ಕಲಬುರಗಿ
ಶಿಕ್ಷಣದಿಂದ ಬದುಕಿನ ಎಲ್ಲ ಕ್ಷೇತ್ರಗಳ ಬಡತನ ನಿವಾರಣೆ ಸಾಧ್ಯ ಎಂದು ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಪ್ರೊ. ಚನ್ನಾರೆಡ್ಡಿ ಪಾಟೀಲ ಹೇಳಿದರು.
ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಪೂಜ್ಯ ಡಾ. ಶಿವಕುಮಾರ ಸ್ವಾಮಿಗಳ 7ನೇ ಪುಣ್ಯಸ್ಮರಣೆ (ದಾಸೋಹ ದಿನ) ಅಂಗವಾಗಿ ಆಯೋಜಿಸಿದ್ದ ಪ್ರೇರಣೋಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶರಣರ ವಿಚಾರಗಳು ಉನ್ನತವಾಗಿದ್ದವು. ವಿದ್ಯಾರ್ಥಿಗಳು ಶರಣರ ಭಾವಚಿತ್ರದ ಹಿಂದಿನ ಚರಿತ್ರೆ ಅರ್ಥಮಾಡಿಕೊಳ್ಳಬೇಕು. ಅನ್ನ, ಅಕ್ಷರ, ಅರಿವು ತ್ರಿವಿಧ ದಾಸೋಹ ಮಾಡಿದ ಶಿವಕುಮಾರ ಸ್ವಾಮಿಗಳು ನಡೆದಾಡುವ ದೇವರು ಆಗಿದ್ದರು ಎಂದು ಅವರು ತಿಳಿಸಿದರು.
ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಿ, ನಿಜಶರಣ ಅಂಬಿಗರ ಚೌಡಯ್ಯನವರು ವಚನಕಾರರಲ್ಲೇ ಬಹಳ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವವಳ್ಳ ವಚನಕಾರರು ಎಂದು ಅಭಿಪ್ರಾಯಪಟ್ಟರು.

ನೇರ ಮತ್ತು ನಿಷ್ಠುರ ವ್ಯಕ್ತಿತ್ವದ ಅಂಬಿಗರ ಚೌಡಯ್ಯನವರು, ಸಮಾಜದಲ್ಲಿನ ಢಾಂಬಿಕ ನಡೆ, ಮೂಢನಂಬಿಕೆ, ಅವೈಚಾರಿಕತೆಯನ್ನು ಕಟುವಾಗಿ ವಿಮರ್ಶಿಸಿದ ಬಂಡಾಯ ವಚನಕಾರ ಎಂದು ತಿಳಿಸಿದರು.
ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ವಿನುತಾ ಆರ್.ಬಿ., ಸರ್ವಜ್ಞ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ಸರ್ವಜ್ಞ ಪದವಿ ಕಾಲೇಜಿನ ಪ್ರಾಚಾರ್ಯ ಪ್ರಭುಗೌಡ ಸಿದ್ಧಾರಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಭಾಗ್ಯಶ್ರೀ ಹಾಗೂ ತಂಡದವರು ಪ್ರಾರ್ಥನೆಗೀತೆ ಹಾಡಿದರು. ದೈಹಿಕ ಶಿಕ್ಷಕ ಗುರುರಾಜ ಜಾನಬೋ, ತ್ರಿವೇಣಿ ಭಾವಿ, ವೀಣಾ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
