ಹಳಕಟ್ಟಿ ವಚನ ಸಂಸ್ಕೃತಿಯ ಧೀಮಂತ ವ್ಯಕ್ತಿ: ಡಾ. ಗಿರಿಜಾ ಹಸಬಿ

ಗದಗ

ವಚನ ಸಾಹಿತ್ಯ ಈ ನಾಡಿನ ಅಮೂಲ್ಯ ಸಂಪತ್ತಾಗಿದೆ. ಇಡೀ ಮನುಕುಲದ ಸಮಾನತೆಗಾಗಿ ಬಸವಾದಿ ಶರಣರು ನಡೆಸಿದ ಚಳುವಳಿ ಅವರ ಸಮಾಜ ಕಟ್ಟುವಿಕೆಯ ಕನಸುಗಳೇ ವಚನಗಳಾಗಿವೆ. ಆದರೆ ಸಮಾನತೆಯ ವಿರೋಧಿಗಳಾದ ಮನುವಾದಿಗಳ ಕೆಂಗಣ್ಣು ಆ ಸಾಹಿತ್ಯದ ಮೇಲೆ ಬಿದ್ದಿತ್ತು. ಸಮಾನತೆ ವಿರೋಧಿಗಳಿಂದ ಶರಣರ ಕಗ್ಗೊಲೆ, ವಚನ ಸುಡುವಿಕೆಯಂತಹ ದುಷ್ಕೃತ್ಯಗಳು ನಡೆದವು.

ಅಳಿದುಳಿದ ವಚನಗಳ ಹೊತ್ತು ಶರಣರು ಉಳವಿಯತ್ತ ನಡೆದರು. ವಚನ ಸಾಹಿತ್ಯ ಅಲ್ಲಲ್ಲಿ ಗುಪ್ತಗಾಮಿನಿಯಂತೆ ಹಲವು ಮನೆ, ಮಠಗಳನ್ನು ಸೇರಿಕೊಂಡಿತು. ಅದಕ್ಕೆ ಕಾಯಕಲ್ಪ ಸಿಕ್ಕಿದ್ದು ಮುಂದಿನ ೩೦೦ ವರ್ಷಗಳ ನಂತರ ಎಡೆಯೂರು ಸಿದ್ಧಲಿಂಗೇಶ್ವರರ ನೇತೃತ್ವದಲ್ಲಿ. ಆದರೆ ಅದು ಮತ್ತೆ ಲುಪ್ತವಾಯಿತು. ಆನಂತರ ೪೦೦ ವರ್ಷಗಳ ನಂತರ ಫ. ಗು. ಹಳಕಟ್ಟಿಯಂತಹ ಧೀಮಂತ ವ್ಯಕ್ತಿಯ ವಚನ ಸಂಗ್ರಹಿಸುವಿಕೆಯಿಂದಾಗಿ ಈ ಅಪೂರ್ವ ಸಾಹಿತ್ಯ ಮತ್ತೆ ಬೆಳಕು ಕಾಣುವಂತಾಯಿತೆಂದು ಉಪನ್ಯಾಸಕಿ ಡಾ. ಗಿರಿಜಾ ಹಸಬಿಯವರು ತಿಳಿಸಿದರು.

ಅವರು ಬಸವಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಸಮನ್ವಯತೆಯಲ್ಲಿ ಒಕ್ಕಲಗೇರಿಯ ಚಿಲ್ಲಾಳೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಹಳಕಟ್ಟಿಯವರ ೬೧ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಹಳಕಟ್ಟಿಯವರು ನೇಕಾರ ಕುಟುಂಬದವರು. ಇವರ ತಂದೆ ಶಿಕ್ಷಕರಾಗಿದ್ದರು. ಆದರೆ ಬಡತನ ಅವರ ಹೆಗಲೇರಿ ಕುಳಿತಿತ್ತು. ಇಂಥ ಕಡುಕಷ್ಟದಲ್ಲೂ ಅವರು ವಿದ್ಯಾಭ್ಯಾಸ ಮುಂದುವರೆಸಿದರು. ಪ್ರತಿಭಾವಂತರಾದ ಇವರು ಮುಂದೆ ಎಲ್‌ಎಲ್‌ಬಿ ಪದವಿ ಪಡೆದು ವಕೀಲ ವೃತ್ತಿ ಕೈಗೊಂಡರು. ವೃತ್ತಿ ಉತ್ತಮವಾಗಿ ನಡೆಯಿತು.

ಹಳಕಟ್ಟಿಯವರಿಗೆ ಆಲೂರ ವೆಂಕಟರಾವ್ ಹಾಗೂ ಶರಣತತ್ವ ಚಿಂತಕರಾದ ತಮ್ಮಣ್ಣಪ್ಪ ಚಿಕ್ಕೋಡಿಯವರ ಒಡನಾಟದ ಪರಿಣಾಮ ಸಾಹಿತ್ಯದತ್ತ ಆಸಕ್ತಿ ಬೆಳೆಯಿತು. ಆ ಸಂದರ್ಭದಲ್ಲಿ ಮನೆಯೊಂದರಲ್ಲಿ ಸಿಕ್ಕ ತಾಳೆಗರಿಯ ವಚನ ಕಟ್ಟುಗಳನ್ನು ಕಂಡು ಪ್ರಭಾವಿತರಾದರು. ಅವುಗಳಲ್ಲಿದ್ದ ಅರ್ಥ ಅನರ್ಘ್ಯ ರತ್ನದಂತೆ ಕಂಡಿತು. ಬಿಟ್ಟು ಬಿಡದೆ ಓದಿ ಮುಗಿಸಿದರು. ವಕೀಲ ವೃತ್ತಿಯತ್ತ ಗಮನ ಕಡಿಮೆಯಾಗಿ ವಚನ ಕಟ್ಟುಗಳ ಸಂಗ್ರಹವೇ ಬದುಕಾಯಿತು. ಅವರು ಮನೆ, ಮಠಗಳನ್ನು ಸುತ್ತಾಡಿ, ಬೇಡಿಕೊಂಡು ವಚನಗಳ ಪ್ರತಿಗಳನ್ನು ಸಂಗ್ರಹಿಸಿದರು. ಅವನ್ನು ಪ್ರಕಟಿಸುವ ಮೂಲಕ ವಚನ ಸಾಹಿತ್ಯ ಬೆಳಕಿಗೆ ಬರಲು ಕಾರಣರಾದರು.

ಈ ಸಂದರ್ಭದಲ್ಲಿ ವಚನಗಳ ಪ್ರಕಟನೆಗಾಗಿ ಮಂಗಳೂರಿನ ಬಾಸೆಲ್‌ಮಿಶನ್ ಪ್ರೆಸ್‌ನವರಿಗೆ ಕಳುಹಿಸಿದ್ದರು. ಅವರು ಆ ವಚನಗಳನ್ನು ಓದಿ ದಂಗುಬಡಿದಂತಾದರು. ಎಲ್ಲಿ ತಮ್ಮ ಧರ್ಮ ಪ್ರಸಾರಕ್ಕೆ ಅಡ್ಡಿಯಾಗುವುದೋ ಎಂದು ಅವನ್ನು ಪ್ರಕಟಿಸದೆ ಮರಳಿಕಳಿಸಿದರು.

ಈ ಸಂದರ್ಭದಲ್ಲಿ ತಾವೇ ಸ್ವತಃ ಪ್ರಿಂಟಿಂಗ್ ಪ್ರೆಸ್‌ನ್ನು ಹಾಕುವ ವಿಚಾರ ಬಂದು, ಆರ್ಥಿಕ ತೊಂದರೆಯಿದ್ದ ಕಾಲದಲ್ಲಿ ಮನೆಯನ್ನೇ ಮಾರಿ ‘ಹಿತಚಿಂತಕ’ ಪ್ರೆಸ್ ಆರಂಭಿಸಿದರು. ಈ ಮೂಲಕ ‘ವಚನ ಶಾಸ್ತ್ರಸಾರ’, ‘೭೭೦ ಅಮರಗಣಂಗಳ ಚರಿತ್ರೆ’ಗಳು ಪ್ರಕಟವಾದವು. ಜೊತೆಗೆ ವಚನ ಸಾಹಿತ್ಯದ ಪ್ರಸಾರಕ್ಕೆಂದೆ ‘ಶಿವಾನುಭವ’ ‘ನವ ಕರ್ನಾಟಕ’ ಎಂಬ ಪತ್ರಿಕೆಗಳನ್ನು ಮಾಡಿದರು. ಆದರೆ ದುರಂತವೆಂದರೆ ಸಾಕಷ್ಟು ಆದಾಯವಿದ್ದ ವಕೀಲವೃತ್ತಿ ತೊರೆದ ಪರಿಣಾಮ ಅವರ ಆರ್ಥಿಕ ಸ್ಥಿತಿ ಚಿಂತಾಜನಕವಾಯಿತು. ಊಟಕ್ಕೂ ಗತಿ ಇಲ್ಲದ ಹಂತಕ್ಕೆ ಮುಟ್ಟಿದರು. ಆದರೆ ವಚನ ಸಾಹಿತ್ಯ ಪ್ರಕಟಿಸಬೇಕು ಜನರಿಗೆ ಮುಟ್ಟಿಸಬೇಕೆಂಬ ಅದಮ್ಯ ಹಂಬಲ ದೊಡ್ಡದಿತ್ತು.

ಒಂದು ಸಂದರ್ಭದಲ್ಲಿ ಬೆಳಗಾವಿಯ ನಾಗನೂರು ಮಠದ ಸ್ವಾಮೀಜಿಗಳು ಹಳಕಟ್ಟಿಯವರನ್ನು ಭೇಟಿಯಾಗಲು ಬಂದಾಗ ಹಳಕಟ್ಟಿಯವರು ತೊಟ್ಟ ಬಟ್ಟೆಗಳು ಹರಿದು ಹೋಗಿದ್ದವು. ಇವನ್ನು ನೋಡಿ ಮರುಗಿದ ಸ್ವಾಮಿಗಳು ಅವರಿಗೆ ಹೊಸ ಬಟ್ಟೆ ಖರೀದಿಸಿ ನೀಡಿದರಂತೆ. ಆಗ ಹಳಕಟ್ಟಿಯವರು ಬಟ್ಟೆಗಳ ಬದಲಿಗೆ ವಚನಗಳ ಪ್ರಕಟಣೆಗೆ ಸಹಾಯ ನೀಡಿದ್ದರೆ ಸಾಕಿತ್ತಲ್ಲ ಎಂದು ನುಡಿದರಂತೆ. ಅಂತಹ ನಿಸ್ವಾರ್ಥ ಜೀವನ ಇವರದಾಗಿತ್ತು.

ಇವರಿಗೆ ಸರ್ಕಾರ ಗೌರವ ಡಾಕ್ಟರೇಟ್ ನೀಡಿತು. ಆ ಸಮಾರಂಭದ ನಂತರ ಭೋಜನಕೂಟದಲ್ಲಿ ಅವರು ಕೋಟು ಧರಿಸಿಯೇ ಊಟಕ್ಕೆ ಕುಳಿತಿದ್ದರು. ಪಕ್ಕದಲ್ಲಿದ್ದವರು ಕೋಟು ತೆಗೆದು ಊಟಕ್ಕೆ ಕುಳಿತುಕೊಳ್ಳಬಹುದಿತ್ತಲ್ಲ ಎಂದಾಗ ಸಂಕೋಚದಿಂದ ಒಳಗೆ ಹರಿದ ಅಂಗಿ ಇದೆ ಎಂದರಂತೆ. ಇವರಿಗೆ ಅನೇಕ ಪ್ರಶಸ್ತಿಗಳು ಬಂದವು. ಇವರು ಸಾಮಾಜಿಕವಾಗಿ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿದರು. ವಚನ ಗುಮ್ಮಟ ಎಂದು ಖ್ಯಾತರಾದರು. ಆದರೆ ಬಡತನ ಮಾತ್ರ ಅವರನ್ನು ಜೀವನ ಪರ‍್ಯಂತ ಕಾಡಿತು. ಹರೆಯದ ಮಗನ ಸಾವಾಯ್ತು, ಅದರಿಂದಲೂ ಕಂಗೆಡಲಿಲ್ಲ. ಇಂತಹ ತ್ಯಾಗಜೀವಿ ಹಳಕಟ್ಟಿ ಅವರಾಗಿದ್ದರೆಂದು ಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತಾ ಅವರ ಬದುಕೇ ಶರಣತ್ವದ ಬದುಕಾಯಿತ್ತೆಂದು ಹಸಬಿ ತಿಳಿಸಿದರು.

ಅಧ್ಯಕ್ಷತೆಯನ್ನು ಬಸವಕೇಂದ್ರ ಹಾಗೂ ಜಾಲಿಂಮ ಅಧ್ಯಕ್ಷರಾದ ಕೆ. ಎಸ್. ಚಟ್ಟಿಯವರು ವಹಿಸಿ ಮಾತನಾಡಿ, ಹಳಕಟ್ಟಿಯವರು ಅಂತಹ ಬಡತನದಲ್ಲೂ ವಚನ ಸಾಹಿತ್ಯದ ಜೊತೆಗೆ ಅನೇಕ ಶರಣರ ಗ್ರಂಥಗಳನ್ನು ಪ್ರಕಟಿಸಿದರು. ಈ ಕಾರಣದಿಂದಾಗಿಯೇ ಲಿಂಗಾಯತ ಧರ್ಮಕ್ಕೊಂದು ಗಟ್ಟಿಯಾದ ತತ್ವ, ಸಿದ್ಧಾಂತದ ಆಧಾರ ಸಿಕ್ಕಿತು. ಹಳಕಟ್ಟಿಯವರನ್ನು ಎಲ್ಲರೂ ಸ್ಮರಿಸಲೇಬೇಕೆಂದರು.

ವಚನ ಪ್ರಾರ್ಥನೆ ಶಾಂತಕ್ಕ ಮಾನ್ವಿ ನಡೆಸಿದರು. ಶರಣತತ್ವ ಚಿಂತಕ ಶೇಖಣ್ಣಾ ಕವಳಿಕಾಯಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರುಪಣೆಯನ್ನು ಕಿರಣ ತಿಪ್ಪಣ್ಣನವರ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *