ಕೊಪ್ಪಳ:
ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯನವರ ಕೊಡುಗೆ ಅಪಾರವಾಗಿದ್ದು, ವಚನಗಳ ಮೂಲಕ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ಹೇಳಿದರು.

ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಕೊಪ್ಪಳ, ನೇಕಾರ ಸಮುದಾಯ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶರಣ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಸಿಮಯ್ಯ ಅವರ ವಚನಗಳು ಸರಳತೆ, ಸಮಾನತೆ ಹಾಗೂ ಭಕ್ತಿ ತತ್ವಗಳನ್ನು ಸಾರುತ್ತವೆ. ಅವರು ಜಾತಿಬೇಧವನ್ನು ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿದ ಶ್ರೇಷ್ಠ ವಚನಕಾರರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.

ಗಂಗಾವತಿ ಮುರಹರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ, ಸಾಹಿತಿ ಅಮರಮ್ಮ ಕೋಚಿ ಅವರು ದೇವರ ದಾಸಿಮಯ್ಯ ಅವರ ಕುರಿತು ನೀಡಿದ ವಿಶೇಷ ಉಪನ್ಯಾಸದಲ್ಲಿ, ದಾಸಿಮಯ್ಯನವರು ಕನ್ನಡದ ಮೊದಲ ವಚನಕಾರರಲ್ಲಿ ಒಬ್ಬರು. ಇವರನ್ನು ವಚನ ಸಾಹಿತ್ಯದ ಆದ್ಯ ವಚನಕಾರ ಎಂದು ಕರೆಯಲಾಗುತ್ತದೆ.
ಅಂದಿನ ಕಾಲದ ಜನರಲ್ಲಿದ್ದ ಮೂಢನಂಬಿಕೆ, ಮೇಲು-ಕೀಳು ಎಂಬ ಭೇದಭಾವವನ್ನು ಇವರು ತಮ್ಮ ಸರಳ ಮಾತುಗಳ ವಚನಗಳ ಮೂಲಕ ತಿದ್ದಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ ಗವಿಸಿದ್ದಪ್ಪ ಹಾಗೂ ನೇಕಾರ ಸಮುದಾಯದ ಅಧ್ಯಕ್ಷರಾದ ಶಿವಶಂಕರಪ್ಪ ಚೆನ್ನಿ, ಶಿವಶಂಕರಪ್ಪ ಕರಡಕಲ್ ಹಾಗೂ ನೇಕಾರ ಸಮಾಜ ಬಂಧುಮಿತ್ರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಗೌರಿಶಂಕರ ದೇವಸ್ಥಾನ ಆವರಣದಿಂದ ಸಾಹಿತ್ಯ ಭವನದವರೆಗೆ ಶರಣ ದೇವರ ದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
