ಗದಗ
ಭಾಲ್ಕಿಯ ಪೂಜ್ಯ ಚೆನ್ನಬಸವ ಪಟ್ಟದ್ದೇವರ ಬದುಕು ಬಸವಾದಿ ಶರಣರ ಬದುಕಿಗಿಂತ ಭಿನ್ನವಾಗಿರಲಿಲ್ಲ. ಅವರ ೧೦೯ ವರ್ಷಗಳ ಬದುಕಿನಲ್ಲಿ ಕನ್ನಡ ಹಾಗೂ ಬಸವಾದಿ ಶರಣರ ಸಾಹಿತ್ಯ ಪ್ರಸಾರವನ್ನು ನಿರಂತರವಾಗಿ ಕೈಗೊಂಡರು. ಬಸವಣ್ಣ ಹಾಗೂ ಕನ್ನಡ ಅವರ ಎರಡು ಕಣ್ಣುಗಳಾಗಿದ್ದವು.
ಯಾವ ಅನುಕೂಲತೆಗಳಿಲ್ಲದ ಆ ಕಾಲದಲ್ಲೂ ತಮ್ಮ ಮಠದಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಭಾಷಾ ಪ್ರಸಾರ ಮಾಡಿದ್ದರಿಂದಲೇ ಇಂದು ಹೈದ್ರಾಬಾದ ಕನ್ನಡ ಪ್ರದೇಶದಲ್ಲಿ ಕನ್ನಡ ತನ್ನತನ ಉಳಿಸಿಕೊಂಡಿದೆ ಎಂದು ಶರಣತತ್ವ ಚಿಂತಕಿಯರಾದ ಪೂ. ಗಿರಿಜಕ್ಕ ಧರ್ಮರೆಡ್ಡಿಯವರು ಹೇಳಿದರು.

ಅವರು ಬಸವದಳದ ೧೬೨೫ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಭಾಲ್ಕಿಯ ಡಾ. ಚನ್ನಬಸವ ಪಟ್ಟದೇವರ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಚೆನ್ನಬಸವ ದೇವರು ೧೮೯೦ರಲ್ಲಿ ಬಾಲ್ಯದಲ್ಲೇ ತಂದೆ, ತಾಯಿಗಳನ್ನು ಕಳೆದುಕೊಂಡರು. ಮುಂದೆ ಭಾಲ್ಕಿ ಸ್ವಾಮಿಗಳ ಕಣ್ಣಿಗೆ ಬಿದ್ದು ಈ ಬಾಲಕನ ಕಲಿಯುವಿಕೆಯ ಹಂಬಲ ಅರಿತು ತಮ್ಮ ಮಠದಲ್ಲಿಟ್ಟುಕೊಂಡರು. ಆ ಬಾಲಕನ ನಿಸ್ವಾರ್ಥ ಸೇವೆಯನ್ನು ಮನಗಂಡು ತಮ್ಮ ಉತ್ತರಾಧಿಕಾರಿಯನ್ನಾಗಿಸಿ, ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಿವಯೋಗ ಮಂದಿರಕ್ಕೆ ಕಳಿಸಿದರು. ನಂತರ ಭಾಲ್ಕಿ ಪೂಜ್ಯರು ಲಿಂಗದೊಳಗಾದಾಗ ಚೆನ್ನಬಸವದೇವರು ಪಟ್ಟಕ್ಕೇರುವರು.
ಆಗ ನಿಜಾಮರ ಆಳ್ವಿಕೆಯ ಕಾಲವಾಗಿತ್ತು. ಭಾಲ್ಕಿ ಸೇರಿದಂತೆ ಇಡೀ ಹೈದರಾಬಾದ್ ಕರ್ನಾಟಕದಲ್ಲಿ ಅನಕ್ಷರತೆ ತುಂಬಿ ತುಳುಕುತ್ತಿತ್ತು. ಈ ಭಾಗದಲ್ಲಿ ಶಿಕ್ಷಣ ನೀಡಲು ಪೂಜ್ಯರು ಉದ್ದೇಶಿಸಿ ತಮ್ಮ ಮಠದಲ್ಲಿಯೇ ಶಾಲೆಗಳನ್ನು ತೆರೆವರು. ಆದರೆ ನಿಜಾಮರ ಹೆದರಿಕೆ ಇದ್ದುದರಿಂದ ಹೊರಗೆ ಉರ್ದು ಬೋರ್ಡ್ಗಳನ್ನು ಹಾಕಿ ಒಳಗೆ ಕನ್ನಡ ಕಲಿಕೆ ನಡೆಸಿದರು. ಶಿಕ್ಷಣದ ಬಗ್ಗೆ ಅಷ್ಟೊಂದು ತಿಳಿವಳಿಕೆ ಇರದ ಆ ಕಾಲದಲ್ಲಿ ಚೆನ್ನಬಸವಪೂಜ್ಯರು ಮನೆಮನೆಗೆ ತೆರಳಿ ಶಿಕ್ಷಣದ ಮಹತಿ ತಿಳಿಸಿ, ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪಾಲಕರನ್ನು ಪ್ರೇರೆಸುವಲ್ಲಿ ಯಶಸ್ವಿಯಾದರು. ಜೊತೆಗೆ ಮಹಿಳೆಯರ ಶಿಕ್ಷಣ ನೀಡಬೇಕಾದ ಅವಶ್ಯಕತೆಯನ್ನು ಅವರು ಮನಗಂಡು ಮಹಿಳೆಯರಿಗೆ ಪ್ರತ್ಯೇಕ ಶಾಲೆ ತೆರೆದು ಶಿಕ್ಷಣದ ವ್ಯವಸ್ಥೆ ಮಾಡಿದರೆಂದರು.

ಆದರೆ ಅಂದು ಮಠದಲ್ಲಿ ಯಾರೂ ಅಡುಗೆ ಮಾಡುವವರಿರಲಿಲ್ಲ. ತಾವೇ ಭಕ್ತರ ಮನೆ ಮನೆಗಳಿಗೆ ಹೋಗಿ ಜೋಳಿಗೆಯಲ್ಲಿ ಕಾಳು-ಕಡಿ ಸಂಗ್ರಹಿಸಿ ತಂದು ಸ್ವತಃ ಬೀಸಿ ನುಚ್ಚು, ಸಾರು, ಅಂಬಲಿಗಳನ್ನು ಮಾಡಿ ಶಿಕ್ಷಣಾರ್ಥಿಗಳಾದ ಮಕ್ಕಳಿಗೆ ಉಣಬಡಿಸಿದರು. ಜೊತೆಗೆ ಎಲ್ಲ ಜಾತಿಯ ಮಕ್ಕಳಿಗೂ ಅಂದು ಅವರ ಶಾಲೆಯಲ್ಲಿ ಪ್ರವೇಶವಿತ್ತು. ಈ ಪರಿಣಾಮ ಅನೇಕ ಮುಸ್ಲಿಂ, ದಲಿತರ ಮಕ್ಕಳು ಶಿಕ್ಷಣ ಪಡೆಯುವಂತಾಯಿತು. ಹಲವರು ಇದಕ್ಕೆ ಆಕ್ಷೇಪಣೆ ಮಾಡಿದರಾದರೂ ಅವರು ಅದಾವುದನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಇಷ್ಟೇಲ್ಲಾ ಕಾರ್ಯಗಳನ್ನು ಚೆನ್ನಬಸವದೇವರು ಕೈಕೊಂಡಿದ್ದರೂ ಎಲೆ ಮರೆಯ ಕಾಯಿಯಂತಿದ್ದರು.
ಆದರೆ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಕಾರ್ಯ ಗುರುತಿಸಿ ಮಠದ ಜಾತ್ರೆಯ ಸಂದರ್ಭದಲ್ಲಿ ಅವರನ್ನು ಕರೆದು ಸನ್ಮಾನಿಸಿದ ಕಾರಣ ಅವರ ಪರಿಚಯ ಇಡೀ ಕನ್ನಡ ನಾಡಿಗಾಯಿತು. ನಂತರ ಪೂಜ್ಯರು ತಮ್ಮ ಉತ್ತರಾಧಿಕಾರಿಗಳಾಗಿ ಬಸವಲಿಂಗ ಪಟ್ಟದ್ದೇವರಿಗೆ ೧೯೮೫ರಲ್ಲಿ ಅಧಿಕಾರ ವಹಿಸಿಕೊಟ್ಟರು. ಇಂಥಹ ಸಾರ್ಥಕ ಬದುಕನ್ನು ಬದುಕಿದ ಶ್ರೀಗಳನ್ನು ೧೯೯೭ರಲ್ಲಿ ಶಿವ ತನಗೆ ಬೇಕೆಂದು ಎತ್ತಿಕೊಂಡನೆಂದು ಗಿರಿಜಕ್ಕ ತಾಯಿಯವರು ತುಂಬ ಹೃದಯಂಗಮವಾಗಿ ವಿವರಿಸಿದರು.

ಆರಂಭದಲ್ಲಿ ಶರಣ ಎಸ್. ಎ. ಮುಗದ ಶರಣರು ಶರಣೆ ಮೋಳಿಗೆ ಮಹಾದೇವಿಯವರ ಎರಡು ವಚನಗಳ ಚಿಂತನೆ ನಡೆಸಿದರು. ಮೋಳಿಗೆ ಮಾರಯ್ಯ ಹಾಗೂ ಮಹಾದೇವಿಯವರ ಶರಣ ಬದುಕು ಅನನ್ಯವಾಗಿತ್ತೆಂದು ಮುಗದ ಶರಣರು ತಮ್ಮ ಮಾರ್ಮಿಕವಾಗಿ ವಿವರಿಸಿದರು.
ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸ್ವಾಗತವನ್ನು ಶರಣ ಎಂ.ಬಿ. ಲಿಂಗದಾಳ ಮಾಡಿದರು. ಅಧ್ಯಕ್ಷತೆಯನ್ನು ಶರಣ ಎಸ್. ಎನ್. ಹಕಾರಿ ವಹಿಸಿ ಮಾತನಾಡಿದರು. ನಿರೂಪಣೆಯನ್ನು ಶರಣೆ ಮಂಜುಳಾ ಹಾಸಿಕರ ನಡೆಸಿಕೊಟ್ಟರು. ಶರಣು ಸಮರ್ಪಣೆಯನ್ನು ಗೌರಕ್ಕ ಬಡಿಗಣ್ಣವರು ಗೈದರು. ಪ್ರಕಟಣೆಗಳನ್ನು ಶರಣ ಪ್ರಕಾಶ ಅಸುಂಡಿ ಓದಿದರು.
ಇದೇ ಸಂದರ್ಭದಲ್ಲಿ ಕು. ವೇದಾ ಹಡಪದ ಅವರು ಸಂವಿಧಾನದ ಶಿಲ್ಪಿ ಅಂಬೇಡ್ಕರವರ ವೇಷಧಾರಿಯಾಗಿ ಭಾಗವಹಿಸಿ ಮೆಚ್ಚುಗೆ ಪಡೆದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಬಸವದಳದ ಅನೇಕ ಶರಣ, ಶರಣೆಯರು ಭಾಗವಹಿಸಿದ್ದರು.