ಧಾರವಾಡ
ಚನ್ನಬಸವೇಶ್ವರ ನಗರದ ಅನಿತಾ-ಅನಿಲ ಅಂಗಡಿಯವರ ಸುಪುತ್ರ ವಿಶಾಲ ಮತ್ತು ಹುಬ್ಬಳ್ಳಿಯ ಸರಿತಾ-ಪಂಚಪ್ಪ ಕಡಗದ ಅವರ ಸುಪುತ್ರಿ ಅಮೃತಾ ಅವರ ಕಲ್ಯಾಣ ಮಹೋತ್ಸವವು ಗುರುವಾರ ನಗರದ ಲಿಂಗಾಯತ ಧರ್ಮ ನಿಜಾಚರಣೆಯಂತೆ ಅದ್ಧೂರಿಯಾಗಿ ನೆರವೇರಿತು.

ರಪಾಟಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ 08ಗಂಟೆಗೆ ವಚನ ಪ್ರಾರ್ಥನೆ, ಸಾಮೂಹಿಕವಾಗಿ ಶರಣರ ಭಜನೆ, ಲಿಂಗಧಾರಣೆ, ಸಹಜ ಶಿವಯೋಗ ಹಾಗೂ ಅನುಭಾವ ಕಾರ್ಯವನ್ನು ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಮತ್ತು ಧಾರವಾಡದ ಶಿವಣ್ಣ ಶರಣ್ಣನವರ, ಬಸವಂತಪ್ಪ ತೋಟದ ಅವರು ನಡೆಸಿಕೊಟ್ಟರು.

09 ಗಂಟೆಗೆ ನಡೆದ ಕಲ್ಯಾಣ ಕಾರ್ಯವನ್ನ ಧಾರವಾಡ ವಚನಮೂರ್ತಿ ಬಸವಂತಪ್ಪ ತೋಟದ ಅವರು ಬಸವಾದಿ ಶರಣರ ವಚನಗಳ ಮೂಲಕ ನಡೆಸಿಕೊಟ್ಟರು.
ಮಧ್ಯಾಹ್ನ 12.30ರ ಕಲ್ಯಾಣ ಮಹೋತ್ಸವವನ್ನು ಧಾರವಾಡ ಬಸವ ಕೇಂದ್ರದ ಎಲ್ಲಾ ಸಂಚಾಲಕರು ನೆರವೇರಿಸಿಕೊಟ್ಟರು. ನೂತನ ವಧುವರರಾದ ಶರಣ ವಿಶಾಲ, ಶರಣೆ ಅಮೃತ ಮೊದಲಿಗೆ ಬಸವಣ್ಣನವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಶರಣೆ ಸಾವಮ್ಮ ಕುರ್ಣೆ ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು. ಶರಣ ಶಿವಪ್ಪ ಕಿತ್ತೂರು ಬಸವ ದ್ವಜಗೀತೆ ಹಾಡಿದರು. ಬಸವ ಕೇಂದ್ರದ ಶರಣ-ಶರಣೆಯರಿಂದ ನೂತನ ದಂಪತಿಗೆ ಭಾವೋಧಕ ಸಿಂಪರಣೆ, ವಿಭೂತಿ ಧಾರಣೆ ನಡೆಯಿತು. ನಂತರ ದಂಪತಿ ಪರಸ್ಪರ ಹಾರ ವಿನಿಮಯ ಮಾಡಿಕೊಂಡರು. ಈ ಎಲ್ಲದರಲ್ಲೂ ರಶ್ಮಿ ಮತ್ತು ಶೈಲೇಶ ಕ್ರಿಯಾಮೂರ್ತಿಗಳಾಗಿದ್ದರು.

ಶರಣ ರುದ್ರಣ್ಣ ಹೊಸಕೆರೆ ಎಲ್ಲರನ್ನು ಸ್ವಾಗತಿಸಿದರು. ಕಲ್ಯಾಣ ಮಹೋತ್ಸವಕ್ಕೆ ಬಂದವರೆಲ್ಲರೂ ನೂತನ ದಂಪತಿಗಳಿಗೆ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು.

ಸುಮಾ ಶಿವಯೋಗಿ ಅಂಗಡಿ, ಶುಭಾ ಶಿವು ಜಾಲಗೇರಿ, ಶಿವಪ್ಪ ಕಿತ್ತೂರ, ಸವಿತಾ, ಪ್ರಜ್ಞಾ ನಡಕಟ್ಟಿ, ರಶ್ಮಿ ನಾಶಿ, ಶಿವಲೀಲಾ ಹೊಸಕೇರಿ, ಭಾವಿದಂಡಿ, ಗುಗವಾಡ, ಶಿವನಾಯಕರ ಬಂಧುಗಳು, ಕೇಸಪ್ಪನ ಹಟ್ಟಿ ಗ್ರಾಮದ ಗುರು-ಹಿರಿಯರು, ಆಪ್ತಮಿತ್ರರು ಉಪಸ್ಥಿತರಿದ್ದರು.

ಕಲ್ಯಾಣ ಮಹೋತ್ಸವದಲ್ಲಿ ವಚನ ಗಾಯನ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು. ಬಂದವರಿಗೆಲ್ಲಾ ಮಹಾಪ್ರಸಾದ ನಡೆಯಿತು.

