ತಂದೆ-ತಾಯಿಯೇ ದೇವರು:  ಡಾ. ತೋಂಟದ ಸಿದ್ಧರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ತಾಯಿಗಿಂತ ಮೀಗಿಲು ಯಾರೂ ಇಲ್ಲ. ತಂದೆ-ತಾಯಿಯೇ ದೇವರು. ಮಾತು ಬಾರದ ಮಗುವಿಗೆ, ಮಾತು ಕಲಿಸುವವಳು ಅವ್ವ. ಪ್ರತಿಯೊಬ್ಬರು ಬದುಕಿನಲ್ಲಿ ತಂದೆ ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೭೯ನೆಯ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಮಾತು ಸತ್ಯ. ಕೆಟ್ಟ ಮಕ್ಕಳು ಹುಟ್ಟಬಹುದು, ಕೆಟ್ಟ ತಾಯಿ ಇರಲಾರಳು. ಮಕ್ಕಳ ಲಾಲನೆ ಪಾಲನೆ ಮಾಡುವ ಮೂಲಕ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಅವ್ವ ಹೊರುತ್ತಾಳೆ.

ಮಕ್ಕಳಲ್ಲಿ ಬೇಧಭಾವ ಮಾಡದೇ ಸಮಾನವಾಗಿ ಬೆಳೆಸುವ ಅವ್ವ ಮಕ್ಕಳ ಪಾಲಿನ ದೇವರು ಎಂದು ಅವ್ವನ ಕುರಿತು ಮಾತನಾಡುತ್ತ, ವಿಧಾನಪರಿಷತ್‍ ಸಭಾಪತಿ ಬಸವರಾಜ ಹೊರಟ್ಟಿ ಅವ್ವನ ಋಣವನ್ನು ಅವ್ವ ಸೇವಾ ಟ್ರಸ್ಟ್ ಮೂಲಕ ತೀರಿಸುತ್ತಿರುವುದು ಸಮಾಜಕ್ಕೆ ಮಾದರಿ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಹುಬ್ಬಳ್ಳಿಯ ಎಸ್.ಜೆ.ಎಂ. ಕಾಲೇಜಿನ ಡಾ. ಸುಪ್ರಿಯಾ ಮಲಶೆಟ್ಟಿ ಅವ್ವ ವಿಷಯದ ಕುರಿತು ಉಪನ್ಯಾಸ ನೀಡಿ, ಸಾವಿರಾರು ತಂದೆಗಿಂತ ಒಬ್ಬ ತಾಯಿ ಶ್ರೇಷ್ಠ. ಸಕಲರಿಗೂ ಪೂಜ್ಯನೀಯಳು ತಾಯಿ. ಅವ್ವ ಬದುಕು ನೀಡುವುದರ ಜೊತೆಗೆ ಬದುಕುವ ಕಲೆಯನ್ನು ಕಲಿಸುತ್ತಾಳೆ. ಅವ್ವಳ ಪ್ರೀತಿಯಲ್ಲಿ ಅಪೇಕ್ಷೆ ಇಲ್ಲ. ಮಕ್ಕಳಿಗೋಸ್ಕರ ಏನು ಬೇಕಾದರೂ ಮಾಡುವಳು. ಬಸವಣ್ಣನವರ ವಚನಗಳು ಅವ್ವನ ಸೆರಗು ಇದ್ದಂತೆ. ಮನೆ ಎಂದರೆ ಮನಸ್ಸು ನೆಮ್ಮದಿಯಿಂದ ಇರುವುದು. ಗೋಡೆಗಳಿಂದ ಮನೆ ಕಟ್ಟಿದರೆ, ಅವ್ವ ಪ್ರೀತಿಯಿಂದ ಎಲ್ಲರ ಮನವನ್ನು ಕಟ್ಟುವಳು ಎಂದರು.

ಎಲ್.ಎಲ್.ಎಂ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಹನಾ ಅನಂತ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಆಗಮಿಸಿದ ಗದುಗಿನ ಅವ್ವ ಸೇವಾ ಟ್ರಸ್ಟ್‍ನ ಸಂಚಾಲಕ ಡಾ. ಬಸವರಾಜ ಧಾರವಾಡ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ೨೦೧೧ರಲ್ಲಿ ಉದ್ಘಾಟನೆ ಯಾದ ಅವ್ವ ಸೇವಾ ಟ್ರಸ್ಟ್ ಹತ್ತು ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಾಕಿಕೊಂಡು ದೀನದಲಿತರಿಗೆ ದಿವ್ಯಾಂಗರಿಗೆ, ಮಹಿಳೆಯರಿಗೆ ಶಾಲಾ ವಿದ್ಯಾರ್ಥಿಗಳಿಗೆ, ವಿಶೇಷ ಸಾಧನೆ ಮಾಡಿದ ಪುರುಷರಿಗೆ, ಮಹಿಳೆಯರಿಗೆ, ಪೌರಕಾರ್ಮಿಕರಿಗೆ, ಅಂಧರಿಗೆ ಅನಾಥರಿಗೆ, ಗೌರವ ಸಲ್ಲಿಸುತ್ತ ಪ್ರಾರಂಭದಿಂದ ಇಲ್ಲಿಯವರೆಗೆ ಬಂದಿದೆ ಎಂದರು.

ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಶಶಿ ಸಾಲಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಕಸಾಪ ಧಾರವಾಡ ಜಿಲ್ಲಾ ಅಧ್ಯಕ್ಷ ಲಿಂಗರಾಜ ಅಂಗಡಿ, ಮಾಧ್ಯಮ ಪ್ರತಿನಿಧಿ ಅನಂತ ಕಾರ್ಕಳ ಉಪಸ್ಥಿತರಿದ್ದರು.

ಅವ್ವ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆಯನ್ನು ಗದಗ ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ ಮಾಡಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನಸಂಗೀತ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅವನಿ ಎಂ. ಪುಣೇಕರ, ವಚನಚಿಂತನವನ್ನು ಶ್ರೇಯಾ ಡಿ. ವಿಠ್ಠಲ್ಕರ ನೆಡೆಸಿಕೊಟ್ಟರು. ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂಘ ನಿ. ಗದಗ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *