ಚರ್ಚೆ: ಲಿಂಗಾಯತರು ಬಸವ ಮಾರ್ಗದಲ್ಲಿ ಹೋಗುವುದು ಹಿಂದುತ್ವವಾದಿಗಳಿಗೆ ಬೇಡ

ಚಾಮರಾಜನಗರ

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಚಾಮರಾಜನಗರ ಬಸವ ಕೇಂದ್ರದ ಎನ್ರಿಚ್ ಮಹದೇವಸ್ವಾಮಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

1) ಅಭಿಯಾನದ ಮೇಲೆ, ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಉದ್ವೇಗ ಬಂದಿರುವುದು ಏಕೆ?

ಬಸವ ಸಂಸ್ಕೃತಿ ಅಭಿಯಾನವು ಲಿಂಗಾಯತ ಧರ್ಮ, ಸಾಮಾಜಿಕ ನ್ಯಾಯ ಮತ್ತು ವೈಚಾರಿಕ ಸ್ವಾತಂತ್ರ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿತು. ಇದು ಹಿಂದುತ್ವದ ಏಕಮುಖ ಧಾರ್ಮಿಕ, ರಾಜಕೀಯ ಆಕಾಂಕ್ಷೆಗಳಿಗೆ ತಾತ್ವಿಕ ಸವಾಲು ಎಸೆದಿದೆ.

ಅಭಿಯಾನವು ಜನರಲ್ಲಿ ಬೌದ್ಧಿಕ ಚೇತನತೆ, ವಿಚಾರಶೀಲತೆ, ಸಮಾನತೆಯ ಪ್ರಜ್ಞೆ ಮೂಡಿಸಿದ್ದು ಕೆಲವರಿಗೆ ಅಸಹನೀಯವಾಗಿದೆ. ಲಿಂಗಾಯತರು ಮತ್ತೆ ಬಸವ ಮಾರ್ಗಕ್ಕೆ ಹಿಂತಿರುಗಿ ಧಾರ್ಮಿಕ-ರಾಜಕೀಯ ಸ್ವಾಯತ್ತತೆ ಸ್ಥಾಪಿಸಬಹುದಾದ ಸಾಧ್ಯತೆ ಅವರನ್ನು ಭಯಪಡಿಸಿದೆ.

2) ಲಿಂಗಾಯತರ ಮೇಲೆ ಕೆಲವು ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಲಿಂಗಾಯತರ ವಿರುದ್ಧ ಸಮಾವೇಶ, ಹೋರಾಟ ಮಾಡುವ ಬೆದರಿಕೆ ಹಾಕಿದ್ದಾರೆ ಇವರ ಉದ್ದೇಶವೇನು?

ಈ ರೀತಿಯ ಪ್ರತಿಕ್ರಿಯೆಗಳು ಎರಡು ಕಾರಣಗಳಿಂದ ಬರುತ್ತಿವೆ:

ರಾಜಕೀಯ ಒತ್ತಡ: ಕೆಲ ಧಾರ್ಮಿಕ ನಾಯಕರು ರಾಜಕೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ.

ಧಾರ್ಮಿಕ ಪ್ರಾಬಲ್ಯದ ಸ್ಪರ್ಧೆ – ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕರೆ ಕೆಲವು ಪಂಥಗಳು ತಮ್ಮ ಪ್ರಭಾವ ಕಳೆದುಕೊಳ್ಳುವ ಭಯದಿಂದ ಈ ರೀತಿ ಪ್ರತಿಕ್ರಿಯೆ ನೀಡುತ್ತಿವೆ.

ಲಿಂಗಾಯತ ಚಿಂತನೆಯ ಮುನ್ನಡೆಯನ್ನು ತಡೆದು, ಜನರಲ್ಲಿ ಗೊಂದಲ ಸೃಷ್ಟಿಸುವುದು ಅವರ ಉದ್ದೇಶ.

ಲಿಂಗಾಯತ ಧರ್ಮದ ಬೇಡಿಕೆಯನ್ನು ಮುನ್ನೆಲೆಗೆ ತಂದ ಅಭಿಯಾನ

3) ಲಿಂಗಾಯತ ಪೂಜ್ಯರು ಹಾಗೂ ಮುಖಂಡರ ವಿರುದ್ಧ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?

ಪೂಜ್ಯರು, ಮುಖಂಡರು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧದ ಭಾಷೆ ಅಜ್ಞಾನ, ಅಸಹಿಷ್ಣುತೆ ಮತ್ತು ಧಾರ್ಮಿಕ ಅಸಹನೆಯ ಫಲ. ಬಸವ ಸಂಘಟನೆಗಳು ಶಾಂತಿಯುತವಾಗಿ, ಆದರೆ ದೃಢವಾಗಿ ಪ್ರತಿಕ್ರಿಯಿಸಬೇಕು. ನಾವು ಅಸಭ್ಯತೆಯೆದುರು ನಯವನ್ನು, ದ್ವೇಷದ ಎದುರು ಪ್ರೀತಿ ತೋರಿಸುತ್ತೇವೆ.

4) ಈ ಸಂದರ್ಭದಲ್ಲಿ ಬಸವ ಸಂಘಟನೆಗಳು ಏನು ಮಾಡಬೇಕು?

  1. ಬಸವ ತತ್ವದ ಶಾಂತವಾದ ಬಲವನ್ನು ಪ್ರದರ್ಶಿಸಬೇಕು.
  2. ಸಂವಿಧಾನದ ಒಳಗೆ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮುಂದುವರಿಸಬೇಕು.
  3. ಜನರಲ್ಲಿ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು.
  4. ಪೂಜ್ಯರ ಹಾಗೂ ಮುಖಂಡರ ಬೆಂಬಲವಾಗಿ ಸಂಘಟಿತ ನಿಲುವು ತೆಗೆದುಕೊಳ್ಳಬೇಕು.
  5. ಯಾವುದೇ ಹಿಂಸಾತ್ಮಕ ಅಥವಾ ಅಸಭ್ಯ ರೀತಿಯ ಪ್ರತಿಕ್ರಿಯೆ ನೀಡಬಾರದು.

5) ಈ ಬೆಳವಣಿಗೆಗಳಿಂದ ಲಿಂಗಾಯಿತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆಯೇ? ಅದನ್ನು ಉಳಿಸಿಕೊಳ್ಳುವುದು ಹೇಗೆ?

ಹೌದು. ಅಭಿಯಾನದ ಮೇಲೆ ಬರುತ್ತಿರುವ ಅಸಹಿಷ್ಣು ಪ್ರತಿಕ್ರಿಯೆಗಳು ಲಿಂಗಾಯಿತರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಿವೆ.

ಇದನ್ನು ಉಳಿಸಿಕೊಳ್ಳಲು ಸಂವಿಧಾನ ಕೊಟ್ಟಿರುವ ಧಾರ್ಮಿಕ ಹಕ್ಕುಗಳನ್ನು ಪ್ರತಿಪಾದಿಸಬೇಕು. ಅವುಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಸಂಘಟಿತ ಧಾರ್ಮಿಕ ಶಿಕ್ಷಣ, ಸಂಶೋಧನೆ, ಮತ್ತು ಸಾಮಾಜಿಕ ಸೇವೆ ಮೂಲಕ ಲಿಂಗಾಯತ ಧರ್ಮದ ಜೀವಂತಿಕೆಯನ್ನು ತೋರಿಸಬೇಕು. ವಿವೇಕ, ನ್ಯಾಯ ಮತ್ತು ಶಾಂತ ಹೋರಾಟದ ಮೂಲಕ ನಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಸಂರಕ್ಷಿಸಿಕೊಳ್ಳಬೇಕು.

6) ಸಾರ್ವಜನಿಕ ಸಂವಾದದಲ್ಲಿ ನಾವು ಸಭ್ಯತೆ ಕಳೆದುಕೊಳ್ಳಬೇಕೆ? ಅವರದೇ ಭಾಷೆ ಬಳಸಬೇಕೇ?

ಇಲ್ಲ. ಬಸವ ತತ್ವ ನಮಗೆ ಸೌಜನ್ಯದ ಸಂವಾದ, ವಿಚಾರ ನಿಷ್ಠೆ ಮತ್ತು ನಯವಾದ ಧರ್ಮ ಕಲಿಸುತ್ತದೆ. ನಾವು ಹಿಂಸೆ ಅಥವಾ ಅವಮಾನಕ್ಕೆ ಪ್ರತಿಯಾಗಿ ಅದೇ ರೀತಿಯ ಭಾಷೆ ಬಳಸುವುದಾದರೆ ನಾವು ಬಸವ ತತ್ವದಿಂದ ದೂರ ಹೋಗುತ್ತೇವೆ.

ದಯವೇ ಧರ್ಮದ ಮೂಲವಯ್ಯ ಎಂದು ಬಸವ ತತ್ವ ಹೇಳುತ್ತದೆ. ಅಸಭ್ಯ, ಅವಮಾನಕಾರಿ ಭಾಷೆ ಬಳಸುವುದು ಬಸವ ಸಂಸ್ಕೃತಿಗೆ ವಿರುದ್ಧ.

7) ಈ ಸಮಯದಲ್ಲಿ ಬಸವಾದಿ ಶರಣರಿದ್ದರೆ ಏನು ಮಾಡುತ್ತಿದ್ದರು?

ಶರಣರು ಇಂತಹ ಸಂದರ್ಭಗಳಲ್ಲಿ ಸತ್ಯದ ಪರ ನಿಂತು ಭಯವಿಲ್ಲದೆ ಮಾತನಾಡುತ್ತಿದ್ದರು.
ವಿರೋಧಿಗಳನ್ನು ದ್ವೇಷದಿಂದಲ್ಲ, ಜ್ಞಾನದಿಂದ ಮತ್ತು ಪ್ರೀತಿಯಿಂದ ಗೆಲ್ಲುತ್ತಿದ್ದರು. ಅನ್ಯಾಯದ ಎದುರು ಮೌನ ಹಾಗೂ ಶಾಂತವಾದ ಪ್ರತಿಭಟನೆಯ ಮೂಲಕ ನ್ಯಾಯದ ಹೋರಾಟ ಮುಂದುವರಿಸುತ್ತಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
1 Comment
  • ಯಾರಿಗೂ ಜ್ಜಗ್ಗುವ ಬಗ್ಗುವಾ ಕೆಲಸ ಮಾಡಬಾರದು ಲಿಂಗಾಯತ ಧರ್ಮ ದ ಪ್ರಚಾರ ನಿರಂತರ ವಾಗಿ ನಡೆಯಲ್ಲಿ ಒಗ್ಗೂಡಿ ನಾನು ಲಿಂಗಾಯತ ಅಂತ ಹೆಮ್ಮೆ ಯಿಂದ ಹೇಳಿ 🙏💐👍❤️

Leave a Reply

Your email address will not be published. Required fields are marked *