ಗದಗ
ವಿಶ್ವಕಲ್ಯಾಣ ಸಂಸ್ಥೆಯ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಬೇಲೂರಿನ ಪೂಜ್ಯ ಡಾ. ಮಹಾಂತಬಸವಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ಮಕ್ಕಳಿಗೆ ಹಾಲು-ಬಿಸ್ಕಿಟ್ ಗಳನ್ನು ವಿತರಿಸುವ ಮೂಲಕ, ಗುರುವಾರ ಬಸವಪಂಚಮಿಯನ್ನು ಆಚರಿಸಲಾಯಿತು.
ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ವೈಚಾರಿಕ ತಳಹದಿ ಮೇಲೆ ಆಚರಿಸಬೇಕಾದ ಈ ಹಬ್ಬದಲ್ಲಿ ಕಲ್ಲು-ಮಣ್ಣು ನಾಗರಗಳಿಗೆ ಹಾಲೆರೆದು ಹಾಳು ಮಾಡದೇ ಅವಶ್ಯಕವಿರುವ ಮಕ್ಕಳಿಗೆ ಕೊಡುವ ಮೂಲಕ ಆಚರಿಸಬೇಕು. ಇದರ ಬಗ್ಗೆ ಎಲ್ಲರಿಗೂ ಅರಿವು ಮೂಡಬೇಕೆಂದು ಕರೆ ನೀಡಲಾಯಿತು.
ವಿಶ್ವಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ಹದ್ದಣ್ಣನವರು ಎಲ್ಲರನ್ನೂ ಸ್ವಾಗತಿಸಿ, ತಮ್ಮ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿ, ಎಲ್ಲರೂ ಆಗಾಗ್ಗೆ ಬಂದು ನಮ್ಮ ಸಂಸ್ಥೆಗೆ ಭೇಟಿ ನೀಡಿ, ದೇವರ ಸ್ವರೂಪರಾದ ಮಕ್ಕಳೊಂದಿಗೆ ಕಾಲ ಕಳೆಯಲು ವಿನಂತಿಸಿದರು.
ಸಾನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿ, “ಶರಣರು ಕಲ್ಲು ನಾಗರಕ್ಕೆ ಹಾಲೆರೆದು ಹಾಳು ಮಾಡಬೇಡಿ, ಬದಲಾಗಿ ಉಂಬ ಜಂಗಮಕ್ಕೆ ನೀಡಿ ಎಂದು ಹೇಳಿದ್ದಾರೆ. ನಾವು ಅವರ ಮಾರ್ಗದರ್ಶನದಲ್ಲಿ ನಡೆಯಬೇಕು” ಎಂದರು.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಣ್ಣ ಭರಮಗೌಡ್ರ, ಬಸವದಳದ ಅಧ್ಯಕ್ಷರಾದ ವಿ.ಕೆ. ಕರೀಗೌಡ್ರ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿಗಳಾದ ಶೇಕಣ್ಣಾ ಕವಳಿಕಾಯಿ ಹಾಗೂ ನಗರಸಭೆ ಸದಸ್ಯರಾದ ಚಂದ್ರಣ್ಣ ತಡಸದ ಮತ್ತಿತರರು ಉಪಸ್ಥಿತರಿದ್ದರು.

ಬಸವದಳದ ತಾಯಂದಿರು ವಚನಪ್ರಾರ್ಥನೆ ಮಾಡಿದರು. ಪ್ರಕಾಶ ಅಸುಂಡಿ ನಿರೂಪಿಸಿದರು.
ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಆರಂಭದಲ್ಲಿ ಬಸವೇಶ್ವರ ನಗರದ ಬಸವವನದ ಬಸವಮೂರ್ತಿಗೆ ಹಾಗೂ ಹತ್ತಿಕಾಳಕೂಟದಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಮೂರ್ತಿಗೆ ಹಾಗೂ ಭೀಷ್ಮ ಕೆರೆಯಲ್ಲಿರುವಂತಹ ಬಸವೇಶ್ವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಾಸ್ತಾವಿಕ ನುಡಿಗಳನ್ನು ಗೌರಕ್ಕ ಬಡಿಗಣ್ಣನವರು ಮಾತನಾಡಿದರು. ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ರೇಖಾ ಸೋನೆವಾನೆ, ಡಾ. ಧನೇಶ ದೇಸಾಯಿ ಇವರೆಲ್ಲ ಹಾಲಿನ ಮಹತ್ವದ ಬಗ್ಗೆ ಮಾತನಾಡಿ, ಇಲ್ಲಿ ರೋಗಿಗಳಿಗೆ, ಬಾಣಂತಿಯರಿಗೆ ಪೌಷ್ಠಿಕ ಆಹಾರವಾದ ಹಾಲನ್ನು ವಿತರಿಸುವ ಬಸವಪರ ಸಂಘಟನೆಗಳ ಕಾರ್ಯವನ್ನು ಶ್ಲಾಘಿಸಿದರು.
ಸಂಸ್ಥೆಯ ನಿರ್ದೇಶಕರಾದ ಡಾ.ಬಸವರಾಜ ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯ ಮೆಡಿಕಲ್ ಸುಪರಿಂಟೆಡೆಂಟ್ ಡಾ.ರೇಖಾ ಸೋನೆವಾನೆ ಮತ್ತು ಡಾ. ಹಳೇಮನಿ, ಹಿರಿಯ ವೈದ್ಯಾಧಿಕಾರಿಗಳು, ಜ.ತೋಂ.ಮಠ ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ.ಧನೇಶ ದೇಸಾಯಿ, ಚಂದ್ರು ತಡಸದ, ವಿ.ಕೆ.ಕರೇಗೌಡ್ರ, ಹಾಲು ದಾಸೋಹಿಗಳಾದ ಶಿವಸಂಗಮ ಗ್ರುಪ್ನ ಪಾಲುದಾರರಾದ ಎಂ.ಬಿ. ಲಿಂಗಧಾಳ ಉಪಸ್ಥಿತರಿದ್ದರು.