ಗದಗ
ತಂದೆ, ಮಕ್ಕಳು, ಪರಿವಾರವನ್ನು ತನ್ನ ತಾಳ್ಮೆಯಿಂದಲೇ ನೋಡಿಕೊಂಡು ಸಂಸ್ಕಾರವನ್ನು ನೀಡುವ ಮಹಾಶಕ್ತಿ ಮಹಿಳೆ. ‘ಮಹಿ’ ಎಂದರೆ ಭೂಮಿ. ‘ಇಳೆ’ ಎಂದರೂ ಭೂಮಿ. ಅಂತೆಯೇ ಮಹಿಳೆ ಭೂಮಿ ತೂಕದವಳು. ಮಕ್ಕಳಿಗೆ ಅವಳ ಅನುಕರಣೆಯೇ ಸಂಸ್ಕಾರ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೩೬ ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತಾಯಿಯಾದವಳು ಮಕ್ಕಳಿಗೆ ಸಂಸ್ಕಾರದ ಪ್ರತಿಬಿಂಬ, ಆದರ್ಶ ಮತ್ತು ಧೈರ್ಯ. ಬಸವಾದಿ ಶಿವಶರಣರು ಜಾತಿ ಮತ ಪಂಥ ಬೇಧಭಾವ ಅಳಿಸಿ ಸಮಾನತೆಯ ಭಾವವನ್ನು ಭಿತ್ತಿದರು. ಪುರುಷ ಪ್ರಧಾನ ಎಂಬುದು ಬದಲಾವಣೆ ಆಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿ ಇದ್ದಾರೆ. ಸುನೀತಾ ವಿಲಿಯಮ್ಸ ಅಂತರೀಕ್ಷದಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ಅನೇಕ ಮಹಿಳಾ ಸಾಧಕಿಯರು ಬೆಳಗಿದ್ದಾರೆ. ಪುರುಷರಿಗೆ ಸಮಾನವಾಗಿ ಇಂದು ಮಹಿಳೆಯರು ಬೆಳೆದು ನಿಂತಿರುವುದು ಸಂತೋಷದ ವಿಷಯ ಎಂದು ಶ್ರೀಗಳು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಧ್ಯಾತ್ಮ ವಿದ್ಯಾಶ್ರಮದ ಶರಣೆ ಮೈತ್ರಾದೇವಿ ಅಮ್ಮನವರು ಮಾತನಾಡಿ, ಒಡಹುಟ್ಟಿದ ಅಕ್ಕನಿಗಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಂದು ಎಲ್ಲಾ ರಂಗಗಳಲ್ಲಿ ಮಹಿಳೆಯರು ಸಮಾನವಾದ ಅವಕಾಶವನ್ನು ಪಡೆಯಲು ಸಾಧ್ಯವಾಗಿದೆ. ಭಾರತ ನಾಗರಿಕತೆಯ ತೊಟ್ಟಿಲು, ಸಂಸ್ಕೃತಿಯ ಪರಂಪರೆ, ಭಾರತ ಅದ್ಬುತಗಳ ಅಜ್ಜಿ, ಮಹಿಳೆಯರು ಗಟ್ಟಿಯಾಗಿದ್ದರಿಂದ ಸಂಸ್ಕೃತಿ ಪರಂಪರೆ ಮುಂದುವರೆದುಕೊಂಡು ಬಂದಿದೆ. ತಾಯಿಯಾದವರು ಮಕ್ಕಳು ಎದ್ದ ಕೂಡಲೆ ಬೆಡ್ ಟೀ ಕೊಡದೆ, ಮುಖ ತೊಳೆ, ವಿಭೂತಿ ಹಚ್ಚು, ಒಂದು ವಚನ ಹೇಳು, ನಂತರ ನಿನಗೆ ಬೆಡ್ ಟೀ ಕೊಡುವೆ ಎಂದರೆ ಅದೇ ಬಹುದೊಡ್ಡ ಸಂಸ್ಕೃತಿ ಎಂದು ಮಹಿಳೆಯರ, ಮಹತ್ವದ ಕುರಿತು ತುಂಬಾ ಅರ್ಥಪೂರ್ಣವಾಗಿ ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಮಂಗಲಾ ಮೇಟಿಯವರು ಮಾತನಾಡಿ, ಮಹಿಳೆ ಮನಸ್ಸು ಮಾಡಿದರೆ ಜಗತ್ತನ್ನು ಬದಲಾವಣೆ ಮಾಡುವ ಶಕ್ತಿಯಿದೆ. ಮೌಲ್ಯಗಳ ಪಾಠವನ್ನು ಮನೆಯಲ್ಲಿಯೇ ಹೇಳಿಕೊಡಬೇಕು. ಎಷ್ಟೋ ಯುವ ಜನಾಂಗದಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವುದು ಅವಶ್ಯವಾಗಿದೆ. ಸಂಸ್ಕೃತಿಯ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ತುಂಬಾ ಮನೋಜ್ಞವಾಗಿ ತಿಳಿಸಿದರು.
ಗದಗ ಜಿಲ್ಲೆಯ ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಸುಧಾ ಹುಚ್ಚಣ್ಣವರ ಹಾಗೂ ಗದಗ ಜಿಲ್ಲೆಯ ಏಳು ತಾಲ್ಲೂಕುಗಳ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾರಿಗೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ವಾ.ಕ.ರ.ಸಾ.ಸಂಸ್ಥೆಯ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀದೇವಿ ಕೇಸರಪ್ಪನವರ ಹಾಗೂ ಆಟೋರಿಕ್ಷಾ ಚಾಲಕಿಯರಾದ ರೇಖಾ ಸಂತೋಷ ಹುಲ್ಲೂರು ಇವರನ್ನು ಸನ್ಮಾನಿಸಲಾಯಿತು.
ಗದಗ ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯ ವಿಧ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನಡೆಸಿದರು. ಧರ್ಮಗ್ರಂಥ ಪಠಣವನ್ನು ಕುಮಾರಿ ಸಾಕ್ಷಿ ಜೋಗಿನ, ವಚನ ಚಿಂತನವನ್ನು ಕುಮಾರಿ ವೀಣಾ ತುಪ್ಪದ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ್ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಹಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ, ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಭಕ್ತರು ಉಪಸ್ಥಿತರಿದ್ದರು.
ದಾಸೋಹ ಸೇವೆಯನ್ನು ಗದಗ ಜಿಲ್ಲೆಯ ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ವಹಿಸಿಕೊಂಡಿದ್ದರು. ಶ್ರೀಮತಿ ಸುಧಾ ಹುಚ್ಚಣ್ಣನವರ ಸ್ವಾಗತಿಸಿದರು, ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.