ಗುಳೇದಗುಡ್ಡ
ಬಸವ ಕೇಂದ್ರದ ‘ಮನೆಯಲ್ಲಿ ಮಹಾಮನೆ ಕಾರ್ಯಕ್ರಮ’, ಶನಿವಾರ ಶರಣ ಈರಪ್ಪ ಹುಚ್ಚಪ್ಪ ಹಂಡಿ ಅವರ ಮನೆಯಲ್ಲಿ ಜರುಗಿತು. ಅಂದು ಚಿಂತನೆಗಾಗಿ ಆಯ್ದುಕೊಂಡ ಅಂಬಿಗ ಚೌಡಯ್ಯ ತಂದೆಗಳ ವಚನ:
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ
ಪೂಜಿಸಿದ ಪುಣ್ಯ ಹೂವಿಗೋ? ನೀರಿಗೋ?
ನಾಡೆಲ್ಲಕ್ಕೊ? ಪೂಜಿಸಿದಾತಗೋ?
ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.
ಕುಮಾರಿ ವಚನ ಶೇಖಾ ಹಾಗೂ ಸಂಗಡಿಗರಿಂದ ಸಾಮೂಹಿಕ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಗೊಂಡಿತು. ವಚನಕಾರರಾದ ಅಂಬಿಗ ಚೌಡಯ್ಯ ತಂದೆಗಳ ಬದುಕಿನ ಬಗ್ಗೆ, ಅವರ ಇತಿಹಾಸದ ಕುರಿತಾಗಿ ಅನೇಕ ವಚನಗಳನ್ನು ಉಲ್ಲೇಖಿಸುತ್ತ ಪ್ರೊ. ಶ್ರೀಕಾಂತ ಗಡೇದ ಅವರು ಪರಿಚಯಿಸಿದರು.
ಅನುಭಾವಿಗಳಾದ ಮಹಾಂತೇಶ ಸಿಂದಗಿಯವರು ವಚನ ನಿರ್ವಚನಗೈದರು. ನಿತ್ಯ ಶಿವಯೋಗದಿಂದ ನಮ್ಮ ಅವಗುಣಗಳು ನಾಶವಾಗುತ್ತವೆ. ಅಂಗ ಲಿಂಗವಾಗುವ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಶರಣರು ವೈದಿಕರ ಧಾರ್ಮಿಕ ಆಚರಣೆಯ ನೇಮಗಳ ಬಗ್ಗೆ ಪ್ರಶ್ನಿಸುತ್ತ, ನಿಜಾಚರಣೆಗಳ ಬಗ್ಗೆ ವಚನಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ನುಡಿದರು.

ಕೊನೆಯಲ್ಲಿ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು ಚೌಡಯ್ಯ ತಂದೆಯವರ ನೇರ-ದಿಟ್ಟ-ನಿರಂತರ ಮಾತುಗಳು ಅವರ ವಚನಗಳಲ್ಲಿ ಕಂಡುಬರುತ್ತದೆ. ಇಲ್ಲಿಯವರೆಗೆ ಅನುಭವದ ಮಾತುಗಳ ಬಗ್ಗೆ ಸರಿ ತಪ್ಪುಗಳನ್ನು ತಿದ್ದಿ ಹೇಳುತ್ತ ತೋರಿಕೆಯ ಆರಾಧನೆ ಸಲ್ಲದು. ಪಡಿಪದಾರ್ಥಗಳನ್ನು ನಾವು ಹುಟ್ಟಿಸುವುದಿಲ್ಲ. ಎಲ್ಲವೂ ಆ ಮಹಾಲಿಂಗದ ಪರಿಕರಗಳು. ಅವು ನಮ್ಮವು (ನನ್ನವು) ಅಂತ ಅರ್ಪಿಸುವುದು ಸಲ್ಲದು. ನಮ್ಮಲ್ಲಿ ಉತ್ಪತ್ತಿಯಾಗುವ ಅವಗುಣಗಳನ್ನು ತ್ಯಜಿಸಿ, ತನು-ಮನ-ಭಾವ ಶುದ್ಧ ಮಾಡಿಕೊಳ್ಳಬೇಕು. ತಾನು ತಾನಾಗಿರದೆ ಜಂಗಮವಾಗಬೇಕು. ಯಾರದೋ ದುಡಿಮೆಯ ಫಲವನ್ನು ನನ್ನದು ಅಂತ ಅಂದುಕೊಳ್ಳಲಾಗದು ಎಂದು ಹೇಳಿದರು.
ತದನಂತರ ಪ್ರೊ. ಗಾಯತ್ರಿ ಕಲ್ಯಾಣಿ ಅವರು ನಾವು ಯಾವ ಧಾರ್ಮಿಕ ಆಚರಣೆ ಮಾಡುತ್ತೇವೆ ಅದರ ಕುರಿತು ಮನಗಂಡಿರಬೇಕು. ಗುರಿಯಿಲ್ಲದ ಕಾರ್ಯ ನಿಷ್ಪಲ. ಎಲ್ಲರೂ ಮಾಡುತ್ತಾರೆ ಅಂತ ನಾವು ಮಾಡುವುದು ಸರಿ ಅಲ್ಲ, ಸತ್ಯವನ್ನು ಅರಿತು ಆಚರಣೆ ಮಾಡಲು ನಾವು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೇಳುಗರೊಬ್ಬರು ಪೂಜೆ ಎಂದರೇನು ಎಂದು ಪ್ರಶ್ನೆ ಕೇಳಿದರು. Google Meet ಮೂಲಕ ಭಾಗವಹಿಸಿದ್ದ ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿಯವರು ಅದನ್ನು ಉತ್ತರಿಸಿದರು. ನಮ್ಮ ಸುಖ-ದುಃಖಗಳಿಗೆ ಯಾವುದೋ ಶಕ್ತಿ ಕಾರಣ ಎಂಬ ನಂಬಿಕೆಯಿಂದ, ವೈದಿಕ, ಪುರೋಹಿತಶಾಹಿಗಳು ಹೇಳುವ ಆಚರಣೆಗಳ, ಪಡಿಪದಾರ್ಥಗಳನ್ನು ಅರ್ಪಿಸುವುದರ ಮೂಲಕ ನಮ್ಮ ಸಮಸ್ಯೆ, ದುಃಖ ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಈ ರೀತಿಯ ವೈದಿಕ ಪೂಜೆ ಒಂದು ಭ್ರಮೆ ಮಾತ್ರ.
ಪೂಜೆಯ ನಿಜವಾದ ಉದ್ದೇಶ ನಾವು ಪೂಜಿ (ಸೊನ್ನೆ/ ಶೂನ್ಯ/ಬಯಲು) ಆಗುವುದು, ತನು-ಮನ-ಭಾವಗಳನ್ನು ಶುದ್ಧ ಮಾಡಿಕೊಂಡು, ತನ್ನತನವನ್ನು ಕಳೆದುಕೊಂಡು ಪೂಜಿ ಆಗುವುದು, ಎಂದು ತಿಳಿಸಿದರು.

ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ
ಸಲ್ಲಿಸಿದರು. ಮಹಾಮನೆಯಲ್ಲಿ ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವಕೇಂದ್ರದ ಸದಸ್ಯರಾದ ಚಂದ್ರಶೇಖರ ತೆಗ್ಗಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಹುಚ್ಚಪ್ಪ ಯಂಡಿಗೇರಿ, ಮಹಾಲಿಂಗಪ್ಪ ಕರನಂದಿ, ರೇವಣಸಿದ್ಧೇಶ್ವರಮಠ, ಸುರೇಶ ರಾಜನಾಳ, ಶಿವುಕುಮಾರ ಶಿಪ್ರೀ, ಕಂಬಾಳಿಮಠ ಸರ್, ಪ್ರೊ. ಗಾಯತ್ರಿ ಕಲ್ಯಾಣಿ, ನೇತ್ರಾ ರಕ್ಕಸಗಿ, ವಚನಾ ಶೇಖಾ, ಶ್ರೀದೇವಿ ಶೇಖಾ, ಸುರೇಖಾ ಗೆದ್ದಲಮರಿ ಮೊದಲಾದವರು ಸೇರಿದಂತೆ, ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು.