ಇವನಾರವ ಎನ್ನುವ ಧರ್ಮಕ್ಕೆ ಪರ್ಯಾಯ ಸೃಷ್ಟಿಸಿದ ಶರಣರು: ಡಾ.ರಾಜಶೇಖರ ನಾರನಾಳ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಸಮಾಜದಲ್ಲಿ ಅಸಮಾನತೆ, ಅಂಧಕಾರ ತುಂಬಿಕೊಂಡು ಇವನಾರವ ಇವನಾರವ ಎನ್ನುವುದನ್ನೇ ಧರ್ಮವಾಗಿಸಿಕೊಂಡಿದ್ದ ವ್ಯವಸ್ಥೆಗೆ, ಪರ್ಯಾಯವಾಗಿ ಇವನಮ್ಮವ ಇವನಮ್ಮವ ಎನ್ನುವ ಎಲ್ಲರನ್ನೂ ಒಳಗೊಳ್ಳುವ ವಿಶ್ವಕುಟುಂಬ ಸಂಸ್ಕೃತಿಯನ್ನು ಕಟ್ಟಿದ್ದು ಬಸವಾದಿ ಶರಣರು ಎಂದು ಗಂಗಾವತಿಯ ತಾಲೂಕಿನ ಮಲ್ಲಾಪುರ ಗ್ರಾಮದ ವೈದ್ಯಾಧಿಕಾರಿ ಡಾ.ರಾಜಶೇಖರ ನಾರನಾಳ ಹೇಳಿದರು.

ಶನಿವಾರದಂದು ಕೊಪ್ಪಳ ಜಿಲ್ಲೆಯ ಗಾಣಿಗ ಸಮುದಾಯದ ಭವನದಲ್ಲಿ, ಶರಣ ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿ ಆಶ್ರಯದಲ್ಲಿ ನಡೆದ 30ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡುತ್ತಿದ್ದರು.

ವೃತ್ತಿಯಿಂದ ಜಾತಿಯನ್ನು ಗುರುತಿಸುವಂತ ಹುನ್ನಾರವನ್ನು, ಕಾಯಕವೆಂಬ ಪರುಷ ಮಣಿಯ ಸ್ಪರ್ಶದಿಂದ ಅದಕ್ಕೆ ಒಂದು ಪಾವಿತ್ರೆತೆಯನ್ನು ತಂದುಕೊಟ್ಟವರು ಬಸವಾದಿ ಶರಣರು.

ಸೋಮಾರಿ ಸಂಸ್ಕೃತಿಗೆ ವಿರುದ್ದವಾಗಿ ಗುರು ಲಿಂಗ ಜಂಗಮಕ್ಕೂ ಕಾಯಕದಿಂದಲೇ ಜೀವನ್ಮುಕ್ತಿ ಎಂದು ದೇವರಿಗೂ ಕಾಯಕವನ್ನು ಕಡ್ಡಾಯ ಮಾಡಿದ ಜಗತ್ತಿನ ಏಕೈಕ ಧರ್ಮವೆಂದರೆ ಅದು ಲಿಂಗಾಯತ ಧರ್ಮ ಎಂದು ಅವರು ಹೇಳಿದರು.

12ನೇ ಶತಮಾನದಲ್ಲಿ ಗಾಣದಿಂದ ಎಣ್ಣೆ ತೆಗೆಯುವ ಕಾಯಕವನ್ನು ಮಾಡುತ್ತಿದ್ದ ನಾಲ್ಕು ಜನ ಶರಣರ ಬಗ್ಗೆ ಹೇಳುತ್ತಾ, ಅದರಲ್ಲಿ ಮಾರುಡಿಗೆಯ ನಾಚಯ್ಯನ ಬದುಕಿನ ಆದರ್ಶ ಮತ್ತು ಮೌಲ್ಯಗಳ ಬಗ್ಗೆ ತಿಳಿಸಿದರು.

ಮಾರುಡಿಗೆಯ ನಾಚಯ್ಯನ ಮೂಲ ಸ್ಥಳ ಮತ್ತು ನಾಚಯ್ಯನಿಗೆ ಮಾರುಡಿಗೆ ಎಂಬ ಹೆಸರು ಯಾಕೆ ಬಂತು ಎನ್ನುವುದನ್ನು ಹರಿಹರನ ರಗಳೆಗಳ ಮಾರುಡಿಗೆಯ ನಾಚಿ ತಂದೆಗಳ ರಗಳೆಗಳ ಬಗ್ಗೆ ತಿಳಿಸಿದರು. ಮಾರುಡಿಗೆ ನಾಚಯ್ಯ ವೀರಗಣಾಚಾರಿ ಶಿವಭಕ್ತ. ಏಕದೇವೋಪಾಸನೆ ಮಾಡುತ್ತಾ ತನ್ನ ಬದುಕು ಸಾಗಿಸಿದಾತ. ಆತನ ವಚನಗಳನ್ನು ಓದಿದಾಗ ನಾಚಯ್ಯಾ ಎಂದೂ, ಆತ ತನ್ನ ವೈಯಕ್ತಿಕ ಸಂಸಾರಕ್ಕೆ ಬದುಕದೆ, ತನ್ನಿಡೀ ಬದುಕನ್ನು ಸಮಾಜಕ್ಕಾಗಿ ಸವೆಸಿದ ಮಹಾ ಶರಣಜೀವಿ ಎಂದರು. ಅಂತವರ ಬದುಕು ನಮ್ಮ ಸಮಾಜಕ್ಕೆ ಆದರ್ಶವಾಗಲಿ ಎಂದು ರಾಜಶೇಖರ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಶೈಲಪ್ಪನವರು ವಹಿಸಿಕೊಂಡಿದ್ದರು. ನೇತೃತ್ವವವನ್ನು ಕಡಬಲಬಡಿಗಿ ಶರಣರು ವಹಿಸಿಕೊಂಡಿದ್ದರು. ಅನುಭಾವಗೈದ ಶರಣ ರಾಜಶೇಖರ ನಾರಿವಾಳ ಅವರನ್ನು ಸಮಿತಿ ವತಿಯಿಂದ ಸತ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ಕಲ್ಲೇಶ ಅವರು ಮತ್ತು ಹಿರಿಯ ಸಾಹಿತಿ ವಿರುಪಾಕ್ಷಪ್ಪ ಹಾವೇರಿ ಭಾಗವಹಿಸಿದ್ದರು.

ಸ್ವಾಗತವನ್ನು ಸಂಗಪ್ಪ ವಣಗೇರಿ, ನಿರೂಪಣೆಯನ್ನು ಶೇಖರ ಇಂಗಳದಾಳ ಅವರು ಮಾಡಿದರು. ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
1 Comment
  • ಲಿಂಗಾಯತ ತತ್ವದ ಹೃದಯವನ್ನು ತೆರೆದಿಟ್ಟಿದ್ದೀರಿ. ಅಭಿನಂದನೆಗಳು. ‌ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *