ಗುಳೇದಗುಡ್ಡದಲ್ಲಿ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮ

ಗುಳೇದಗುಡ್ಡ

ಬಸವ ಕೇಂದ್ರದ ವತಿಯಿಂದ ಪ್ರತಿ ಶನಿವಾರದಂದು ಸರಳ-ಸಹಜತೆಯಿಂದ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಈ ವಾರ ಪಟ್ಟಣದ ಗುಗ್ಗರಿ ಪೇಟೆಯ ಶರಣ ಹನುಮಂತಪ್ಪ ಬಂಗಾರಕಡೆಯವರ ಮನೆಯಲ್ಲಿ ನೆರವೇರಿತು.

‘ಅರಗು ತಿಂದು ಕರಗುವ ದೈವವ ಎಂತು ಸರಿಯೆಂಬೆನಯ್ಯ?’ ಎಂಬ ಜಗಜ್ಯೋತಿ ಬಸವೇಶ್ವರರ ವಚನದ ಕುರಿತು ಚಿಂತನ-ಮಂಥನ ನಡೆಯಿತು.

ಉಪನ್ಯಾಸಕರಾದ ಶರಣ ಶ್ರೀಕಾಂತ ಗಡೇದವರು ಸಾಮಾಜೋಧಾರ್ಮಿಕ ಶೋಷಣೆಯ ವಿರುದ್ದ ಗುರು ಬಸವೇಶ್ವರರ ನಡೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಗಿರೀಶ ನೀಲಕಂಠಮಠ ಅವರು ವಚನ-ನಿರ್ವಚನಗೈಯುತ್ತಾ ದೇವರ ಕಲ್ಪನೆ, ಮನುಷ್ಯ ತನ್ನ ಜೀವ ಭಯದಿಂದ ಹೊರಗಾಗಲು ತನಗಿಂತ ಶಕ್ತಿಶಾಲಿಯಾದ ಒಂದು ಏನೋ ಇರಬಹುದೆಂದು, ಅದನ್ನು ಒಲಿಸಿಕೊಂಡರೆ ತಾನು ಈ ಸಾವಿನ ಸ್ಥಿತಿಯಿಂದ ಪಾರಾಗಲು ಆರಾಧನೆಗೆ ದೇವರ ಸ್ವರೂಪವನ್ನು ಕಲ್ಪಿಸಿಕೊಂಡಿದ್ದಾನೆ. ಅರಿವು ಆಚರಣೆ ಅನುಭವದ ಮೂಲಕ ಆ ದೇವನನ್ನು ನಮ್ಮೊಳಗೆ ಕಂಡು ನಾವೇ ಆಗಬೇಕು ಎಂದು ಹೇಳುವದರ ಜೊತೆಗೆ ದೈವತ್ವದ ಸಾಕಾರ-ನಿರಾಕಾರತೆಯನ್ನ ನಿರೂಪಿಸಿದರು.

ಕಲ್ಲು, ಮಣ್ಣು, ಕಟ್ಟಿಗೆ, ಲೋಹ ಮೊದಲಾದವುಗಳಿಂದಾದ ವಿಗ್ರಹಗಳ ಆರಾಧನೆಯ ದ್ವೈತಭಾವ ಬಿಟ್ಟು, ನಮ್ಮಂತರಂಗದಲ್ಲೇ ಹುದುಗಿರುವ ಶಿವತತ್ವವನ್ನು ಇಷ್ಟಲಿಂಗದ ಅನುಸಂಧಾನದ ಮುಖೇನ ಜಾಗೃತಗೊಳಿಸಿಕೊಂಡರೆ ಜೀವನೇ ಶಿವನಾಗಿರುವ ಸತ್ಯದರ್ಶನ ಅನುಭಾವಗಮ್ಯವೆಂಬುದನ್ನು ದೃಷ್ಟಾಂತದ ಮೂಲಕ ಮನದಟ್ಟಾಗಿಸಿದರು.

ವಚನದ ಕುರಿತು ಪ್ರಶ್ನೋತ್ತರ ಚರ್ಚೆ ಬಳಿಕ ಶರಣ ಸಿದ್ಧಲಿಂಗಪ್ಪ ಬರಗುಂಡಿಯವರು ಸಮಾರೋಪ ನುಡಿಗಳನ್ನಾಡುತ್ತಾ, ಸುತರ್ಕರಹಿತವಾದ, ಕಲ್ಪನಾತ್ಮಕವಾದ, ಶೋಷಣಾ ಸಾಧನಗಳಾದ ಬಹುದೇವತಾ ವಿಗ್ರಹೋಪಾಸನೆಯನ್ನು ಅಲ್ಲಗಳೆದು ‘ಸಚ್ಚಿದಾನಂದ-ನಿತ್ಯ-ಪರಿಪೂರ್ಣ-ಅಖಂಡ’ವಾಗಿರುವ ನಿಜದ ನೆಲೆಯೇ ದೇವರೆಂದು ವ್ಯಾಖ್ಯಾನಿಸಿದರು.

ವಚನಪ್ರಾರ್ಥನೆ, ಧರ್ಮಗುರು ಬಸವ ಸ್ಮರಣೆಯೊಂದಿಗೆ ಪ್ರಾರಂಭವಾದ ಚಿಂತನಗೋಷ್ಠಿಯು ಸಾಮೂಹಿಕ ವಚನಮಂಗಲದೊಂದಿಗೆ ಸಂಪನ್ನಗೊಂಡಿತು.

ಗೋಷ್ಠಿಯಲ್ಲಿ ಮಹಾಮನೆಯ ಎಲ್ಲ ಕುಟುಂಬದ ಸದಸ್ಯರು, ಮನೆಯ ನೆರೆಹೊರೆಯವರು, ಬಸವ ಕೇಂದ್ರದ ಶರಣ ಸದಸ್ಯರಾದ ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಸುರೇಶ ರಾಜನಾಳ, ರಾಚಣ್ಣ ಕೆರೂರ, ಕಂಬಾಳಿಮಠ ಹಾಗೂ ವಚನ ಗಾಯಕರಾದ ಶರಣೆಯರಾದ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ, ದಾನಮ್ಮ ಕುಂದರಗಿ, ವಿಶಾಲಾಕ್ಷಿ ಗಾಳಿ, ಸುಹಾಸಿನಿ ಬೀಳಗಿ ಮೊದಲಾದವರು ಪಾಲ್ಗೊಂಡಿದ್ದರು. ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *