ತರೀಕೆರೆ
ಧರ್ಮ ದಯೆ ತೋರಿಸುವುದೇ ಹೊರತು ಹಿಂಸೆಯನ್ನು ಬೋಧಿಸುವುದಿಲ್ಲ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರವಾದಿ ಮಹಮದ್ ಪೈಗಂಬರ್ ಅವರ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಶಾಂತಿ ಪ್ರಕಾಶನ ಸಂಸ್ಥೆಯ ಪ್ರವಾದಿಗಳ ಕುರಿತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕೆಲವು ಪುಸ್ತಕಗಳು ಮನುಷ್ಯರ ಮಧ್ಯೆ ದ್ವೇಷ, ಅಸೂಯೆ ಹುಟ್ಟು ಹಾಕಲು ಕಾರಣವಾಗುತ್ತಿವೆ. ಸಾಕ್ರೆಟಿಸ್, ಯೇಸುಕ್ರಿಸ್ತ, ಪೈಗಂಬರ್, ಬಸವಣ್ಣ, ಗಾಂಧೀಜಿ ಮೊದಲಾದ ಮಹನೀಯರು ಮನುಷ್ಯತ್ವವನ್ನು ಬಿತ್ತಿ, ಬೆಳೆದರು. ಮತೀಯವಾದಿಗಳಿಗೆ ಯಾವ ಧರ್ಮವೂ ಕಾಣುವುದಿಲ್ಲ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್‌ಅಲಿ ಮಾತನಾಡಿ, ಮಾನವರೆಲ್ಲರೂ ಸರಿ ಸಮಾನರು ಎಂಬುದನ್ನು ಪವಿತ್ರ ಕುರ್‌ಆನ್ ಬೋಧಿಸಿದೆ. ದೇವರನ್ನು ಅರಿತು ಬಾಳುವವನು ಶ್ರೇಷ್ಠ ಮನುಷ್ಯನಾಗಿದ್ದಾನೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ರಿಜ್ವಾನ್ ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯ ಆದಿಲ್‌ಪಾಷಾ, ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಶೇಕ್ ಜಾವೀದ್, ಮುಹಮ್ಮದ್ ಅಸದ್, ಹುಜೈಫ ಅಹ್ಮದ್ ಹಾಗೂ ಇತರರಿದ್ದರು.