ಬೀದರ್
ಧರ್ಮ ಮತ್ತು ದೇವರ ಹೆಸರಿನಲ್ಲಿ ಯಾರು ಕೂಡ ಶೋಷಣೆಗೆ ಒಳಗಾಗಬಾರದು. ಅಂತಹ ಶೋಷಣೆಯನ್ನು ತಡೆಯುವುದಕ್ಕೆ ವಚನ ತತ್ವಗಳನ್ನು ಬಸವಾದಿ ಶರಣರು ನಮಗೆ ತಿಳಿಸಿ ಕೊಟ್ಟಿದ್ದಾರೆ ಎಂದು ಗದಗನ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಾಹಾಸ್ವಾಮಿ ಅವರು ಹೇಳಿದರು.
ಆದರೆ ಅನೇಕ ಜನ ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳಲ್ಲಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂಧಶ್ರದ್ದೆ ಮತ್ತು ಮೂಢನಂಬಿಕೆಯು ಸಮಾಜದಿಂದ ದೂರವಾಗಬೇಕು ಎನ್ನುವ ಉದ್ದೇಶ ವಚನಗಳಲ್ಲಿವೆ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇಂದು ನಗರದ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಿತಿಯಿಂದ ನಡೆದ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳಿಂದ ಮುಕ್ತರಾಗಬೇಕೆಂಬ ಉದ್ದೇಶದಿಂದ ಬಸವಾದಿ ಶಿವಶರಣರು ಅನೇಕ ಮೌಲಿಕ ವಚನಗಳು ರಚಿಸಿ ನಮ್ಮನ್ನು ಎಚ್ಚರಗೊಳಿಸಿದ್ದಾರೆ. ಇಂದಿಗೂ ಸಮಾಜದಲ್ಲಿ ಬೇರೂರಿರುವ ಅಂಧಶ್ರದ್ಧೆ, ಮೂಢನಂಬಿಕೆಗಳಿಗೆ ಯುವ ಜನಾಂಗ ಬಲಿಯಾಗದೆ ಶರಣರ ಮೌಲ್ಯಯುತ ವಚನಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಬೇರೂರಿರುವ ಅಜ್ಞಾನ, ಅಂಧಶ್ರದ್ಧೆ, ಮೂಢನಂಬಿಕೆಗಳಿಂದ ಮುಕ್ತಗೊಳಿಸಲು ಶರಣರ ಮೌಲಿಕ ತತ್ವಗಳನ್ನು ತಿಳಿಸುವುದು ತುಂಬಾ ಅವಶ್ಯವಾಗಿದೆ. ಕೇವಲ ಮನುಷ್ಯರಷ್ಟೇ ಅಲ್ಲ, ಜಗತ್ತಿನಲ್ಲಿ ಹುಟ್ಟಿರುವಂತಹ ಎಲ್ಲ ಜೀವಿಗಳು ಕೂಡ ಸುಖದಿಂದ ಬದುಕಬೇಕೆಂಬ ಸದಾಶಯದಿಂದ ಶರಣರು ಸಕಲ ಜೀವಾತ್ಮರಿಗೆ ಲೇಸು ಬಯಸಿದರು. 21ನೇ ಶತಮಾನದ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲೂ ಜಾತಿ, ಮತ, ಪಂಥ, ದೇವರು, ಧರ್ಮಗಳ ಹೆಸರಿನಲ್ಲಿ ಅನೇಕ ಭೇದ-ಭಾವಗಳನ್ನು ಸೃಷ್ಟಿಸಿಕೊಂಡು ಸಂಘರ್ಷಕ್ಕೆ ಇಡಾಗಿದೆʼ ಎಂದು ಹೇಳಿದರು.
ಸಂಪತ್ತು ಒಂದೇ ಕಡೆ ಕೇಂದ್ರೀಕೃತಗೊಳ್ಳಬಾರದು. ಸಂಪತ್ತಿನ ವಿತರಣೆ ಆಗಬೇಕು. ಸಂಪತ್ತು ಎಲ್ಲರಲ್ಲೂ ಸಮಾನವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಕಾಯಕ, ದಾಸೋಹದಂತಹ ಅಮೂಲ್ಯವಾದ ತತ್ವಗಳು ಬಸವಣ್ಣನವರು ಬಳಕೆಗೆ ತಂದಿದ್ದಾರೆ.
ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ವಚನ ಸಾಹಿತ್ಯದ ಬಗ್ಗೆ ಹಲವಾರು ಪ್ರಶ್ನೆಗಳು ಕೇಳಿದರು. ವಿದ್ಯಾರ್ಥಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಮಠಾಧಿಶರು ಉತ್ತರಿಸಿದರು.
ಈ ಸಂದರ್ಭದಲ್ಲಿ ಡಾ.ಬಸವಲಿಂಗ ಪಟ್ಟದೇವರು, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿ, ಬಸವರಾಜ್ ಧನ್ನೂರು, ರಜನಿಶ್ ವಾಲಿ ಹಾಗೂ ಡಾ.ಅಬ್ದುಲ್ ಖದಿರ್ ಸೇರಿದಂತೆ ಅನೇಕ ಮಠದ ಸ್ವಾಮಿಜಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಸವ ಸಂಸ್ಕೃತಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ನಗರದ ಬಸವೇಶ್ವರ ವೃತದಲ್ಲಿ ಬಲೂನ್ ಹಾರಿಸುವ ಮೂಲಕ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ವಿಶೇಷವಾಗಿ ನಿರ್ಮಿಸಲಾಗಿದ್ದ ಬಸವಣ್ಣನ ಮೂರ್ತಿಯ ರಥ, ಇಷ್ಟಲಿಂಗ ರಥ, ರುದ್ರಾಕ್ಷಿ ರಥ, ವಿಭೂತಿ ರಥಗಳಿಗೆ ಚಾಲನೆ ನೀಡುವ ಮೂಲಕ ಸಾಂಸ್ಕೃತಿಕ ನಡಿಗೆಗೆ ಚಾಲನೆ ನೀಡಿದರು.
ಬಸವ ಪರಂಪರೆಯ ಸಮವಸ್ತ್ರಗಳಲ್ಲಿ ನಗರದ ಬಸವೇಶ್ವರ ವೃತ್ತದಿಂದ ಗುಂಪಾವರೆಗೆ ಬೃಹತ್ ಬಸವ ಸಾಂಸ್ಕೃತಿಕ ನಡಿಗೆ ನಡೆಯಿತು. ಈ ವೇಳೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಕೂಡಾ ಭಾಗಿಯಾಗಿದ್ದರು.
ಮಾಜಿ ಸಚಿವ ರಾಜಶೇಖರ ಪಾಟೀಲ್, ಸಿರಿಗೇರಿ ಶ್ರೀಗಳು, ನಿಜಗುಣಾನಂದ ಸ್ವಾಮೀಜಿ, ಬಸವಲಿಂಗ ಪಟ್ಟದೇವರು ಸೇರಿದಂತೆ ಪ್ರಮುಖ ಸ್ವಾಮೀಜಿಗಳು, ಸಾವಿರಾರು ಬಸವ ಅನುಯಾಯಿಗಳು ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಬೆಳಿಗ್ಗೆ ರಂಗಮಂದಿರದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕೇಳಿದರು. ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಬಿಕಾ ಅಕ್ಕ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಉತ್ತರಿಸಿದರು.
ಬಸವಣ್ಣನವರನ್ನು ಏಕೆ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದರು? ಶರಣರ ಕುರಿತು ರಾಜ್ಯ ಪಠ್ಯದಲ್ಲಿವೆ, ಸಿಬಿಎಸ್‌ಇ ಪಠ್ಯದಲ್ಲಿ ಏಕೆ ಸೇರಿಸಿಲ್ಲ? ಜಗತ್ತಿನಲ್ಲಿ ಯುದ್ದ ತಡೆಯಲು ಏನು ಮಾಡಬೇಕು? ವಿವಿಧ ದೇಶಗಳಿಂದ ಬಂದ ಶರಣರು ಕನ್ನಡಲ್ಲೇಕೆ ವಚನ ರಚಿಸಿದರು? ಕಲ್ಲದೇವರನ್ನು ಪೂಜಿಸುವ ಮಕ್ಕಳು ಪೋಷಕರನ್ನು ಸಾಕುತ್ತಿಲ್ಲ, ಇದಕ್ಕೆ ಶರಣರ ಸಂದೇಶವೇನು? ಪರಿಸರ ಸಂರಕ್ಷಣೆಯಲ್ಲಿ ಮಠಾಧೀಶರ ಪಾತ್ರವೇನು? ಕರ್ನಾಟಕದ ವಿವಿಧ ಮಠಗಳಲ್ಲಿ ಪೂಜೆ, ಪ್ರಾರ್ಥನೆ ಒಂದೇ ರೀತಿ ಏಕಿಲ್ಲ? 12ನೇ ಶತಮಾನದಲ್ಲಿ ಲಕ್ಷ ಶರಣರಿಗೆ ದಾಸೋಹ ಕಾರ್ಯ ವ್ಯವಸ್ಥೆ ಹೇಗೆ ಸಾಧ್ಯವಾಗಿತ್ತು? ಎಂಬೆಲ್ಲ ಪ್ರಶ್ನೆಗಳು ಬಂದವು.