ಬಸವಕಲ್ಯಾಣ:
ಬಸವಕಲ್ಯಾಣದಲ್ಲಿ ೪೬ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ-೨೦೨೫ ರ ನಿಮಿತ್ಯ ಹಮ್ಮಿಕೊಂಡಿರುವ ಸೈಕಲ್ ಜಾಥಾ ಕಾರ್ಯಕ್ರಮವನ್ನು ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸನ್ನಿಧಾನದಲ್ಲಿ ಜರುಗಿತು.
ಸೈಕಲ್ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು, ಪರಿಸರವನ್ನು ಸಂರಕ್ಷಿಸುವುದು ಮತ್ತು ಸಾರಿಗೆಗೆ ಒಂದು ಸುಲಭ, ಕೈಗೆಟುಕುವ ವಿಧಾನವನ್ನು ಒದಗಿಸುವುದಾಗಿದೆ.
ಸ್ನಾಯುಗಳನ್ನು ಬಳಪಡಿಸಲು, ತೂಕವನ್ನು ನಿಯಂತ್ರಿಸಲು, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆದುದರಿಂದ ಎಲ್ಲರೂ ಆದಷ್ಟು ಸೈಕಲ್ ಬಳಸಿದರೆ ಆರೋಗ್ಯ ಕಾಪಾಡುವುದರ ಜೊತೆಗೆ ಪರಿಸರದ ಸಂರಕ್ಷಣೆಯಾಗುತ್ತದೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಎಲ್ಲರೂ ಸೈಕಲ್ ಬಳಸೋಣ ಪರಿಸರ ಉಳಿಸೋಣ ಎಂದು ಪೂಜ್ಯರು ಆಶೀರ್ವಚನ ನೀಡಿದರು.
ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು.
ಬೀದರ ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆಯವರು ಸೈಕಲ್ ಜಾಥಾದ ಉದ್ಘಾಟನೆಯನ್ನು ನೇರವರಿಸಿ, ಇಂದಿನ ಯುವಪೀಳಿಗೆ ಸಾಧ್ಯವಾದಷ್ಟು ಸೈಕಲ್ ಬಳಕೆ ಮಾಡಬೇಕು. ಸ್ಥಳಿಯ ಸ್ಥಳಗಳಲ್ಲಿ ಹೋಗುವುದಾದರೆ ಸೈಕಲ್ ಬಳಕೆ ಮಾಡಬೇಕು. ಸೈಕಲ್ ಬಳಕೆ ಮಾಡಿದರೆ ಪರಿಸರ ಹಾಗೂ ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ಎಲ್ಲರೂ ಸೈಕಲ್ ಬಳಸೋಣ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ ಶಾಸಕರಾದ ಶರಣು ಸಲಗರ ಪೂಜ್ಯರು ಸೈಕಲ್ ಜಾಥಾ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ ಎಂದು ನುಡಿದರು.
ತಹಸೀಲ್ದಾರರಾದ ದತ್ತಾತ್ರೇಯ ಗಾಧಾ ಬಸವಗುರು ಪೂಜೆ ನೆರವೇರಿಸಿದರು.

ಬಸವೇಶ್ವರ ವೃತ್ತದಿಂದ ಸೈಕಲ್ ಜಾಥಾ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಿ, ಬಸವಕಲ್ಯಾಣದ ಅನುಭವ ಮಂಟಪದವರೆಗೆ ನಡೆಯಿತು. ಸೈಕಲ್ ಜಾಥಾದಲ್ಲಿ ಪಾಲ್ಗೊಂಡ ಎಲ್ಲರಿಗೂ ಅನುಭವಮಂಟಪದಲ್ಲಿ ಪ್ರಮಾಣ ಪತ್ರ ನೀಡಲಾಯಿತು.
ಜಾಥಾದಲ್ಲಿ ತಹಶೀಲ್ದಾರ ದತ್ತಾತ್ರೇಯ ಗಾದಾ, ಪೂಜ್ಯರು, ಗಣ್ಯರು ಹಾಗೂ ಶಾಲಾ ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಸೈಕಲ್ ಜಾಥಾ ಅಧ್ಯಕ್ಷರಾದ ಶರಣ ಲಕ್ಷ್ಮೀಕಾಂತ ಜ್ಯಾಂತೆ ಅವರು ಸ್ವಾಗತಿಸಿದರು. ನವಲಿಂಗ ಪಾಟೀಲ ವಚನ ಗಾಯನ ಮಾಡಿದರು. ದೀಪಕ ಠಮಕೆ ನಿರೂಪಿಸಿದರು.
