ದಾವಣಗೆರೆ
(ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. )
ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ ಇತ್ತು. ಇಡೀ ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯನ್ನು ದಾವಣಗೆರೆಯಲ್ಲಿ ಕರೆಯಲಾಯಿತು.
ಅಭಿಯಾನಕ್ಕೆ ಜನರನ್ನು ಸಂಘಟಿಸಲು ಸಾಮಾಜಿಕ ಜಾಲತಾಣ ಪತ್ರಿಕೆಗಳ ಮೂಲಕ ಪ್ರಚಾರ ಕೊಡಲಾಯಿತು.
ಜಾಗತಿಕ ಲಿಂಗಾಯತ ಮಹಾಸಭೆ, ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವ ದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಬಸವ ಬಳಗ, ಕದಳಿ ವೇದಿಕೆ ಹೀಗೆ ಬಸವಪರ ಸಂಘಟನೆಗಳ ಮೂಲಕ ಪ್ರಚಾರ ಮಾಡಲಾಯಿತು.
ದಾವಣಗೆರೆ ಜಿಲ್ಲೆಯ ವತಿಯಿಂದ ಪ್ರಚಾರ ವಾಹನ ಸಿದ್ಧಮಾಡಿಕೊಂಡು ತಾಲೂಕು ಮಟ್ಟದಲ್ಲಿ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮಾಡಿ ಸಂಘಟನೆ ಮಾಡಲಾಯಿತು.
ಅದರಲ್ಲೂ ಜಗಳೂರು ಕ್ಷೇತ್ರದ ಶಾಸಕರು ಸ್ವತಃ ತಾವೇ ಜಗಳೂರು ನಗರದಲ್ಲಿ ಪ್ರಚಾರ ಕಾರ್ಯ ನಡೆಸಿದ್ದು ವಿಶೇಷವಾಗಿತ್ತು.
ಅಭಿಯಾನದ ಯಶಸ್ಸಿಗೆ ಕಾರ್ಯಕರ್ತರ ಪಡೆಯೇ ಸಿದ್ಧವಾಯಿತು. ತಮ್ಮ ಮನೆಯ ಕಾರ್ಯಕ್ರಮದಂತೆ ಎಲ್ಲರೂ ತಮ್ಮ ತನು ಮನ ಧನ ನೀಡಿ ಸಹಕರಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಕಾರ್ಯಕ್ರಮ ನಡೆಯಲು ಬಾಪೂಜಿ ಬ್ಯಾಂಕ್ ಸಮುದಾಯ ಭವನ ಉಚಿತವಾಗಿ ನೀಡಿದರು.
ಬಸವ ಸಂಸ್ಕೃತಿ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಣಬೇರು ರಾಜಣ್ಣ ಅವರು ದಾಸೋಹದ ಖರ್ಚನ್ನು ಒಪ್ಪಿಕೊಂಡು ನೀಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಿವಯೋಗಿಸ್ವಾಮಿ ಅವರು ಕೇಳದೇ ಇದ್ದರೂ ತಾವೇ ಐವತ್ತು ಸಾವಿರ ರೂಪಾಯಿಗಳನ್ನು ದಾಸೋಹ ಮಾಡಿದರು.
ನೊಣಂಬ ಲಿಂಗಾಯತ ಮಹಾಸಭೆಯವರು ಸಹ ಕೇಳದೇ ದಾಸೋಹ ನೀಡಿದರು. ಜಗಳೂರು ಕ್ಷೇತ್ರದ ಶಾಸಕರು ಸಮಿತಿ ಅಧ್ಯಕ್ಷರಿಗೆ ಪೋನ್ ಮೂಲಕ ನಮ್ಮಿಂದ ಏನಾದರೂ ಸಹಾಯ ಬೇಕೇ ಎಂದು ಕೇಳಿದರು.
ಕಾಯಕ ಜೀವಿಗಳಾದ ಶ್ರಮ ಜೀವಿಗಳು ತಮ್ಮ ಶಕ್ತ್ಯಾನುಸಾರ ದಾಸೋಹ ಮಾಡಿದರು. ಅಲ್ಲದೆ ಒಂದು ತಿಂಗಳು ಕಾಲ ತನು ಮನದಿಂದ ದಾಸೋಹ ಕೊಟ್ಟು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.
ಅಭಿಯಾನದಲ್ಲಿ ಇನ್ನೂ ಹೆಚ್ಚಿನ ಜನ ಪಾಲ್ಗೊಳ್ಳಬೇಕು ಎಂದು ಅನಿಸಿತು. ಹಾಗಾಗಿ ಪ್ರಚಾರ ಇನ್ನೂ ಹೆಚ್ಚಾಗಬೇಕಿತ್ತು ಎನಿಸಿತು.
ಕಾರ್ಯಕ್ರಮ ಅತ್ಯಂತ ಚೆನ್ನಾಗಿ ನಡೆದು ನಮ್ಮ ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಿ ನಡೆಯಿತು.
ಅಭಿಯಾನದಲ್ಲಿ ಗಮನ ಸೆಳೆದಿದ್ದು ಮಕ್ಕಳೊಂದಿಗಿನ ವಚನ ಸಂವಾದ. ಪಾದಯಾತ್ರೆ ಬಹಳ ಚೆನ್ನಾಗಿ ನಡೆಯಿತು ಇದು ಸಹ ಎಲ್ಲರ ಗಮನ ಸೆಳೆಯುವಂತಿತ್ತು.
ಅಭಿಯಾನದಿಂದ ಸಮಾಜಕ್ಕೆ ಐಕ್ಯತೆಯ ಸಂದೇಶ ಬಂತು. ವೈಚಾರಿಕ ಚಿಂತನೆ ಮಕ್ಕಳಲ್ಲಿ ಬಿತ್ತಿದ್ದು ಮಹತ್ವದ ಸಂದೇಶವಾಗಿದೆ.
ಅಭಿಯಾನದಲ್ಲಿ ಬಸವಪರ ಸಂಘಟನೆಗಳು ಒಂದಾಗಿ ಕಾರ್ಯಕ್ರಮ ಮಾಡಿದ್ದು ಒಳ್ಳೆಯ ಪರಿಣಾಮ ಬೀರಿದೆ.
ಬಸವಪರ ಸಂಘಟನೆಗಳು ಒಂದಾಗಿ ಹೋದರೆ ಇನ್ನೂ ಹೆಚ್ಚು ಹೆಚ್ಚು ಜನರಲ್ಲಿ ಬಸವಾದಿ ಶರಣರ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಸುಲಭವಾಗುತ್ತದೆ ಎಂಬ ಅಂಶ ತಿಳಿಯಿತು.
ಅಭಿಯಾನದಲ್ಲಿ ಮಠಾಧೀಶರು ಮತ್ತು ಬಸವಪರ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದರು.
ಪಾಂಡೋಮಟ್ಟಿ ಶ್ರೀಗಳು, ಬಸವಪ್ರಭು ಶ್ರೀಗಳು, ಸಾಣೇಹಳ್ಳಿಯ ಶ್ರೀಗಳು ಹಾಗೂ ಬಸವಪರ ಸಂಘಟನೆಗಳು ಪರಸ್ಪರ ಸಹಕಾರ ಮತ್ತು ಸಹಮತದಿಂದ ಕಾರ್ಯಕ್ರಮ ಯಶಸ್ಸಿಗೆ ದುಡಿದರು.
ಮುಂದಿನ ವರ್ಷ ಮಾತ್ರ ಅಲ್ಲ ಬಸವ ಸಂಸ್ಕೃತಿ ಅಭಿಯಾನ ಪ್ರತಿವರ್ಷ ನಿರಂತರವಾಗಿ ನಡೆಯುತ್ತಲೇ ಇರಬೇಕು. ಏಕೆಂದರೆ ಮನುಷ್ಯ ಒಂದು ಬಾರಿ ಜಾಗೃತನಾದರೆ ಸಾಲದು ಆ ಜಾಗೃತಿ ನಿರಂತರವಾಗಿ ಇರಬೇಕು.
ಹಾಗೂ ಜನರಿಗೆ ಆಧ್ಯಾತ್ಮಿಕ ಹಸಿವು ಇದೆ, ಬಸವ ಪರಂಪರೆಯಿಂದ ಆ ಹಸಿವು ನೀಗದಿದ್ದರೆ ಬೇರೆ ಸಂಪ್ರದಾಯಗಳ ಕಡೆಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಬಸವ ಸಂಸ್ಕೃತಿ ಅಭಿಯಾನ ನಡೆಯಲೇಬೇಕು.