ಸುಖ ದಾಂಪತ್ಯಕ್ಕೆ ಶರಣರು ದಾರಿ ತೋರಿದರು: ಡಾ.ಮಹಾಂತ ಬಸವಲಿಂಗ ಶ್ರೀ

ಯಲಬುರ್ಗಾ

ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವನಿಗೆ.

ಸರಳತೆ ಮತ್ತು ತಿಳಿವಳಿಕೆಯಿಂದ ಕೂಡಿದ ದಾಂಪತ್ಯವು ಕಷ್ಟಕರ ಬದುಕಿನಲ್ಲಿ ಕೂಡ ನೆಮ್ಮದಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಸತ್ಯವನ್ನು ಜೇಡರ ದಾಸಿಮಯ್ಯನವರ ಹಲವಾರು ವಚನಗಳಲ್ಲಿ ಕಾಣಬಹುದಾಗಿದೆ.

ಶರಣಧರ್ಮವು ಸತಿ-ಪತಿ ಧರ್ಮವೇ ಆಗಿದೆ ಎಂದು ಬೇಲೂರು-ಬದಾಮಿ ಗುರು ಬಸವೇಶ್ವರ ಮಠದ ಪೂಜ್ಯ ಡಾ.ಮಹಾಂತ ಬಸವಲಿಂಗ ಸ್ವಾಮಿಗಳು ಹೇಳಿದರು.

ಯಲಬುರ್ಗಾ ತಾಲೂಕಿನ ಮರಕಟ್ಪ ಗ್ರಾಮದಲ್ಲಿ, ಬಸವ ಕೇಂದ್ರದ ವತಿಯಿಂದ, ಪರಮ ಪೂಜ್ಯ ಲಿಂಗೈಕ್ಯ ಶಿವಯ್ಯ ಸ್ವಾಮೀಜಿಯವರ 10 ನೇ ವರ್ಷದ ಪುಣ್ಯಸ್ಮರಣೋತ್ಸವ, 124 ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಬಸವ ಕೇಂದ್ರದ ಆರನೇ ವರ್ಷದ ವಾರ್ಷಿಕೋತ್ಸವ ನಿಮಿತ್ಯ ನಿರಂತರ ಏಳು ದಿನದ ಸಾಯಂಕಾಲದ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಅವರು ಅನುಭಾವ ನೀಡಿದರು.

ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದಾದ ಸತಿಪತಿಗಳ ಆತ್ಮ ಸಾಂಗತ್ಯದ ಭಕ್ತಿ ಮಂಗಳಮಯವಾದ ಶಿವನಿಗೆ ಹಿತ ಎನಿಸುವುದು. ಹಿತಕರವಾದ ದಾಂಪತ್ಯವು ಐಹಿಕ ವಸ್ತುಗಳ ಕೊರತೆಯನ್ನು ಕೂಡ ನಿವಾರಿಸುವಂಥ ಅರಿವನ್ನು ಮೂಡಿಸುತ್ತದೆ. ಏನೇ ಬಂದರೂ ತೃಪ್ತಭಾವದಿಂದ ಸ್ವೀಕರಿಸುವ ಸಂಯಮವನ್ನು ಸೃಷ್ಟಿಸುತ್ತದೆ. ‘ಬಂದುದನರಿದ ಬಳಸುವಳು, ಬಂದುದ ಪರಿಣಾಮಿಸುವಳು, ಬಂಧು ಬಳಗವ ಮರಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ! ರಾಮನಾಥಾ ಎಂದು ಜೇಡರ ದಾಸಿಮಯ್ಯನವರು ತಮ್ಮ ವಚನದಲ್ಲಿ ಧರ್ಮಪತ್ನಿ ದುಗ್ಗಳೆಯ ಗುಣಗಾನ ಮಾಡಿದ್ದಾರೆ.

ಅವರ ಅನ್ಯೋನ್ಯ ದಾಂಪತ್ಯವು ‘ಜೀವಭೇದವಿಲ್ಲ’ ಎಂಬ ಮೂಲತತ್ತ್ವದ ಸಂಕೇತವಾಗಿದೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ’ ಎಂದು ಹೇಳುವಲ್ಲಿ ಅವರು ಸ್ತ್ರೀವಾದಿ ನಿಲುವನ್ನು ತಾಳಿದ್ದಾರೆ. ಅಂತೆಯೆ ಸತಿ ಪತಿ ಒಂದಾಗುವಲ್ಲಿ ಪತಿಯ ಪಾತ್ರವೇ ಮುಖ್ಯ ಎಂಬುದನ್ನು ಸೂಚಿಸುತ್ತಾರೆ. ಸತಿಯ ಇಚ್ಛೆಯನ್ನರಿಯದೆ ಬದುಕುವ ಪತಿಯ ಭಕ್ತಿ ಅಮೃತದಲ್ಲಿ ವಿಷ ಕೂಡಿಸಿದಂತೆ ಎಂದು ಬಸವಾದಿ ಶಿವಶರಣರ ವಾಣಿ ಇರುವುದರಿಂದ ನಾವುಗಳು ಅಂಗ ಸತಿ ಲಿಂಗ ಪತಿ ಎಂಬಂತೆ ಸತಿಪತಿಗಳ ವಿಚಾರ ಭಾವನೆಗಳು ಒಂದಾಗಿ ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣ ಬಸವನಗೌಡ ಪೋಲಿಸಪಾಟೀಲ ಅವರು, ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣ ಶರಣೆಯರ ನಿಲುವಿನಲ್ಲಿ ‘ಕಾಯಕ‘ ಎಂದರೆ “ವ್ಯಕ್ತಿಯು ಮಾಡುವ ಕಸುಬು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತಂದುಕೊಡುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟು ಮಾಡುವಂತಿದ್ದು, ಒಟ್ಟು ಜನಸಮುದಾಯದ ಹಿತಕ್ಕೆ ನೆರವಾಗುವಂತಿರುವ ದುಡಿಮೆ” ದೇವರಿದ್ದಂತೆ, ಅದಕ್ಕಾಗಿ ನಾವು ಕಾಯಕಕ್ಕೆ ಮಹತ್ವ ಕೊಡಬೇಕು. ಆವ ಕಾಯಕವಾದರು ಸ್ವಕಾಯಕವ ಮಾಡಿ ಬದುಕಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಹನಮವ್ವ ದೊ. ಮುಸಲಾಪುರ, ಗ್ರಾಮ ಪಂಚಾಯತ ಅಧ್ಯಕ್ಷರು ವಹಿಸಿದ್ದರು. ಸಾನಿದ್ಯ ಪೂಜ್ಯ ಶಿವಾನಂದಸ್ವಾಮಿ ಮಕ್ಕಳ್ಳಿ ಅವರು ವಹಿಸಿದ್ದರು.

ಪ್ರಮುಖರಾಗಿ ಮರಿಯಪ್ಪ ಹುಗ್ಗಿ ಯಡ್ಡೋಣಿ, ನಾಗನಗೌಡ ಜಾಲಿಹಾಳ, ಹನಮಗೌಡ ಬಳ್ಳಾರಿ, ಸೋಮಲಿಂಗಪ್ಪ ಮಂತ್ರಿ, ಶಂಕ್ರಪ್ಪ ತರಲಕಟ್ಟಿ, ಅಮರೇಶಪ್ಪ ಬಳ್ಳಾರಿ, ಮರಕಟ್ಟ ಬಸವ ಕೇಂದ್ರದ ಅಧ್ಯಕ್ಷರು, ಶರಣ-ಶರಣೆಯರು ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *