ಕೊರೊನಾ ವೇಳೆ ದೇವರು ಎಲ್ಲಿಗೆ ಹೋಗಿದ್ದರು? ಡಾ. ಹುಲಿಕಲ್ ನಟರಾಜ್ ಪ್ರಶ್ನೆ

ಕಲಬುರಗಿ

ಕೋವಿಡ್ ಸಂದರ್ಭದಲ್ಲಿ ಗುಡಿ, ಚರ್ಚ್, ಮಸೀದಿಗಳಿಗೆ ಬೀಗ ಹಾಕಿದಾಗ ದೇವರು ಎಲ್ಲಿ ಹೋಗಿದ್ದರು? ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ. ಹುಲಿಕಲ್ ನಟರಾಜ ಪ್ರಶ್ನಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ರವಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಮೂರನೇ ಗೋಷ್ಠಿಯಲ್ಲಿ ‘ಕಲ್ಲು ದೇವರು ದೇವರಲ್ಲ ವಿಷಯ’ ಕುರಿತು ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣಪತಿ ಉತ್ಸವ ಸಂದರ್ಭದಲ್ಲಿ ಯುವಕರು ಕುಣಿಯುತ್ತಿದ್ದಾಗ ಒಬ್ಬ ಯುವಕ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ. ಗಣಪತಿಗೆ ಆ ಯುವಕನನ್ನು ಏಕೆ ತಡೆಯಲಾಗಲಿಲ್ಲ ಎಂದು ಕೇಳಿದರು.

ದೇವಸ್ಥಾನಗಳು ಸಮಾಧಾನ ಕೇಂದ್ರಗಳು. ಮನುಸ್ಸು ಪರಿವರ್ತನೆ ಮಾಡದ‌ ದೇವರ ಅಸ್ತಿತ್ವವೇನು ಎಂದರು.

ಬಸವಣ್ಣನವರ ಕಳಬೇಡ ಕೊಲಬೇಡ ಎನ್ನುವ ವಚನ ಮೈಗೂಡಿಸಿಕೊಂಡಿದ್ದರೆ ಪೊಲೀಸ್ ಠಾಣೆ ಇರುತ್ತಿರಲಿಲ್ಲ? ಕಲ್ಲು ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಬದಲು ತಂದೆ ತಾಯಿಗಳನ್ನು ಉಳಿಸಿಕೊಳ್ಳಬೇಕು ಎಂದು ವಿವರಿಸಿದರು.

ಇಂದು ವಿಜ್ಞಾನ ಬಹಳ ಮುಂದುವರಿದಿದೆ. ಮಂಗಳಗ್ರಹದಲ್ಲಿ ಮನೆ ಮಾಡಿ, ಭೂಮಿ ನನ್ನ ತವರು ಮನೆ ಎಂದು ಕರೆಯುವ ಕಾಲ ದೂರವಿಲ್ಲ. ಇಂದಿನ ತಾಂತ್ರಿಕಯುಗದಲ್ಲಿ ನಾವು ಅಪ್ ಡೇಟ್ ಆಗಬೇಕಿದೆ ಎಂದರು.

ಇಂತಹ ಸಭೆ ಸಮಾರಂಭಗಳು ನಮ್ಮ ಮನಸ್ಸನ್ನು ಸಾಣೆ ಹಿಡಿಯುತ್ತವೆ. ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನ ಕೊಡಬೇಕಾಗಿದೆ. ಪಂಚಾಂಗ ನೋಡುವ ಬದಲು ಪಂಚ ಅಂಗಗಳಿಗೆ ಹೆಚ್ಚಿನ ಗಮನ ಕೊಡಿ. ಇನ್ನೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುವುದು ಧರ್ಮ ಎಂದು ಹೇಳಿದರು.

ಸಮಾಜ, ದೇಹವನ್ನು ದಂಡಿಸುವ ದೇವರು ದೇವರಲ್ಲ. ದೇಹಕ್ಕೆ ಕಾಯಿಲೆ ಬಂದರೆ ಸರಿ ಹೋಗುತ್ತದೆ.‌ ಮನಸ್ಸಿಗೆ ಕಾಯಿಲೆ ಬಂದರೆ ದೇವರಪ್ಪ ಬಂದರೂ ಸಾಧ್ಯವಿಲ್ಲ. ದೇವರಿಗೂ ಮೋಸ ಮಾಡುವವರು ಮನುಷ್ಯರು ಮಾತ್ರ, ಎಂದು ವಿಷಾದ ವ್ಯಕ್ತಪಡಿಸಿದರು.

‘ಅನುಭವ ಮಂಟಪ ಅನುವು ಮಾಡಿದಾತ’ ವಿಷಯ ಕುರಿತು ಡಾ. ನೀಲಾಂಬಿಕಾ ಪೊಲೀಸಪಾಟೀಲ ಮಾತನಾಡಿ, ನೀಲಮ್ಮತಾಯಿಯವರ ಈ ವಚನ 60 ಸಾಲಿನದು. ಈ ವಚನ ಬಸವಣ್ಣನವರ ಚರಿತ್ರೆಯನ್ನು ಕಟ್ಟಿಕೊಡುತ್ತದೆ.‌ ಬಸವಣ್ಣನವರ ಕತೃತ್ವಶಕ್ತಿಗೆ ದರ್ಪಣದಂತಿದೆ ಎಂದು ತಿಳಿಸಿದರು.

ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡಲು ಅನುಭವ ಮಂಟಪವೇ ಮೂಲ‌ಕಾರಣ. ಅನುಭವ ಮಂಟಪಕ್ಕೆ ಪಾರ್ಲಿಮೆಂಟ್, ವಿಶ್ವಸಂಸ್ಥೆಗೆ ಹೋಲಿಸುತ್ತಾರೆ. ಆದರೆ ಅನುಭವ ಮಂಟಪಕ್ಕೆ ಸರಿ ಸಮಾನವಾದ ಶಬ್ದ ಮತ್ತೊಂದಿಲ್ಲ. ಅನುಭವ ಮಂಟಪ ಕಾಯಕ ಭಂಡಾರಿಗಳ ನೆಲೆ,‌ ದಾಸೋಹ ಸಂಪನ್ನರು ಇರುವ ತಾಣ ಎಂದರು.

ಅನುಭವ ಮಂಟಪ ಮತ್ತು ಮಹಾಮನೆ ಪರಿಕಲ್ಪನೆ ತಂದ ಬಸವಣ್ಣನವರು ಕಾರ್ತಿಕ ಕತ್ತಲಿನ ದೀಪ. ಅನುಭವ ಮಂಟಪದ ಮೂಲಕ ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಯಾಗಿದೆ. ಸಮಾಜದ ಕಟ್ಟ ಕಡೆಯ ಜನರಿಗೆ, ಸ್ತ್ರೀಯರಿಗೆ ಸಮಾನತೆ, ಸ್ವಾತಂತ್ರ್ಯ ತಂದು ಕೊಟ್ಟವರು ಬಸವಾದಿ ಶರಣರು ಎಂದು ವಿವರಿಸಿದರು.

ಸಿಯುಕೆ ಪ್ರಾಧ್ಯಾಪಕಿ ಡಾ.‌ಶಿವಗಂಗಾ ರುಮ್ಮಾ ಅಧ್ಯಕ್ಷತೆ ವಹಿಸಿದ್ದರು. ಕಮಲಾಬಾಯಿ ರವೀಂದ್ರ ಶಾಬಾದಿ ಇತರರು ವೇದಿಕೆಯಲ್ಲಿ ಇದ್ದರು.

ಸಾಕ್ಷಿ ಸತ್ಯಂಪೇಟೆ ನಿರೂಪಿಸಿದರು, ಜಯಶ್ರೀ ಚಟ್ನಳ್ಳಿ ಸ್ವಾಗತಿಸಿದರು, ಸಂಜಯ ಪಾಟೀಲ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *