ಕಲಬುರಗಿ
ಬಸವಣ್ಣನವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ನಗರದ ಬಸವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗುರುಬಸವ ಸೇವಾ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಲಿಂಗೈಕ್ಯ ಶರಣ ಬಸವರಾಜ ನಾಗೂರ ಅವರ ಐದನೇ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಷ್ಠಾನದ ಮೂಲಕ ವಿದ್ಯಾರ್ಥಿ ವೇತನ, ವಚನ ಗ್ರಂಥಗಳ ಪ್ರಕಟಣೆ ಮಾಡುತ್ತಿರುವುದು ಸ್ತುತ್ಯಾರ್ಹ ಕೆಲಸ ಎಂದು ಶ್ಲಾಘಿಸಿದರು.
ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ತತ್ವ ಬಸವತತ್ವವಾಗಿದೆ. ಬಸವಾದಿ ಶರಣರ ವಚನ ವಿಚಾರಗಳು ಸಮುದ್ರದಾಚೆಗೂ ಹಬ್ಬಿದೆ. ಒಂದು ಕಾಲದಲ್ಲಿ ರಾಜ್ಯದಲ್ಲಿ ಮುಕ್ಕೋಟಿ ಜನಸಂಖ್ಯೆ ಇದ್ದ ಲಿಂಗಾಯತರ ಸಂಖ್ಯೆ ಜಾತಿ ಜನಗಣತಿಯಲ್ಲಿ ಕ್ಷೀಣವಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ನಾವೆಲ್ಲ ಮತ್ತೆ ಒಂದಾಗಿ, ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ನೀಲಾಂಬಿಕಾ ಪೊಲೀಸಪಾಟೀಲ ಮಾತನಾಡಿ, ಶರಣ ಪರಿವಾರದ ಸದಸ್ಯರಾದವರು ಒಂದಾದರೆ ಸಮಾಜದಲ್ಲಿ ಒಗ್ಗಟ್ಟು ಬರಲು ಸಾಧ್ಯ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ಸಮಾಜದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.

ಸದಾಚಾರಿಗಳಾಗಿದ್ದ ಬಸವರಾಜ ನಾಗೂರ ಅವರು ಸಮಾಜದಲ್ಲಿ ಉತ್ತಮ ಸಂಸ್ಕೃತಿಯನ್ನು ಬಿತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶರಣ ಚಿಂತಕ ಪ್ರೊ. ಸಂಜಯ ಮಾಕಲ್ ಮಾತನಾಡಿ, ವೈದಿಕ ಪರಂಪರೆಯ ಕಟ್ಟುಪಾಡುಗಳನ್ನು ಮುರಿದ ಬಸವಣ್ಣನವರು ಸೋಹಂ, ಶಿವೋಂ ಬದಲಾಗಿ ದಾಸೋಹ ಪರಂಪರೆಯನ್ನು ಹುಟ್ಟು ಹಾಕಿದರು ಎಂದು ತಿಳಿಸಿದರು.
ಜೀವಿಗಳ ಏಳಿಗೆಯೇ ದೇವರ ಪೂಜೆ ಎಂಬುದು ಶರಣ ಸಿದ್ಧಾಂತವಾಗಿದೆ. ಲಿಂಗಾಯತರ ಅಸ್ಮಿತೆ ದಾಸೋಹ ಪರಂಪರೆಯಲ್ಲಿದೆ. ಆ ಪರಂಪರೆಯನ್ನು ನಾಗೂರ ಶರಣರು ಮುಂದುವರಿಸಿಕೊಂಡು ಬಂದಿದ್ದರು ಎಂದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಜಿ. ಶೆಟಗಾರ, ವಚನೋತ್ಸವ ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ ಅತಿಥಿಗಳಾಗಿದ್ದರು.
ಸಾನ್ನಿಧ್ಯವಹಿಸಿದ್ದ ಬೆಳವಿಯ ಚರಂತೇಶ್ವರ ವಿರಕ್ತಮಠದ ಶರಣಬಸವ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣ ಈ ಜಗದ ಬೆಳಕು. ವಚನ ವೈಚಾರಿಕತೆ ನಮ್ಮ ಅಂತರಂಗದ ಕದ ತೆಗೆಯಬಲ್ಲದು ಎಂದು ತಿಳಿಸಿದರು.
ಗುರುಬಸವ ಸೇವಾ ಪ್ರತಿಷ್ಠಾನಕ್ಕೆ ನಿವೃತ್ತ ಇಂಜಿನಿಯರ್ ಲಿಂ. ಬಸವರಾಜ ನಾಗೂರ ಪ್ರೇರಣೆಯಾಗಿದ್ದಾರೆ. ವಚನ ಸಾಹಿತ್ಯ ಪ್ರಚಾರ, ಪ್ರಕಟಣೆ ಮಾಡುವುದು, ಬಡವರಿಗೆ ವಿದ್ಯಾರ್ಥಿ ವೇತನ ನೀಡುವುದು ಪ್ರತಿಷ್ಠಾನದ ಧ್ಯೇಯೋದ್ಧೇಶವಾಗಿದೆ ಎಂದು ರವೀಂದ್ರ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಾವಿ ನಿರೂಪಿಸಿದರು. ಬಸವರಾಜ ಶಾಬಾದಿ ಸ್ವಾಗತಿಸಿದರು. ಕಲ್ಯಾಣಿ ಬಿರಾದಾರ ಪ್ರಾರ್ಥನೆಗೀತೆ ಹಾಡಿದರು.

ಇದೇವೇಳೆಯಲ್ಲಿ ಬಸವತತ್ವ ಪರಿಪಾಲಕ ಡಾ. ಮಲ್ಲಿಕಾರ್ಜುನ ಪಾಲಾಮೂರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಇದೇ ವೇಳೆಯಲ್ಲಿ ಉಮಾಶ್ರೀ, ಸಂಜಯ, ಮೇಘನ (ಮೆಡಿಕಲ್ ವ್ಯಾಸಂಗ), ಪ್ರಭಾಕರ, ಶರತ್, ಪ್ರಭಾಕರ ಸಾಹೇಬಗೌಡ, ಶಾಂತಾ (ಇಂಜಿನಿಯರಿಂಗ್ ವ್ಯಾಸಂಗ), ಜಯಶ್ರೀ (ಬಿಎಸ್ ಸಿ ಅಗ್ರಿ ವ್ಯಾಸಂಗ) ಅವರಿಗೆ ಮೆಡಿಕಲ್ ವಿದ್ಯಾರ್ಥಿಗಳಿಗೆ ತಲಾ 40 ಸಾವಿರ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ವಿದ್ಯಾರ್ಥಿ ವೇತನ ಪ್ರತಿಷ್ಠಾನದಿಂದ ನೀಡಲಾಯಿತು.
ಕಮಲಾಬಾಯಿ ಶಾಬಾದಿ, ಶಾರದಾ ಜಾಕಾ, ಶಿವಕುಮಾರ ಶಾಬಾದಿ, ಬಸವರಾಜ ಪಾರಶೆಟ್ಟಿ, ಡಾ. ಶಿವರಂಜನ ಸತ್ಯಂಪೇಟೆ, ಮಹಾದೇವಿ ಪರಶೆಟ್ಟಿ, ಶಿವರಾಯ ಬಳಗಾನೋರ, ಮಹಾಂತೇಶ ಕಲ್ಬುರ್ಗಿ, ಸತೀಶ ಸಜ್ಜನ, ಹಣಮಂತ ಗುಡ್ಡಾ, ಮಲ್ಲಿಕಾರ್ಜುನ ಗೋಳಾ, ಇತರರಿದ್ದರು.