ಕಲಬುರಗಿ:
ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಆಯೋಜಿಸಲಾದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ, ಕಲಬುರಗಿಯ ಆರಾಧ್ಯದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಕುರಿತು ಚಿಂತಕ ಹಾಗೂ ವಾಗ್ಮಿ ಸಂಜಯ್ ಮಾಕಲ್ ಆಳವಾದ, ತಾತ್ವಿಕ ಮತ್ತು ಹೃದಯಸ್ಪರ್ಶಿ ಅನುಭಾವವನ್ನು ಹಂಚಿಕೊಂಡರು.
ಅನುಭಾವವನ್ನು ಆರಂಭಿಸಿದ ಸಂಜಯ್ ಮಾಕಲ್, ಕಲಬುರಗಿ “ಶರಣಬಸವೇಶ್ವರರನ್ನು ಅರಿಯಬೇಕಾದರೆ ಮೊದಲು ತತ್ವಶಾಸ್ತ್ರವನ್ನು ಅರಿಯಬೇಕು” ಎಂದು ಹೇಳುತ್ತಾ, ಧರ್ಮಗಳ ಉಗಮ ಹಾಗೂ ಅವುಗಳ ಮೂಲಭೂತ ತತ್ವಗಳಾದ ಜೀವ, ಜಗತ್ತು ಮತ್ತು ಈಶ್ವರ ಎಂಬ ತ್ರಿವಿಧ ಅಂಶಗಳನ್ನು ವಾಸ್ತವ ಉದಾಹರಣೆಗಳೊಂದಿಗೆ ವಿವರಿಸಿದರು.
ಧರ್ಮಗಳನ್ನು ದೇವಕೇಂದ್ರಿತ ಮತ್ತು ಜೀವಕೇಂದ್ರಿತ ಎಂದು ವಿಭಜಿಸಿ, ದೇವಕೇಂದ್ರಿತ ಧರ್ಮಗಳಲ್ಲಿ ದೇವರಿಗಾಗಿ ಪೂಜೆ, ಅರ್ಚನೆ, ನೇಮ-ನಿತ್ಯಗಳಂತಹ ಭೌತಿಕ ಆಚರಣೆಗಳಿಗೆ ಒತ್ತು ನೀಡಲಾಗುತ್ತದೆ. ಆದರೆ ಜೀವಕೇಂದ್ರಿತ ಧರ್ಮದಲ್ಲಿ ಪ್ರತಿ ಜೀವಿಯಲ್ಲಿಯೇ ದೇವರನ್ನು ಕಾಣುವ ದೃಷ್ಟಿ ಬೆಳೆದು, ದಾಸೋಹ ಬದುಕು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ಜೀವಕೇಂದ್ರಿತ ಧರ್ಮದ ಸಾರವನ್ನು ಬಸವಣ್ಣನವರು “ಲಿಂಗದ ಬಾಯಿ ಜಂಗಮ”ಎಂಬ ವಚನದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ವಿವರಿಸಿದರು.
ದಾಸೋಹ ಪರಂಪರೆಯ ಹಿನ್ನೆಲೆ, ಅದರ ಮಹತ್ವ ಹಾಗೂ ಇಂದಿನ ಸಮಾಜದಲ್ಲಿರುವ ಅಸಂಗತತೆಗಳ ಕುರಿತು ಮಾತನಾಡುತ್ತಾ, “ದೇವರನ್ನು ಒಲಿಸಿಕೊಳ್ಳುವ ಮಾರ್ಗ ಬೇರೆ; ನಾವೇ ದೇವರಾಗುವ ದಾಸೋಹ ಪರಂಪರೆಯ ಮಾರ್ಗ ಬೇರೆ”ಎಂಬ ಆಳವಾದ ವಿಚಾರವನ್ನು ಮಂಡಿಸಿದರು.
ದೇವರ ಹಿಂದೆ ಓಡುವುದು ಸರಿಯಾದ ದಾರಿಯಲ್ಲ; ಬದಲಾಗಿ ನಮ್ಮ ಹಿಂದೆ ದೇವರು ಬರುವಂತೆ ಬದುಕುವುದು ಶ್ರೇಷ್ಠ ಮಾರ್ಗ ಎಂದು ಹೇಳಿ, ಬಸವಣ್ಣನವರ “ದೇಹವೇ ದೇವಾಲಯ”ಎಂಬ ವಚನವನ್ನು ಉಲ್ಲೇಖಿಸಿದರು.
ಶಿವಸ್ವರೂಪಿಯನ್ನು ಅರಿತ ನಂತರ ಎಲ್ಲ ಜೀವಿಗಳಲ್ಲಿಯೂ ಶಿವಸ್ವರೂಪವೇ ಕಾಣುತ್ತದೆ. ಈ ಭಾವ ಮೂಡಿದಾಗ, ಜೀವಿಗಳ ತೃಪ್ತಿಗಾಗಿ ಮನಸ್ಸಪೂರ್ವಕವಾಗಿ ಮಾಡುವ ದಾಸೋಹಕ್ಕೆ ನಿಜವಾದ ತೂಕ ಮತ್ತು ಅರ್ಥ ಸಿಗುತ್ತದೆ ಎಂದು ತಿಳಿಸಿದರು.

ಉತ್ತರ ಭಾರತದ ದೇವಾಲಯಗಳು ಕಲ್ಪನಾತ್ಮಕ ದೇವರ ಗುಡಿಗಳಾಗಿದ್ದರೆ, ದಕ್ಷಿಣ ಕರ್ನಾಟಕದಲ್ಲಿ ಇರುವವು ಶರಣರು ಮತ್ತು ಮಹಾತ್ಮರ ಗುಡಿಗಳಾಗಿವೆ. ಇದು ದಾಸೋಹ ಪರಂಪರೆಯ ಫಲ, ವ್ಯವಸ್ಥೆ ಮತ್ತು ಮಹತ್ವವನ್ನು ಸೂಚಿಸುತ್ತದೆ ಎಂದು ವಿವರಿಸಿದರು.
ಇಂತಹ ದಾಸೋಹ ಪರಂಪರೆಯ ಶ್ರೇಷ್ಠ ನೇತಾರರಾದ ಕಲ್ಯಾಣದ ಶರಣ ಬಸವಣ್ಣನವರ ಆದರ್ಶಗಳ ಮುಂದುವರೆದ ಭಾಗವಾಗಿ, ಕರುಣೆಯ ಕಂದನಾಗಿ ಹುಟ್ಟಿ ಬಂದವರು ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರು ಎಂದು ಅಭಿಪ್ರಾಯಪಟ್ಟರು.
ದುರ್ವರ್ತನೆಗಳನ್ನು ಪರಿವರ್ತಿಸಿ ಸದಾಚಾರಕ್ಕೆ ತರುವ ಉದ್ದೇಶದಿಂದ ಶರಣರು ದಾಸೋಹ ಎಂಬ ಪರೋಪಕಾರಿಕ ಪರಿಕಲ್ಪನೆಯನ್ನು ರೂಪಿಸಿದರು ಎಂದು ವಿವರಿಸುತ್ತಾ, ಶರಣರ ಜೀವನದ ಅನೇಕ ವಾಸ್ತವ ಘಟನಗಳನ್ನು ಉದಾಹರಣೆಗಳೊಂದಿಗೆ ಮನಮುಟ್ಟುವಂತೆ ವಿವರಿಸಿದರು.
ಕಡಕೋಳ ಮಡಿವಾಳಪ್ಪನವರಿಗೆ ಶರಣಬಸವೇಶ್ವರರು ಲಿಂಗದೀಕ್ಷೆ ನೀಡಿದ ಘಟನೆ, ಅವರು ನೀಡಿದ ತತ್ವಪದಗಳ ಮಹತ್ವ, ಶರಣಬಸವೇಶ್ವರರ ಮದುವೆಯ ಸಂದರ್ಭದಲ್ಲಿ ಹೆಂಡತಿಯ ತಾಯಿ-ಅಣ್ಣಂದಿರ ನೋವು ಹಾಗೂ ಅವರ ಮೃದು, ಕರುಣಾಮಯ ಸ್ವಭಾವದ ಬಗ್ಗೆ ವಿವರಿಸಿದರು.
ಇತರ ಶರಣರಂತೆ ಇವರು ಸಹ ಅರಳಗುಂಡಗಿಯನ್ನು ತ್ಯಜಿಸಿ ಲಿಂಗಾಯತರ ಪವಿತ್ರ ತೀರ್ಥ ಕ್ಷೇತ್ರವಾದ ಬಸವಕಲ್ಯಾಣದತ್ತ ಹೊರಟಾಗ, ಫರಹತಬಾದ್‌ನಲ್ಲಿ ಬರಗಾಲದಿಂದ ಬಳಲುತ್ತಿದ್ದ ಗ್ರಾಮಸ್ಥರ ಕಷ್ಟವನ್ನು ಕಂಡು ಅಲ್ಲಿಯೇ ಉಳಿದು ದಾಸೋಹ ಆರಂಭಿಸಿದ ಘಟನೆ ವಿಶೇಷವಾಗಿ ಗಮನ ಸೆಳೆಯಿತು.
ನಂತರ ಕಲಬುರಗಿಯ ಶರಣಸಿರಸಗಿ ಗ್ರಾಮಕ್ಕೆ ಬಂದು, ಮಕ್ಕಳಿಲ್ಲದೆ ದುಃಖಿಸುತ್ತಿದ್ದ ಕುಟುಂಬಕ್ಕೆ ತೊಟ್ಟಿಲಲ್ಲಿದ್ದ ದೊಡ್ಡಪ್ಪಗೌಡರ ಸ್ವಂತ ಮಗನನ್ನೇ ದಾಸೋಹ ರೂಪದಲ್ಲಿ ನೀಡಿದ ಘಟನೆಯನ್ನು ಅವರು ಭಾವನಾತ್ಮಕವಾಗಿ ವಿವರಿಸಿದರು. “ಸಾವಿರ ಕುಳ್ಳಿಗೆ ಫಲ ಸಂತಾನ”ಎಂಬ ನುಡಿಯ ಅರ್ಥವನ್ನು ವಿವರಿಸುತ್ತಾ, ಶರಣಬಸವೇಶ್ವರರು ತಮ್ಮ ಆರೋಗ್ಯವನ್ನೇ ಇತರರ ಸೇವೆಗೆ ದಾಸೋಹ ಮಾಡಿ ಕ್ಷಯರೋಗವನ್ನು ಸ್ವೀಕರಿಸಿದ ತ್ಯಾಗಮಯ ಬದುಕಿನ ಕುರಿತು ಮನಮುಟ್ಟುವಂತೆ ತಿಳಿಸಿದರು.
ಪ್ರತಿ ಜೀವಿಯಲ್ಲಿಯೂ ಶಿವನನ್ನು ಕಾಣುವ ದಾಸೋಹ ಪರಂಪರೆಯ ಪರಮಾವಧಿಯಾಗಿ ಮಹಾದಾಸೋಹಿ ಶರಣಬಸವೇಶ್ವರರ ಜೀವನವನ್ನು ಚಿತ್ರಿಸಿದ ಅವರು, “ಭೂಕೈಲಾಸವಾಸಪ್ರಭೋ ಹರಹರ” ಎಂಬ ನುಡಿಯ ತಾತ್ವಿಕ ಅರ್ಥವನ್ನೂ ವಿವರಿಸಿದರು. ಈ ಅನುಭಾವವು ಬಸವ ಜ್ಯೋತಿ ಕಾರ್ಯಕ್ರಮಕ್ಕೆ ತಾತ್ವಿಕ ಗಂಭೀರತೆ, ಭಾವನಾತ್ಮಕ ಆಳ ಮತ್ತು ದಾಸೋಹ ಪರಂಪರೆಯ ಮಹತ್ವವನ್ನು ಹೊಸದಾಗಿ ಅರಿಯುವ ಪ್ರೇರಣೆಯನ್ನು ನೀಡಿತು.

Very well presented thought. Pleasing God and Becoming God are two different routes. Words will fall short for Basavadi-Sharanaru for giving Vachana Sahitya and Basava Tatva to us. Sharanru Sharanarthi 🙏
ಪ್ರೊಫೆಸರ್ ಸಂಜಯ ಮಾಕಲ್ ಸರ್ ಅವರು ಶರಣ ಧರ್ಮವನ್ನು ಆಳವಾಗಿ ಅಧ್ಯಯನಮಾಡಿ ಆಸಕ್ತಿರಿಗೆ ಆನಂದವಾಗುವಂತೆ ಉಣಬಡಿಸುತ್ತಾರೆ.