ಗದಗ ವಚನ ಶ್ರಾವಣದಲ್ಲಿ ಅಕ್ಕನ ವಚನ ನಿರ್ವಚನ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ವಚನ ಶ್ರಾವಣದ 6ನೇ ದಿನದಂದು ವಾಣಿ ಪಾತ್ರೋಟ ಜಗನ್ಮಾತೆ ಅಕ್ಕಮಹಾದೇವಿಯವರ ವಚನ-ನಿರ್ವಚನ ಮಾಡಿದರು.

ವಚನ ಓದುವುದೆಂದರೆ ಅನುಭಾವದಲ್ಲಿ ಮಿಂದೆದ್ದಂತೆ ಎಂದು ಹೇಳಿ ಅವರು “ದೇವಲೋಕದವರಿಗೂ ಬಸವಣ್ಣನೆ ದೇವರು, ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು,” ಎಂಬ ವಚನವನ್ನು ವಿವರಿಸಿದರು.

“ಮೇಲುನೋಟಕ್ಕೆ ಇದು ಧರ್ಮಗುರು ಬಸವಣ್ಣನವರನ್ನು ಸ್ತುತಿಸುವ ವಚನವೆಂದು ಕಾಣುತ್ತದೆ. ಆದರೆ ವಚನದ ಆಳಕ್ಕಿಳಿದಂತೆ ಅಲ್ಲಿರುವ ಆಂತರ‍್ಯವೇ ಬೇರೆಯದ್ದಾಗಿದೆ. ದೇವಲೋಕ, ಮರ್ತ್ಯಲೋಕ, ನಾಗಲೋಕ, ಮೇರುಗಿರಿ, ಮಂದಾರಗಿರಿ ಇವು ನಮ್ಮೊಳಗೆ ಇರುವಂತಹ ಲೋಕಗಳಾಗಿವೆ. ದೇಹವು ೩ ಶರೀರಗಳಿಂದ ರಚನೆಯಾಗಿರುವುದನ್ನು ಕಾಣುತ್ತೇವೆ. ೧.ಸ್ಥೂಲ ೨.ಸೂಕ್ಷ್ಮ 3.ತನು ಇಲ್ಲಿ ಸ್ಥೂಲವೆಂದರೆ ಕಣ್ಣಿಗೆ ಕಾಣುವಂತಹ ಈ ದೇಹ. ಎರಡನೆಯದು ಸೂಕ್ಷ್ಮವೆಂದರೆ ದೇಹದ ಕಾರ್ಯಗಳನ್ನು ನೆರವೇರಿಸುವ ಮನಸ್ಸು. ಮೂರನೇ ಕಾರಣ ತನು ಎಂದರೆ ಈ ಶರೀರದ ಕಾರ್ಯಗಳನ್ನು ನಡೆಸಲು ಬೇಕಾಗುವ ಭಾವನಾತ್ಮಕ ಶಕ್ತಿ.

ದೇಹದಿಂದ ಯಾವುದೇ ಕ್ರಿಯೆಗಳು ನಡೆಯಬೇಕಾದರೆ ಅದಕ್ಕೆ ಮನದ ಜ್ಞಾನ ಹಾಗೂ ಆ ಜ್ಞಾನಕ್ಕೆ ತಕ್ಕ ಶರೀರದ ಕ್ರಿಯೆ ಬಹಳ ಮುಖ್ಯ. ಈ ಮನ ಹಾಗೂ ದೇಹದ ಕ್ರಿಯೆಗಳು ನಡೆಯಬೇಕಾದರೆ ಅದಕ್ಕೆ ಮೂಲ ಪ್ರೇರಕ ಶಕ್ತಿಯಾಗಿ ಭಾವನೆಗಳು ಬೇಕಾಗುತ್ತವೆ. ಈ ಭಾವನೆಗಳ ಪ್ರೇರಣೆ ಇಲ್ಲದೆ ಯಾವ ಕ್ರಿಯೆಗಳು ಜರುಗಲಾರವು. ಅದು ಭವಬಂಧನಕ್ಕೆ ಒಳಗಾಗಿ ನಡೆಯುವಂತಹ ಮರ್ತ್ಯಲೋಕವೆನಿಸಿಕೊಳ್ಳುತ್ತದೆ.

ಮೂರನೆಯದಾಗಿ ದೇಹದ ಕ್ರಿಯೆಗಳು ಪಂಚ ವಿಷಯಗಳಿಗೆ ಒಳಗಾಗಿ ಶಬ್ಧ, ಸ್ಪರ್ಷ, ರೂಪ, ರಸ, ಗಂಧ ಇವು ದೇಹ ಅನಾಚಾರಕ್ಕೆ ಒಳಗಾಗಿ ದುರಾಚಾರ, ದುರ್ನಡತೆಯಿಂದ ನಡೆದುಕೊಂಡರೆ ಅದು ನಾಗಲೋಕವೆಂದೆನಿಸಿಕೊಳ್ಳುತ್ತದೆ.

ಬೆಳಗಿನೊಳು ಬೆಳಗಾಗಿ ಕೋಟಿ ಸೂರ್ಯರ ಶಕ್ತಿಯನ್ನು ಮೀರಿಸುವಂತಹ ವಿಶ್ವದ ತುಂಬೆಲ್ಲ ತುಂಬಿಕೊಂಡಿರುವಂತಹ ವಿಶ್ವಚೈತನ್ಯವೇ ಜ್ಞಾನಶಕ್ತಿ. ಅದು ಅರಿವಿನ ರೂಪದಲ್ಲಿ ತನ್ನ ಅಂತರಂಗವನ್ನು ತುಂಬಿಕೊಂಡಿದೆ. ಅದೇ ರೀತಿ ಆ ಅರಿವು ಎಲ್ಲ ಶರಣರ ಅಂತರಂಗ, ಬಹಿರಂಗದಲ್ಲಿ ಪರಂಜ್ಯೋತಿಯಾಗಿ ಬೆಳಗುತ್ತಿದೆ.

ಆ ಪರಂಜ್ಯೋತಿ ಪ್ರಕಾಶವೇ ಬಸವನೆಂಬ ರೂಪದಿಂದ ಸದಾ ತಮ್ಮೊಂದಿಗೆ ಇರುವುದನ್ನು ಕಂಡುಕೊಂಡಿದ್ದಾರೆ ಅಕ್ಕಮಹಾದೇವಿ ತಾಯಿ” ಎಂದು ಅನೇಕ ಉದಾಹರಣೆಗಳನ್ನು ನೀಡುತ್ತಾ ಹೇಳಿದರು.

ನಿವೃತ್ತ ಪ್ರಾಚಾರ್ಯರಾದ ಚಂದ್ರಶೇಖರ ವಸ್ತ್ರದ ಅವರು ಮಾತನಾಡಿ, “ಶರಣರು ಮನುಷ್ಯನಲ್ಲಿರುವ ಸತ್ವ, ರಜ ಮತ್ತು ತಮೋ ಗುಣಗಳ ಆಧಾರದ ಮೇಲೆ ದೇವಲೋಕ, ಮರ್ತ್ಯಲೋಕ, ನಾಗಲೋಕದ ಜನಗಳನ್ನಾಗಿ ವಿಂಗಡನೇ ಮಾಡಿರುವುದಾಗಿ ತಿಳಿಸಿ, ವಚನಗಳ ವಿಶ್ಲೇಷಣೆಯು ನಾಲ್ಕು ವಿಧಗಳಾಗಿ ನಡೆಯಬೇಕೆಂದು ತಿಳಿಸುತ್ತಾರೆ” ಎಂದು ಹೇಳಿದರು.

ಅತಿಥಿಗಳಾದ ಎಂ.ಡಿ. ಸಮುದ್ರಿ, ವಿ.ಕೆ.ಕರೇಗೌಡ್ರ, ಶೇಖರ ಕವಳಿಕಾಯಿ, ಚೆನ್ನಯ್ಯ ಹಿರೇಮಠ, ಕೆ.ಎಸ್. ಪಲ್ಲೇದ, ಪ್ರಕಾಶ ಅಸುಂಡಿಯವರು ಸಮಯೋಚಿತವಾಗಿ ಮಾತನಾಡಿದರು.

ವಚನ ಪ್ರಾರ್ಥನೆ ಕು.ಚಿನ್ಮಯಿ, ಸನ್ಮತಿ ಎಚ್.ಗೌಡರ, ಸ್ವಾಗತವ ಸಹನಾ ಎಸ್.ಗೌಡರ, ಶರಣು ಸಮರ್ಪಣೆ ಹನುಮಗೌಡ ಗೌಡರ ಮಾಡಿದರೆ, ಎಸ್.ಎ.ಮುಗದವರು ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *