ಗದಗ
ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು.
ಅಲ್ಲಮಪ್ರಭುಗಳ:
“ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ,
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ, ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
ವಚನದ ಚಿಂತನೆ ಜರುಗಿತು.
ಶರಣ ಎಸ್.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು.
ಅಗ್ನಿ, ಉದಕ ಮತ್ತು ಜಲತತ್ವಗಳಿಂದ ಉಂಟಾದ ಅವಗುಣಗಳನ್ನು ಕಳೆದು ಕೊಂಡು ಲಿಂಗತತ್ವಗಳನ್ನು ಅಳವಡಿಸಿಕೊಳ್ಳುವದೇ ಯೋಗದ ಗುರಿ ಎಂದು ವಚನ ಚಿಂತನ ಮಾಡುತ್ತಾ ಹೇಳಿದರು.
ಶರಣೆ ಗೌರಕ್ಕ ಬಡಿಗಣ್ಣವರ, ದೇವರು ನೀರಾಕಾರ ಆ ನಿರಾಕಾರ ದೇವನನ್ನು ಇಷ್ಟಲಿಂಗವೆಂಬ ಸಾಕಾರ ಸ್ವರೂಪದಲ್ಲಿ ಶರಣರು ಕಂಡರು., ಕಾರಣ ಇಷ್ಟಲಿಂಗ ಯೋಗದ ಮುಖಾಂತರ ಪಂಚಮಹಾಭೂತಗಳ ಕಾಠಿನ್ಯತೆಯನ್ನು ಕಳೆದುಕೊಂಡು ಲಿಂಗಸ್ವರೂಪರಾಗಬೇಕೆಂದು ಹೇಳಿದರು.
ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು.
ಆರಂಭದಲ್ಲಿ ಶರಣೆ ಸರೋಜಾ ಮುಗದ ಇವರು ಪ್ರಾರ್ಥನೆ ನಡೆಸಿಕೊಟ್ಟರು. ಚನ್ನವೀರಪ್ಪ ತೋಟಪ್ಪ ದುಂದೂರ ದಂಪತಿಗಳಿಗೆ ಅದ್ಯಯನ ಮತ್ತು ಅನುಕರಣೆಗಾಗಿ ವಚನ ಪುಸ್ತಕ ಹಾಗೂ ಬಸವತಂದೆಯ ಭಾವಚಿತ್ರವನ್ನು ಹಿರಿಯ ಶರಣರಾದ ಎಸ್.ಎನ್. ಹಕಾರಿ ನೀಡಿ ಸನ್ಮಾನಿಸಿದರು.