ಇಳಕಲ್ಲ:
ದೇವರ ದಾಸಿಮಯ್ಯ(ಜೇಡರ ದಾಸಿಮಯ್ಯ) ಹಾಗೂ ಶರಣೆ ದುಗ್ಗಳೆ ಅವರದು ಆದರ್ಶದ ಶರಣ ದಾಂಪತ್ಯ ಜೀವನ. ಎಲ್ಲರಿಗೂ ದಾರಿದೀಪವಾಗಿದೆ. ಅರ್ಥಗರ್ಭಿತವಾದ ಹಾಗೂ ಸರಳವಾದ ವಚನಗಳನ್ನು ಅವರುಗಳು ಬರೆದಿದ್ದಾರೆ. ಬರೆದಿರುವ ೧೭೬ ವಚನಗಳ ಮೇಲೆ ಪಿ.ಎಚ್.ಡಿ. ಮಾಡಬಹುದು, ಅವರ ವಚನದ ಸಾಲುಗಳು ಅಷ್ಟೊಂದು ವಿಚಾರಪೂರಿತವಾಗಿವೆಯೆಂದು ಶಿಕ್ಷಕಿ ಇಂದುಮತಿ ಅವರು ಹೇಳಿದರು.
ಶರಣ ಬಸವರಾಜ ರಾಮದುರ್ಗ ಅವರ ಮನೆಯಲ್ಲಿ ನಡೆದ ಮನೆ ಮನಗಳಲ್ಲಿ ಶರಣರ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಾಂಗ ಸಂಘ ಹಾಗೂ ಲಲಿತಾ ಬಳಗದ ವತಿಯಿಂದ ಅನುಭಾವಿಗಳ ಕೂಟ, ಅನುಭಾವಸಕ್ತರು ಸೇರಿಕೊಂಡು ಮಾಡಿದ ದೇವರ ದಾಸಿಮಯ್ಯನವರ ವಚನೋತ್ಸವ ಇದಾಗಿತ್ತು. ಅನುಭಾವಿಗಳನ್ನು ಕರೆದುಕೊಂಡು ಬಂದು ಎಲ್ಲರ ಜೊತೆಯಲ್ಲಿ ಕೂತುಕೊಂಡು ದಾಸಿಮಯ್ಯ ಶರಣರ ವಚನಗಳನ್ನು ಊಣಬಡಿಸಿ, ಜ್ಞಾನದಾಸೋಹ ಮಾಡುವ ವಿನೂತನ ಕಾರ್ಯಕ್ರಮ ಇದಾಗಿತ್ತು.
ಶರಣರೆಲ್ಲ ಸೇರಿಕೊಂಡು ನಡೆಸುತ್ತಿರುವ ಅನುಭವ ಮಂಟಪವು ಯಾವ ಅನುಭಾವವನ್ನು ಮಠಾಧೀಶರು ಮಾಡಿ ಮನೆ ಮನಕೆ ಮುಟ್ಟಿಸಬೇಕಿತ್ತೋ, ಅದನ್ನು ಇಲ್ಲಿಯ ಸಾತ್ವಿಕರೆಲ್ಲರೂ ಕೂಡಿಕೊಂಡು ಮಾಡುತ್ತಿರುವುದು ವಿಶೇಷವಾಗಿದೆ. ಸಮಾಜದ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಇಂಥ ಕಾರ್ಯಕ್ರಮಗಳು ಅವಶ್ಯ. ಅನೇಕ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.