ಲಿಂಗ ಪೂಜಿಸಿ ಲಿಂಗವೇ ಆಗುವ ಸಿದ್ಧಾಂತ ಲಿಂಗಾಯತ ಧರ್ಮದ್ದು
ನ್ಯಾಮತಿ
ಕೆಲವರ ಮನೆಯಲ್ಲಿ ಕಲ್ಲು, ಹಿತ್ತಾಳೆ, ತಾಮ್ರ, ಬೆಳ್ಳಿ, ಬಂಗಾರ, ಪ್ಲ್ಯಾಸ್ಟಿಕ್ ಮೂರ್ತಿಗಳು ತುಂಬಾ ತುಂಬಿಕೊಂಡಿರುತ್ತವೆ. ಅವು ಲಿಂಗಾಯತರ ಮನೆಗಳಲ್ಲ. ಯಾಕೆಂದರೆ ಲಿಂಗವೊಂದನ್ನು ಧರಿಸಿ, ಪೂಜಿಸಿ ಲಿಂಗವೇ ಆಗುವ ಸಿದ್ಧಾಂತ ಲಿಂಗಾಯತ ಧರ್ಮದ್ದು ಎಂದು ಇಳಕಲ್ಲ ಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು ಹೇಳಿದರು.
ಗಂಗನ ಕೋಟೆ ಗ್ರಾಮದಲ್ಲಿ, ನ್ಯಾಮತಿ ತಾಲೂಕು ಜಾಗತಿಕ ಲಿಂಗಾಯಿತ ಮಹಾಸಭಾ ಆಯೋಜಿಸಿದ್ದ, ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ, ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತಿದ್ದರು.

ಲಿಂಗದೊಂದಿಗೆ ದೃಷ್ಟಿ ಯೋಗ ಮಾಡಿದರೆ ಮನದಲ್ಲಿನ ದ್ವೇಷ, ಅಸೂಯೆ, ಮದ, ಮತ್ಸರ ಅಳಿದೋಗಿ ಮನಸು ಶುಭ್ರವಾಗುತ್ತದೆ. ಶುಭ್ರವಾದ ಮನಸ್ಸಿನಿಂದ ಅರಿವು ಉಂಟಾಗುತ್ತದೆ. ಈ ಅರಿವಿನಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತವೆ. ಋಣಾತ್ಮಕ ಚಿಂತನೆಗಳು ಅಳಿದು ತನ್ಮೂಲಕ ಆ ವ್ಯಕ್ತಿಯಿಂದ ಸಾಮಾಜಿಕ ಕಲ್ಯಾಣ ಉಂಟಾಗುತ್ತದೆ ಆಗ ಆತ ನಡೆದಾಡುವ ದೇವರಾಗುತ್ತಾನೆ, ಆದ್ದರಿಂದ ಲಿಂಗಪೂಜೆಯನ್ನು ಮಾಡಿಕೊಳ್ಳಬೇಕು. ಆದರೆ ಲಿಂಗಪೂಜೆಯನ್ನು ಬಿಟ್ಟರೆ ಮನುಷ್ಯ ದೇವರಾಗುವಂತಹ, ಅರಿವಿನ ಮೂರ್ತಿಯಾಗುವ ಅವಕಾಶದಿಂದ ತಪ್ಪಿಸಿಕೊಳ್ಳುತ್ತೇವೆ.

ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮೇಶ್ವರ ಆದಿ ಶರಣರಿಂದ ಹಿಡಿದು ಯಡಿಯೂರು ಸಿದ್ದಲಿಂಗೇಶ್ವರ, ಇತ್ತೀಚಿನ ಶಿವಕುಮಾರ ಮಹಾಸ್ವಾಮಿಗಳು, ಪಾಂಡೋಮಟ್ಟಿ ಚನ್ನಬಸವೇಶ್ವರ ಶ್ರೀಗಳು, ಸಿದ್ದೇಶ್ವರ ಅಪ್ಪಗಳು ಮುಂತಾದವರು ಮಹಾತ್ಮರಾಗಲು ಅವರು ಮಾಡುತ್ತಿದ್ದ ಇಷ್ಟಲಿಂಗ ಪೂಜೆಯೇ ಕಾರಣ ಎಂದು ಹೇಳಿದರು.
ಅನ್ನ, ಮಾನ, ಪ್ರಾಣ ಉಳಿಸುವಂತಹ ಆಚರಣೆಗಳನ್ನು ನಾವು ಮಾಡಬೇಕು. ಯಾವುದೇ ಆಹಾರವನ್ನು ಕೆಡಿಸುವಂತಹ ಆಚರಣೆ ಮಾಡಬಾರದು. ಹಾಲುಣಿಸುವ ಹಬ್ಬ ಮಾಡಬೇಕೆ ಹೊರತು, ಚೆಲ್ಲುವ, ಕೆಡಿಸುವಂತಹ ಹಬ್ಬ ಮಾಡಬಾರದು. ನಾವು ಮಾಡುವ ಆಚರಣೆಯಿಂದ ಪ್ರಾಣಕ್ಕೆ ಧಕ್ಕೆ ಆಗಬಾರದು, ಅದು ಮಾನವೀಯತೆಯಲ್ಲ.

ಮೌಢ್ಯತೆಯಿಂದ ಮಾನವೀಯತೆಯ ಕಡೆಗೆ ಬರಬೇಕು, ಮನುಷ್ಯನ ಮಾನ, ಪ್ರಾಣ, ಅನ್ನ ಉಳಿಸಿ ಬೆಳಿಸಿದಂತವರು, ಮನುಷ್ಯನ ಆತ್ಮ ಗೌರವವನ್ನು ಹೆಚ್ಚಿಸಿದ ಬಸವಣ್ಣನವರು ಎಂದು ಮಹಾಂತಪ್ಪ ಹೇಳಿದರು.
ಪ್ರಾಸ್ತಾವಿಕವಾಗಿ ನ್ಯಾಮತಿ ತಾಲೂಕು ಜಾಗತಿಕ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಎಚ್. ಮಹೇಶ್ವರಪ್ಪ, ಶಿವಯೋಗಿ ಸಿದ್ದರಾಮೇಶ್ವರ ಕುರಿತು ನಿವೃತ್ತ ಶಿಕ್ಷಕಿ, ಶಿವಮೊಗ್ಗ ಬಸವ ದಳದ ಶಾಂತಮ್ಮ ಮಾತನಾಡಿದರು. ಬಾಳಪ್ಪ ಅವರು ವಚನ ಪ್ರಾರ್ಥನೆಯನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಹೆಚ್.ಎಂ ವಿಶುಕುಮಾರ್, ಎಂ.ಪಿ.ಜಿ. ಚಂದ್ರಪ್ಪ, ತಾಲೂಕು ಜಾಲಿಂಮ ಗೌರವಾಧ್ಯಕ್ಷ ನಂಜಪ್ಪಗೌಡರು ಉಪಸ್ಥಿತರಿದ್ದರು.
ಮಲೆಬೆನ್ನೂರಿನ ಅಕ್ಕನ ಬಳಗದ ಸದಸ್ಯರು, ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘದವರು ವಚನ ಭಜನೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮ ಆರಂಭಕ್ಕೆ ಮೊದಲು ಎಸ್.ಜೆ. ಶಂಭುಲಿಂಗಪ್ಪ ಮತ್ತು ತಂಡದವರಿಂದ ವಚನ ಗುಗ್ಗಳ ದೊಂದಿಗೆ ಗ್ರಾಮದಲ್ಲಿ ಶ್ರೀ ಗುರು ಬಸವೇಶ್ವರ ಹಾಗೂ ಶ್ರೀ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಗೀತಾ ಮಲ್ಲೇಶ ದಾನಹಳ್ಳಿ ಅವರಿಂದ ವಚನ ಗಾಯನ ಏರ್ಪಡಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ವಿನಯ ಹೆಚ್.ಎಮ್. ಸ್ವಾಗತಿಸಿದರು, ಮೇಘರಾಜ ವಂದಿಸಿದರು, ನಿರೂಪಣೆಯನ್ನು ನಾಗರಾಜ ಪಾಟೀಲ ಆರುಂಡಿ ಮಾಡಿದರು.

ದಾಸೋಹಿಗಳಾದ ಶರಣೆ ರೂಪ, ಶರಣ ವಿನಯ ಇವರನ್ನು ವಿವಿಧ ಬಸವಪರ ಸಂಘಟನೆಗಳಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲು ಆಸಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಪೂಜ್ಯರ ಅನುಭಾವದ ನಂತರ ಪ್ರೇರಿತಗೊಂಡು, ಅನೇಕರು ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.