ಬಸವ ಸಂಸ್ಕೃತಿ ಅಭಿಯಾನಕ್ಕೆ ಪರ್ಯಾಯ ಸೃಷ್ಟಿಸಲು ಹೊರಟವರಿಗೆ ಮುಖಭಂಗ

ಬಸವಕಲ್ಯಾಣ

ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ (ಶರಣ, ವಚನ, ಬಸವ)ಧರ್ಮ ಇದು ಜಾತ್ಯತೀತ ಧರ್ಮವಾಗಿದೆ. ಏಳುನೂರು ಎಪ್ಪತ್ತು ಶರಣರು ಬೇರೆ ಬೇರೆ ಮೂಲದಿಂದ ಬಂದು ಬಸವ ಧರ್ಮವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಈ ಧರ್ಮದ ಶ್ರೇಷ್ಟತೆಯನ್ನು ಸಾರಿದ್ದಾರೆ. ಇಂತಹ ಶ್ರೇಷ್ಟ ಧರ್ಮವನ್ನು ಜಾತಿಗೆ ಸೇರಿಸಬೇಕೆಂಬ ದೂರ್ತತನದ ಮತ್ತು ಅಪ್ರಬುದ್ಧತೆಯ ಹೇಳಿಕೆಯನ್ನು ಹುಬ್ಬಳ್ಳಿಯ ಏಕತಾ ಸಮಾವೇಶದಲ್ಲಿ ಪಂಚಾಚಾರ್ಯರು ಮತ್ತು ವೀರಶೈವ ಮಹಾಸಭೆಯವರು ನೀಡಿದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ.

ರಂಭಾಪುರಿ ಶ್ರೀಗಳ ಹೇಳಿಕೆಯಂತೆ ವೀರಶೈವ-ಲಿಂಗಾಯತ ಜಾತಿಯಾದರೆ ಲಿಂಗಾಯತ ಧರ್ಮ ಅಳವಡಿಸಿಕೊಂಡ ಬೇರೆ ಜಾತಿಯವರು ವೀರಶೈವ ಲಿಂಗಾಯತ ಜಾತಿ ಕಡೆ ಏಕೆ ಬರುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇವರಿಗೆ ಇಲ್ಲ. ಮೂಢನಂಬಿಕೆ, ಅಂಧಶ್ರದ್ಧೆ, ವೈದಿಕತೆ ಆಚರಣೆ ಅಳವಡಿಸಿಕೊಂಡು ಬಂದ ಮತ್ತು ಬಸವಣ್ಣನವರ ಸಮಾನತೆಯನ್ನು ವಿರೋಧಿಸುತ್ತಾ ಬಂದ ಪಂಚಾಚಾರ್ಯರಿಗೆ ಧರ್ಮದ ವಾಸ್ತವಿಕತೆ ಅರ್ಥವಾಗುತ್ತಿಲ್ಲ ಹಾಗೂ ಸ್ವತಂತ್ರ ವಿಚಾರಧಾರೆಯೂ ಇಲ್ಲ. ರಾಜಕೀಯ ಮತ್ತು ವೀರಶೈವ ಮಹಾಸಭೆಯ ಒತ್ತಾಯಕ್ಕೆ ಮಣಿದು ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ.

ಬೆಟ್ಟ ಅಗೆದು ಇಲಿ ಹಿಡಿದ ಏಕತಾ ಸಮಾವೇಶ:
ಬಸವಣ್ಣನವರಿಗೆ ಪ್ರಾಶಸ್ತ್ಯ ಕೊಡದ ಏಕತಾ ಸಮಾವೇಶ ಅದು ಕೇವಲ ಜಂಗಮ ಜಾತಿಯವರ ಸಮಾವೇಶ ಆಗಿದೆ ಹೊರತು ಧರ್ಮ ಸಭೆಯಲ್ಲ. ಧರ್ಮದ ಸ್ಷಷ್ಟತೆ ಇಲ್ಲದ ಪಂಚಾಚಾರ್ಯರು ಮತ್ತು ಅಲ್ಲಿನ ಶಿವಾಚಾರ್ಯರು ಬಿಜೆಪಿ, ಕಾಂಗ್ರೇಸ್ ಮತ್ತು ವೀರಶೈವರ ಕೈಗೊಂಬೆಗಳಾಗಿದ್ದಂತು ಸತ್ಯ. ಮನೆಯೊಂದು ಮೂರು ಬಾಗಿಲಂತೆ ಧರ್ಮದ ಕಾಲಂದಲ್ಲಿ ಬಿಜೆಪಿಯವರು ಹಿಂದೂ ಎಂದು, ವೀರಶೈವ ಮಹಾಸಭೆಯವರು ವೀರಶೈವ ಲಿಂಗಾಯತ ಎಂದು, ಪಂಚಾಚಾರ್ಯರು ವೀರಶೈವ ಲಿಂಗಾಯತ ಧರ್ಮ ಆಗುವವರೆಗೂ ಜಾತಿಯಲ್ಲಿ ವೀರಶೈವ ಲಿಂಗಾಯತ ಎಂದೂ ಧರ್ಮದಲ್ಲಿ ಹಿಂದೂ ಬರೆಸಬೇಕೆಂದು ಗೊಂದಲದ ಹೇಳಿಕೆ ನೀಡಿದ್ದರಿಂದ ಸಮಾಜ ಮತ್ತಿಷ್ಟು ಗೊಂದಲಕ್ಕೀಡಾಗಿದೆ.

ಒಟ್ಟಾರೆ ಏಕತಾ ಸಮಾವೇಶವು ಬಸವ ಸಂಸ್ಕೃತಿ ಅಭಿಯಾನಕ್ಕೆ ಪರ್ಯಾಯವಾಗಿ ಏನೋ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬೊಬ್ಬೆ ಹೊಡೆಯುತ್ತ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ ದಿಂಗಾಲೇಶ್ವರ ಶ್ರೀಗಳು ಭಾರಿ ಮುಖ ಭಂಗ ಅನುಭವಿಸಿದ್ದಾರೆ, ಯಾವ ನಿರ್ಣಯಕ್ಕೂ ಬರದೆ ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ.

ಲಿಂಗಾಯತ ಧರ್ಮದ ಸಮಾನತೆ ಒಪ್ಪದ ಪಂಚಾಚಾರ್ಯರು ವೀರಶೈವದಲ್ಲಿ ಅಥವಾ ಹಿಂದೂ ಧರ್ಮದಲ್ಲಿ ಮುಂದುವರೆಯುವುದು ಒಳಿತು. ಸನಾತನ ವೈದಿಕ ಮತ್ತು ಶೈವದಿಂದ ಭಿನ್ನವಾದ ಲಿಂಗಾಯತ ಧರ್ಮಕ್ಕೆ ಒಂಬೈನೂರು ವರ್ಷಗಳ ಇತಿಹಾಸವಿದೆ. ಈ ಧರ್ಮದ ಆಚರಣೆಗಳು ವೈಜ್ಞಾನಿಕ ಮತ್ತು ವೈಚಾರಿಕ ಸತ್ಯದಿಂದ ಕೂಡಿವೆ.
ವೈದಿಕ ಮತ್ತು ಶೈವ ಪದ್ಧತಿಯನ್ನು ಅನುಸರಿಸುವರು ಬಸವಣ್ಣನವರನ್ನು ಬಿಟ್ಟು, ನಿಮ್ಮ ನಿಮ್ಮ ಆಚರಣೆಗಳನ್ನು ಪಾಲಿಸಿರಿ ಬಸವಧರ್ಮಕ್ಕೆ ಗೆದ್ದಲು ಹುಳುವಿನಂತೆ ಕಾಡುವುದು ಒಳಿತಲ್ಲ.

ಲಿಂಗಾಯತ ಮಠಾಧೀಶರ ಒಕ್ಕೂಟದ ನಿರ್ಧಾರವೇ ಅಂತಿಮ:
ಒಂದು ಜಾತಿಗೆ ಸೀಮಿತವಾಗಿ ಊಸರವಳ್ಳಿಯಂತೆ ದಿನಕ್ಕೊಂದು ಹೇಳಿಕೆ ನೀಡುವ ಜಾತಿ ಸ್ವಾಮಿಗಳ (ವಚನಾನಂದ, ಜಯಮೃತ್ಯುಂಜಯ ಸ್ವಾಮಿಗಳು) ಹೇಳಿಕೆಯನ್ನು ಬಹಿಷ್ಕರಿಸಿ; ಲಿಂಗಾಯತ ಮಠಾಧೀಶರ ಒಕ್ಕೂಟದ ನಿರ್ಧಾರವನ್ನು ಪ್ರೋತ್ಸಾಹಿಸಿ ಲಿಂಗಾಯತ ಧರ್ಮ ಎಂದು ಬರೆಯಿಸಬೇಕು. ವೀರಶೈವ ಮಹಾಸಭೆಯು ಒಂದು ಧರ್ಮಗುರು ಇಲ್ಲದಂತ ಹಡಗಾಗಿದೆ, ಅಲ್ಲಿನ ಜಂಗಮ ಸ್ವಾಮಿಗಳಿಗೆ ಧರ್ಮದ ನಿಷ್ಟೆಗಿಂತ ಜಾತಿ ಅಭಿಮಾನವೇ ದೊಡ್ಡದಾಗಿದೆ ಆದ್ದರಿಂದ ಯಾವಾಗ ಆ ಹಡಗು ಮುಳುಗುವುದೋ ಗೊತ್ತಿಲ್ಲ.

ಲಿಂಗಾಯತರು ಪಂಚಾಚಾರ್ಯರ ಅಥವಾ ವೀರಶೈವರ ಬೆನ್ನು ಹತ್ತದೆ ಬಸವಣ್ಣನವರನ್ನು ಬೆನ್ನು ಹತ್ತಿ ಲಿಂಗಾಯತ ಮಠಾಧೀಶರ ಒಕ್ಕೂಟದ ಜೊತೆ ಇರಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.