ಗುಳೇದಗುಡ್ಡ
ಬಸವಕೇಂದ್ರ ವತಿಯಿಂದ ಬಸವರಾಜ ಮುತ್ತಪ್ಪ ಹರ್ತಿ ಅವರ ಮನೆಯಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಶನಿವಾರ ನಡೆಯಿತು.
ಚಿಂತನೆಗೆ ಆಯ್ದುಕೊಂಡ ಬಸವ ತಂದೆಗಳ ಈ ವಚನ –
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ತನುವಿನೊಳಗೆ ಹುಸಿ ತುಂಬಿ
ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ಕೂಡಲ ಸಂಗಮದೇವಾ.
ಪ್ರೊ. ಶ್ರೀಕಾಂತ ಗಡೇದ ಅವರು ಮಾತನಾಡುತ್ತ, “ಮನೆಯೊಡೆಯ ಮತ್ತು ಮನದ ಒಡೆಯರಲ್ಲಿ ಭಿನ್ನವಿದೆ. ಮನುಷ್ಯ ದುರಾಲೋಚನೆಗೆ ಆತನ ಮನಸ್ಸೇ ಕಾರಣ. ತ್ಯಾಗ ಮತ್ತು ದಾಸೋಹದಿಂದ ಮನವನ್ನು ನಿಯಂತ್ರಿಸಬಹುದಾಗಿದೆ. ದೇವಾಲಯದಲ್ಲಿ ಇಲ್ಲದ ನೆಮ್ಮದಿ ನಮ್ಮ ಕರಸ್ಥಲದ ಲಿಂಗದಲ್ಲಿದೆ. ಕಾರಣ ದೇಹವೇ ದೇವಾಲಯವಾಗಬೇಕು” ಎಂದರು.
ಪ್ರೊ. ಸುರೇಶ ರಾಜನಾಳ ಅವರು “ ದೇವರಿಗೆ ಕನ್ನಡವನ್ನು ಕಲಿಸಿದವರು ನಮ್ಮ ಶರಣರು. ಈ ವಚನದಲ್ಲಿ ಮನೆ ಹಾಗೂ ಮನಸ್ಥಿತಿಯನ್ನು ವರ್ಣಿಸಲಾಗಿದೆ. ಮನುಷ್ಯನಿಗೆ ಮನೆ ಶುದ್ಧವಾಗಿರುವಂತೆ ಮನವೂ ಶುದ್ಧವಾಗಿರಬೇಕು” ಎಂದು ಅಭಿಪ್ರಾಯ ಪಟ್ಟರು.

ಇದೇ ವಚನ ಚಿಂತನೆಯಲ್ಲಿ ಪಾಲ್ಗೊಂಡ ಡಾ. ಗೀರಿಶ ನೀಲಕಂಠಮಠ ಅವರು ಮಾತನಾಡುತ್ತ “ ಕನ್ನಡಿಗರು ಕಟ್ಟಿದ ಮೊದಲ ಧರ್ಮವೆಂದರೆ ಅದು ಲಿಂಗಾಯತ ಧರ್ಮ. ಅದೇ ಬಸವ ಧರ್ಮ.
ಹೊರಗಿನ ರೂಪದಿಂದ ಒಳಗಿನ ಲಕ್ಷಣವನ್ನು ಗುರುತಿಸುತ್ತೇವೆ. ದೇಹದ ಒಳಗೆ ದೇಹಿ ಇರುವಂತೆ ಪ್ರಾಣಿಯ ಒಳಗೆ ಪ್ರಾಣವಿದೆ. ಈ ಶರೀರವು 24 ಸಾಮಾನುಗಳಿಂದ ಆಗಿದೆ. ಅದು ಪಂಚಭೂತಗಳಿಂದ ಆಗಿದೆ. ಪಂಚೀಕರಣವಾಗಿದೆ. ಇಲ್ಲಿ ಮನೆಯಿದೆ. ಅದರಲ್ಲಿ ಮಾಲಿಕನಿದ್ದಾನೆ. ಆದರೆ ಆತ ಸೋಮಾರಿಯಾಗಿದ್ದಾನೆ. ಮನೆ ಮಾಲಿಕನಿದ್ದರೂ ಆಜಾಗರೂಕನಿರುವುದರಿಂದ ಅಲ್ಲಿ ಹೊಲಸು ತುಂಬಿದೆ.
ಹಾಗೆಯೇ ದೇಹದಲ್ಲಿನ ಇಂದ್ರಿಯಗಳನ್ನು ನಿಯಂತ್ರಿಸದೇ ಅದಕ್ಕೆ ವಶವಾಗಿದ್ದಾನೆ. ಇದರಿಂದ ಮನೆ-ಮನಗಳೆರಡೂ ಹೊಲಸಾಗಿದೆ. ಸಧ್ಯ ಅವನ್ನು ಸ್ವಚ್ಛಗೊಳಿಸಬೇಕು” ಎಂದು ವಿವರಿಸಿದರು.
ಅನುಭಾವಿ ಸಿದ್ಧಲಿಂಗಪ್ಪ ಬರಗುಂಡಿಯವರು “ಈ ವಚನ ಅತ್ಯಂತ ಸರಳವಾದ ತಾತ್ವಿಕ ಚಿಂತನೆಯೊಂದನ್ನು ಸುಂದರವಾದ ರೂಪಕದೊಂದಿಗೆ ಹಿಡಿದಿಟ್ಟಿದ್ದಾರೆ. ಮನೆ-ಮನಗಳೆರಡೂ ಬೇರೆಯಲ್ಲ. ಒಂದು ತೋರಿಕೆಯ ರೂಪವಾದರೆ ಇನ್ನೊಂದು ಆಂತರಿಕವಾದ ಸ್ಥಿತಿ. ಅವೆರಡಕ್ಕೂ ಸಂಬಂಧವಿದೆ.

ಮನೆಯ ಅಥವಾ ಬಾಹ್ಯದ ರೂಪ ಬೇಗನೆ ಕಂಡು ಬರುತ್ತದೆ. ಅಲ್ಲಿನ ಹೊಲಸು – ಧೂಳು ಹಾಗೂ ಹುಲ್ಲಿನ ರೂಪದಲ್ಲಿ ಕಂಡು ಬರುತ್ತದೆ. ಮನದ ಹೊಲಸು ಅರಿದಲ್ಲದೆ ಕಂಡುಬರುವುದಿಲ್ಲ. ಹೀಗಾಗಿ ಬಾಹ್ಯ ಹೊಲಸನ್ನು ನೋಡಿದವರಿಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬ ಸಂದೇಹ ಮಾತ್ರ ಕಂಡುಬಂದರೆ, ಮನೆಯೊಳಗಿನ ಹುಸಿ ಹಾಗೂ ವಿಷಯಗಳೆಂಬ ಹೊಲಸನ್ನು ಕಂಡು ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಕಾರಣವೇನೆಂದರೆ ಹೊರಗೆ ಎದ್ದು ಕಾಣುವ ಹೊಲಸನ್ನೇ ಕಾಣದಾತ, ಶುದ್ಧೀಕರಿಸದಾತ ಒಳಗಣ ಕಸವನ್ನು ಅದು ಹೇಗೆ ಕಾಣುತ್ತಾನೆ. ಆದುದರಿಂದ ಇಲ್ಲಿ ಒಳ-ಹೊರಗಣ ಹೊಲಸನ್ನು ತೆಗೆದು ಸ್ವಚ್ಛಗೊಳಿಸಿ ಶುದ್ಧನಾಗುವದು ಅವಶ್ಯವಿದೆ ಎಂಬುವರು ಆಂತರ್ಯದ ಭಾವವಾಗಿದೆ” ಎಂದು ತಿಳಿಸಿದರು.
ಜಯಶ್ರೀ ಬರಗುಂಡಿ ಹಾಗೂ ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಕಾರ್ಯಕ್ರಮದ ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನು ಗೈದರು.
ಮಹಾಮನೆ ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಶರಣ ಸುರೇಶ ರಾಜನಾಳ, ಚವ್ಹಾಣ ಸರ್, ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಶಿವಕುಮಾರ ಶೀಪ್ರಿ, ಹುಚ್ಚೇಶ ಯಂಡಿಗೇರಿ, ಚಂದ್ರಶೇಖರ ತೆಗ್ಗಿ, ಗೀತಾ ತಿಪ್ಪಾ, ಅನ್ನಪೂರ್ಣ ಕೆರೂರ, ದಾಕ್ಷಾಯಣಿ ತೆಗ್ಗಿ, ವಿಶಾಲಕ್ಷೀ ಗಾಳಿ, ನೇತ್ರಾವತಿ ರಕ್ಕಸಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಒಳ್ಳೆಯ ಅರಿವು ಆಚರಣೆ ಅನುಭಾವ. 👌
ಶುಭಾಶಯಗಳು ಬಸವ ಬೆಳಗಿನ ಶರಣು ಶರಣಾರ್ಥಿಗಳು .🌱🙏