ವಿರೋಧಿಸಬೇಕಿದ್ದ ಮಠಾಧೀಶರು ಈಗ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ
ಕಲಬುರಗಿ
ಬಸವ ತತ್ವನಿಷ್ಟರ ಒತ್ತಾಯ ಮತ್ತು ಪ್ರತಿಭಟನೆಗಳಿಗೆ ಹೆದರಿ ರಂಭಾಪುರಿ ಸ್ವಾಮಿಗಳು ಮನುಷ್ಯರ ಮೇಲೆ ನಡೆಸುತ್ತಿದ್ದ ಅಡ್ಡಪಲ್ಲಕಿ ಮೆರವಣಿಗೆಯಿಂದ ಹಿಂದೆ ಸರಿದಿದ್ದಾರೆ. ಆದರೆ ಅದೇ ಅಡ್ಡಪಲ್ಲಕಿಯನ್ನು ತೆರೆದ ವಾಹನದ ಮೇಲೆ ಇಟ್ಟು ಮೆರವಣಿಗೆ ಮಾಡಿಕೊಳ್ಳುವುದಲ್ಲದೆ ದಸರಾ ದರ್ಬಾರದ ಉರುವಣಿಗೆ ನಡೆಸುವುದಾಗಿ ಹೇಳಿಕೆಯನ್ನಿತ್ತಿದ್ದಾರೆ.
ಇವರು ಇಷ್ಟು ಹೇಳಿದ್ದೆ ಪರಮ ಕ್ರಾಂತಿಕಾರಿ ನಡೆ ಎಂದು ಬಿಂಬಿಸಿಕೊಳ್ಳುತ್ತಿರುವ ಅನೇಕ ಮಠಾಧೀಶರು ತಾವು ನಡೆಸಬೇಕೆಂದಿರುವ ಸಮಾಲೋಚನಾ ಸಭೆಯಿಂದ ಹಿಂದೆ ಸರಿದು ರಂಭಾಪುರಿಗಳ ದರ್ಪದ ದಸರಾ ದರ್ಬಾರ್ ನಡೆಸಲು ಪರೋಕ್ಷ ಹೆಗಲನ್ನಿತ್ತಿದ್ದಾರೆ. “ಕಾಲ ತೆಗಿ ಪಾದಾ ಇಡು” ಎಂಬಂತೆ ಮನುಷ್ಯರ ಹೆಗಲನ್ನಿಳಿದು ವಾಹನ ಏರುವುದಾಗಿ ಹೇಳುತ್ತಿರುವುದರಿಂದಾಗಿ ಅವರ ಆಷಾಢಭೂತಿತನ ಬಯಲಾಗಿದೆ.
ಅಸಲಿಗೆ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರು ವಿಶೇಷವಾಗಿ ಅವರು ರಚಿಸಿದ ವಚನಗಳ ಮೆರವಣಿಗೆ ನಡೆಯಬೇಕೆ ಹೊರತು ಯಾವುದೇ ಜಾತಿ ಜಂಗಮರ ಮೆರವಣಿಗೆ ಬೇಕಿಲ್ಲ. ಹಾಗಲ್ಲ! ಇದು ನಮ್ಮ ಪೀಠದ ಪರಂಪರೆ, ಭಕ್ತರ ಆಗ್ರಹದಿಂದಾಗಿ ನಾವು ಮೆರವಣಿಗೆ ಮಾಡಿಸಿಕೊಳ್ಳುತ್ತೇವೆ ಎಂಬ ಕಪಟದ ಮಾತುಗಳು ಬೇಕಿಲ್ಲ. ಇವರ ಮರೆ ಮೋಸಗಳ ಮಾತುಗಳನ್ನು ನಂಬುವಷ್ಟು ಇಂದು ಭಕ್ತರು ಮುಗ್ಧರಾಗಿ ಉಳಿದಿಲ್ಲ.
ಬಸವಕಲ್ಯಾಣದಲ್ಲಿ ವಚನಗಳ ಮೆರವಣಿಗೆ ನಡೆಯಬೇಕೆ ಹೊರತು ಯಾವುದೇ ಜಾತಿ ಜಂಗಮರ ಮೆರವಣಿಗೆಯಲ್ಲ.
ಒಂದು ವೇಳೆ ಮುಗ್ಧ ಭಕ್ತರು ಹಾಗೆಂದು ಸಂಪ್ರದಾಯಗಳಿಗೆ ಜೋತು ಬಿದ್ದು ಹಟ ಹಿಡಿದರೆ ಗುರುಗಳಾದವರಿಗೆ ವಿವೇಕ ಎನ್ನುವುದು ಇದ್ದರೆ ಅವರೇ ಮುಂದೆ ನಿಂತು ಇಂಥ ಅಂಧಾಭಿಮಾನಗಳಿಗೆ ಅರ್ಥವಿಲ್ಲ, ಇಂಥ ಆಚರಣೆಗಳನ್ನು ಮಾಡಬೇಡಿ ಎಂದು ತಿಳಿ ಹೇಳಬೇಕು. ಜಾತಿ ಜಂಗಮರು ತಮ್ಮ ಮನೋಭೀಪ್ಸೆಗಳನ್ನು ಭಕ್ತರ ಮೇಲೆ ಹಾಕಿ ಪೂರೈಸಿಕೊಳ್ಳುವ ಚಾಳಿ ಹೊಸದೇನೂ ಅಲ್ಲ.
ಎಲ್ಲ ಧರ್ಮಗಳಲ್ಲಿಯ ಪುರೋಹಿತಶಾಹಿಯು ಜನಸಾಮಾನ್ಯರ ದೈವಭಯ ಮತ್ತು ಮುಗ್ಧತೆಯನ್ನು ಬಳಸಿಕೊಂಡೇ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ. ತನಗೆ ಬೇಕಾದ ವಸ್ತುವನ್ನು ದೇವರಿಗೆ ನೈವೇದ್ಯ ಮಾಡಲು ಹಚ್ಚಿ ಅದನ್ನು ಕಬಳಿಸುತ್ತದೆ. ಇಂಥ ಎಲ್ಲ ಧಾರ್ಮಿಕ ಕಂದಾಚಾರಗಳು ಮತ್ತು ಜನವಿರೋಧಿ ದರ್ಶನಗಳ ವಿರುದ್ಧವೇ ಬಸವಾದಿಗಳು ಅಂದು ತಾತ್ವಿಕ ಹೋರಾಟ ಮಾಡಿ ಹೊಸ ಪಂಥವನ್ನು ಹುಟ್ಟು ಹಾಕಿದ್ದರು.
ಮುಗ್ಧ ಜನರನ್ನು ಶೋಷಿಸುವ ಪುರೋಹಿತಶಾಹಿಯ
ವಿರುದ್ಧವೇ ಬಸವಾದಿ ಶರಣರು ಹೋರಾಟ ನಡೆಸಿದ್ದು.
ಕಾಲಕ್ರಮೇಣ ಅದುವೆ ʼಲಿಂಗಾಯತʼ ಎಂಬ ಧರ್ಮವಾಗಿ ಅಸ್ತಿತ್ವಗೊಂಡಿತು. ಅನತಿ ಕಾಲದಲ್ಲಿಯೇ ಶಿವಶರಣರ ಈ ಹೊಸ ಸಲ್ಲಲೀತ ಸನ್ಮಾರ್ಗವು ದಕ್ಷಿಣ ಭಾರತದಾದ್ಯಂತ ವ್ಯಾಪಿಸಿತು. ದುಡಿಯುವ ದೊಡ್ಡ ವರ್ಗವೊಂದು ಲಿಂಗಾಯತಕ್ಕೆ ಆತುಕೊಂಡು ತನ್ನ ಅಸ್ತಿತ್ವವನ್ನು ನಿಖರಗೊಳಿಸಿಕೊಂಡಿತು. ಎಲ್ಲ ತಳಸಮುದಾಯದ ಶೋಷಿತ ಜನಾಂಗ ಸೇರಿ ಕಟ್ಟಿಕೊಂಡಿದ್ದ ಮಾರ್ಗದಲ್ಲಿ ಶೈವರಲ್ಲಿನ ಒಂದು ಕಿರು ಧಾರೆಯಾಗಿದ್ದ ವೀರಶೈವ ಎಂಬ ಪಂಥವೊಂದು ಒಳಸೇರಿತು.
ಸನಾತನ ವ್ಯಸನ
ಹೀಗೆ ಒಳ ಸೇರಿದ ಈ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ತನ್ನ ಎಂದಿನ ಚಾಳಿ ಮುಂದುವರೆಸಿ ತಾನೇ ಈ ಲಿಂಗಾಯತರಿಗೆ ಅಧಿಪತಿ, ತಮ್ಮಿಂದಲೆ ಲಿಂಗಾಯತರ ವಿಧಿ ವಿಧಾನಗಳು ನಡೆಯಬೇಕಾದುದು ಧರ್ಮ. ಇದುವೇ ಮುಕ್ತಿಗೆ ಸೋಪಾನ ಎಂಬುದಾಗಿ ಮುಗ್ಧರಾಗಿದ್ದ ಈ ದುಡಿಯುವ ವರ್ಗವನ್ನು ಮತ್ತೆ ತನ್ನ ಸನಾತನ ವ್ಯಸನದ ಮೂಲಕ ತೊತ್ತಳ ತುಳಿಯಿತು. ಹೀಗಾಗಿ ಲಿಂಗಾಯತರನ್ನು ವೀರಶೈವ ಎಂದು ಕರೆದುಕೊಳ್ಳುವಂತೆ ಒತ್ತಡ ಹೇರಿತು.
ಉತ್ತರ ಕರ್ನಾಟಕದಲ್ಲಿ ಜಾತಿ ಜಂಗಮರು ಐಗೋಳು, ಅಯ್ಯಗಳು ಎಂದು ಕರೆಸಿಕೊಳ್ಳುತ್ತಾರೆ. ತಮ್ಮನ್ನು ತಾವು ವೇದಮೂರ್ತಿಗಳೆಂದು ಕರೆದುಕೊಳ್ಳುತ್ತಾರೆ. ಮೂಲದಲ್ಲಿ ಶೂದ್ರರಾಗಿರುವ ಇವರನ್ನು ಕರ್ಮಠ ಬ್ರಾಹ್ಮಣರು ವೇದಾದಿಗಳ ಅಧ್ಯಯನಕ್ಕೆ ಅನರ್ಹರೆಂದೆ ಪರಿಗಣಿಸುತ್ತಾರೆ. ತಮ್ಮ ದೇವಸ್ಥಾನಗಳ ಒಳಗೂ ಇವರನ್ನು ಬಿಟ್ಟುಕೊಳ್ಳುವುದಿಲ್ಲ. ಇವರು ಮಾತ್ರ ತಮ್ಮನ್ನು ವೇದಮೂರ್ತಿಗಳೆಂದು ಕರೆದುಕೊಳ್ಳಲು ರೋಮಾಂಚಿತರಾಗುತ್ತಾರೆ. ವೇದಭಂಜಕರಾದ ಲಿಂಗಾಯತಕ್ಕೂ ವೇದಮೂರ್ತಿಗಳಿಗೂ ಎತ್ತಣಿಂದ ಎತ್ತಣ ಸಂಬಂಧವಯ್ಯ?
ವೇದಭಂಜಕರಾದ ಲಿಂಗಾಯತಕ್ಕೂ ವೇದಮೂರ್ತಿಗಳಿಗೂ ಎತ್ತಣಿಂದ ಎತ್ತಣ ಸಂಬಂಧವಯ್ಯ?
ಲಿಂಗಾಯತರ ಆಪೋಷನ
ಈ ಶೂದ್ರ ಪುರೋಹಿತ ವರ್ಗ ಆಗಾಗ ಪ್ರಭುತ್ವವನ್ನು ಬಳಸಿಕೊಂಡು ಮೂಲದ ವಚನ ತತ್ವಗಳನ್ನು ತನ್ನ ಅಭೀಪ್ಸೆಗೆ ತಕ್ಕಂತೆ ಹೆಣೆಯುವ ವೃಥಾ ಪ್ರಯತ್ನ ಮಾಡಿತು. ತನ್ನ ಅನುಕೂಲಕ್ಕಾಗಿ ಹಲವು ಕಾವ್ಯಗಳನ್ನು ಖೊಟ್ಟಿ ಧರ್ಮಗ್ರಂಥಗಳನ್ನು ಹುಟ್ಟು ಹಾಕಿತು. ದುರಂತವೆಂದರೆ ಆ ಕೆಲಸವನ್ನು ಈ ಕ್ಷಣಕ್ಕೂ ಮಾಡುತ್ತಲೆ ಬರುತ್ತಿದೆ. ಮೂಲದಲ್ಲಿ ತತ್ವವಾಗಿದ್ದ ʼಜಂಗಮತ್ವʼವನ್ನು ಜಾತಿಯಾಗಿ ಪರಿವರ್ತಿಸಿದ ಕುಖ್ಯಾತಿ ಇವರಿಗಿದೆ.
ಜಾತಿ ಜಂಗಮರು ನಡೆಸಿದ ಈ ನವೀನ ವೈದಿಕಶಾಹಿಯ ವಿರುದ್ಧ ಬಸವತತ್ವ ನಿಷ್ಠರು ಹೋರಾಟಗಳನ್ನು ಮಾಡುತ್ತಲೆ ಬರುತ್ತಿದ್ದಾರೆ. ಸನಾತನವಾದಿಗಳ ಮನೀಷೆಗೆ ತಣ್ಣೀರು ಹೊಯ್ಯುತ್ತಲೆ ಬರುತ್ತಿದ್ದಾರೆ. ವರ್ಣಾಶ್ರಮವನ್ನು, ವೈದಿಕ ಕರ್ಮಸಿದ್ಧಾಂತವನ್ನು ನಂಬುವ ಇವರಿಗೂ ವೈದಿಕಶಾಹಿಯನ್ನು ಧಿಕ್ಕರಿಸಿದ ಬಸವವಾದಿಗಳಿಗೂ ತಾತ್ವಿಕವಾಗಿ ಸಂಬಂಧವಿಲ್ಲ. ಆದಾಗ್ಯೂ ಬಸವೋತ್ತರ ಕಾಲಘಟ್ಟದಲ್ಲಿ ಇವರು ಲಿಂಗಾಯತರನ್ನು ಆಪೋಷನ ತೆಗೆದುಕೊಳ್ಳಲು ಹಲವು ಉಪದ್ವ್ಯಾಪಗಳನ್ನು ಮಾಡುತ್ತಲೆ ಬರುತ್ತಿದ್ದಾರೆ.
ವಾಸ್ತವವೆಂದರೆ ಪಂಚಾಚಾರ್ಯರೆಂದು ಬಿಂಬಿಸಿಕೊಳ್ಳುತ್ತಿರುವ ಇವರಿಗೆ ತಮ್ಮದೆ ಸ್ವತಂತ್ರ ಸಿದ್ಧಾಂತವಾಗಲಿ, ಅನುಯಾಯಿಗಳಾಗಲಿ ಇಲ್ಲ. ಇರುವುದೆಲ್ಲ ಬಸವ ಪ್ರಣೀತ ಆಚರಣೆಗಳು ಮಾತ್ರ. ಆದ್ದರಿಂದಲೆ ಇವರು ಬಸವ ಮಾರ್ಗದ ಅಷ್ಟಾವರಣಗಳನ್ನು ಮಾತ್ರ ಕಚ್ಚಿಕೊಂಡು ಬರುತ್ತಾರೆ. ಉಳಿದಂತೆ ವಚನ ತತ್ವದ ಜೀವಧ್ವನಿಯಾದ ಷಟ್‌ಸ್ಥಲ, ಪಂಚಾಚಾರಗಳನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಕಾರಣ ಅಷ್ಟಾವರಣಗಳು ಬಾಹ್ಯ ಸೌಕರ್ಯಗಳಾದರೆ ಷಟ್ ಸ್ಥಲಾದಿಗಳು ತಾತ್ವಿಕ ಅನುಸಂಧಾನಗಳಾಗಿವೆ. ಮತ್ತು ವೈದಿಕ ತಾತ್ವಿಕತೆಯನ್ನು ನಿರಾಕರಿಸುತ್ತವೆ. ಹೀಗಾಗಿ ಅವರು ಲಾಂಛನಗಳಿಗೆ ಮಾತ್ರ ಸೀಮಿತರಾಗಿದ್ದಾರೆ.
ಪಂಚಾಚಾರ್ಯರೆಂದು ಬಿಂಬಿಸಿಕೊಳ್ಳುತ್ತಿರುವ ಇವರಿಗೆ ತಮ್ಮದೆ ಸ್ವತಂತ್ರ ಸಿದ್ಧಾಂತವಾಗಲಿ, ಅನುಯಾಯಿಗಳಾಗಲಿ ಇಲ್ಲ.
ಜಂಗಮನಿಲ್ಲವ್ವ ಜಗದೊಳಗ
ಜಾತಿ ಜಂಗಮರು ಮಾಡುತ್ತಿದ್ದ ಈ ಹುನ್ನಾರುಗಳನ್ನು ಖಂಡಿಸುತ್ತ ಬಸವ ಪ್ರಣೀತ ತತ್ವಗಳನ್ನು ಎತ್ತಿ ಹಿಡಿಯಲೆಂದೆ ೧೭, ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಕನ್ನಡ ನಾಡಿನಲ್ಲಿ ನೂರಾರು ತತ್ವಪದಕಾರರು ಹುಟ್ಟಿಕೊಂಡಿದ್ದಾರೆ. ಜಾತಿ ಜಂಗಮರ ದುಷ್ಟತನ ಮತ್ತು ಅವರ ಆಷಾಢಭೂತಿತನವನ್ನು ತತ್ವಪದಕಾರರು ಇನ್ನಿಲ್ಲದಂತೆ ಟೀಕಿಸಿದ್ದಾರೆ. ಕಡಕೋಳ ಮಡಿವಾಳಪ್ಪನಂತೂ ಅವರ ಕುತಂತ್ರಗಳನ್ನು ಹೂಬಾಹೂಬ್ ಬಯಲಿಗೆಳೆದು ತಾತ್ವಿಕ ದಂಗೆಯನ್ನೆ ಮಾಡಿದ್ದು ಇದೆ. ಇದೆಲ್ಲವನ್ನು ಅವರು ತಮ್ಮ ತತ್ವಪದಗಳಲ್ಲಿ ಢಾಳವಾಗಿ ಹಿಡಿದಿಟ್ಟಿದ್ದಾರೆ. ಅವರದೊಂದು ಪದ ಹೀಗಿದೆ.
ಜಂಗಮನಿಲ್ಲವ್ವ ಜಗದೊಳಗ||
ಜಂಗಮನೊಳಗ ಜಗವೆಲ್ಲ||
ಎಂದು ಸ್ಪಷ್ಟ ಪಡಿಸಿದ್ದಾರೆ. ಜಗತ್ತಿನಲ್ಲಿ ಜಂಗಮವೆಂಬ ಜಾತಿಯಿಲ್ಲ. ಸೃಷ್ಟಿ ಸಮಸ್ತವನ್ನು ತನ್ನ ಅಂತಃಕರುಣದಲ್ಲಿ ಮೀಯಿಸಿಕೊಳ್ಳುವ ಆದ್ರತೆಯುಳ್ಳ ಜ್ಞಾನಿಯೇ ಜಂಗಮ ಎನ್ನುತ್ತಾನೆ ಮಡಿವಾಳಪ್ಪ. ಜಾತಿ ಜಂಗಮತ್ವ ನಿರಾಕರಿಸುವ ನೂರಾರು ಪದ-ವಚನಗಳು ಕನ್ನಡದಲ್ಲಿ ಹಲವರಿಂದ ರಚನೆಯಾಗಿವೆ.
ಜಾತಿ ಜಂಗಮತ್ವ ನಿರಾಕರಿಸುವ ನೂರಾರು ಪದ-ವಚನಗಳು ಕನ್ನಡದಲ್ಲಿ ಹಲವರಿಂದ ರಚನೆಯಾಗಿವೆ.
ಸತ್ತ ಸಂಪ್ರದಾಯ
ಹೀಗಿರುವಾಗಲೂ ಪಂಚಾಚಾರ್ಯ ಪೀಠಾಧೀಶರು ತಮ್ಮ ಅಜೆಂಡಾವನ್ನು ಸುತ್ತಿ ಬಳಸಿ ಜಾರಿ ಮಾಡಲು ಹರಸಾಹಸ ಮಾಡುತ್ತಲೆ ಇದ್ದಾರೆ. ಇದೇ ದಸರಾ ಹಬ್ಬದಂದು ಬಸವಕಲ್ಯಾಣದಲ್ಲಿ ತನ್ನ ಶರನ್ನವರಾತ್ರಿ ದರ್ಬಾರ್ ನಡೆಸಲು ಹವಣಿಸುತ್ತಿದ್ದಾರೆ. ರಾಜಸತ್ತೆಗಳು ಉರುಳಿ ಬಿದ್ದಿವೆ. ಗದ್ದುಗೆ ಮುಕುಟಗಳು ಹಾರಿ ಹೋಗಿವೆ. ಈಗ ಏನಿದ್ದರೂ ಪ್ರಜಾತಂತ್ರ ವ್ಯವಸ್ಥೆಗೆ ಮಾತ್ರ ಅವಕಾಶ. ರಾಜಸತ್ತೆಯ ಪಳಿಯುಳಿಕೆಗಳಿಗೆ ಅವಕಾಶವಿಲ್ಲ.
ತಮ್ಮನ್ನು ರಾಜಗುರುಗಳು, ಮಹಾಸಂಸ್ಥಾನಿಕರು ಎಂದು ಕರೆದುಕೊಳ್ಳುವ ಈ ಪಂಪಿಗಳು ತಮ್ಮ ದರ್ಬಾರ್ ರಾಜಪ್ರಭುತ್ವ ಇದ್ದಲ್ಲಿ ನಡೆಸಲಿ. ಪ್ರಜೆಗಳ ಮುಂದೇಕೆ ಅವರ ಆಟಾಟೋಪ. ಅನಭಿಷಿಕ್ತರೆನಿಸಿಕೊಂಡಿದ್ದ ದೊರೆಗಳೆ ಮಣ್ಣು ಮುಕ್ಕಿ ಹೋಗಿರುವಾಗ ಪೂಜ್ಯರೆಂದು ಬಿಂಬಿಸಿಕೊಳ್ಳುತ್ತಿರುವ ಐಗೋಳ ವಟುಗಳಿಗೆ ಏಕೆ ಬೇಕು ಈ ಸತ್ತ ಸಂಪ್ರದಾಯ.
ಪೂಜ್ಯರೆಂದು ಬಿಂಬಿಸಿಕೊಳ್ಳುತ್ತಿರುವ ಐಗೋಳ ವಟುಗಳಿಗೆ ಏಕೆ ಬೇಕು ಈ ಸತ್ತ ಸಂಪ್ರದಾಯ.
ನಜರಾನಾದ ಹುಚ್ಚಾಟ
ದರ್ಬಾರ್ ಹೆಸರಿನಲ್ಲಿ ಅವರು ವೈದಿಕ ಆಚರಣೆಗಳನ್ನು ಒಂದೆಡೆ ನಡೆಸಿದರೆ ಇನ್ನೊಂದೆಡೆ ರಾಜಶಾಹಿಯ ದರ್ಪವನ್ನು ಮೆರೆಯುತ್ತಾರೆ. ತಮ್ಮನ್ನು ತಾವು ಜಗದ್ಗುರುಗಳೆಂದು ಕರೆದುಕೊಂಡು ಅಲಂಕಾರಿತ ಸಿಂಹಾಸನದ ಮೇಲೆ ಆಸೀನರಾಗಿ ಭಕ್ತರಿಂದ ನಜರಾನಾ ಅಂದರೆ ಕಾಣಿಕೆಗಳನ್ನು ಅರ್ಪಿಸಿಕೊಳ್ಳುತ್ತಾರೆ. ಈ ನಡುವೆಯಂತೂ ಅದೆಷ್ಟು ಹುಚ್ಚಾಟ ನಡೆಸುತ್ತಾರೆಂದರೆ ಭಕ್ತರಿಗೆ ೧೨ ನೇ ಶತಮಾನದ ಶರಣರ ವಿವಿಧ ವೇಷಗಳನ್ನು ತೊಡಿಸಿ ಅವರಿಂದ ತಾವೇ ಖರೀದಿಸಿ ತಂದಿದ್ದ ವಸ್ತು, ಫಲ, ತಾಂಬೂಲುಗಳನ್ನು ಅರ್ಪಿಸಿಕೊಳ್ಳುತ್ತಾರೆ.
ಶರಣ ವೇಷದಾರಿಗಳಿಂದ ತಾವೇ ಖರೀದಿಸಿ ತರುವ ವಸ್ತು, ಫಲ, ತಾಂಬೂಲುಗಳನ್ನು ಅರ್ಪಿಸಿಕೊಳ್ಳುತ್ತಾರೆ.
ಹೀಗೆ ಬಂದ ವೇಷಧಾರಿಗಳು ಸಿಂಹಾಸನಕ್ಕೆ ಡೊಗ್ಗಿ ಸಲಾಮು ಹಾಕಿ ಹಿಂಬದಿಯಿಂದ ನಡೆದು ಹೋಗುವಂತೆ ವ್ಯವಸ್ಥೆ ಮಾಡುತ್ತಾರೆ. ಥೇಟ್ ರಾಜ ದರ್ಬಾರಿನಲ್ಲಿ ನಡೆಸುವ ಕಪ್ಪು ಕಾಣಿಕೆ ಒಪ್ಪಿಸುವ ಗುಲಾಮಗಿರಿ ಪದ್ಧತಿ ಅನುಸರಿಸುತ್ತಾರೆ. ಪ್ರಜ್ಞಾವಂತ ನೋಡುಗರಿಗೆ ಪರಮ ಅಭಾಸದಂತೆ ಕಂಡುಬಂದರೆ ಮುಗ್ಧ ಭಕ್ತರಿಗೆ ಗುರುಗಳ ವೈಭವದಂತೆ ಭಾಸವಾಗಬಹುದು. ಪ್ರಜ್ಞಾವಂತ ನಡೆಯಂತೂ ಇದಲ್ಲ.
ಶರಣ ವೇಷದಾರಿಗಳಿಂದ ತಾವು ಕುಳಿತಿರುವ ಸಿಂಹಾಸನಕ್ಕೆ ಡೊಗ್ಗಿ ಸಲಾಮು ಹಾಕಿಸಿಕೊಳ್ಳುತ್ತಾರೆ
ಲಿಂಗಾಯತರ ಮೇಲೆ ಸವಾರಿ
ಬಿಸಿಲು,ಮಳೆ, ಗಾಳಿ ಎನ್ನದೆ ಹೊಲಗಳಲ್ಲಿ ಹಗಲಿರುಳು ದುಡಿದು ಸುಣ್ಣವಾಗುತ್ತಿರುವ ರೈತಾಪಿ, ಕೂಲಿ ಕಾರ್ಮಿಕರು ಒಂದ್ಹೊತ್ತಿನ ಊಟಕ್ಕೂ, ಆರೋಗ್ಯ ಹದಗೆಟ್ಟರೆ ಕನಿಷ್ಟ ವೈದ್ಯೋಪಚಾರ ಪಡೆದುಕೊಳ್ಳಲು ಪರದಾಡುತ್ತಿರಬೇಕಾದರೆ ಇವರು ಐಷಾರಾಮಿ ಭೋಗಗಳಲ್ಲಿ ತಲ್ಲೀನರಾಗಿ ಮೈ ತುಂಬ ಬಂಗಾರ ಜಡೆದುಕೊಂಡು ನಡೆಸುವ ದರ್ಬಾರ್ ಹೇಸಿಗೆ ಹುಟ್ಟಿಸದೆ ಇರದು.
ಲಿಂಗಾಯತರ ಮೇಲೆ ಸವಾರಿ ಮಾಡುವ ಇವರಿಗೆ ಲಿಂಗಾಯತರ ಕಷ್ಟಕಾರ್ಪಣ್ಯಗಳ ಬಗೆಗೆ ಕಿಂಚತ್ತೂ ಗಮನವಿಲ್ಲ. ಒಕ್ಕಲುತನ ನೆಲಕಚ್ಚಿದೆ. ಮಧ್ಯಮ ವ್ಯಾಪಾರಿಗಳು ದಿವಾಳಿಯಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸವನ್ನರಸಿ ಗುಳೇ ಹೋಗುತ್ತಿದ್ದಾರೆ. ಮಹಿಳೆಯರು ಇನ್ನಿಲ್ಲದ ಕೌಟುಂಬಿಕ ದಬ್ಬಾಳಿಕೆ, ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ.
ಲಿಂಗಾಯತರ ಮೇಲೆ ಸವಾರಿ ಮಾಡುವ ಇವರಿಗೆ ಲಿಂಗಾಯತರ ಕಷ್ಟಕಾರ್ಪಣ್ಯಗಳ ಬಗೆಗೆ ಕಿಂಚತ್ತೂ ಗಮನವಿಲ್ಲ
ಇಂಥ ದುರ್ಭರ ಸ್ಥಿತಿಯಲ್ಲಿ ಜನರ ಹೆಣದ ಮೇಲೆ ದರ್ಬಾರ್ ನಡೆಸಿಕೊಳ್ಳುವುದು ಅಕ್ಷರಶಃ ಕ್ರೌರ್ಯ. ಅಮಾನವೀಯತೆಯ ಪರಮಾವಧಿ. ಕೆಲವಷ್ಟು ಶ್ರೀಮಂತ ಭಕ್ತರಿಗೆ ಇದು ಮೋಜು, ಮಸ್ತಿ ಎನಿಸಬಹುದು. ಆದರೆ ಮಾಡಿದ ಸಾಲಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ ರೈತಾಪಿ ಕೂಲಿಕಾರ್ಮಿಕರಿಗೆ ಇಂಥವರ ಮೇಲೆ ಭಕ್ತಿ ಹುಟ್ಟಲು ಸಾಧ್ಯವೆ? ಒಂದು ವೇಳೆ ಮುಗ್ಧರಲ್ಲಿ ಭಕ್ತಿ ಹುಟ್ಟಿಸುವಂಥ ವಾತಾವರಣ ನಿರ್ಮಿಸಿದರೂ ಇದಕ್ಕಿಂತ ದುಷ್ಟತನ ಇನ್ನೊಂದು ಇದ್ದೀತೆ?
ಬಸವಣ್ಣನವರು ಇವರ ಶಿಷ್ಯರಂತೆ
ತಮ್ಮ ದರ್ಬಾರ್ ದಲ್ಲಿ ಇವರು ಯಾವತ್ತೂ ಬಸವಣ್ಣನವರ ಭಾವಚಿತ್ರವನ್ನು ತಮ್ಮ ಸಿಂಹಾಸನದ ಮೇಲ್ಭಾಗದಲ್ಲಿ ಸಿಂಗರಿಸಲು ಬಿಡುವುದಿಲ್ಲ. ಏಕೆಂದರೆ ಬಸವಣ್ಣನವರು ಇವರಿಗೆ ಶಿಷ್ಯರಂತೆ. ತಾವೇ ವೀರಶೈವದ ಸಂಸ್ಥಾಪಕರು. ಬಸವಣ್ಣನವರು, ಪೂರ್ವದಲ್ಲಿ ಅಂದರೆ ಕೃತ, ತ್ರೇತಾದಿ ಯುಗಗಳಿಗಿಂತ ಮೊದಲು ಸ್ಥಾಪನೆಯಾದ ವೀರಶೈವದ ಉದ್ಧಾರಕನೆಂದು ಬಾಲಿಶವಾಗಿ ಗಳಹುತ್ತಾರೆ. ಆಧಾರಗಳೆ ಅಲ್ಲದ ಪೌರಾಣಿಕ ಕಥೆಗಳನ್ನು ಕಟ್ಟಿ ಸತ್ಯವೆಂದು ಬಿಂಬಿಸುವ ಮೂರ್ಖತನಕ್ಕೆ ಇಳಿಯುತ್ತಾರೆ. ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಜನಸಮುದಾಯಗಳು ಅಕೆಡೆಮಿಕ್ ಶಿಕ್ಷಣದಿಂದ ದೂರವೇ ಉಳಿದು ಅಜ್ಞರಾಗಿದ್ದ ಸಂದರ್ಭದಲ್ಲಿ ಈ ಪುರೋಹಿತರು ಹೇಳಿದ್ದನ್ನೆ ನಂಬುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ.
ಬಸವಣ್ಣನವರು ತಮ್ಮ ಶಿಷ್ಯ ಎನ್ನುವುದು ಆಧಾರಗಳೇ ಇಲ್ಲದ ಪೌರಾಣಿಕ ಕಥೆಗಳನ್ನೇ ಸತ್ಯವೆಂದು ಬಿಂಬಿಸುವ ಮೂರ್ಖತನ
ಅಕ್ಷರಸ್ಥರಾಗಿರುವ ಬಹುಸಂಖ್ಯಾತರು ಖುದ್ದು ವಚನಗಳನ್ನು ಓದಿ ಪ್ರಾಜ್ಞರಾಗುತ್ತಿದ್ದಾರೆ. ಇವರು ಹೇಳುವ ಕಾಗೆ-ಗುಬ್ಬಿಗಳ ಕಥೆಗಳನ್ನು ನಂಬುವಷ್ಟು ಹೆಡ್ಡರಾಗಿ ಉಳಿದಿಲ್ಲ ಎಂಬುದನ್ನು ಪಂಪೀಗಳು ಅರ್ಥ ಮಾಡಿಕೊಂಡರೆ ಒಳ್ಳೆಯದು.
ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಜನ ಈ ಪುರೋಹಿತರು ಹೇಳಿದ್ದನ್ನೆ ನಂಬುವ ಕಾಲ ಬದಲಾಗಿದೆ.
ಸೇಡಿನ ನಡೆ
ಈಗ ಬಸವಕಲ್ಯಾಣದಲ್ಲಿ ನಡೆಸಲು ಹೊರಟಿರುವ ದಸರಾ ದರ್ಬಾರ್ ಶರಣ ವಿರೋಧಿ ಅಷ್ಟೇ ಅಲ್ಲ, ಬಸವಕಲ್ಯಾಣದಲ್ಲಿ ನಡೆಸಲು ಹೊರಟಿರುವುದು ಅವರ ಲಿಂಗಾಯತರ ಮೇಲಿನ ಸೇಡಿನ ನಡೆಯಾಗಿದೆ. ಬಸವಕಲ್ಯಾಣದಲ್ಲಿ ಬಸವಾದಿ ಶರಣರು ಮತ್ತು ಅವರ ತತ್ವಗಳಲ್ಲದೆ ಉಳಿದವರ ಮೆರವಣಿಗೆ ಯಾವುದೇ ಕಾರಣಕ್ಕೂ ಸಲ್ಲದು ಎಂಬ ಪ್ರಜ್ಞೆ ಅವರಿಗಿರಲಿ.
ಬಸವಕಲ್ಯಾಣದಲ್ಲಿ ಬಸವಾದಿ ಶರಣರಲ್ಲದೆ ಉಳಿದವರ
ಮೆರವಣಿಗೆ ಯಾವುದೇ ಕಾರಣಕ್ಕೂ ಸಲ್ಲದು ಎಂಬ ಪ್ರಜ್ಞೆ ಅವರಿಗಿರಲಿ
ಬಸವಣ್ಣನವರನ್ನು ಗುರುವೆಂದು ಒಪ್ಪಿಕೊಳ್ಳದ, ಗುರು ಮುಟ್ಟಿ ಗುರುವಾಗುವ ಸಿದ್ಧಾಂತವನ್ನು ಅನುಸರಿಸದ ಪಂಪೀಗಳಿಗೆ ಬಸವಾದಿಗಳ ಎಚ್ಚರಿಕೆ. ಅಕ್ಕಮಹಾದೇವಿ ಹೇಳುವಂತೆ
ಕಲ್ಯಾಣವೆಂಬುದಿನ್ನಾರಿಗೆ ಹೋಗಬಹುದು?
ಹೋಗಬಾರದು, ಅಸಾಧ್ಯವಯ್ಯಾ.
ಆಸೆ, ಆಮಿಷ ಅಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದುಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೋಗಬಾರದು.
ನೀನಾನೆಂಬುದು ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವ ಕಂಡು ನಮೋ ನಮೋ ಎನುತಿದ್ದೆನು.
ಅಕ್ಕನಂಥ ಅಕ್ಕನೇ ಮನೋಸಹಜ ದೌರ್ಬಲ್ಯಗಳಿದ್ದಲ್ಲಿ ಕಲ್ಯಾಣದತ್ತ ಅಡಿಯಿಡಲು ಭಯಪಡಬೇಕಾದರೆ ಈ ಪಂಪೀಗಳಿಗೆ ಕಲ್ಯಾಣದಲ್ಲಿ ದರ್ಬಾರ್‌ವೆಂಬ ಅಪ್ರಾಸಂಗಿಕ ದಾಂಧಲೆ ನಡೆಸಲು ಕನಿಷ್ಟ ಲಜ್ಜೆ ಇರಬಾರದೆ?
ಲಿಂಗಾಯತ ಎನಿಸಿಕೊಳ್ಳುವವರ ಬಾಯಲ್ಲಿ ಶೂದ್ರ ಶಬ್ದವೇ ಬರಬಾರದು. ಅದು ಬಸವಣ್ಣ ನವರ ಸಂನತೆಗೆ ಅವಮಾನ
ಮೀನಾಕ್ಷಿ ಬಾಳಿ ಅಕ್ಕ ಸತ್ಯವಾದ ವಿಚಾರವನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥ ಆಗುವ ರೀತಿ ಹೇಳಿದ್ದಾರೆ. ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಎಂದಿಗೂ ಸಾವಿರಾರು ಶರಣರ ಮಾರಣ ಹೋಮ ಮಾಡಿದ ದಸರಾ ದರ್ಬಾರ್ ನಡೆಯಬಾರದು. ರಂಭಾಪುರಿ ಜರತಾರಿ ಜಗದ್ಗುರು ದಸರಾ ದರ್ಬಾರ್ ಮಾಡಲು ಬಿಡಬಾರದು.
ತುಂಬಾ ಚನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಅಕ್ಕನವರೇ. ಬಸವಾದಿ ಶರಣರ ಮನೆ ಮನೆಗೂ ತಲುಪಬೇಕೆಂದರೆ ಮೊದಲು ಬಸವ ತತ್ವ ಹೇಳುವ ಕ್ರಿಯಾಮೂರ್ತಿಗಳು ತಯಾರಾಗಬೇಕು. ಲಿಂಗಾಯತರ ಮನೆಗಳಲ್ಲಿ ಹುಟ್ಟು ಸಾವಿನ ಮಧ್ಯೆ ಬರುವ ಕಾರ್ಯಗಳಿಗೆ ನಮ್ಮ ಭಕ್ತಾದಿಗಳು ಜಾತಿ ಜಂಗಮರನ್ನೇ ಕರೆಯುತ್ತಾರೆ. ಜಾತಿ ಜಂಗಮರು ಬಸವ ತತ್ವ ಹೇಳುವುದಿಲ್ಲ. ಹೀಗಾಗಿ ಬಸವ ತತ್ವ ಪ್ರಚಾರ ಇಷ್ಟು ನಿಧಾನವಾಗಿರುತ್ತದೆ. ಬಸವಣ್ಣನನ್ನುನೇಪತ್ಯಕ್ಕೆ ಸರಿಸಿದ್ದೇ ಜಾತಿ ಜಂಗಮರು. ಬಸವ ತತ್ವ ಪ್ರಕಾರ ಕ್ರಿಯೆಗಳನ್ನು ಮಾಡುವ ಕ್ರಿಯಾ ಮೂರ್ತಿಗಳನ್ನು ಯುದ್ಧೋಪಾದಿಯಲ್ಲಿ ತರಬೇತಿ ಕೊಡಬೇಕು. ವಿರಕ್ತಮಠಗಳಲ್ಲಿ ಹಾಗೂ ಬಸವತತ್ವ ಮಠಗಳಲ್ಲಿ ನಡೆಯಬೇಕು. ಇದರ ಬಗ್ಗೆ ಮಠಾಧಿಪತಿಗಳ ಒಕ್ಕೂಟ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಗಂಭೀರವಾಗಿ ಚಿಂತನೆ ಮಾಡಿ ಕಾರ್ಯಪ್ರವೃತ್ತ ರಾಗಬೇಕೆಂದು ಕೋರುತ್ತೇನೆ. ಶರಣು ಶರಣಾರ್ಥಿಗಳು
ಬಸವ ಕಿಡಿ ಜ್ವಾಲೆ ಯಾಗಿ ಅಸತ್ಯವನ್ನು ಸುಡುವ ಕಾಲ ಬಂದಿದೆ
ನಿಮ್ಮ ಈ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲ ಇದೆ. ಲಿಂಗಾಯತರ ಜೀವನದ ಎಲ್ಲ ಮಹತ್ವದ ಘಟ್ಟಗಳಲ್ಲಿ ಈ ವೀರಶೈವರು ಆಕ್ರಮಿಸಿಕೊಂಡಿದ್ದಾರೆ. ಲಿಂಗಧಾರಣೆ, ನಾಮಕರಣ, ಅಕ್ಷರಾಭ್ಯಾಸ ಮದುವೆ, ಸೀಮಂತ ಮತ್ತು ಕೊನೆಗೆ ಅಂತ್ಯಕ್ರಿಯೆ ಕೂಡ ಅವರದ್ದೇ.
ಲಿಂಗಾಯತ ತತ್ವದ ಪ್ರಕಾರ ಈ ಕ್ರಿಯೆ ನಡೆಸಿಕೊಡುವಂಥ ಪ್ರಕ್ರಿಯೆ ಈಗಿನ ತುರ್ತು ಅಗತ್ಯ. ಇದನ್ನು ಎಲ್ಲ ಲಿಂಗಾಯತರು ಮನಗಾಣಬೇಕು.
ಜಿ ಕೆ ನಾಗರಾಜ್ ಅವರ ಸಲಹೆ ಸೂಕ್ತ ಹಾಗೂ ಸಮಯೋಚಿತವಾಗಿದೆ ದಯವಿಟ್ಟು ಈ ಜಾತಿ ಜಂಗಮತ್ವಕ್ಕೆ ಪರ್ಯಾಯವಾಗಿ ಬಸವಪ್ರಣೀತ ಜಂಗಮತ್ವವನ್ನು ಹುರಿಗೊಳಿಸಲಿ.ಅಕ್ಕ ಮೀನಾಕ್ಷಿ ಯವರ ಚಿಂತನೆ ಸಮಯೋಚಿತ, ಶರಣು ಶರಣಾರ್ಥಿ.
ಶರಣೆ ಮೀನಾಕ್ಷಿ ಬಾಳಿಯವರು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯವಾದದ್ದು ಹಾಗೂ ಇದರ ಬಗ್ಗೆ ಪೂಜ್ಯರು ಹಾಗೂ ಮುಖಂಡರು ಮತ್ತೊಮ್ಮೆ ಪರಾಮರ್ಶೆ ಮಾಡುವಂತದು ಎಂದು ಹೇಳಬಹುದು .
ಎತ್ತಿ ನ ಕುರುಗಿ ನಿಂದ ಭೂಮಿಗೆ ಬೀಜ ಬಿತ್ತಿದರು ಒಂದೆ ಟ್ರ್ಯಾಕ್ಟರ್ ನಿಂದ ಬೀಜ ಬಿತ್ತಿದರೆ ಒಂದೆ ಪಲು (ಬೆಳೆ) ಬರುವುದು ತೆರೆದ ವಾಹನನು ಸಹ ಮನುಷ್ಯನೆ ನಡೆಸುತ್ತಾನೆ (ಎಳೆಯುತ್ತಾನೆ) ಏನಾದರೂ ಸರಿ ದಸರಾ ದರ್ಬಾರ್ ನಡೆಯಬಾರದು . ಸೈದ್ಧಾಂತಿಕ ಹಿನ್ನೆಲೆಯಲ್ಲಿಯೇ ಹೋರಾಟಗಳು ಹೆಚ್ಚಾಗಬೇಕಿದೆ. ಬಸವ ಎನ್ನು ವ ರೇಲ್ಲಾರು ಮುಂದಾಗಬೇಕು ಕಾರಣ ಅದೆಷ್ಟೋ ಜನ ಕ್ರಿಯಾ ಮೂರ್ತಿಗಳಿಗೆ ಜ್ಞಾನ ವಿದ್ದರು ದೈರ್ಯ ಎಲ್ಲ ಕಾರಣ ಜನ ಬಲ ಹಣ ಬಲ ವಿದ್ಯಾ ಬಲ ಇತ್ಯಾದಿ ಇಲ್ಲ ಆದಕಾರಣ ಸೂತ್ರಧಾರಿಗಳಂತೆ ಭಕ್ತರು ಬಹಳ ಜವಾಬ್ ದ್ದಾರಿಯಿಂದ ಹೆಚ್ಚುತ್ತು ಗೊಂಡು ಕ್ರಿಯಾ ಮೂರ್ತಿಗಳನ್ನು ಮುಂದಿಟ್ಟು ಕೊಂಡು ತಾವೆ ಊದುವುದು ಬಾರಿಸುವುದು ಮಾಡಿ ಯಾವ ಕಾರಣಕ್ಕೂ ದಸರಾ ದರ್ಬಾರ್ ನಡೆಯದಂತೆ ಮಾಡಬೇಕು. ನಿಜಕ್ಕೂ ಬಹಳ ಶ್ರೇಷ್ಠರಿದ್ದರೆ ರಂಭಾಪುರಿ ಶ್ರೀಗಳಿಗೆ ನನ್ನ ದೊಂದು ಸವಾಲ್ ಬಸವಕಲ್ಯಾಣದಲ್ಲಿ ನ ಮಧ್ಯಪಾನ, ಧೂಮಪಾನ, ಮತ್ತು ಮಾಂಸದ ಅಂಗಡಿ ಗಳು ಸುಟ್ಟು ಭಸ್ಮ ಮಾಡಲಿ.
ಶರಣೆ ಮೀನಾಕ್ಷಿ ಬಾಳಿ ತಾಯಿಯವರ ವಿಶ್ಲೇಷಣೆ ಅರ್ಥಗರ್ಭಿತ ಆಗಿದೆ. ಅಡ್ಡಪಲ್ಲಕ್ಕಿಯನ್ನು ವಾಹನದ ಮೇಲೆ ಇಟ್ಟು ಮೆರವಣಿಗೆಗೆ ಲಿಂಗಾಯತ ಮಠಾಧೀಶರ ಒಕ್ಕೂಟ ಏಕೆ ವಿರೋಧಿಸಲಿಲ್ಲ? ಪಂಪಿಗಳ ಮೆರವಣಿಗೆಯೇ ಬಸವಣ್ಣನವರ ತತ್ವಕ್ಕೆ ಮತ್ತು ಕಲ್ಯಾಣದ ಶರಣರು ನಡೆದಾಡಿ ವಚನ ಸಾಹಿತ್ಯ ರಚಿಸಿದ ಪವಿತ್ರ ಭೂಮಿಯಲ್ಲಿ ಪಂಪಿಗಳ ಅಡ್ಡಪಲ್ಲಕ್ಕಿ ಎಷ್ಟು ಸಮಂಜಸ ಎಂಬುದು ಒಕ್ಕೂಟಕ್ಕೆ ಅರ್ಥವಾಗಲಿಲ್ಲವೇ? ಪಂಪಿಗಳ ದಸರಾ ದರ್ಬಾರ್ ಆಗದಂತೆ ಲಿಂಗಾಯತರು ಎಚ್ಚರ ವಹಿಸಬೇಕು.
ಮೀನಾಕ್ಷಿ ಅಕ್ಕ ಅವರ ಈ ಲೇಖನ ಓದಿದವರ ಕಣ್ಣು ತೆರೆಸುವಂತಿದೆ. ಅವರು ವಾಹನ ಬಳಸಿ ಮಾಡುತ್ತೇವೆ ಅಂದರೂ ಒಪ್ಪಿಕೊಳ್ಳಬಾರದಾಗಿತ್ತು. ಎಷ್ಟೋ ಜನ ವಿದ್ಯಾವಂತರು ಅನಿಸಿಕೊಂಡ ಲಿಂಗಾಯತರು ಕೂಡ ಇಂಥ ಅನಿಷ್ಟ ಪದ್ಧತಿಯನ್ನು ಅದೇಕೆ ಪಾಲಿಸುತ್ತಾರೋ? ಎಂದು ಇಂಥವರಿಗೆ ಬುದ್ಧಿ ಬರುತ್ತದೋ.
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು idde ಇರುತ್ತಾರೆ.
ಶರಣ ಸಂಸ್ಕೃತಿಯ ಜಾಗೃತಿ ಒಂದೇ ಇದಕ್ಕೆ ಉತ್ತರ.
ಲೇಖನಿಯ ಹರಿತ ಮತ್ತು ಬರಹದ ವಿಶ್ಲೇಷಣೆ
ತುಂಬಾ ಮನೆ ಮುಟ್ಟುವಂತಿದೆ . ಬಸವಣ್ಣನವರನ್ನು
ಗುರು ಎಂದು ಒಪ್ಪಿಕೊಳ್ಳದ ನಿಮಗೆ ಬಸವ ಕಲ್ಯಾಣದಲ್ಲಿ
ಕಾಲಿಡಲು ನೈತಿಕ ಹಕ್ಕು ಇಲ್ಲ. ಬಹಿರಂಗ ಬಸವ ವಿರೋಧಿ
ಗಳಿಗಷ್ಟೇ ಎಚ್ಚರಿಕೆ ಅಲ್ಲ. ಬಾಯಲ್ಲಿ ಬಸವ ಎನ್ನುತ್ತಲೇ
ಪಂಚಪೀಠಾಧೀಶರ ಕೈ ಜೋಡಿಸುವ ಅಂತರಂಗ
ಬಸವ ವಿರೋಧಿ ವಿರಕ್ತ ಮಠಾಧೀಶರಿಗೂ ಎಚ್ಚರಿಕೆ ಗಂಟೆ
ಯಾಗಿದೆ.
ಸಮಯೋಚಿತ ಲೇಖನ.