ಹಡಪದ ಅಪ್ಪಣ್ಣ ಗವಿಯಿಂದ ಅನ್ಯ ಮೂರ್ತಿ ತೆರವುಗೊಳಿಸಲು ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಪಂಚ ಕಮಿಟಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹ

ಬಸವಕಲ್ಯಾಣ:

ನಗರದ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರಿಂದ ಅನ್ಯಮೂರ್ತಿ ಸ್ಥಾಪಿಸಲಾಗಿದೆ. ಆ ಮೂರ್ತಿಯನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಹಡಪದ ಅಪ್ಪಣ್ಣ ಸಮಾಜ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ನಗರದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ (ಬಿಕೆಡಿಬಿ) ಬಳಿಯಿಂದ ಬಸವೇಶ್ವರ ವೃತ್ತದವರೆಗೆ ಬೈಕ್‌ ರ್ಯಾಲಿ ನಡೆಸಿ, ಬಸವೇಶ್ವರ ಪಂಚ ಕಮಿಟಿ ಅವರ ಹಾಗೂ ಬಿಕೆಡಿಬಿ ಆಯುಕ್ತರ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದರು.

ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಇಲ್ಲಿನ ಬಿಕೆಡಿಬಿ ಆಯುಕ್ತರು ಬಸವೇಶ್ವರ ಪಂಚ ಕಮಿಟಿಯವರ ಕೈಗೊಂಬೆಯಾಗಿ ಕಾರ್ಯ ಮಾಡುತ್ತಿದ್ದಾರೆ. ನಾವು ನೀಡಿದ ಈ ಮೊದಲಿನ ಮನವಿ ಪತ್ರಕ್ಕೆ ಸ್ಪಂದಿಸುತ್ತಿಲ್ಲ ಎಂದು ಮನವಿಪತ್ರದಲ್ಲಿ ಆರೋಪಿಸಲಾಗಿದೆ.

ಗವಿಯಲ್ಲಿರುವ ಅನ್ಯ ಮೂರ್ತಿಯನ್ನು ಕೂಡಲೇ ಅಲ್ಲಿಂದ ತೆರವುಗೊಳಿಸಬೇಕು. ಹಾಗೆಯೇ ಅಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪಿಸಬೇಕು. ಬಸವೇಶ್ವರ ಪಂಚ ಕಮಿಟಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪಂಚ ಕಮಿಟಿಯವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಬಿಕೆಡಿಬಿ ಆಯುಕ್ತರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಹೋರಾಟದಲ್ಲಿ ಗುಣತೀರ್ಥವಾಡಿ ಬಸವಪ್ರಭು ಸ್ವಾಮೀಜಿ, ಶಹಾಬಾದ ರಾಜಶಿವಯೋಗಿ ಸ್ವಾಮೀಜಿ, ಸಮಾಜ ಸಂಘಟನೆಯ ಪ್ರಮುಖರಾದ ಈರಣ್ಣ ಹಡಪದ ಸಣ್ಣೂರ, ದತ್ತಾತ್ರಿ ಬಾಂದೆಕರ್‌, ದತ್ತಾತ್ರಿ ಮೂಲಗೆ, ಶಿವಾನಂದ ಜಂಗೆ, ರಾಚಪ್ಪ ಹಡಪದ, ಜಗದೀಶ ನಲವಾಡಕರ್, ಪಾಂಡುರಂಗ ಗದಲೇಗಾಂವ, ಶರಣಪ್ಪ ಚಂದನಹಳ್ಳಿ, ಸಾವಿತ್ರಿ ಹಡಪದ ಜೇವರ್ಗಿ, ಸೋನಾಲಿ ನೀಲಕಂಠ, ಪದ್ಮ ಕಾರಗಿರ, ವಿಜಯಲಕ್ಷ್ಮಿ ದಾವಲಜಿ, ಈಶ್ವರಿ ಹಡಪದ ಸೇರಿದಂತೆ ನೂರಾರು ಜನರು ಧರಣಿಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *