ಗದಗ:
ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದವರು ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳು. ಶ್ರೀಗಳಿಂದಾಗಿ ಮಠದ ಕೀರ್ತಿ ದೇಶದ ಉದ್ದಗಲಕ್ಕೂ ಪಸರಿಸಿತು ಎಂದು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಶರಣ ಸಾಹಿತಿ ಡಾ.ವೀರಣ್ಣ ರಾಜೂರ ಹೇಳಿದರು.
ಅವರು ನಗರದ ತೋಂಟದಾರ್ಯ ಮಠದಲ್ಲಿ ಲಿಂ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಪೀಠಾರೋಹಣದ ರಜತಮಹೋತ್ಸವ, 2704ನೇ ಶಿವಾನುಭವ ಕಾರ್ಯಕ್ರಮ, ‘ಡಾ.ತೋಂಟದ ಸಿದ್ದಲಿಂಗಶ್ರೀ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶ್ರೀ ಗಳು ಮಠದ ಪೀಠಾಧಿಪತಿಯಾಗಿದ್ದ 44 ವರ್ಷಗಳಲ್ಲಿ ನೂರು ವರ್ಷಗಳಿಗಾಗುವಷ್ಟು ಸಾಧನೆ ಮಾಡಿ ತೋರಿಸಿದ್ದು, ಸಮಾಜಸೇವೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಅವರು ಲಿಂಗೈಕ್ಯರಾದ ನಂತರ ಅವರ ಕುರಿತು 60ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗಿರುವುದು ಅವರ ಮಹಾನ್ ಕರ್ತೃತ್ವಶಕ್ತಿಗೆ ಸಾಕ್ಷಿಯಾಗಿದೆ.
ಅವರು ಆರಂಭಿಸಿದ ಶಿವಾನುಭವ ಕಾರ್ಯಕ್ರಮಗಳು ಅಪೂರ್ವ ದಾಖಲೆಯಾಗಿದ್ದು, ಎಲ್ಲ ಜಾತಿ-ಜನಾಂಗಗಳ ಮಾನವೀಯ ಮೌಲ್ಯಗಳ ಕುರಿತು, ವೇದಿಕೆಗಳಲ್ಲಿ ಮಹತ್ವದ ಚರ್ಚೆಗಳಾಗಿವೆ ಎಂದು ರಾಜೂರ ಅವರು ಹೇಳಿದರು.
ಹಿರಿಯಪತ್ರಕರ್ತರಾದ ಡಾ. ವಿಲಾಸ ನಾಂದೋಡ್ಕರ ಹಾಗೂ ರಘುನಾಥ ಚ.ಹ ಅವರಿಗೆ ಡಾ. ‘ಡಾ.ತೋಂಟದ ಸಿದ್ದಲಿಂಗಶ್ರೀ ಪುರಸ್ಕಾರ’ ಪ್ರದಾನ
ಮಾಡಲಾಯಿತು.
ನಾಡಿನ ಜನರು ಕಪ್ಪತಗುಡ್ಡ ಮತ್ತು ಅದರ ಜೊತೆಗೆ ಸಿದ್ದಲಿಂಗ ಶ್ರೀಗಳ ನಂಟು, ಅಲ್ಲಿನ ಸ್ವಚ್ಛ ಗಾಳಿ ಬಗ್ಗೆ ಮಾತನಾಡುತ್ತಾರೆ.ಯಾವುದೇ ಚೇತನಕ್ಕೆ ಸಾವಿಲ್ಲ, ಅವರು ಪರಿಸರದ ಭಾಗವಾಗಿ ಯಾವುದೋ ಒಂದು ರೂಪದಲ್ಲಿ ನಮ್ಮ ಜೊತೆಗೆ ಇರುತ್ತಾರೆ. ಕಪ್ಪತಗುಡ್ಡದ ಪರಿಸರದಲ್ಲಿ ಓಡಾಡುವಾಗ ಶ್ರೀಗಳ ಉಸಿರು ನಮ್ಮ ಅನುಭವಕ್ಕೆ ಬರುತ್ತದೆ.
ಶ್ರೀಗಳ ಆದರ್ಶಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಮುಖ್ಯವಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಆ ಪ್ರಕ್ರಿಯೆಯಲ್ಲಿ ನನ್ನನ್ನು ಸೇರಿಸಿದ್ದಕ್ಕೆ ಧನ್ಯವಾದ ಎಂದು, ಪ್ರಶಸ್ತಿ ಸ್ವೀಕರಿಸಿ ‘ಸುಧಾ’ ಹಾಗೂ ‘ಮಯೂರ’ ಪತ್ರಿಕೆಗಳ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ.ಮಾತನಾಡಿದರು.
ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ತೋಂಟದ ಸಿದ್ದಲಿಂಗಶ್ರೀ ಪುರಸ್ಕಾರ ಸಮಿತಿಯ ಸಿದ್ದು ಸತ್ಯಣ್ಣವರ ಹಾಗೂ ಪದಾಧಿಕಾರಿಗಳು, ರಾಜೇಶ ಹಾಗೂ ಗಿರೀಶ ಈಶ್ವರಪ್ಪ ಮಾನ್ವಿ ,ಶಶಿಕುಮಾರ ಬಂಡಿ, ರೋಹಿತ ತೊಂಡಿಹಾಳ, ಗುರುಮಠಕಲ್ಲ ಶಾಂತವೀರ
ಮುರುಘರಾಜೇಂದ್ರ ಶ್ರೀಗಳು, ನೇರಡಗಂಬಾ ಸಿದ್ಧಲಿಂಗೇಶ್ವರ ಮಠದ ಪಂಚಮ ಸಿದ್ದಲಿಂಗೇಶ್ವರ ಸ್ವಾಮಿಗಳು, ರುದ್ದೂರು ತೋಂಟದ ಸಿದ್ದೇಶ್ವರ ಸಮಿತಿಯ ಅಧ್ಯಕ್ಷ ಶಿವರಾಜ ಪಾಟೀಲ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಮಲ್ಲಿಕಾರ್ಜುನ ಶೆಲ್ಲಿಕೇರಿ, ಮಾಜಿ ಸಚಿವ ಎಸ್.ಎಸ್.ಪಾಟೀಲ,ಎಸ್.ಎಸ್.ಕಳಸಾಪುರ ಹಾಗು ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.