ಬಜೆಟ್ ನಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ ವಿಶೇಷ ಯೋಜನೆ’ಗೆ ಅನುದಾನ ನೀಡಲು ಕೋರಿಕೆ
ಬೆಂಗಳೂರು
ಬರುವ ಬಜೆಟ್ ನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಿಶೇಷ ಯೋಜನೆ ಕೈಗೊಳ್ಳಲು ಅಗತ್ಯ ಅನುದಾನ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಲಿಂಗಾಯತ ಸಮಾಜದ ಪ್ರಮುಖರು ಫೆಬ್ರವರಿ 22 ಭೇಟಿ ಮಾಡಲಿದ್ದಾರೆ.
ನಾಡಿನ ಪ್ರಮುಖ ಮಠಾಧೀಶರು ಮತ್ತು ಗಣ್ಯರು ಆ ದಿನ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳ ನಿವಾಸದ ಹತ್ತಿರವಿರುವ ಹಿರಿಯ ಸಚಿವ ಎಂ.ಬಿ. ಪಾಟೀಲರ ಸರಕಾರಿ ನಿವಾಸದಲ್ಲಿ (ನಂ.1 ರೇಸ್ ಕೋರ್ಸ್ ರಸ್ತೆ) ಭೇಟಿ ಮಾಡಲಿದ್ದಾರೆ.
ನಂತರ ಎಲ್ಲರೂ ಸೇರಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮನವಿ ನೀಡಲಾಗುವುದು ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಭೇಟಿಯನ್ನು ಆಯೋಜಿಸುತ್ತಿರುವ ಮುಖಂಡರೊಬ್ಬರು ಸಭೆಯಲ್ಲಿ ಪಾಲ್ಗೊಳ್ಳುವ ಮಠಾಧೀಶರನ್ನು ಗದಗಿನ ತೋಂಟದಾರ್ಯ ಶ್ರೀಗಳ ನೇತ್ರತ್ವದಲ್ಲಿ ಆಹ್ವಾನಿಸಲಾಗುತ್ತಿದೆ ಎಂದರು. ಹಿರಿಯ ಸಾಹಿತಿ ಗೊರುಚ, ಅರವಿಂದ ಜತ್ತಿ, ಪಕ್ಷಾತೀತವಾಗಿ ಶಾಸಕ ಮತ್ತು ಮಂತ್ರಿಗಳನ್ನೂ ಆಹ್ವಾನಿಸುವ ಸಾಧ್ಯತೆಯಿದೆ ಎಂದರು.
“ಮುಖ್ಯಮಂತ್ರಿಗಳ ಜೊತೆ ಸಮಾವೇಶ ಮಾಡುತ್ತಿಲ್ಲ. ಅವರನ್ನು ಒಂದು ಸಣ್ಣ ನಿಯೋಗ ಭೇಟಿ ಮಾಡಿ ಸಾಂಸ್ಕೃತಿಕ ನಾಯಕ ವಿಶೇಷ ಯೋಜನೆಯ ಬಗ್ಗೆ ಚರ್ಚಿಸಲಿದೆ,” ಎಂದರು.
ಫೆಬ್ರವರಿ 6 ನಡೆಯಬೇಕಿದ್ದ ಈ ಸಭೆಗೆ ಮುಖ್ಯಮಂತ್ರಿಗಳ ಕಛೇರಿಯಿಂದ ಸಮಾಜದ ಪ್ರಮುಖರಿಗೆ ಅಹ್ವಾನ ಹೋಗಿತ್ತು. ಆದರೆ ಮುಖ್ಯಮಂತ್ರಿಗಳ ಮಂಡಿ ನೋವಿನ ಸಮಸ್ಯೆಯಿಂದ ಮುಂದೆ ಹೋಗಿತ್ತು.
ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅದರ ಮಹತ್ವವನ್ನು ಜನಮನಕ್ಕೆ ತಲುಪಿಸಲು ಒಂದು ವಿಶೇಷ ಕಾರ್ಯಯೋಜನೆಯನ್ನು ರೂಪಿಸಿ ಅದಕ್ಕೆ ಬಜೆಟಿನಲ್ಲಿ ಅನುದಾನ ಕೋರಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುತ್ತಿದೆ.
ಕಳೆದ ತಿಂಗಳು ಚಿತ್ರದುರ್ಗದಲ್ಲಿ ನಡೆದ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಎಂ ಬಿ ಪಾಟೀಲ್ ಅವರು ಬಸವಣ್ಣನವರು ಸಾಂಸ್ಕೃತಿಕ ನಾಯಕನೆಂಬುದು ಬರೀ ಘೋಷಣೆಗೆ ಸೀಮಿತವಾಗಬಾರದು, ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಲು ಒಂದು ಯೋಜನೆ ಕೂಡ ಸಿದ್ಧವಾಗಬೇಕು. ಒಮ್ಮೆಲೇ 500 ಕೋಟಿ ಕೇಳುವ ಬದಲು ಪ್ರತಿ ವರ್ಷ ಬಜೆಟಿನಲ್ಲಿ 100 ಕೋಟಿ ಕೇಳಬಹುದೆಂದು ಎಂದು ಸಲಹೆ ನೀಡಿದ್ದರು.
ಯೋಜನೆ ತಯಾರಿಸಿಕೊಂಡು ಎಲ್ಲಾ ಪೂಜ್ಯರು ಮತ್ತು ಗಣ್ಯರು ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ಬಜೆಟ್ಟಿನಿಂದಲೇ ಕೆಲಸ ಶುರುವಾಗುವಂತೆ ಪ್ರಯತ್ನಿಸಬೇಕು, ಎಂದು ಪಾಟೀಲ್ ಹೇಳಿದ್ದರು.
“ಸುತ್ತೂರು ಶ್ರೀಗಳ ಮಾತಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಲ್ಲಾ ಅನ್ನೋದಿಲ್ಲ. ಸಿದ್ದರಾಮಯ್ಯ ಯಾರ ಮಾತು ಕೇಳುತ್ತಾರೆ ಅಂದರೆ ಅದು ಸುತ್ತೂರು ಶ್ರೀಗಳ ಮಾತು,” ಎಂದು ಎಂ ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಒಳ್ಳೆಯ ಪ್ರಯತ್ನ. ಫಲಪ್ರದವಾಗಲಿ.
ಕನ್ನಡ ಪ್ರಾಚೀನ ಭಾಷೆ ಅಂತ ಕೇಂದ್ರ ಸರಕಾರ ಘೋಷಣೆ ಮಾಡಿ ಆಗಿದೆ. ಕನ್ನಡ ಭಾಷೆಯ ಅಧ್ಯಯನ ಮತ್ತು ಬೆಳವಣಿಗೆಗಾಗಿ 4,000 ಕೋಟಿ ಗಿಂತ ಹೆಚ್ಚು ಹಣ ಮೀಸಲು ಇಟ್ಟಿದೆ. ಆ ಹಣದ ಉಪಯೋಗದತ್ತ ರಾಜ್ಯ ಸರಕಾರ ಯಾವುದೇ ಯೋಜನೆ ಮಾಡಿಲ್ಲ.
ಅದೇ ಪ್ರಾಚೀನ ಕನ್ನಡ ಯೋಜನೆ ಅಡಿ, ವಚನ ಸಾಹಿತ್ಯವನ್ನು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರ ಮಾಡಿ, ಪಠ್ಯ, ಧ್ವನಿ, ದೃಶ್ಯ ಮಾಧ್ಯಮದ ಅಡಿ ಪ್ರಚಾರ ಮಾಡಿದರೆ ಹೇಗೆ?
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ವಚನ ಸಾಹಿತ್ಯ ಮಹತ್ವದ ಕೊಡುಗೆ ಕೊಟ್ಟಿದೆ. ವಚನ ಸಾಹಿತ್ಯ ಪ್ರಸಾರ, ಪ್ರಚಾರ ಅಂದರೆ ಲಿಂಗಾಯತ ಧರ್ಮದ, ಬಸವ ತತ್ವದ ಪ್ರಚಾರ ಮಾಡಿದಂತೆಯೇ ಅಲ್ಲವೇ?
ಯಾಕೆ ಈ ನಿಧಿಯ ಉಪಯೋಗ ಮಾಡಿಕೊಳ್ಳಬಾರದು?
ಉತ್ತಮವಾದ ಕೆಲಸ