ಗದಗ
ಇತ್ತೀಚಿಗೆ ಬೀದರನಲ್ಲಿ ವಕ್ಫ್ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲರ ಬಾಯಿಂದ ಲಿಂಗಾಯತ ಧರ್ಮಗುರು ಬಸವಣ್ಣನವರ ಬಗ್ಗೆ ತೀರಾ ತಿಳುವಳಿಕೆಗೇಡಿತನದಿಂದ ಕೂಡಿದ ಅವರ ಅವಹೇಳನದ ಮಾತುಗಳನ್ನು ಗದುಗಿನ ಬಸವದಳ, ಬಸವಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಯತ್ನಾಳರು ಅಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ನೀವು ಎಚ್ಚರಗೊಳ್ಳಿ ಇಲ್ಲದಿದ್ದರೆ ‘ಬಸವಣ್ಣನಂತೆ ನೀವು ಹೊಳೆಗೆ ಹಾರಬೇಕಾಗುತ್ತದೆ’ ಎಂದು ಮಾತನಾಡಿದ್ದಾರೆ. ಇದು ತೀರಾ ಅಕ್ಷಮ್ಯವಾಗಿದೆ. ನಮ್ಮ ನಾಡಿನ ದುರಂತವೆಂದರೆ ಮೊಟ್ಟಮೊದಲ ಪಾರ್ಲಿಮೆಂಟ್ ಅನುಭವ ಮಂಟಪದ ರೂವಾರಿ ಬಸವಣ್ಣನವರ ಬಗ್ಗೆ ಅದೇ ನಾಡಿನಲ್ಲಿ ಜನಿಸಿದ, ಅದೂ ಲಿಂಗಾಯತ ಧರ್ಮೀಯ ಬಸನಗೌಡ ಯತ್ನಾಳರಿಗೆ ಅಧ್ಯಯನದ ಕೊರತೆಯಿದೆ ಎಂದು ಬಸವಪರ ಸಂಘಟನೆಗಳು ಹೇಳಿವೆ.
ಬಸವಾದಿ ಶರಣರು ಈ ನಾಡಿನಲ್ಲಿದ್ದ ಜಾತಿಯತೆ, ಮೇಲುಕೀಳು, ಅಸ್ಪೃಶ್ಯತೆ, ತಾರತಮ್ಯತೆ ನಿವಾರಣೆಯ ಹೋರಾಟದಲ್ಲಿ ಹಲವು ಸಮಾಜ ವಿರೋಧಿ ಶಕ್ತಿಗಳಿಂದ ತೀವ್ರ ಪ್ರತಿರೋಧ ಎದುರಿಸಿದರೂ, ಪ್ರಾಣಕ್ಕೆ ಅಪಾಯವಾದಾಗಲೂ ಎದೆ ಗುಂದಲಿಲ್ಲ. ಸಾವಿಗೆ ಅಂಜಲಿಲ್ಲ. ಅಂದು ಕಲ್ಯಾಣದಲ್ಲಿ ಶರಣರ ಕಣ್ಣು ಕೀಳಿಸಿ, ಆನೆ ಕಾಲುಗಳಿಗೆ ಕಟ್ಟಿ ಕಲ್ಯಾಣದ ಹಾದಿ ಬೀದಿಗಳಲ್ಲಿ ಎಳೆದಾಡಿಸಿದರು, ದುಷ್ಟರಿಂದ ನಿಶಸ್ತ್ರ ಶರಣರ ಕಗ್ಗೊಲೆಗಳು ನಡೆದವು. ಆದರೆ ಧೀಮಂತತನದಿಂದ ಶರಣರೆಂದೂ ತಮ್ಮ ತತ್ವ -ಸಿದ್ಧಾಂತಗಳಿಗಾಗಿ ಹೋರಾಡಿ ಹುತಾತ್ಮರಾದರೆ ಹೊರತು ಸಾವಿಗೆಂದೂ ಅಂಜಲಿಲ್ಲ.
ರಾಜ ಬಿಜ್ಜಳನ ಆಜ್ಞೆಯಂತೆ ಗಡಿಪಾರಿನ ಶಿಕ್ಷೆಗೆ ಒಳಗಾದ ಬಸವಣ್ಣನವರು ಕಪ್ಪಡಿ ಸಂಗಮಕ್ಕೆ ತೆರಳಿ ಅಲ್ಲಿಯೇ ವಾಸವಿದ್ದು, ಅವರು ೬೩ ವರ್ಷಗಳ ಕಾಲ ಬದುಕಿದ ಬಗ್ಗೆ ವಚನಗಳಲ್ಲೇ ಸಾಕ್ಷಿಯಿದೆ. ಶರಣರು ಎಂದಿಗೂ ಹೇಡಿಗಳಲ್ಲ, ಆತ್ಮಹತ್ಯೆಯಂತಹ ಕೀಳುತನಕ್ಕೆ ಇಳಿವವರಂತೂ ಅಲ್ಲವೇ ಅಲ್ಲ. ನಮ್ಮ ಧರ್ಮಗುರು ಬಸವಣ್ಣನವರು ಇಷ್ಟಲಿಂಗ ನಿರೀಕ್ಷೆಣೆಯಲ್ಲಿಯೇ ಉರಿಉಂಡ ಕರ್ಪುರದಂತೆ ಲೀನವಾದ (ಲಿಂಗೈಕ್ಯ) ಬಗ್ಗೆ ಅನೇಕ ವಚನಗಳಲ್ಲಿ ಉದಾಹರಣೆಗಳಿವೆ.
ಬಸನಗೌಡ ಯತ್ನಾಳರು ಇದನ್ನು ಅರಿಯಬೇಕು. ತಮ್ಮ ತಿಳಿಗೇಡಿತನ ಬಿಡಬೇಕು. ನಮ್ಮ ಧರ್ಮಗುರುಗಳ ಬಗ್ಗೆ ತೀರಾ ಕೀಳಾಗಿ ಮಾತನಾಡಿದ ಬಿಜೆಪಿ ಶಾಸಕ ಬಸವಗೌಡ ಪಾಟೀಲ ಯತ್ನಾಳರು ಸಮಾಜದ ಕ್ಷಮೆ ಕೇಳಬೇಕೆಂದು ಗದುಗಿನ ಬಸವದಳ, ಬಸವಪರ ಸಂಘಟನೆಗಳ ಮುಖಂಡರಾದ ವಿ.ಕೆ ಕರೇಗೌಡ್ರ, ಎಸ್.ಎ. ಮುಗದ, ಮೃತ್ಯುಂಜಯ ಜಿನಗಾ, ಅಶೋಕ ಬರಗುಂಡಿ, ನಿಂಗನಗೌಡ ಹಿರೇಸಕ್ಕರಗೌಡರ, ಗೌರಕ್ಕ ಬಡಿಗಣ್ಣವರ, ರೇಣುಕಾ ಕರೇಗೌಡ್ರ, ನಾಗರತ್ನ ಅಸುಂಡಿ ಎಂ.ಬಿ. ಲಿಂಗದಾಳ, ಬಿ.ವಿ. ಕಾಮಣ್ಣವರ ಮತ್ತಿತರರು ಒತ್ತಾಯಿಸಿದ್ದಾರೆ.