ಧಾರವಾಡ:
ಗಂಗಾಂಬಿಕಾ ಬಳಗದ 250ನೇ ಮಹಾಮನೆ ಕಾರ್ಯಕ್ರಮ ಸತ್ತೂರಿನ ಕೋಳಿವಾಡ ಫಾರ್ಮ್ ಹೌಸನಲ್ಲಿ ಈಚೆಗೆ ಭಕ್ತಿಭಾವದಿಂದ ನಡೆಯಿತು.
ವಿಶ್ವಗುರು ಬಸವಣ್ಣನವರ ಭಾವಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶರಣೆ ದಾಕ್ಷಾಯಣಿ ಶಂಕರ ಕೋಳಿವಾಡ ಮಾತನಾಡುತ್ತ, ಬಸವಾದಿ ಶರಣರ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ವಿವರಿಸಿದರು.

ಗಂಗಂಬಿಕಾ ಬಳಗದ ಅಧ್ಯಕ್ಷರಾದ ಶರಣೆ ಡಾ. ಸ್ನೇಹ ಭೂಸನೂರ ಅವರು ಮಾತನಾಡಿ, ಬಳಗದಿಂದ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಸವಣ್ಣನವರ ಸಂದೇಶಗಳನ್ನು ತಲುಪಿಸಲಾಗುವದು ಎಂದರು. ವಚನೋತ್ಸವಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಚಿಂತನೆಗಳನ್ನು ಬಲಪಡಿಸುತ್ತವೆ ಎಂದು ತಿಳಿಸಿದರು.
ರಂಗಭೂಮಿ ಕಲಾವಿದ ಹಾಗೂ ಶರಣ ಶಕ್ತಿ ಚಲನಚಿತ್ರದಲ್ಲಿ ಬಸವಣ್ಣನ ಪಾತ್ರದಲ್ಲಿ ನಟಿಸಿದ ಮಂಜುನಾಥಗೌಡ ಪಾಟೀಲ ಅವರ ನಿರ್ದೇಶನದಲ್ಲಿ ಅಭಿನಯಿಸಿದ “ಕಲ್ಯಾಣದ ಶರಣರ ದರ್ಶನ” ಎಂಬ ನಾಟಕ ಎಲ್ಲರನ್ನು ಆಕರ್ಷಿಸಿತು. ನಂತರ ನಾಟಕದಲ್ಲಿ ಅಭಿನಯಿಸಿದ ಮಂಜುನಾಥಗೌಡ ಪಾಟೀಲ, ಹೇಮಂತಗೌಡ ರಾಮನಗೌಡ್ರ ಅವರನ್ನು ಸನ್ಮಾನಿಸಲಾಯಿತು.

ಜಯಶ್ರೀ ಹಿರೇಮಠ, ಸೀತಾ ಮದನಭಾವಿ, ಡಾ. ದೀಪಾ ಪಾಟೀಲ, ಸುಮಾ ವಾಲಿ, ಮಂಜುಳಾ ಹಿರೇಮಠ, ಗೀತಾ ಕುಬಸದ, ಸುನಿತಾ, ಲತಾ ಮುದೋಳ, ವಿಜಯಲಕ್ಷ್ಮಿ ಸಿಂದಗಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
