ದಾವಣಗೆರೆ
ನಗರದ ಲಯನ್ಸ್ ಭವನದಲ್ಲಿ ಶರಣ ಫ.ಗು. ಹಳಕಟ್ಟಿ ಅವರ ಜನ್ಮದಿನ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ “ವಚನ ಮಾಲೆ” ವಿಶೇಷ ಕಾರ್ಯಕ್ರಮ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಜಿಲ್ಲಾ ಸಮಿತಿ ಗಳ ಸಂಯುಕ್ತಾಶ್ರಯದಲ್ಲಿ ನಡೆಯಿತು.

ದಾವಣಗೆರೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯವರಾದ ವಿಶ್ವೇಶ್ವರಯ್ಯ ಬಿ.ಎಮ್. ಅವರು ದತ್ತಿ ಅನುಭಾವ ನುಡಿಗಳಲ್ಲಿ, ಕಲ್ಯಾಣದ ಕ್ರಾಂತಿ, ಶರಣರ ವಚನಗಳು ಹಾಗೂ ಹಳಕಟ್ಟಿಯವರು ಅವುಗಳನ್ನು ಅತ್ಯಂತ ಶ್ರಮವಹಿಸಿ ರಕ್ಷಿಸಿದ ಬಗ್ಗೆ ಹೇಳಿದರು.
ಹಳಕಟ್ಟಿಯವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಕೇವಲ ವಚನ ಸಂಶೋಧನೆ ಅಷ್ಟೇ ಅಲ್ಲ, ಕಾನೂನು ಪಂಡಿತರಾಗಿದ್ದರು. ಕನ್ನಡ ಶಾಲೆಗಳನ್ನು, ಬರ ಪರಿಹಾರ ಕೇಂದ್ರಗಳನ್ನು, ಬ್ಯಾಂಕು ತೆರೆದರು, ಕೆರೆಯನ್ನು ಕಟ್ಟಿಸಿದರು. ಕರ್ನಾಟಕದ ಏಕೀಕರಣ ಹೋರಾಟದಲ್ಲೂ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ತನು ಮನ ಧನ ವ್ಯಯಿಸಿ ವಚನಗಳನ್ನು ಮುದ್ರಿಸಿ ಸಂರಕ್ಷಿಸಿದರು. ಸುಮಾರು 250ಕ್ಕೂ ಹೆಚ್ಚು ಶರಣರ ವಚನಗಳನ್ನು ಬೆಳಕಿಗೆ ತಂದ ಕೀರ್ತಿ ಹಳಕಟ್ಟಿಯವರಿಗೆ ಸೇರಬೇಕು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಲಿಂ. ಷಡಕ್ಷರಪ್ಪ ಹಾಗೂ ಶ್ರೀಮತಿ ಅಂಜಿನಮ್ಮ ಬಿ. ಕಲ್ಪನಹಳ್ಳಿ ಇವರ ದತ್ತಿ ಇದ್ದು ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಆದರ್ಶ ಎಂ. ಎನ್. ಇವರು ದತ್ತಿದಾನಿಗಳಾಗಿದ್ದರು.
ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶರಣೆ ಮಮತಾ ನಾಗರಾಜರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ವಚನಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಪ್ರತಿಯೊಬ್ಬರು ಕಲಿಯಬೇಕು ಹಾಗೂ ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕು. ವಚನಗಳ ರಕ್ಷಣೆ ಎಂದರೆ ವಚನಗಳ ಪುಸ್ತಕಗಳನ್ನು ಕಪಾಟಿನಲ್ಲಿ ಇಡುವುದಲ್ಲ, ವಚನಗಳನ್ನು ಎಲ್ಲರ ಮನಸ್ಸಿನಲ್ಲಿ ಇಟ್ಟು ರಕ್ಷಣೆ ಮಾಡಬೇಕು ಎಂದು ಹೇಳಿದರು.

ಗೌರವ ಸಲಹೆಗಾರರಾದ ಯಶ ದಿನೇಶರವರು ಶರಣ ಗೊ.ರು. ಚನ್ನಬಸಪ್ಪನವರಿಂದ ರಚಿಸಲ್ಪಟ್ಟ ಶರಣಗೀತೆಯನ್ನು ಹಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಕಾರ್ಯದರ್ಶಿ ಬಿ. ಟಿ. ಪ್ರಕಾಶರವರು ವಚನ ಗೀತೆ ಹಾಡಿದರು. ರಾಜ್ಯ ಸಮಿತಿ ಉಪಸಂಚಾಲಕರಾದ ಪ್ರಮೀಳಾ ನಟರಾಜ್, ಶ.ಸಾ.ಪ. ನಗರಾಧ್ಯಕ್ಷರಾದ ಎಂ. ಪರಮೇಶ್ವರಪ್ಪ ಸಿರಿಗೆರೆ ಉಪಸ್ಥಿತರಿದ್ದರು.
ಬೆಳಿಗ್ಗೆ 10.30 ರಿಂದ ಸಂಜೆ 5:30ರ ವರೆಗೆ ನಿರಂತರವಾಗಿ ಕದಳಿ ಸದಸ್ಯರಿಂದ, ನಾಗರಿಕರಿಂದ ಮತ್ತು ವಿದ್ಯಾರ್ಥಿಗಳಿಂದ ವಚನ ಗಾಯನ, ವಚನ ನೃತ್ಯ, ಶರಣ ಶರಣೆಯರ ಪರಿಚಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

ಸಂಗೀತ ಗುರುಗಳಾದ ಶರಣ ರೇವಣಸಿದ್ದಪ್ಪನವರು ಹಾರ್ಮೋನಿಯಂ, ಶರಣ ಬಿ. ಆರ್. ಜೋಶಿ ಅವರು ತಬಲಾ ಸಾತ್ ನೀಡಿದರು.
ಕದಳಿ ತಾಲೂಕ ಅಧ್ಯಕ್ಷೆ ನಿರ್ಮಲ ಶಿವಕುಮಾರ ಸ್ವಾಗತಿಸಿದರು. ಉಪಾಧ್ಯಕ್ಷೆ ಚಂದ್ರಿಕಾ ಮಂಜುನಾಥ ನಿರೂಪಿಸಿದರು. ಜಿಲ್ಲಾ ಖಜಾಂಚಿ ಸೌಮ್ಯ ಸತೀಶ ವಂದಿಸಿದರು.
ವಚನ ತಂಡಗಳ ನಿರ್ವಹಣೆಯನ್ನು ವಸಂತ ವಿಜಯಲಕ್ಷ್ಮಿ ಬಸವರಾಜ್, ಪೂರ್ಣಿಮಾ ಪ್ರಸನ್ನ ಕುಮಾರ್ ಹಾಗೂ ರತ್ನ ರೆಡ್ಡಿ ವಹಿಸಿದ್ದರು. ವಿಜಯ ಚಂದ್ರಶೇಖರ್, ಲಕ್ಷ್ಮಿ ಮಲ್ಲಿಕಾರ್ಜುನ್, ನಂದಿನಿ ಗಂಗಾಧರ್ ಇವರು ಇಡೀ ದಿನದ ಕಾರ್ಯಕ್ರಮದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕದಳಿ ಮಹಿಳಾ ವೇದಿಕೆಯ ಸಲಹಾ ಸಮಿತಿಯವರು ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.