ಬೀದರ:
ವಚನ ಸಾಹಿತ್ಯ ಅರಿವು, ಆಚಾರ, ಅನುಭಾವದ ಮೇಲೆ ನಿಂತಿದೆ. ಎಲ್ಲಾ ಧರ್ಮಗಳ ಸಾರ ಬಸವಣ್ಣನವರ ದಯವೇ ಧರ್ಮದ ಮೂಲವಯ್ಯ ಎಂಬ ವಚನದಲ್ಲಿದೆ ಎಂದು ಬೆಂಗಳೂರು ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಹೇಳಿದರು.
ಅವರು ಬಸವ ಸೇವಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ವಚನ ವಿಜಯೋತ್ಸವದ ೨ನೇ ದಿನ, ಧರ್ಮ ಚಿಂತನ ಗೋಷ್ಠಿಯಲ್ಲಿ ಶರಣ ಸಂಸ್ಕೃತಿಯ ವಿಶಿಷ್ಠತೆ ಕುರಿತು ಅನುಭಾವ ನೀಡಿ, ಭಕ್ತಿ ಕೇವಲ ಪೂಜೆಗೆ ಸಿಮೀತವಾಗಿರದೆ, ಮನುಷತ್ವ ಮತ್ತು ಸಾಮಾಜಿಕ ಸಮಾನತೆಯೊಂದಿಗೆ ಬೆರೆತಿರಬೇಕು ಎಂದರು.
ಬಸವಣ್ಣನವರ ಭಕ್ತಿಯ ಸಾರ ಸಂಪೂರ್ಣ ಶರಣಾಗತಿ. ಭಕ್ತಿಗೆ ಅಹಂಕಾರ ಅಡ್ಡಿಯಾಗುತ್ತದೆ. ಅಹಂಕಾರದಿಂದ ಕಾಮ, ಕ್ರೊಧ ಆವರಿಸುತ್ತದೆ. ಭಕ್ತಿಗೆ ತನುವಿನ ಮೋಹ ಹೋಗಬೇಕು. ಮನದಲ್ಲಿ ನಿರಹಂಕಾರವಿರಬೇಕು. ಭವವನ್ನು ಹೋಗಲಾಡಿಸುವ ಶಕ್ತಿ ಭಕ್ತಿಯಲ್ಲಿದೆ.
ಅನುಭಾವದಿಂದ, ಶರಣರ ಸಂಗದಿಂದ ಭಕ್ತಿ ಉದಯಿಸುತ್ತದೆ. ಭಕ್ತಿಯಿಂದ ಅಹಂಕಾರ ದೂರವಾಗುತ್ತದೆ. ಭಕ್ತಿ ಎಂದರೆ ಕೇವಲ ಪೂಜಾ ಪುನಸ್ಕಾರವಲ್ಲ, ಬದಲಾಗಿ ಕಾಯಕ ದಾಸೋಹ ಗುರು ಶರಣರ ಮಾರ್ಗದರ್ಶನ. ಭಕ್ತಿಯನ್ನು ತ್ಯಾಗ, ಸೇವೆ, ಸರಳತೆಯಲ್ಲಿ ಕಾಣಬಹುದು ಎಂದರು.

ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಡಾ. ಬಸವರಾಜ ಎಲಿಗಾರ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ವಿಶ್ವಸಾಹಿತ್ಯ. ಭಾರತದಾಚೆ ಪರಿಚಯಿಸಲು ಇಂಗ್ಲೀಷ್ ಭಾಷೆಗೆ ಭಾಷಾಂತರಿಸುವುದು ಅತಿ ಅವಶ್ಯಕ. ಆಧ್ಯಾತ್ಮಿಕ ಜ್ಞಾನವನ್ನು ಮಕ್ಕಳಲ್ಲಿ ಮೂಡಿಸಬೇಕು. ಬಸವ ಎನ್ನುವವರು ಅನಾಥರಲ್ಲ. ಬಸವ ಎನ್ನದವರು ಅನಾಥರು.
ನಮ್ಮ ಹಿರಿಯರು, ತಂದೆ-ತಾಯಿಗಳು ದುಡ್ಡಿನ ಹಿಂದೆ ಬಿದ್ದಿರಲಿಲ್ಲ. ನಾವು ದುಡ್ಡಿನ ಹಿಂದೆ ಬಿದ್ದು ಕಳೆದು ಹೋಗುತ್ತಿದ್ದೇವೆ. ವಚನಗಳ ಜ್ಞಾನ ಮತ್ತು ಸಮಾಜ ಸುಧಾರಣೆಯ ಸಂದೇಶಗಳು ಜಾಗತಿಕ ಮಟ್ಟದಲ್ಲಿ ಪಸರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾದ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ, ಲಿಂಗಾಯತ ಧರ್ಮ ವಿಶಿಷ್ವವಾಗಿದ್ದು ಇದು ಸ್ವತಂತ್ರ ಧರ್ಮವಾಗಿದೆ ಎಂದರು. ಸಾನಿಧ್ಯ ವಹಿಸಿಕೊಂಡಿದ್ದ ಭಾತಂಬ್ರಾ ವಿರಕ್ತ ಮಠದ ಪೂಜ್ಯ ಶಿವಯೋಗಿಶ್ವರ ಸ್ವಾಮಿಗಳು ಆಶಿರ್ವಚನ ನೀಡಿದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಖೇಡಾದ ಪೂಜ್ಯ ಶಿವಲಿಂಗ ಸ್ವಾಮಿಗಳು ಮಾತನಾಡಿದರು.
ನಿವೃತ್ತ ಪ್ರಧಾನ ಇಂಜಿನಿಯರ್ ಪಿ.ಸಿದ್ದಪ್ಪ, ಕಾರ್ಯಪಾಲಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ಶಿವನಗೌಡ ಕಲ್ಲಹಂಗರಗಾ, ರವೀಂದ್ರ ಶಾಬಾದಿ, ಶಂಕರ ಕರಣೆ, ರಾಜೇಂದ್ರ ಜೊನ್ನಿಕೇರಿ, ಪ್ರಭು ವಸ್ಮತೆ, ಬಸವರಾಜ ಬಾಲಿಕಿಲೆ, ರೇವಣಸಿದ್ಧಯ್ಯಾ ಮಠ, ಅಶೋಕ ಚಂದ್ರೆ, ಬಸವರಾಜ ಮಾಶೆಟ್ಟಿ, ರವೀಂದ್ರ ಶಿವಪೂಜೆ, ಶರಣಪ್ಪ ಮೈಲೂರಕರ, ಮಹಾಂತೇಶ ಕಣ್ಣೂರು, ಸೇರಿದಂತೆ ಇತರರಿದ್ದರು. ಮೀರಾ ಖೇಣಿ ಸ್ವಾಗತಿಸಿದರೆ, ಶೈಲಜಾ ಚಳಕಾಪೂರೆ ನಿರೂಪಿಸಿದರು.
ಹಿರಿಯರಿಗೆ ಗೌರವಾರ್ಪಣೆ:
೨೪ನೇ ವಿಜಯೋತ್ಸವದ ನಿಮಿತ್ಯ ೨೪ ವಿವಿಧ ಕ್ಷೇತ್ರದ ಹಿರಿಯ ಸಾಧಕರನ್ನು ಗೌರವಿಸಲಾಯಿತು. ಪೂಜ್ಯ ಸಿದ್ಧರಾಮೇಶ್ವರ ಮಹಾಸ್ವಾಮಿ, ಪೂಜ್ಯ ಮಹಾಲಿಂಗದೇವರು, ಪೂಜ್ಯ ಶಿವಾನಂದ ದೇವರು ಇದ್ದರು. ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿದ್ದರು.
ಶರಣ ಕಲಾವೈಭವ :
ಜೇಸ್ಕಾಂ ಇಇ ಶಶಿರೇಖಾ ಉದ್ಘಾಟಿಸಿದರು. ಮಹಾದೇವಿ ಬಿರಾದಾರ ಅಧ್ಯಕ್ಷತೆ ವಹಿಸಿದರು. ನೃತ್ಯಾಂಗನಾ ನಾಟ್ಯ ಕಲಾ ಕೇಂದ್ರ ವತಿಯಿಂದ ನಡೆದ ಸಾಮೂಹಿಕ ವಚನ ನೃತ್ಯಗಳು ಜನಮನ ಸೂರೆಗೊಂಡವು. ಕಲಬುರಗಿ ನೀಲಮ್ಮನ ಬಳಗದ ಶರಣೆಯರಿಂದ ವಚನ ಉಗ್ಘಡನೆ, ಯಕ್ಷಗಾನ, ಕೋಲಾಟ ಮತ್ತಿತರ ಕಾರ್ಯಕ್ರಮಗಳು ನಡೆದವು.
