆಮ್ಮು, ಕನಸು, ಏಳಿಸುವುದು, ಕುಳ್ಳಿರಿಸುವುದು, ಓಕರಿಸುವುದು. ಆದನ್ನು ತಡೆಯುವುದು ಈ ಕೆಲಸಗಳನ್ನು ಮಾಡಿಸುತ್ತ, ಇಳಿವ ಅನ್ನರಸವನ್ನು ಮತ್ತೆ ಮೇಲಕ್ಕೆರಿಸುತ್ತಿರುವುದು. ವ್ಯಾನವ್ಯಾಯುವು ಹಾಲಿನ ಬಣ್ಣ. ಇದು ಅಂಗಸಂಧಿಗಳಲ್ಲಿದ್ದು ಮುದುಡಿದ ಅಂಗವನ್ನು ತಿದ್ದುವ ಕೆಲಸವನ್ನು ಮಾಡಿಸುತ್ತ, ಅಲ್ಲಲ್ಲಿಗೆ ತಕ್ಕಷ್ಟು ಅನ್ನಪಾನಗಳನ್ನು ಒದಗಿಸಿ ಕೊಡುತ್ತಿರುವುದು. ಇವೇ ಪ್ರಾಣ ಪಂಚಕಗಳು; ಶ್ರೋತ್ರಾದಿಜ್ಞಾನೇಂದ್ರಿಯ ಚೇಷ್ಟಿಗೆ ಹೇತುಗಳು. ಇನ್ನು ೫ ಉಪವಾಯುಗಳಲ್ಲಿ ನಾಗವಾಯುವು ಹೊಂಬಣ್ಣ, ಇದು ರೋಮನಾಳಗಳಲ್ಲಿದ್ದು ನಿಶ್ಚಲತೆಯಿಂದ ಹಾಡಿಸುತ್ತಿರುವುದು. ಕರ‍್ಮವಾಯುವು-ಬಿಳಿಯ ಬಣ್ಣ, ಇದು ಉದರಲಲಾಟಸ್ಥಾನದಲ್ಲಿದ್ದು. ದೇಹಪುಷ್ಟಿಯನ್ನು ಮಾಡುತ್ತ, ಕಣ್ಣು ಬಾಯಿಗಳನ್ನು ಮುಚ್ಚಿ ತೆರೆಯಿಸುತ್ತಿರುವುದು. ಕೃಕರವೆಂಬ ವಾಯುವು- ಕಾಡಿಗೆಯ ಬಣ್ಣ, ಇದು ಮೂಗಿನ ತುದಿಯಲ್ಲಿದ್ದುಕೊಂಡು, ಕ್ಷುತ್ತೃಷಾದಿರ‍್ಮಂಗಳನ್ನುಂಟುಮಾಡಿ, ಗಮನಾಗಮನಗಳನ್ನು ಮಾಡಿಸುತ್ತಿರುವುದು, ದೇವದತ್ತವಾಯುವು- ಸ್ಫಟಿಕವರ್ಣವು, ಇದು ಗುಹ್ಯಕಟಿಸ್ಥಾನಗಳಲ್ಲಿದ್ದುಕೊಂಡು, ಕುಳ್ಳಿರುವ, ಏಳುವ, ಮಲಗುವ, ಹೊರಳುವ, ಮಾತನಾಡುವ, ನಗುವ ಕೆಲಸಗಳನ್ನು ಮಾಡಿಸುವುದು. ಧನಂಜಯವಾಯುವು, ನೀಲಿ ಬಣ್ಣ, ಇದು ಬ್ರಹ್ಮರಂಧ್ರ ಸ್ಥಾನದಲ್ಲಿದ್ದು ಕಿವಿಗಳಲ್ಲಿ ಸಮುದ್ರ ಘೋಷದಂತೆ ಯಾವಾಗಲು ಮೊರೆಯುತ್ತಿದ್ದು, ಮರಣಕಾಲಕ್ಕೆ ಸದ್ದಲಿದಿರುವುದು ಮತ್ತು ಸತ್ತ ಬಳಿಕ ೫ ದಿನದವರೆಗೂ ದೇಹದಲ್ಲಿದ್ದು ಅದನ್ನು ಊದಿಸಿ ಒಡಿಸಿ ತಾನು ದೇಹವನ್ನು ಬಿಡುವುದು. ಈ ಐದು ವಾಯುಗಳು ವಾಗಾದಿರ‍್ಮೇಂದ್ರಿಯ ಚೇಷ್ಟಿಗಳಿಗೆ ಕಾರಣ ವಾಗಿರುವುವು.

ಇನ್ನು ಕರಣಗಳ ವಿವರ-ಆತ್ಮನು, ಆಕಾಶದೊಡನೆ ಬೆರೆಯಲು ಜ್ಞಾನವು ಹುಟ್ಟಿತು. ವಾಯುವಿನೊಡನೆ ಕೂಡಲು ಮನಸ್ಸಾಯಿತು. ಅಗ್ನಿಯೊಡನೆ ಕೂಡಲು ಅಹಂಕಾರವು ಹುಟ್ಟಿತು, ಜಲದೊಡನೆ ಕೂಡಲು ಬುದ್ದಿ ಹುಟ್ಟಿತು. ಪೃಥ್ವಿಯೊಡನೆ ಕೂಡಲು ಚಿತ್ತವಾಯಿತು. ಇವೇ ಜ್ಞಾನಕರಣಗಳು. ಇವುಗಳಲ್ಲಿ ಮನಸ್ಸಿಗೆ ವಾಯುಭೂತವು, ಚಂದ್ರನು ಆಧಿದೇವತೆ, ಸಂಕಲ್ಪ ವಿಕಲ್ಪಗಳೇ ಕರ‍್ಯವು. ಅಹಂಕಾರಕ್ಕೆ ಅಗ್ನಿಯು ಭೂತ, ರುದ್ರನಧಿದೇವತೆ, ಹಮ್ಮನ್ನು ತಾಳುವುದೇ ಕರ‍್ಯವು. ಬುದ್ಧಿಗೆ-ಅಪ್ಪು ಭೂತವು, ಬ್ರಹ್ಮನಧಿದೇವತೆ, ನಿಚ್ಚೈಸುವಿಕೆಯೇ ಕರ‍್ಯವು. ಚಿತ್ತುಕ್ಕೆ ಪೃಥ್ವಿಯೇ ಭೂತವು, ವಿಷ್ಣುವಧಿದೇವತೆಯು, ಅವಧರಿಸಿ ಆನಂದಿಸುವುದೇ ಕರ‍್ಯವು.

ಈ ಮೇಲೆ ಹೇಳಿದ ಭೂತಪಂಚಕ, ವಾಯುಪಂಚಕ, ಜ್ಞಾನೇಂದ್ರಿಯ ಪಂಚಕ, ರ‍್ಮೇಂದ್ರಿಯಪಂಚಕ, ಕರಣ ಚತುಷ್ಟಯ- ಇವಿಷ್ಟೂ ಸೇರಿ ೨೪ ತತ್ವಗಳಾದುವು. ಜ್ಞಾನಕರಣವೂ ಸೇರಿದರೆ ೨೫ ಆಗುವವು. ಈ ತತ್ವಗಳಿಂದ ಕೂಡಿದುದೇ ದೇಹವು. ಇಂತಹ ದೇಹವನ್ನು ತಾಳಿದ ಆತ್ಮನಿಗೆ ಜ್ಞಾನೇಂದ್ರಯವೇ ಚಿತ್ ಸ್ವರೂಪವಾಗಿರುವುದು. ಪರಶಿವನೇ ಆಧಿದೇವತೆಯು, ಈ ಆತ್ಮನು ರ‍್ವಾಂಗದಲ್ಲೂ ತುಂಬಿಕೊಂಡು ಚೈತನ್ಯ ರೂಪನಾಗಿ, ತೊಳಗಿ ಬೆಳಗುತ್ತಿರುವನು. ಈ ಆತ್ಮನು ಜೀವಾತ್ಮ, ಅಂತರಾತ್ಮ, ಪರಮಾತ್ಮನೆಂದು ಮೂರು ಭೇದವನು ಪಡೆದಿರುವನು. ಸಂಸಾರ ಸುಖದುಃಖಬದ್ಧನೇ ಜೀವಾತ್ಮನು, ಈ ಸುಖದುಃಖಗಳನ್ನು ಜೀವಾತ್ಮನು, ಸುಖದುಃಖಗಳನ್ನು ಹೊಂದಿಯೂ ನಿರಾಕಾರಿಯಾಗಿರುವವನು ಪರಮಾತ್ಮನು. ಇನ್ನು ಸ್ಥೂಲ, ಸೂಕ್ಷ್ಮ, ಕಾರಣವೆಂಬ ತನುತ್ರಯಗಳ ವಿವರವೆಂದರೆ-ಪಂಚಭೂತಮಯವಾದುದೇ, ಸ್ಥೂಲದೇಹವು, ಈ ೧೭ ತತ್ವಗಳಿಂದಾದುದೇ ಲಿಂಗ ಭೌತಿಕವೆಂಬ ಸೂಕ್ಷ್ಮಶರೀರವು. ಅಹಂಕಾರ ಚಿತ್ತ ಆತ್ಮಸಂಯೋಗದಿಂದಾದುದೇ ಕಾರಣತನುವು.

ಇನ್ನು ಅಂಗ, ಪ್ರತ್ಯಂಗ, ಸಾಂಗಾಂಗ ಉಪಾಂಗಗಳ ಭೇದವನ್ನು ಹೇಳುತ್ತಾರೆ. ಶಿರಸ್ಸು, ಎದೆ ತೊಡೆ ಭುಜ ಇವುಗಳು ಅಂಗವು ; ಮುಖ, ಮೂಗು, ಕಿವಿ ತುಟಿ ಕಣ್ಣು ಬೆರಳು ಇವು ಪ್ರತ್ಯಂಗಗಳು; ಕರಣಚತುಷ್ಟಯವು ಸಾಂಗಾಂಗವು ವಸ್ತ್ರ ಆಭರಣ ಅನುಲೇಪನಗಳು ಉಪಾಂಗಗಳು. ಇನ್ನು ದಶನಾಡಿಗಳ ವಿವರವು ಹೇಗೆಂದರೆ- ಎಡಮೂಗಿನ ಚಂದ್ರನಾಡಿಯು ಇಡಾ, ಬಲಮೂಗಿನ ಸರ‍್ಯನಾಡಿಯು ಪಿಂಗಳ, ಮಧ್ಯದ ನಾಡಿಯೇ ಸುಷುಮ್ನೆಯು, ಬಲಗಣ್ಣಿನಲ್ಲಿ ಗಾಂಧಾರಿಯು, ಎಡಗಣ್ಣಿನಲ್ಲಿ ಹಸ್ತ ಜಿಹ್ವೆಯು, ಬಲಗಿವಿಯಲ್ಲಿ ಪೂಷೆ, ಎಡಗವಿಯಲ್ಲಿ ಪಯಸ್ಸಿನಿ, ಮೇಢ್ರನಾಳವೇ ಆಲಂಬುವು, ಗುದನಾಳವೇ ಲಕುಹವು, ನಾಭಿನಾಳವೇ ಶಂಕಿನಿಯು.

ನಂತರ ಪೃಥ್ವಿ ಅಪ್ಪು ತೇಜಸ್ಸು ವಾಯು ಆಕಾಶ ಸರ‍್ಯ ಚಂದ್ರ ಆತ್ಮ ಎಂಬ ಅಷ್ಟಮೂರ್ತಿಗಳ ಸಂಬಂಧದ ಮದಗಳಿರುವುವು. ಆತ್ಮನು ಪೃಥ್ವೀ ಮದದ ಸಂಬಂಧವುಳ್ಳವನಾದರೆ ದೇಹಗುಣಭರಿತನಾಗಿ ವಸ್ತ್ರಾಭರಣ ತಾಂಬೂಲಾದಿಗಳನ್ನು ಅಪೇಕ್ಷಿಸುವನು. ಜಲಮದಿಂದ ಕೂಡಿದರೆ ಸಂಸಾರಿಯಾಗಿ, ಅದು ಬೇಕು ಇದು ಬೇಕು ಎಂದು ಅಪೇಕ್ಷಿಸುತ್ತಿರುವನು. ಆಗ್ನಿಮದದಿಂದ ಕೂಡಿದರೆ ಕಾಮರಸವುಳ್ಳವನಾಗಿ, ನೋಡಬೇಕು ಮಾತನಾಡಿಸಬೇಕು ಎಂಬ ಮೊದಲಾದ ಇಚ್ಛೆಯುಳ್ಳವನಾಗುವನು. ವಾಯುಮದವೇರಿದರೆ ಗಮನೋನ್ಮುಖವಾಗುವನು. ಅಕಾಶ ಮದದವನು ವಾಹನವನದನೇರವೇಕೆಂದದು ಆಸೆಪಡುವನು. ರವಿಮದವೇರಿದರೆ ಕೋಪವೇರಿಸುವನು. ಚಂದ್ರಮದವೆತ್ತಿದರೆ ಚಿಂತಾಕುಲನಾಗುವನು. ಆತ್ಮಮದವಂಟಿದರೆ ಅಹಂಕಾಯುಕ್ತನಾಗುವನು.

ಇನ್ನು ಸಪ್ತಧಾತುಗಳ ಉತ್ಪತ್ತಿ ವರ್ಣಾಂಶಾದಿ ವಿಷಯವೆಂದರೆ-ರಸ, ರುಧಿರ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ಲ ಎಂಬವುಗಳೇ ಸಪ್ತಧಾತುಗಳು. ಉಂಡನ್ನವೇ ಪ್ರತಿ ಏಳು ದಿನಕ್ಕೆ ಕ್ರಮವಾಗಿ ಮೇಲೆ ಕಂಡ ರಸಾದಿನಾಮಕಗಳುಳ್ಳುದಾಗುವುದು. ಮೊದಲನೆ ರಸವು ಕಪಿಲವರ್ಣವಾಗುವುದು. ಪೃಥಿವ್ಯಂಶದೇಹವನ್ನು ನಡುಗಿಸುವುದು. ರಕ್ತವು ನೀಲವರ್ಣವು. ಜಲಾಂಶದೇಹವನ್ನು ಕಳವಳಗೊಳಿಸುವುದು. ಮೇದಸ್ಸು ಕೆಂಪು ಬೆರೆದ ಹೊಂಬಣ್ಣ, ಅದು ವಾಯ್ಯಂಶತನುವನ್ನು ಹೆದರಿಸುವುದು. ಅಸ್ಥಿಯ ಕಪ್ಪು ಬಣ್ಣದ ಧಾತು. ಇದು ಅಕಾಶಾಂಶದೇಹವನ್ನು ಹುಚ್ಚು ಹುಚ್ಚಾಗಿ ನಡಿಸುವುದು ಮಜ್ಜೆಯು ತಾಮ್ರವರ್ಣವುಳ್ಳುದು, ಅದು ರವ್ಯಂಶದೇಹವನ್ನು ಕಳವಳಿಸುವಂತೆ ಮಾಡುವುದು. ಶುಕ್ಲವು ಬಿಳಿಯಬಣ್ಣದು, ಅದು ಚಂದ್ರಾಂಶತನುವನ್ನು ನಡುಗು ಹುಟ್ಟಿಸುವುದು.

ಬಳಿಕ ಸಪ್ತವ್ಯಸನಗಳ ವಿವರವು ಹೇಗೆಂದರೆ-ತನು ಮನ ಧನ ರಾಜ್ಯ ವಿಶ್ವ ಉತ್ಸಾಹ ಸೇವಕರ ವ್ಯಸನವೆಂಬಿವುಗಳು ಏಳಾಗಿರುವುವು. ತನುವ್ಯಸನವೇರಿದರೆ ದೇಹವು ಕೃಶವಾಯ್ತೆನ್ನುವನು. ಮನೋವ್ಯಸನವಂಟಿದರೆ ಕಳವು ಹಾದರಗಳನ್ನು ಮಾಡುವನು. ವಾಹನ ವಸ್ತಾçಭರಣ ಛತ್ರಪಾದುಕಾದಿಗಳನ್ನಪೇಕ್ಷಿಸುವನು. ವಿಶ್ವವ್ಯಸನದಿಂದ ಮನೆ ಹೊಲ ಗದ್ದೆಗಳನ್ನು ಬಯಸುವನು. ಉತ್ಸಾಹವ್ಯಸನದಿಂದ ಪುತ್ರಮಿತ್ರಭಾಂಧವಾದಿಗಳನ್ನು ಬಯಸುವನು. ಸೇವಕವ್ಯಸನವುಂಟಾದರೆ ಕೊಳ್ಳುವೆನು ಕೊಡುವೆನು ಉಡುವೆನು ತೊಡುವೆನು ಎಂಬ ಇಷ್ಟಚಿಂತೆಯುಳ್ಳವನಾಗುವನು.

ಇನ್ನು ಷಡೂರ‍್ಮಗಳು ಯಾವುವೆಂದರೆ-ಹಸಿವು, ನೀರಡಿಕೆ, ಶೋಕ, ಮೋಹ, ಜನನ, ಮರಣ ಎಂಬಿವುಗಳು. ಇವುಗಳಲ್ಲಿ ಹಸಿವು, ಬಾಯಾರಿಕೆಗಳು ಪ್ರಾಣಧರ‍್ಮವು, ಮೋಹಶೋಕಗಳು ಮನೋಧರ‍್ಮವು, ಜನನಮರಣಗಳು ದೇಹಧರ‍್ಮವು.

ಅರಿಷಡ್ವರ್ಗಗಳಾವುವೆಂದರೆ- ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ರ‍್ಯಗಳು, ಷಡ್ ಭ್ರಮೆಗಳಾವುವೆಂದರೆ- ಜಾತಿ, ವರ್ಣ, ಕುಲ, ಗೋತ್ರ, ಆಶ್ರಮ, ನಾಮ ಎಂಬಿವುಗಳು. ಷಡ್ಭಾವವಿಕಾರಗಳಾವುವೆಂದರೆ- ಅಸ್ತಿ, ಜಾಯತೆ, ವಿಪರಿಣಮತೆ ವಿವರ‍್ಧತೆ ಅಪಕ್ಷೀಯತೆ, ವಿನಶ್ಯತೆ ಎಂಬಿವು. ಅಸ್ತಿಯೆಂದರೆ ಉಂಟೆನಿಸುವುದು, ಜಾಯತೆಯೆಂದರೆ-ತಾಯ ಗರ್ಭದಿಂದಹುಟ್ಟುವುದು, ವಿಪರಿಣಮತೆಯೆಂದರೆ ಆಕಾರಗೊಳ್ಳವುದು, ವಿವರ‍್ಧತೆಯೆಂದರೆ ಬೆಳೆಯುವುದು, ಅಪಕ್ಷೀಯತೆಯೆಂದರೆ ಕ್ಷಯಿಸುವುದು, ವಿನಶ್ಯತೆಯೆಂದರೆ ಕೆಡುವುದು. ಪಂಚಕೋಶಗಳಾವುವೆಂದರೆ-ಅನ್ನಮಯ, ಪ್ರಾಣಮಯ, ವಿಜ್ಞಾನಮಯ, ಆನಂದಮಯ, ಮನೋಮಯ ಎಂಬಿವುಗಳು.

ಗುಣತ್ರಯಲಕ್ಷಣಗಳು- ಸತ್ವಗುಣಕ್ಕೆ-ಸತ್ಯ, ಹರ್ಷ, ಕ್ಷಮೆ, ಜ್ಞಾನ, ಮೌನ, ಶ್ರದ್ಧೆ, ಧರ‍್ಯ, ವಿವೇಕ, ಸಾಹಸ, ನಿಶ್ಚಯ ಎಂಬ ೧೦ ಲಕ್ಷಣಗಳು ರಜೋಗುಣಕ್ಕೆ-ಧೈರ‍್ಯ, ಕೋಪ, ದ್ವೇಷ, ಮಚ್ಚರ, ಅಹಂಕಾರ, ಅಪ್ರಿಯ, ಡಂಭ, ಉದ್ಯೋಗ, ವಾಚಕ, ವಾದ ಎಂಬ ೧೦ ಲಕ್ಷಣಗಳು ತಮೋಗುಣಕ್ಕೆ ನಿದ್ರೆ, ಆಲಸ್ಯ, ಮೋಹ, ಚಾಪಲ್ಯ, ಹಿಂಸೆ, ನಿಂದೆ, ಹೀನವೃತ್ತಿ ಪಾಪಬುದ್ದಿ ಎಂಬ ೮ ಲಕ್ಷಣಗಳು.

ಅಂತರಂಗದ ಅಷ್ಟಮದಗಳು-ಸಂಸ್ಥಿತೆ, ತೃಣೀಕೃತೆ, ವರ‍್ತಿನಿ, ಕ್ರೋಧಿನಿ, ಗಂಧಚಾರಿಣಿ, ಮೋಹಿನಿ, ಅತಿಚಾರಣಿ, ವಾಸಿನಿಯೆಂಬಿವುಗಳು.

ಬಹಿರಂಗದ ಅಷ್ಟಮದಗಳು- ಕುಲ, ಛಲ, ಧನ, ಯೌವ್ವನ, ರೂಪ, ವಿದ್ಯಾ, ರಾಜ್ಯ, ತಪಸ್ಸು- ಇವುಗಳಿಂದ ಬಂದ ಮದಗಳು.

ತಾಪತ್ರಯಗಳು- ಆಧ್ಯಾತ್ಮಿಕ, ಆಧಿಭೌತಿಕ, ಅಧಿದೈವಿಕವೆಂದು. ಇವುಗಳಲ್ಲಿ ಆಧ್ಯಾತ್ಮಿಕವು- ಮಾನಸ, ಶಾರೀರವೆಂದು ಎರಡು ಪ್ರಕಾರವಾಗಿರುವುದು. ಮದಮತ್ಸರಾದಿಗಳಿಂದುಂಟಾದ ದುಃಖವು ಮಾನಸವು. ಜ್ವರಾದಿರೋಗಳಿಂದುಂಟಾದ ದುಃಖವು ಶಾರೀರಕವು. ರಾಜರು ಚೋರರು ಪಶು ಪಕ್ಷಿ ಮೃಗಾದಿಗಳಿಂದುಂಟಾದ ದುಃಖವು ಅಧಿಭೌತಿಕವು. ಜನನ ಮರಣ ಹಸಿವು ತೃಷೆ ಅಜ್ಞಾನ ಮೊದಲಾದುವುಗಳಿಂದುಂಟಾದ ದುಃಖವು ಅಧಿದೈವಿಕವು. ಹೀಗೆ ಜನ್ಮಜನ್ಮಾಂತರದಲ್ಲಿ ಹುಟ್ಟಿ ತಾಪತ್ರಯಗಳ ಭ್ರಮೆಯಿಂದ ನೊಂದು ಬೇಸತ್ತ ಜೀವನಗೆ ಜನ್ಮಾಂತರಾರ್ಜಿತ ಸುಕೃತವಾಸನೆಯ ಬಲದಿಂದ ಶಿವಭಕ್ತಿ ಹುಟ್ಟುವುದು. ಅದರಿಂದ ಶಿವಜ್ಞಾನ ಸಿದ್ಧಿಯಾಗುವುದು ಆ ಜ್ಞಾನವು- ಪ್ರತ್ಯಕ್ಷ, ಪರೋಕ್ಷ, ಅಪರೋಕ್ಷವೆಂದು ಮೂರು ತೆರನಾಗಿರುವುದು. ಸ್ಥೂಲಾದಿಶರೀರತ್ರಯಗಳಲ್ಲಿಯೂ, ಶ್ರೋತ್ರಾದಿಜ್ಞಾನೇಂದ್ರಿಯ ಪಂಚಕದಿಂದಲೂ, ಶಬ್ದಾದಿಪಂಚವಿಷಯಗಳಿಂದಲೂ, ಜ್ಞಾನಾದಿ ಅಂತಃಕರಣ ಪಂಚಕದಿಂದಲು, ತಿಳಿದುಕೊಳ್ಳುವುದೆ ಪ್ರತ್ಯಕ್ಷಜ್ಞಾನವು. ದೇಶಕಾಲಗಳನ್ನೂ, ಲೋಕಾಂತರವನ್ನೂ, ಜನ್ಮಾಂತರ ಸುಖದುಃಖಗಳನ್ನೂ ಸುಕರ‍್ಮ ದುಷ್ಕರ್ಮಗಳನ್ನೂ, ಬಂಧಮೋಕ್ಷಗಳನ್ನೂ, ವೇದಾಗಮಾದಿಗಳ ವಿಚಾರದಿಂದ ತಿಳಿದುಕೊಳ್ಳುವುದೇ ಪರೋಕ್ಷಜ್ಞಾನವು. ಬಹಿರಂಗದಲ್ಲಿ ಕಾಣುವ ಭೂತಪಂಚಕವೂ, ಅಂತರಂಗದಲ್ಲಿರುವ ಸೂಕ್ಷ್ಮಭೂತಪಂಚಕವು, ಒಂದೇ ಎಂದು ತಿಳಿದು ತದ್ಭೂತಗುಣರ‍್ಮಾದಿ ವಿಷಯಗಳನ್ನೆಲ್ಲ ತಾನಲ್ಲವೆಂದರಿತು, ಜೀವ ಪರಮರ ಐಕ್ಯವನ್ನು ನಿರ್ಧರಿಸಿ, ತನ್ನ ಹೊರತು ಬೇರೊಂದು ವಸ್ತುವಿಲ್ಲವೆಂಬುದನ್ನು ಶ್ರೀಗುರುಕಟಾಕ್ಷದಿಂದ ನಿಜವಾಗಿ ಅರಿತುಕೊಳ್ಳವುದೇ ಅಪರೋಕ್ಷಜ್ಞಾನ ಎಂದು ಚನ್ನಬಸವಣ್ಣನವರು ಅಪ್ಪಣೆಕೊಡಿಸಲು, ಸಿದ್ಧರಾಮೇಶನು ಸಂತುಷ್ಟನಾಗಿ ನಮಸ್ಕರಿಸುವನು.

ಇದಿಷ್ಟು ಚನ್ನಬಸವ ಪುರಾಣದಲ್ಲಿ ಕರಣ ಹಸಿಗೆ ಕುರಿತಾಗಿ ಬಂದ ವಿವರಣೆ. ಇದನ್ನು ಕೇವಲ ಓದುತ್ತ ಹೋದರೆ ಸಾಕು, ನಿಜವಾದ ದೇಹಜ್ಞಾನವಾಗುವುದು. ಇವುಗಳಿಗೆ ಇನ್ನೂ ವಿಸ್ತಾರವಾದ ವ್ಯಾಖ್ಯಾನವನ್ನು ಬರೆದರೆ, ಖಂಡಿತವಾಗಿಯೂ ನಮ್ಮ ಇಂದಿನ ವೈದ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನಿಜವಾದ ಜ್ಞಾನ ದೊರೆಯುವುದರಲ್ಲಿ ಎರಡು ಮಾತಿಲ್ಲ.

Share This Article
Leave a comment

Leave a Reply

Your email address will not be published. Required fields are marked *