ದಲಿತರ ವಿರುದ್ಧ ದಲಿತ, ಲಿಂಗಾಯತ ವಿರುದ್ಧ ಲಿಂಗಾಯತರನ್ನು ಬಳಸುವ ಕೆಲಸ ಬಿಜೆಪಿ, ಆರ್‌ಎಸ್‌ಎಸ್ ವ್ಯವಸ್ಥಿತವಾಗಿ ಮಾಡುತ್ತವೆಯೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ರಾಹುಲ್ ಖರ್ಗೆಯವರ ವಿರುದ್ಧ ಕೆಐಎಡಿಬಿ ಭೂಮಿ ಹಂಚಿಕೆಯಲ್ಲಿ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಾ ಬೆಳಗಾವಿಯ ಸುದ್ದಿಘೋಷ್ಠಿಯಲ್ಲಿ ಮಾತನಾಡಿದರು.
ಖರ್ಗೆ, ನಾರಾಯಣಸ್ವಾಮಿ ಇಬ್ಬರೂ ದಲಿತರೇ. ‘ಖರ್ಗೆ ಸಾಹೇಬರ ವಿರುದ್ಧ ನನ್ನನ್ನೇ ಯಾಕೆ ಎತ್ತಿಕಟ್ಟತೀರಾ, ಈ ಆಪಾದನೆಗಳನ್ನು ವಿರೋಧ ಪಕ್ಷದ ನಾಯಕ ಅಶೋಕ್, ಪಾರ್ಟಿ ಅಧ್ಯಕ್ಷ ವಿಜಯೇಂದ್ರ ಮಾಡಲಿ ಅಂತ ನಾರಾಯಣಸ್ವಾಮಿ ಕೇಳಬೇಕಿತ್ತು,’ ಎಂದು ಪಾಟೀಲ್ ಹೇಳಿದರು.
ಇದೆ ಕೆಲಸವನ್ನು ಹಿಂದೆ ಯತ್ನಾಳ್ ಅಂತಹ ಲಿಂಗಾಯತರನ್ನು ಬಳಸಿಕೊಂಡು ವಿಜಯೇಂದ್ರ ತಂದೆ ಯಡಿಯೂರಪ್ಪ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗಿತ್ತು. ಬಿಜೆಪಿ, ಆರ್‌ಎಸ್‌ಎಸ್ ಮಾಡುವುದು ಇದೆ ಕೆಲಸ. “ಲಿಂಗಾಯತರನ್ನೂ ಒಳಗೊಂಡಂತೆ ಹಿಂದುಳಿದವರನ್ನು ಬಳಸಿ ಬಿಸಾಡುವ ಬಿಜೆಪಿಯವರ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ,” ಎಂದು ದೂರಿದರು.
“ಖರ್ಗೆಯವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಹಾಗೂ ಛಲವಾದಿ ನಾರಾಯಣಸ್ವಾಮಿಯವರನ್ನು ಹರಕೆಯ ಕುರಿ ಮಾಡಿದ್ದಕ್ಕೆ ಬಿಜೆಪಿ-ಆರ್.ಎಸ್.ಎಸ್. ಬಹಿರಂಗವಾಗಿ ಪರಿಶಿಷ್ಟ ಜಾತಿ ಸಮುದಾಯದವರ ಕ್ಷಮೆ ಕೇಳಬೇಕು. ಒಬ್ಬ ಹಿಂದುಳಿದ ಸಮುದಾಯದ ನಾಯಕನ ಏಳಿಗೆ ಸಹಿಸದೆ ಅವರದ್ದೇ ಸಮುದಾಯವರನ್ನು ಬಳಸಿಕೊಂಡು ತೇಜೋವಧೆ ಮಾಡಿಸುವ ಮೂಲಕ, ಸಮುದಾಯದ ನಾಯಕರಲ್ಲಿ ವೈಷಮ್ಯ ಮೂಡಿಸುವುದೇ ಇವರ ಅಜೆಂಡಾ,” ಆಗ್ರಹಿಸಿದರು.
ತಮ್ಮ ಸ್ಥಾನವೇ ಅಲುಗಾಡುತ್ತಿರುವಾಗ ಸಿದ್ದರಾಮಯ್ಯ ಮೇಲೆ ವಿಜಯೇಂದ್ರರ ಆರೋಪ ಮಾಡುತ್ತಿದ್ದಾರೆ, ಎಂದು ದೂರಿದರು. ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಗಾಡಿ ಬಹಳ ದಿನ ಓಡುವುದಿಲ್ಲ. ಯತ್ನಾಳ, ರಮೇಶ ಜಾರಕಿಹೊಳಿ, ಆರ್.ಅಶೋಕ, ಬೊಮ್ಮಾಯಿ ಸೇರಿದಂತೆ ಯಾರೂ ಅವರ ನಾಯಕತ್ವ ಒಪ್ಪಿಕೊಂಡಿಲ್ಲ,” ಎಂದು ಆರೋಪಿಸಿದರು.