‘ನಾನು ಯಾರು’ ಎಂಬ ಗೊಂದಲಕ್ಕೆ ಬಸವಣ್ಣ ನೀಡಿದ ಉತ್ತರ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಕಲಬುರ್ಗಿ

ಮಾನವನ ಬದುಕಿನಲ್ಲಿ ಯಾವ ಪ್ರಶ್ನೆಯೂ “ನಾನು ಯಾರು?” ಎಂಬ ಪ್ರಶ್ನೆಯಷ್ಟು ಆಳವಾದುದಿಲ್ಲ; ಇದರಷ್ಟು ಅಶಾಂತಿಗೊಳಿಸುವುದಿಲ್ಲ; ಇಷ್ಟು ಮುಕ್ತಿಗೊಳಿಸುವುದಿಲ್ಲ. ಮಾನವನ ಮನಸ್ಸಿನಲ್ಲಿ ನಾನು ಅನೇಕ ಜನ್ಮಗಳನ್ನು ದಾಟಿ ಬಂದಿದ್ದೇನೆ ಎಂಬ ಭಾವನೆ ಉದಯಿಸಿದ ಕ್ಷಣದಿಂದಲೇ ಆತ್ಮಚಿಂತನೆ ಆರಂಭವಾಗುತ್ತದೆ. ಪ್ರತಿಯೊಂದು ಜನ್ಮದಲ್ಲೂ ಬೇರೆ ದೇಹ, ಬೇರೆ ಹೆಸರು, ಬೇರೆ ತಂದೆ–ತಾಯಿ, ಬೇರೆ ಬಂಧು–ಬಳಗ. ಆದರೆ ಎಲ್ಲ ಜನ್ಮಗಳಲ್ಲೂ ಮುಂದುವರಿಯುವ ಒಂದು ಅನುಭವ ಮಾತ್ರ ಇದೆ; ಅದೇ “ನಾನು” . ಆ “ನಾನು” ಯಾರು ಎಂಬುದನ್ನು ಹಿಡಿಯುವ ಪ್ರಯತ್ನವೇ ಆತ್ಮಚಿಂತನೆಯ ತತ್ತ್ವ.

ನಾವು ನಂಬುವಂತೆ, ಹಿಂದಿನ ಜನ್ಮಗಳಲ್ಲಿ ನನಗೆ ಬೇರೆ ಬೇರೆ ತಂದೆ–ತಾಯಿ, ಬಂಧು–ಬಳಗದವರು ಇದ್ದರು. ಈ ಜನ್ಮದಲ್ಲಿ ಈ ದೇಹಕ್ಕೆ ಈ ತಂದೆ–ತಾಯಿ, ಈ ಕುಟುಂಬ, ಈ ಸಮಾಜ ಸಿಕ್ಕಿದೆ. ಮುಂದೆ ಬರಬಹುದಾದ ಜನ್ಮಗಳಲ್ಲಿ ಮತ್ತೆ ಬೇರೆ ತಂದೆ–ತಾಯಿ, ಬೇರೆ ಸಂಬಂಧಗಳು ಇರಬಹುದು. ಇಷ್ಟೇ ಅಲ್ಲ, ನನ್ನ ಹಿಂದಿನ ಜನ್ಮಗಳ ತಂದೆ–ತಾಯಿಗಳಿಗೂ ಮತ್ತು ಬಂಧುಬಳಗದವರಿಗೂ ಅವರವರ ಹಿಂದಿನ ಜನ್ಮಗಳಲ್ಲಿ ಬೇರೆ ತಂದೆ–ತಾಯಿಗಳು,  ಬಂಧುಬಳಗದವರು ಇದ್ದರು. ಹೀಗಾಗಿ ಸಂಬಂಧಗಳ ಈ ಸರಪಳಿ ಅಂತ್ಯವಿಲ್ಲದೆ ಸಾಗುತ್ತಾ ಕೊನೆಗೆ ಒಂದು ಅನಾವಸ್ಥಾತ ಸ್ಥಿತಿಗೆ ತಲುಪಿ ಅಂತಿಮವಾಗಿ ಒಂದು ತೀವ್ರವಾದ ಪ್ರಶ್ನೆ ಎದುರಾಗುತ್ತದೆ: ಅದುವೇ “ನಾನು ಎಂದರೆ ಯಾರು? ಮತ್ತು ನನ್ನ ನಿಜವಾದ ತಂದೆ–ತಾಯಿ ಯಾರು?”

ಈ ಪ್ರಶ್ನೆಯನ್ನು ಬಸವಣ್ಣನವರು ಅತ್ಯಂತ ಕ್ರಾಂತಿಕಾರಿ ರೀತಿಯಲ್ಲಿ ಎದುರಿಸುತ್ತಾರೆ. ಅವರು ಸಂಬಂಧಗಳನ್ನು ತಳ್ಳಿಹಾಕುವುದಿಲ್ಲ; ನಿರಾಕರಿಸುವುದಿಲ್ಲ. ಆದರೆ ಸಂಬಂಧಗಳನ್ನೇ ಅಂತಿಮ ಸತ್ಯ ಎಂದು ಒಪ್ಪುವುದಿಲ್ಲ. ಅವರು ಪ್ರಶ್ನಿಸುತ್ತಾರೆ: ನೀನು ದೇಹವೇ? ದೇಹವಾಗಿದ್ದರೆ ನೀನು ಹುಟ್ಟಬೇಕು, ಸಾಯಬೇಕು. ಆದರೆ ನೀನು ಹುಟ್ಟುವ ಮೊದಲೂ ಸಹ ಇದ್ದೆ ಎಂಬ ಅನುಭವ ಎಲ್ಲಿಂದ ಬಂತು? “ನೀನು ದೇಹವಲ್ಲ; ದೇಹ ನಿನ್ನದು.” ದೇಹಕ್ಕೆ ತಂದೆ–ತಾಯಿ ಇದ್ದಾರೆ. ಆದರೆ ನಿನಗೆ ತಂದೆ–ತಾಯಿ ಯಾರು?

ಆಗ ಬಸವಣ್ಣನವರ ಈ ವಚನ ಹೊರಹೊಮ್ಮುತ್ತದೆ:

“ತಂದೆ ನೀನು; ತಾಯಿ ನೀನು;

ಬಂಧು ನೀನು; ಬಳಗ ನೀನು;

ನೀನಲ್ಲದೆ ಮತ್ತಾರೂ ಇಲ್ಲವಯ್ಯ ಕೂಡಲಸಂಗಮದೇವ.”

ಇದು ಭಾವೋದ್ರೇಕದ ಮಾತಲ್ಲ. ಲೌಕಿಕ ಸಂಬಂಧಗಳನ್ನೆಲ್ಲ ಕತ್ತರಿಸಿ ಹಾಕುವಂತಹ ತತ್ತ್ವಮಯ, ಕ್ರಾಂತಿಕಾರಿ ವಚನ. ನನ್ನ ಅಸ್ತಿತ್ವಕ್ಕೆ ಕಾರಣನಾದವನು ನೀನು. ನನ್ನೊಳಗಿನ ಚೈತನ್ಯದ ಮೂಲ ನೀನು. ನೀನು ಬಂದಿಲ್ಲ; ನೀನು ಹಿಂದೆಯೂ ಇದ್ದೆ, ಈಗಲೂ ಇದ್ದೀಯ, ಮುಂದೆಯೂ ಇರುವೆ. ಬರುವುದು–ಹೋಗುವುದು ಈ ದೇಹ ಮಾತ್ರ. ಬಸವಣ್ಣನವರು ಇದಕ್ಕೆ ನಮ್ಮದೇ ಇರುವಿಕೆಯ ಅನುಭವವನ್ನು ಸಾಕ್ಷಿಯನ್ನಾಗಿಸುತ್ತಾರೆ.

ಮಾನವನು “ನನ್ನದು” ಎಂಬ ಅಹಂಕಾರದ ಸುತ್ತ ತಂದೆ–ತಾಯಿ, ಗಂಡ–ಹೆಂಡತಿ, ಮಕ್ಕಳು, ಬಂಧು–ಬಳಗ, ಸಮಾಜ ಎಂಬ ದೇಹಸಂಬಂಧಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಬಸವಣ್ಣನವರು ಈ “ನನ್ನದು” ಎಂಬ ಅಹಂಕಾರವನ್ನೇ ಪ್ರಶ್ನಿಸುತ್ತಾರೆ. ನೀನು ಹುಟ್ಟುವ ಮೊದಲು ನಿನ್ನದು ಏನಿತ್ತು? ನೀನು ಹೋದ ನಂತರ ನಿನ್ನದು ಏನು ಉಳಿಯುತ್ತದೆ? ಅಹಂಕಾರವೆಂದರೆ ಸುಳ್ಳು ಕೇಂದ್ರ. ಅದು ದೇಹಸಂಬಂಧಗಳಿಂದ ಬದುಕುತ್ತದೆ; ಭಯದಿಂದ ಬೆಳೆಯುತ್ತದೆ; ಮಾಲೀಕತ್ವದ ಭಾವಾಧಿಕಾರದಿಂದ ಬಲಗೊಳ್ಳುತ್ತದೆ. ಆದರೆ ಬಸವಣ್ಣನವರು “ನನ್ನದು” ಎಂಬ ಕೇಂದ್ರವನ್ನು ಮತ್ತೊಂದು ಮಟ್ಟದಲ್ಲಿ ನೋಡುತ್ತಾರೆ. ಅದುವೇ ಚೈತನ್ಯಕೇಂದ್ರ, ಲಿಂಗಕೇಂದ್ರ, ಒಳಗಿನ ಜಾಗೃತಿ, ಅಸ್ತಿತ್ವದ ಕೇಂದ್ರ.

“ಬಂಧು ನೀನು, ಬಳಗ ನೀನು” ಎಂದರೆ ನನಗೆ ಸೇರಿದ ಭಾವನೆ ಕೊಡುವುದು ನೀನು; ಭದ್ರತೆ ಕೊಡುವುದು ನೀನು; ಅಸ್ತಿತ್ವದ ಆಧಾರ ನೀನು. ಇಂದಿನ ಸಂಬಂಧಗಳು ಯಾಕೆ ಒಡೆದು ಹೋಗುತ್ತವೆ? ಯಾಕೆ ಅಸೂಯೆ, ಅನುಮಾನ, ಅಸಹನೆಗಳು ಹುಟ್ಟುತ್ತವೆ. ಕಾರಣ ನಾವು ಸಂಬಂಧಗಳಿಂದ ಪೂರ್ಣತೆ ನಿರೀಕ್ಷಿಸುತ್ತೇವೆ. ಅಪೂರ್ಣ ವ್ಯಕ್ತಿ ಸಂಬಂಧವನ್ನು ನಾಶಮಾಡುತ್ತಾನೆ; ಪೂರ್ಣ ವ್ಯಕ್ತಿ ಸಂಬಂಧವನ್ನು ಹಬ್ಬದಂತೆ ಬದುಕುತ್ತಾನೆ. ಆದ್ದರಿಂದ ಅವನು ಸಂಬಂಧಗಳಲ್ಲಿ ಬಂಧಿತನಾಗುವುದಿಲ್ಲ. ಹಾಗಂತ ತಂದೆ–ತಾಯಿಯರನ್ನು ತ್ಯಜಿಸಬೇಕು ಅಥವಾ ನಿರಾಕರಿಸಬೇಕು ಎಂಬುದಲ್ಲ. ಅವರನ್ನು ಅಂತಿಮ ಸತ್ಯ ಎಂದು ಭ್ರಮಿಸಬೇಡ ಎಂಬುದಷ್ಟೇ. ತಂದೆ–ತಾಯಿ ಈ ದೇಹಕ್ಕೆ ಕಾರಣ; ಆದರೆ ನೀನು ದೇಹವಲ್ಲ; ಚೈತನ್ಯ. ಸಂಬಂಧಗಳನ್ನು ಗೌರವಿಸು, ಆದರೆ ಅವುಗಳಲ್ಲಿ ನಿನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಡ.

ಆದ್ದರಿಂದಲೇ ಬಸವಣ್ಣನವರು ತಾವು ಲಿಂಗನಿಷ್ಠ ಎಂದು ನಿರೂಪಿಸುತ್ತಾರೆ. ಅವರ ಚೈತನ್ಯಮಯ ಅಸ್ತಿತ್ವವೇ ಅದಕ್ಕೆ ಸಾಕ್ಷಿ. ಈ ಜಗತ್ತಿನಲ್ಲಿ ನೀನು ಏನಾದರೂ ಆಗಿರಬಹುದು ಆದರೆ ಅಂತಿಮವಾಗಿ ನೀನು ಹುಡುಕುವುದು ಒಂದೇ: ನಾನು ಯಾರು? ದೇಹ ಹೋಗುತ್ತದೆ; ಸಂಬಂಧಗಳು ಬದಲಾಗುತ್ತವೆ; ಅರಿವು ಅಥವಾ ಜಾಗೃತಿ ಮಾತ್ರ ಉಳಿಯುತ್ತದೆ. ಅದಕ್ಕೇ ಬಸವಣ್ಣನವರು ಅಚಲವಾಗಿ, ದೈರ್ಯವಾಗಿ ಹೇಳುತ್ತಾರೆ—

“ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು.” ಎಂದು. ಇದು ಅಹಂಕಾರವಲ್ಲ; ಅಹಂಕಾರದ ಮರಣ. ಇದನ್ನು ಅರ್ಥ ಮಾಡಿಕೊಂಡವನು ಸಂಬಂಧಗಳಲ್ಲಿ ಮುಳುಗುವುದಿಲ್ಲ ಬದಲಾಗಿ ಸಂಬಂಧಗಳ ಮೂಲಕ ಬೆಳೆಯುತ್ತಾನೆ. ಇದೇ ಜಿಂದಗಿ–ಬಂದಗಿ ಗೆದ್ದ ಬಸವಾದಿ ಶರಣರ ನಿಜವಾದ ಆತ್ಮಚಿಂತನೆಯ ತತ್ತ್ವ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.