(ಹಾನಗಲ್ಲ ಶ್ರೀಗಳ ಮೇಲೆ ಕೆಲವು ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ಅಭಿಪ್ರಾಯಗಳೆಲ್ಲಾ ಆಯಾ ಲೇಖಕರದು. ವಿಷಯದ ಮೇಲೆ ಹೊಸ ಲೇಖನ, ಪ್ರತಿಕ್ರಿಯೆ ಆಹ್ವಾನಿಸುತ್ತೇವೆ.)
ಕೇವಲ ಎರಡು ದಿನಗಳ ಹಿಂದೆ ಮುಂಡರಗಿ ಪಟ್ಟಣದಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ೧೫೭ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಅತ್ಯಂತ ವಿಧಾಯಕವಾಗಿ ರಚನಾತ್ಮಕವಾಗಿ ಜರುಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿರಕ್ತ ಮಠಾಧೀಶರು ಭಾಗವಹಿಸಿ ಮುಂಡರಗಿ ಸುತ್ತಮುತ್ತಲಿನ ೧೮ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಮಾಡಿ, ಜನರಲ್ಲಿ ಒಂದು ರೀತಿಯ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದರು. ವಚನಗ್ರಂಥಗಳ ಮೆರವಣಿಗೆ, ಸಾವಿರಾರು ಜನರಿಗೆ ರುದ್ರಾಕ್ಷಿಧಾರಣೆ, ವಿಭೂತಿ ವಿತರಣೆ ಮೊದಲಾದ ಕಾರ್ಯಗಳ ಮೂಲಕ ಲಿಂಗಾಯತ ಧರ್ಮದ ಕುರಿತು ಜಾಗೃತಿ ಮೂಡಿಸುವ ಕೆಲಸ ೧೧ ದಿನಗಳ ಕಾಲ ನಡೆಯಿತು. ಚನ್ನಬಸಣ್ಣನವರ ಕರಣ ಹಸಿಗೆಯ ಇಂಗ್ಲಿಷ್ ಅನುವಾದ ಕೃತಿ ಲೋಕಾರ್ಪಣೆಗೊಂಡದ್ದು ವಿಶೇಷವಾಗಿ ಗಮನ ಸೆಳೆಯಿತು. ಶರಣರ ವಿಚಾರಗಳು ಸಾಗರೋತ್ತರ ತಲುಪಬೇಕೆಂಬುದು ಹಾನಗಲ್ಲ ಶ್ರೀಗಳ ಆಶಯವಾಗಿತ್ತು. ಆ ಆಶಯ ಇಂದು ಅವರ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಈಡೇರಿತು.
ಈ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಭಾಗವಹಿಸಿ, ಹಾನಗಲ್ಲ ಶ್ರೀಗಳಿಂದ ಲಿಂಗಾಯತ ಸಮಾಜವು ಆಧುನಿಕ ಕಾಲ ಮಾನದಲ್ಲಿ ಹೇಗೆಲ್ಲ ಪ್ರವರ್ಧಮಾನಕ್ಕೆ ಬಂದಿತು. ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸೇವಾಕಾರ್ಯಗಳನ್ನೆ ಹಾನಗಲ್ಲ ಕುಮಾರ ಶಿವಯೋಗಿಗಳು ೨೦ನೇ ಶತಮಾನದಲ್ಲಿ ಮುಂದುವರಿಸಿದರು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು. ಪೂಜ್ಯರ ಆಶೀರ್ವಚನದ ಪೂರ್ಣಪಾಠವನ್ನು ಯೂಟ್ಯೂಬ್ ನಲ್ಲಿ ಪ್ರಸಾರವಾಗಿವುದನ್ನು ಕೆಲವರು ತಮಗೆ ಬೇಕಾದ ಭಾಗವನ್ನು ಮಾತ್ರ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಹಾನಗಲ್ಲ ಕುಮಾರ ಸ್ವಾಮಿಗಳ ಕುರಿತು ಕೆಲವು ಲೋಪಗಳೆಂದು ಪಟ್ಟಿ ಮಾಡಿ ಹಾಕುತ್ತಿದ್ದಾರೆ, ಎನ್. ಆರ್. ಅಬಲೂರು ಅವರು ಎತ್ತಿದ ಆರು ಲೋಪಗಳು ಹೀಗಿವೆ:
“೧. ಶಿವಯೋಗ ಮಂದಿರದಲ್ಲಿ ನಡೆಯುವ ವಟುಗಳ ತರಬೇತಿಗೆ ಕೇವಲ ಜಂಗಮ ಜಾತಿಯವರಿಗೆ ಅವಕಾಶ ನೀಡುವ ಮೂಲಕ ಲಿಂಗಾಯತ ಧರ್ಮದಲ್ಲಿಯೂ ವರ್ಣಾಶ್ರಮ ಪದ್ಧತಿಯನ್ನು ಜಾರಿಗೊಳಿಸಲಾಯಿತು.
೨. ತರಬೇತಿ ಪಠ್ಯದಲ್ಲಿ ಸಿದ್ದಾಂತ ಶಿಖಾಮಣಿ ಯಂತಹ ವೈದಿಕಮಯ ಮತ್ತು ಸಂಸ್ಕೃತದ ಗ್ರಂಥಕ್ಕೆ ಪ್ರಾಶಸ್ತö್ಯ ನೀಡುವ ಮೂಲಕ ಶಿವಶರಣರ ವಚನ ಸಾಹಿತ್ಯವನ್ನು ಕಡೆಗಣಿಸಲಾಯಿತು.
೩. ಲಿಂಗಾಯತದ ಬದಲು ವೀರಶೈವ ಹೆಸರನ್ನು ಚಾಲ್ತಿಗೆ ತರಲಾಯಿತು.
೪. ಕನ್ನಡದ ಬದಲು ಸಂಸ್ಕೃತವು ಧರ್ಮಭಾಷೆಯಾಯಿತು
೫. ಲಿಂಗಾಯತರು ಹಿಂದೂ ಧರ್ಮದ ಭಾಗವೆಂದು ಪ್ರತಿಪಾದಿಸಲಾಯಿತು.
೬. ಬಸವಣ್ಣನವರ ಬದಲು ರೇಣುಕಾಚಾರ್ಯರು ಧರ್ಮಗುರುಗಳು ಎಂದು ಪ್ರತಿಪಾದಿಸಲಾಯಿತು.
ಈ ಕಾರಣಕ್ಕಾಗಿಯೇ ಹಾನಗಲ್ ಕುಮಾರಸ್ವಾಮಿಗಳಿಂದಾಗಿ ಲಿಂಗಾಯತ ಧರ್ಮದ ಇತಿಹಾಸವು ೧೦೦ ವರ್ಷ ಹಿಂದಕ್ಕೆ ತಳ್ಳಲ್ಪಟ್ಟಿತು ಎಂದು ಮಾತೆ ಮಹಾದೇವಿ ಮಾತಾಜೀಯವರು ಅಪಾದಿಸಿದ್ದನ್ನು ನಾವಿಂದು ಸ್ಮರಿಸೋಣ.
ಮಾತಾಜಿ ಅವರು ಆ ಕಾಲದಲ್ಲಿ ಇದ್ದಿದ್ದರೆ, ಹಾನಗಲ್ಲ ಕುಮಾರ ಶಿವಯೋಗಿಗಳು ಮಾಡಿದ ಸಮಾಜ ಸೇವಾ ಕಾರ್ಯಗಳಲ್ಲಿ ಒಂದು ಗುಂಜಿಯಷ್ಟು ಮಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೆಣ್ಣುಮಕ್ಕಳಿಗೆ ಶಿಕ್ಷಣದ ಗಂಧಗಾಳಿಯೇ ಆಗಿರಲಿಲ್ಲ. ಹೀಗಿರುವಾಗ ಮಾತಾಜಿ ಅವರು ಆ ಕಾಲಘಟ್ಟದಲ್ಲಿ ಇದ್ದಿದ್ದರೆ ಈಗ ಮಾಡಿದಷ್ಟು ಕೆಲಸಗಳನ್ನು ಮಾಡಲು ಸಾಧ್ಯವಿತ್ತೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಎನ್. ಆರ್. ಅಬಲೂರ ಅವರ ಈ ವಿಚಾರಗಳು ವಿತಂಡವಾದವಾಗಿವೆ. ಸರಿಯಾದ ಓದಿನ ಕೊರತೆ ಕಾಣುತ್ತದೆ. ವಿಜಯಕುಮಾರ ಬೋರಟ್ಟಿ ಅವರು ಬರೆದ ‘ಹಿಂದಿನ ಹಿರಿಯರ ಹಿರಿತನ ಏನಾಯಿತು?’ ಎಂಬ ಮಹತ್ವದ ಸಂಶೋಧನಾತ್ಮಕ ಗ್ರಂಥವನ್ನು ಅವರು ಓದಬೇಕು. ಆ ಕಾಲದ ಹಿರಿಯರು ನಮ್ಮ ಸಮಾಜವನ್ನು ಶ್ರೇಣೀಕೃತ ವ್ಯವಸ್ಥೆಯಿಂದ ಮೇಲೆ ತರಬೇಕೆಂದು ಎಷ್ಟೆಲ್ಲ ಮತ್ತು ಹೇಗೆಲ್ಲ ಪ್ರಯತ್ನ ಮಾಡಿದರೆಂಬುದರ ಸಮಗ್ರ ಇತಿಹಾಸ ಅದರಲ್ಲಿದೆ.
ಓದಿನ ಅರಿವಿಲ್ಲದ ಇಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ನೈಜ ಇತಿಹಾಸಕ್ಕೆ ಕಪ್ಪುಚುಕ್ಕೆ ತಂದು, ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾನಗಲ್ಲ ಶ್ರೀಗಳ ಕುರಿತು ಅಬಲೂರ ವಿಚಾರಗಳೂ ಮೂಡಿವೆ ಅಷ್ಟೇ.
ಹಾನಗಲ್ಲ ಕುಮಾರ ಶಿವಯೋಗಿಗಳು ಸಮಾಜಸೇವಾ ಕಾರ್ಯದಲ್ಲಿ ತಮ್ಮನ್ನು ಸರ್ವಾರ್ಪಣ ಮನೋಭಾವದಿಂದ ತೊಡಗಿಸಿಕೊಂಡಿದ್ದರೂ ಶಿವಯೋಗಮಂದಿರ ಸಂಸ್ಥೆಯಂತಹ ಪ್ರಮುಖ ಸಂಸ್ಥೆಯನ್ನು ಹುಟ್ಟುಹಾಕಿದರೂ ಅವರೆಂದೂ ತಾವು ಇದರ ಸಂಸ್ಥಾಪಕರೆಂದು ದಾಖಲಿಸಿಕೊಂಡಿಲ್ಲ. ಶಿವಯೋಗಮಂದಿರ ಕುರಿತು ಹತ್ತಾರು ಸಂಶೋಧನಾತ್ಮಕ ಗ್ರಂಥಗಳು, ನೂರಾರು ಸಂಶೋಧನಾ ಲೇಖನಗಳು ರಚನೆಗೊಂಡಿವೆ. ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಹಾನಗಲ್ಲ ಕುಮಾರ ಶಿವಯೋಗಿಗಳು ತಾವು ಎಂದೂ ಸಂಸ್ಥಾಪಕರು, ನಾನೇ ಎಲ್ಲ ಮಾಡಿದೆ ಎಂಬ ಅಹಂಕಾರದ ಒಂದೇ ಒಂದು ಎಳೆ ಸಿಗುವುದಿಲ್ಲ. ತಾವೇ ಸ್ಥಾಪನೆ ಮಾಡಿದ್ದರೂ ಅದಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಹಾವೇರಿ ಹುಕ್ಕೇರಿಮಠದ ಶಿವಬಸವ ಮಹಾಸ್ವಾಮಿಗಳವರನ್ನು ಎಂಬುದನ್ನು ಗಮನಿಸಬೇಕು.
೧. ಶಿವಯೋಗ ಮಂದಿರದಲ್ಲಿ ಜಂಗಮ ಜಾತಿಗಳಿಗೆ ಮಾತ್ರ ಪ್ರವೇಶವಿದೆ ಎಂಬ ಅಪಾದನೆಯೇ ಮೊದಲು ತಪ್ಪು. ಇಂದು ಅಪ್ಪಟ ಬಸವತತ್ವದ ಮಠವನ್ನಾಗಿ ಗುರುವರ್ಗದ ಮಠವನ್ನು ಪರಿವರ್ತಿಸಿದ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು ಜಂಗಮ ಜಾತಿಯವರಲ್ಲ. ನವಲಗುಂದ ಬಸವಲಿಂಗ ಸ್ವಾಮಿಗಳು, ಹಿಂದಿನ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಮಹಾಂತಲಿಂಗ ಸ್ವಾಮಿಗಳು ಮೊದಲಾದವರೆಲ್ಲ ಜಂಗಮ ಜಾತಿಯವರಲ್ಲ. ೧೯೦೯ರಲ್ಲಿ ಶಿವಯೋಗಮಂದಿರ ಪ್ರಾರಂಭವಾಯಿತು. ಏಳು ಜನ ಸಾಧಕರು ಪ್ರವೇಶ ಪಡೆದರು. ಅವರಲ್ಲಿ ಇಬ್ಬರು ಭಕ್ತವರ್ಗದವರೇ ಎಂಬುದು ಗಮನಿಸಬೇಕು. ೨೦೧೦ರಿಂದ ಲಿಂಗಾಯತ ಸಮುದಾಯದ ಎಲ್ಲ ವರ್ಗದ ವಟುಗಳಿಗೆ ಪ್ರವೇಶ ಎಂಬುದನ್ನು ಅಂದಿನ ಶಿವಯೋಗ ಮಂದಿರ ಅಧ್ಯಕ್ಷರಾಗಿದ್ದ ಹೊಸಪೇಟೆ ಹಾಲಕೇರೆ ಸಂಸ್ಥಾನಮಠದ ಡಾ. ಸಂಗನಬಸವ ಸ್ವಾಮಿಗಳವರೇ ಘೋಷಣೆ ಮಾಡಿದ್ದರು. ಇಷ್ಟು ವರ್ಷಗಳಲ್ಲಿ ಭಕ್ತವರ್ಗದವರೊಬ್ಬರು ತಮ್ಮ ಮಕ್ಕಳನ್ನು ಅಲ್ಲಿ ತಂದು ಬಿಡಲು ಮನಸ್ಸು ಮಾಡಿಲ್ಲ. ಏಕೆಂದು ಕಾರಣ ತಿಳಿಯುವುದು ಕಷ್ಟವೇನಲ್ಲ. ನಮ್ಮ ಮಕ್ಕಳು ವಿದ್ಯೆ ಕಲಿತು ನೌಕರಿ ಮಾಡಲಿ ಎಂಬ ಸದುದ್ದೇಶವಿದೆಯೇ ಹೊರತು, ಸನ್ಯಾಸಿಯಾಗಿ ಸಮಾಜ ಸೇವೆ ಮಾಡುವುದು ಬೇಡ ಎಂಬ ಅಭಿಪ್ರಾಯವೇ ಬಹುತೇಕರದಾಗಿದೆ.
ಅಲ್ಲದೆ ಸ್ವಾಮಿಗಳನ್ನು ಮಾಡಬಾರದು, ಅವರಾಗಿಯೇ ಆಗಬೇಕು. ಈ ಹಿನ್ನೆಲೆಯಲ್ಲಿ ಆಲೋಚನೆ ಮಾಡಿದಾಗ ನೂರು ವರ್ಷದ ಹಿಂದೆ ಲಿಂಗಾಯತ ಧರ್ಮೀಯರು ಆರೂಢ, ಅವಧೂತ, ಇಂಚಗೇರಿ ಮೊದಲಾದ ಸಂಪ್ರದಾಯಗಳ ಬೆನ್ನು ಹತ್ತಿ ಹೊರಟಿದ್ದರು. ಈ ಕುರಿತು ಡಾ. ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿ ಜಾಗೃತಿಪರ ಲೇಖನಗಳು ಪ್ರಕಟವಾದವು. ಈ ಸಂದರ್ಭದಲ್ಲಿ ಲಿಂಗಪೂಜೆಯನ್ನೇ ಜನ ಮರೆಯುವ ಸಂಭವವಿತ್ತು. ಹೀಗಾಗಿ ಹಾನಗಲ್ಲ ಕುಮಾರ ಸ್ವಾಮಿಗಳವರು ಶಿವಯೋಗಮಂದಿರ ಸಂಸ್ಥೆಯ ಮೂಲಕ ಲಿಂಗಪೂಜೆಯನ್ನು ಜಾಗೃತಗೊಳಿಸುವ ಮಠಾಧೀಶರ ತರಬೇತಿ ಕಮ್ಮಟವನ್ನು ಸ್ಥಾಪಿಸಿದರು. ಈಗಿನ ಕಾಲದಲಿ ಜಂಗಮರ ಬಗ್ಗೆ ಹಳ್ಳಿ ಜನರಲ್ಲಿ ಭಕ್ತಿ ಶ್ರದ್ಧೆ ಇರುವಂತೆ, ಆ ಕಾಲದಲ್ಲಿಯೂ ಜಂಗಮರ ಬಗ್ಗೆ ತುಂಬ ಭಕ್ತಿ ಶ್ರದ್ಧೆ ಇತ್ತು. ಹೀಗಾಗಿ ಹೆಚ್ಚು ಜಂಗಮ ವಂಶಜರು ಅಲ್ಲಿ ಪ್ರವೇಶ ಪಡೆದರು.
ಹಾಗೆ ಪ್ರವೇಶ ಪಡೆದರು ಎಂದಾಕ್ಷಣ ವರ್ಣಾಶ್ರಮ ಜಾರಿಗೆ ತಂದರು ಎಂದು ಹೇಳುವುದು ಮೂರ್ಖತನದ ಪರಮಾವಧಿಯಾಗಿದೆ. ಯಾವ ವಿರಕ್ತಮಠದ ಸ್ವಾಮಿಗಳು ವರ್ಣಾಶ್ರಮ ಪಾಲಿಸುತ್ತಿದ್ದಾರೆ ಉದಾಹರಣೆಗಳನ್ನು ಕೊಡಿ? ಈ ವರ್ಣಾಶ್ರಮದ ಭೇದಬುದ್ಧಿ ಹುಟ್ಟಿಸಿದವರು ಕಾಶೀನಾಥ ಶಾಸ್ತ್ರಿಗಳು. ಇದನ್ನು ೧೯೩೫ರಲ್ಲಿ ಗುಂಡಾಶಾಸ್ತ್ರಿಎನ್ನುವರು ಬರೆದ ‘ಕಾಶೀನಾಥ ಶಾಸ್ತಿçಗಳ ನಿಜಜೀವನ ಚರಿತ್ರೆ’ ಎಂಬ ಕೃತಿ ಓದಿ ಮನದಟ್ಟು ಮಾಡಿಕೊಳ್ಳಬಹುದು.
೨. ‘ತರಬೇತಿ ಪಠ್ಯದಲ್ಲಿ ಸಿದ್ದಾಂತ ಶಿಖಾಮಣಿಯಂತಹ ವೈದಿಕಮಯ ಮತ್ತು ಸಂಸ್ಕೃತದ ಗ್ರಂಥಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಶಿವಶರಣರ ವಚನ ಸಾಹಿತ್ಯವನ್ನು ಕಡೆಗಣಿಸಲಾಯಿತು.’ ಎಂದು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದವೆನಿಸುತ್ತದೆ.
ಹಾನಗಲ್ಲ ಕುಮಾರ ಶಿವಯೋಗಿಗಳ ಕಾಲದಿಂದ ಇಲ್ಲಿಯವರೆಗೆ ಅಲ್ಲಿ ಅಧ್ಯಯನ ಮಾಡಿದ ನೂರಾರು ಮಠಾಧೀಶರು ಸಿದ್ಧಾಂತ ಶಿಖಾಮಣಿ ಪಠ್ಯವನ್ನು ಅಲ್ಲಿ ಕಲಿತೇ ಇಲ್ಲ. ಇನ್ನೂ ವಿಶೇಷವೆಂದರೆ ಪ್ರೊ. ಶಿ. ಶಿ. ಬಸವನಾಳ, ಡಾ. ನಂದೀಮಠ ಅವರಂತಹ ವಿದ್ವಜ್ಜನರು ಈ ಶಿವಯೋಗಮಂದಿರ ವಟು ಸಾಧಕರಿಗೆ ಆ ಕಾಲದಲ್ಲಿ ಒಂದು ಪಠ್ಯಕ್ರಮವನ್ನು ಸಿದ್ಧಪಡಿಸಿದ್ದರು. ಅದರಲ್ಲಿ ಸಿದ್ಧಾಂತ ಶಿಖಾಮಣಿಯ ಉಲ್ಲೇಖವೇ ಇಲ್ಲ. ಸಂಸ್ಕೃತ ಭಾಷೆ ಕಲಿಸಬೇಕೆಂಬ ಕಾರಣಕ್ಕಾಗಿ ಪಾಣಿನಿಯ ವ್ಯಾಕರಣ ಸೂತ್ರ, ಲಘುಸಿದ್ಧಾಂತ ಕೌಮುದಿ ಮೊದಲಾದ ಸಂಸ್ಕೃತ ವ್ಯಾಕರಣ ಶಾಸ್ತ್ರ ಗ್ರಂಥಗಳ ಅರಿವು ಅಲ್ಲಿ ಮೂಡಿಸಲಾಗುತ್ತಿತ್ತು. ಸ್ವಾಮಿಗಳಾಗುವವರು ಕನಿಷ್ಠ ಎರಡು ಭಾಷೆಯಲ್ಲಾದರೂ ಪರಿಣಿತರಾಗಲಿ ಎಂಬ ಆಶಯ ಅಲ್ಲಿತ್ತು. ನಾನು ಕಳೆದ ಮೂವತ್ತು ವರ್ಷಗಳಿಂದ ಗಮನಿಸಿದಂತೆ, ಅಲ್ಲಿ ಇಂದಿಗೂ ಸಿದ್ಧಾಂತ ಶಿಖಾಮಣಿ ಕುರಿತು ಒಂದು ಪಾಠವನ್ನೂ ಹೇಳಿಲ್ಲ.
ಆದರೆ ಪ್ರತಿದಿನ ಮೂರು ಹೊತ್ತು ಪ್ರಸಾದವಾದ ನಂತರ ಅನುಭಾವ ಮಾಡಲು, ಪ್ರತಿಯೊಬ್ಬ ಸಾಧಕರು ವಚನಗಳನ್ನು ಕಡ್ಡಾಯವಾಗಿ ಹೇಳಲೇಬೇಕಾದ ಪರಿಪಾಠವಿದೆ. ನಮ್ಮ ಈಗಿನ ವಿರಕ್ತಮಠಾಧೀಶರಿಗೆ ಸಿದ್ಧಾಂತ ಶಿಖಾಮಣಿಯ ಪರಿಚಯವೇ ಅಲ್ಲಿ ಆಗಿಲ್ಲವೆಂಬುದು ಗಮನಿಸಬೇಕಾದ ಸಂಗತಿ. ಹೀಗಿದ್ದೂ ತಿಳಿದುಕೊಳ್ಳದೆ ಆಪಾದನೆ ಮಾಡುವುದು ಸರಿಯಲ್ಲ.
೩. ‘ಲಿಂಗಾಯತದ ಬದಲು ವೀರಶೈವ ಹೆಸರನ್ನು ಚಾಲ್ತಿಗೆ ತರಲಾಯಿತು.’ ಎಂಬ ಆಲೋಚನೆಯಂತೂ ಇನ್ನೂ ತೀರ ಹಾಸ್ಯಾಸ್ಪದ ಎಂದೇ ಹೇಳಬೇಕು. ಇವರು ಆರಾಧಿಸುವ ಮಾತೆ ಮಹಾದೇವಿ ಅವರೇ ೨೧ನೇ ಶತಮಾನದ ಪ್ರಾರಂಭದ ಘಟ್ಟದವರೆಗೂ ‘ವೀರಶೈವ’ ಪದ ಬಳಸುತ್ತ ಬಂದಿದ್ದಾರೆ. ೧೯೬೭-೬೮ರಲ್ಲಿ ಅವರು ಬರೆದ ‘ಬಸವತತ್ವ ದರ್ಶನ’ ಕೃತಿಯನ್ನು ಇಂದಿನ ಅವರ ಶಿಷ್ಯರಾರೂ ನೋಡಿಯೇ ಇಲ್ಲ. ಅದರಲ್ಲಿ ಅವರು ಲಿಂಗಾಯತ ಪದದ ಬದಲಾಗಿ ವೀರಶೈವ ಪದವನ್ನು ಬಳಸಿದ್ದಾರೆ. ಇದಕ್ಕೆ ಏನು ಹೇಳಬೇಕು?
ನೂರು ವರ್ಷದ ಹಿಂದೆ ಲಿಂಗಾಯತರು ತಾವು ಶೈವರೋ ವೀರಶೈವರೋ ಆರಾಧ್ಯರೋ ಆರೂಢರೋ ಎಂಬುದು ಒಂದೂ ಗೊತ್ತಿಲ್ಲದೆ ಲಿಂಗಪೂಜೆಯಿಲ್ಲದೆ ತಿರುಗುತ್ತಿರುವ ಕಾಲಘಟ್ಟದಲ್ಲಿ ಈ ಜನಾಂಗವನ್ನು ಮುಂಬೈ-ಹೈದರಾಬಾದ ಮತ್ತು ಸುಶಿಕ್ಷಿತ ಪ್ರದೇಶ ಎನಿಸಿಕೊಂಡ ಮೈಸೂರು ಪ್ರದೇಶದಲ್ಲಿ ಅಕ್ಷರಶಃ ಶೂದ್ರ ಎಂದು ಕರೆಯಲಾಗಿತ್ತು. ಇದಕ್ಕೆ ಬ್ರಿಟಿಷ್ ದಾಖಲೆಗಳು ಸಾಕಷ್ಟಿವೆ. ಆಗ ಲಿಂಗಾಯತರಿಗೆ ಅಕ್ಷರದ ಗಂಧಗಾಳಿಯೇ ಇರಲಿಲ್ಲ. ಅಕ್ಷರದ ದೀಪ ಹಚ್ಚಿದವರು ಡೆಪ್ಯೂಟಿ ಚೆನ್ನಬಸಪ್ಪನವರು. ಅದನ್ನು ಮುಂದೆ ಬೆಳಗಿದವರು ಅರಟಾಳ ರುದ್ರಗೌಡರು, ಗಿಲಗಂಚಿ ಗುರುಸಿದ್ಧಪ್ಪನವರು. ಈ ಹಿರಿಯರ ಮುಂದಾಳತ್ವದಲ್ಲಿಯೇ ಹಾನಗಲ್ಲ ಶ್ರೀಗಳು ಸಮಾಜ ಸಂಘಟನೆಯ ಕನಸು ಕಂಡರು. ಶೂದ್ರತ್ವದಿಂದ ಹೊರಬೇಕಾದ ಮೊದಲ ಅನಿವರ‍್ಯತೆ ಆಗಿತ್ತು. ಹೀಗಾಗಿ ವೀರಶೈವ ಪದವನ್ನು (ಇಂದು ನಾವು ಲಿಂಗಾಯತ ಎಂದು ಹೆಚ್ಚು ಒತ್ತು ಕೊಟ್ಟು ಬಳಸಿದಂತೆ) ಒತ್ತುಕೊಟ್ಟು ಬಳಸಬೇಕಾದ ಒಂದು ಅನಿವರ‍್ಯತೆ ಸೃಷ್ಟಿಯಾಗಿತ್ತು.
ಶಿವಯೋಗ ಮಂದಿರ ಹುಟ್ಟುವ ಮೊದಲೇ ಅಥಣಿ ಶಿವಯೋಗಿಗಳ ಗರಡಿಯಲ್ಲಿ ಅನೇಕ ಜನ ಸ್ವಾಮಿಗಳು ಸಿದ್ಧರಾದರು. ಅವರೆಲ್ಲರೂ ವೀರಶೈವ ಪದವನ್ನೇ ಬಳಸಿಕೊಂಡು ಬಂದಿದ್ದರು. ಹೀಗಾಗಿ ಶಿವಯೋಗಮಂದಿರದ ಸಾಧಕರು ವೀರಶೈವ ಪದಕ್ಕೆ ಒತ್ತುಕೊಡುವ ಅನಿವಾರ‍್ಯತೆ ಬಂದಿತು. ಏನೂ ತಿಳುವಳಿಕೆಯೇ ಇಲ್ಲದ ಕಾಲದಲ್ಲಿ ಈ ಕುರಿತು ಇಷ್ಟು ಜಾಗೃತಿ ಮಾಡಿದ್ದೇ ಒಂದು ದೊಡ್ಡ ಸಾಹಸ. ಈ ಕಾಲದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳಿದ್ದಿದ್ದರೆ ಖಂಡಿತವಾಗಿಯೂ ವರ್ತಮಾನದ ಬದಲಾವಣೆಗೆ ಅವರು ತೆರೆದುಕೊಳ್ಳುತ್ತಿದ್ದರು.
೪. ‘ಕನ್ನಡದ ಬದಲು ಸಂಸ್ಕೃತವು ಧರ್ಮಭಾಷೆಯಾಯಿತು’. ಇದು ಕೂಡ ತಿಳುವಳಿಕೆಯ ಕೊರತೆಯಿಂದ ಮೂಡಿದ ವಿಚಾರವೆಂದೇ ಹೇಳಬೇಕು. ವಚನಗಳನ್ನು ಸಂಶೋಧಿಸುತ್ತಿದ್ದ ಡಾ. ಫ.ಗು.ಹಳಕಟ್ಟಿಯವರಿಗೆ ವಚನ ಪ್ರಕಟಣೆ ಸಲುವಾಗಿ ಧನಸಹಾಯ ಮಾಡಿ, ಅವರು ಪ್ರಕಟಿಸಿದ ವಚನ ಗ್ರಂಥಗಳನ್ನು ತಮ್ಮ ಶಿಷ್ಯರಿಗೆ ನೀಡಿ, ಪ್ರತಿನಿತ್ಯ ಶಿವಯೋಗಮಂದಿರದಲ್ಲಿ ವಚನಗಳ ಕುರಿತು ಅನುಸಂಧಾನ ಜರುಗಬೇಕೆಂದು ಬಯಸಿದವರು. ಈ ಕುರಿತು ಸ್ವತಃ ಡಾ. ಫ.ಗು.ಹಳಕಟ್ಟಿಯವರೇ ತಮ್ಮ ಶಿವಾನುಭವ ಪತ್ರಿಕೆಯಲ್ಲಿ ‘ಹಾನಗಲ್ಲ ಕುಮಾರ ಶಿವಯೋಗಿಗಳ ಕುರಿತು ಕೆಲವು ನೆನಹುಗಳು’ (ನೋಡಿ: ಶಿವಾನುಭವ ಪತ್ರಿಕೆ ಸಂಪುಟ ೩೩ ಸಂಚಿಕೆ ೨, ಏಪ್ರಿಲ್ ೧೯೫೯ ಪು. ೬೩-೬೮) ಎಂಬ ಅಪರೂಪದ ಲೇಖನದಲ್ಲಿ ಸವಿಸ್ತಾರವಾಗಿ ಹೇಳಿಕೊಂಡಿದ್ದಾರೆ.
೧೯೩೦ರಲ್ಲಿ ಹಾನಗಲ್ಲ ಶ್ರೀಗಳು ಲಿಂಗೈಕ್ಯರಾದಾಗಲೂ ಶಿವಾನುಭವ ಪತ್ರಿಕೆಯಲ್ಲಿ ಶ್ರೀಗಳ ಕುರಿತು ಲೇಖನ ಬರೆದು, ತಮಗೆ ವಚನ ಪ್ರಕಟಣೆ ಸಲುವಾಗಿ ಹಾನಗಲ್ಲ ಶ್ರೀಗಳು ಆಶೀವರ್ದಿಸಿದ ಘಟನೆಗಳನ್ನು ಶ್ರದ್ಧೆಯಿಂದ ಸ್ಮರಿಸಿಕೊಂಡಿದ್ದಾರೆ. ಇಷ್ಟು ಸ್ಪಷ್ಟವಾದ ದಾಖಲೆಗಳಿದ್ದರೂ ಮೂರ್ಖರಂತೆ ಬರೆಯುವುದು ಎಷ್ಟು ಔಚಿತ್ಯವೆನಿಸುತ್ತದೆ. ಶಿವಯೋಗಮಂದಿರದಿಂದ ಈ ವರೆಗೆ ಪ್ರಕಟವಾದ ಪುಸ್ತಕಗಳ ಪಟ್ಟಿಯನ್ನು ಗಮನಿಸಬೇಕು. ಹಾನಗಲ್ಲ ಕುಮಾರ ಶಿವಯೋಗಿಗಳು ೧೯೨೫ರಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಕಟಿಸಿದ ಪುಸ್ತಕ ‘ಬಸವಭಾಷೆ’ ಎಂಬುದನ್ನು ಮಾತಾಜಿಯವರ ಭಕ್ತರು ಗಮನಿಸಬೇಕು. ಅಲ್ಲಿಂದ ಪ್ರಕಟವಾದ ಒಂದೆರಡು ಕೃತಿಗಳನ್ನು ಹೊರತುಪಡಿಸಿದರೆ ೧೦೦ಕ್ಕೆ ೯೯ % ಕನ್ನಡ ಪುಸ್ತಕಗಳೇ ಆಗಿವೆ. ಶಿವಯೋಗಮಂದಿರದಲ್ಲಿ ಕಲಿತ ಕರ್ನಾಟಕ ವಿರಕ್ತಮಠಗಳ ಸ್ವಾಮಿಗಳು ಈ ವರೆಗೆ ಪ್ರಕಟಿಸಿದ ಪುಸ್ತಕಗಳೆಲ್ಲವೂ ಕನ್ನಡಮಯವಾಗಿವೆ ಎಂಬುದನ್ನು ಗಮನಿಸಬೇಕು. ಹೀಗಿದ್ದೂ ಸಂಸ್ಕೃತ ಧರ್ಮಭಾಷೆ ಆಯಿತು ಎಂದು ಪ್ರಲಾಪಿಸುವುದು ದುರ್ದೈವದ ಸಂಗತಿಯೆಂದೇ ಹೇಳಬೇಕು.
೫. ‘ಲಿಂಗಾಯತರು ಹಿಂದೂ ಧರ್ಮದ ಭಾಗವೆಂದು ಪ್ರತಿಪಾದಿಸಲಾಯಿತು.’ ಎಂಬ ಗಂಭೀರಲೋಪವನ್ನು ಕುರಿತು ಹೇಳುವುದಾದರೆ, ಶಿವಯೋಗ ಮಂದಿರದ ವರದಿಗಳಾಗಲಿ, ಬೆಳಗು, ಸ್ಮಾರಕ ಚಂದ್ರಿಕೆ ಮೊದಲಾದ ಮಹತ್ವದ ಗ್ರಂಥಗಳಲ್ಲಾಗಲಿ ಎಲ್ಲಿಯೂ ಲಿಂಗಾಯತವು ಹಿಂದೂ ಧರ್ಮದ ಭಾಗವೆಂದು ಬರೆದಿಲ್ಲ. ವೀರಶೈವ(ಲಿಂಗಾಯತ) ಧರ್ಮವು ಹಿಂದೂಧರ್ಮದಷ್ಟೇ ಶ್ರೇಷ್ಠವಾದುದೆಂದು ಪ್ರತಿಪಾದಿಸಲಾಗಿದೆ ವಿನಃ ಹಿಂದೂಧರ್ಮದ ಭಾಗವೆಂದು ಯಾರೂ ಕರೆದಿಲ್ಲ. ಇಂದು ಶಿವಯೋಗಮಂದಿರದಲ್ಲಿ ಕಲಿತ ವಿರಕ್ತ ಸ್ವಾಮಿಗಳಾರೂ ಈ ವಾದವನ್ನು ಒಪ್ಪುವುದಿಲ್ಲ.
ಹಿಂದೂ ಎಂಬುದು ಪ್ರಾಚೀನ ಬ್ರಾಹ್ಮಣ ಧರ್ಮದ ಪರಿಭಾಷೆಯಾಗಿರುವುದರಿಂದ, ನಮ್ಮ ಧರ್ಮವು ಅದಕ್ಕಿಂತ ಭಿನ್ನ ಎಂಬುದನ್ನೇ ಪ್ರತಿಪಾದಿಸಿದ ವಿಚಾರಗಳನ್ನು ಶಿವಯೋಗಮಂದಿರದಲ್ಲಿ ಕಲಿಸಲಾಗಿದೆ. ಈ ಕುರಿತು ಬೆಳಗು ಕೃತಿಯಲ್ಲಿ ಒಂದು ಮಹತ್ವದ ಸಂದೇಶವಿದೆ ಎಲ್ಲರೂ ಗಮನಿಸಬೇಕು. ನವಲಗುಂದ ಬಸವಲಿಂಗ ಶ್ರೀಗಳು ಮಂದಿರದಲ್ಲಿ ಮಾತನಾಡುತ್ತ -ಎಲ್ಲ ಧರ್ಮಗಳಲ್ಲಿ ನಮ್ಮ ವೀರಶೈವ(ಲಿಂಗಾಯತ) ಧರ್ಮವೇ ಶ್ರೇಷ್ಠವೆಂದು ಹೇಳಿದಾಗ, ಹಾನಗಲ್ಲ ಶ್ರೀಗಳು ಅವರನ್ನು ಕರೆದು, ಬೇರೆಯವರ ಧರ್ಮವನ್ನು ಕೀಳಾಗಿ ಕಂಡು, ನಿನ್ನ ಧರ್ಮವನ್ನು ಮಾತ್ರ ಶ್ರೇಷ್ಠವೆಂದು ಗುರುತಿಸಲು ಎಷ್ಟು ಧರ್ಮಗಳ ಅಧ್ಯಯನ ಮಾಡಿರುವಿ ಎಂದು ಕೇಳುತ್ತಾರೆ. ಆಗ ಅವರು ಇಲ್ಲ, ನಾನು ಬೇರೆ ಧರ್ಮಗಳ ಅಧ್ಯಯನ ಮಾಡಿಲ್ಲವೆನ್ನುತ್ತಾರೆ. ತದನಂತರ ಬಸವಲಿಂಗ ಶ್ರೀಗಳು ತಮ್ಮ ಜೀವನದ ಕೊನೆಯವರೆಗೂ ನವಲಗುಂದ ಗವಿಮಠದಲ್ಲಿ ‘ಸರ್ವಧರ್ಮ ಸಮ್ಮೇಳನ’ ಆಯೋಜನೆ ಮಾಡುತ್ತ ಬಂದರೆಂಬ ಸಂಗತಿ ಇಲ್ಲಿ ಗಮನಾರ್ಹ.
೬. ‘ಬಸವಣ್ಣನವರ ಬದಲು ರೇಣುಕಾಚಾರ್ಯರು ಧರ್ಮಗುರುಗಳು ಎಂದು ಪ್ರತಿಪಾದಿಸಲಾಯಿತು.’ ಇದು ಕೂಡ ತಪ್ಪು ಕಲ್ಪನೆಯಿಂದ ಕೂಡಿದ, ವಿವೇಚನಾರಹಿತ ವಿಚಾರವೇ ಆಗಿದೆ. ವಚನಗಳು ಪ್ರಕಟವಾಗುವ ವರೆಗೂ ಶರಣರ ಮಹತ್ವ ನಮ್ಮ ಜನರಿಗೆ ತಿಳಿದೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಧರ್ಮಗುರು ಯಾರು ಎಂಬುದರ ಅರಿವು ಇತ್ತೆಂಬುದು ನಿರಾಧಾರ. ಸಿ.ಪಿ. ಬ್ರೌನ್ ಮೊದಲಾದ ಕೆಲವು ಬ್ರಿಟಿಷ್ ಲೇಖಕರು ಇಂತಹ ಕೆಲವು ವಿಚಾರಗಳನ್ನು ಮೊದಲ ಬಾರಿಗೆ ಹರಿಬಿಟ್ಟರು. ತದನಂತರ ಈ ವಾದಗಳು ಬೆಳೆಯುತ್ತ ಬಂದವು. ಇಂದು ಲಿಂಗಾಯತರಿಗೆ ಬಸವಣ್ಣನವರೇ ಧರ್ಮಗುರು ಎಂಬುದರ ಸ್ಪಷ್ಟ ತಿಳುವಳಿಕೆ ಬಂದಿದೆ. ಹೀಗೆಂದು ನಾನು ಒಬ್ಬರ ಮುಂದೆ ಹೇಳಿದಾಗ, ಮಾತೆ ಮಹಾದೇವಿ ಮತ್ತು ಲಿಂಗಾನಂದರಿಂದ ಬಸವಣ್ಣನವರು ಹೆಚ್ಚು ಬೆಳಕಿಗೆ ಬಂದರೆಂದು ವಾದಿಸಿದರು. ಈ ವಾದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ನನ್ನದೊಂದು ಸ್ಪಷ್ಟನೆ ಹೀಗಿದೆ :
ಲಿಂಗಾನಂದರ ಪೂರ್ವಾಶ್ರಮದ ಹೆಸರು ಸಂಗಮೇಶ. ನನ್ನ ಗುರುಗಳಾದ ಡಾ. ಎಸ್. ಆರ್. ಗುಂಜಾಳ ಅವರ ಸಹಪಾಠಿ. ಕಾಲೇಜು ದಿನಗಳಲ್ಲಿ ಅವರು ಕಮ್ಯುನಿಷ್ಟ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ಲಿಂಗಾನಂದರು ಬೆಳಗಾವಿಯಲ್ಲಿ ಬಿ.ಎ. ಅಧ್ಯಯನ ಮಾಡುವ ಕಾಲಕ್ಕೆ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರು(ಇವರು ಹಾನಗಲ್ಲ ಕುಮಾರ ಸ್ವಾಮಿಗಳವರ ಪರಮಾಪ್ತ ಶಿಷ್ಯರು. ಶಿವಯೋಗಮಂದಿರದಲ್ಲಿ ೧೨ ವರುಷಗಳ ಕಾಲ ಅಧ್ಯಯನ ಮಾಡಿದವರು) ಸ್ಥಾಪಿಸಿದ ‘ಶ್ರೀ ಕುಮಾರೇಶ್ವರ ಪ್ರಸಾದ ನಿಲಯ’ದಲ್ಲಿ ಆಶ್ರಯ ಪಡೆದಿದ್ದರು. ಸಂಗಮೇಶ ಅವರು ವೈಚಾರಿಕ ಪ್ರಜ್ಞೆಯನ್ನು ರೂಢಿಸಿಕೊಂಡು ಲಿಂಗಕಟ್ಟಿಕೊಳ್ಳುವುದು ನಿರರ್ಥಕವೆಂದು ವಾದಿಸುತ್ತಿದ್ದರು. ಆಗ ಅವರಿಗೂ ಲಿಂಗಾಯತವೆಂದರೇನೆಂದು-ವೀರಶೈವ ಎಂದರೇನೆಂದೂ ಸ್ಪಷ್ಟವಾದ ತಿಳುವಳಿಕೆ ಇರಲಿಲ್ಲ.
ಹೀಗಾಗಿ ಡಾ. ಶಿವಬಸವ ಸ್ವಾಮಿಗಳು ಸ್ಥಾಪಿಸಿದ ಪ್ರಸಾದ ನಿಲಯದಲ್ಲಿ ಪ್ರಸಾದ ಸ್ವೀಕರಿಸುವ ಸಮಯದಲ್ಲಿ ಕಡ್ಡಾಯವಾಗಿ ಎಲ್ಲರೂ ಲಿಂಗವನ್ನು ಧರಿಸಲೇಬೇಕಾಗಿತ್ತು. ಊಟದ ಸಮಯದಲ್ಲಿ ಮಾತ್ರ ಲಿಂಗ ಧರಿಸಿ, ನಂತರ ರೂಮಿಗೆ ಬಂದು ಗೂಟಕ್ಕೆ ತೂಗು ಬಿಡುತ್ತಿದ್ದ ಲಿಂಗಾನಂದರು ‘ಇದು ಗೇಟ್ ಪಾಸ್ ಆಫ್ ದಿ ಡೈನಿಂಗ್ ಹಾಲ್’ ಎಂದು ಕೊರಳೊಳಗಿನ ಲಿಂಗವನ್ನು ಕುರಿತು ಅಪಹಾಸ್ಯ ಮಾಡುತ್ತಿದ್ದರು. ಇಂತಹ ವ್ಯಕ್ತಿ ಜೀವನದಲ್ಲಿ ಹೆಚ್ಚು ಹೆಚ್ಚು ಅಧ್ಯಯನ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ತರುವಾಯ ತಮ್ಮ ಕಮ್ಯುನಿಷ್ಟ ವಿಚಾರಧಾರೆಯಿಂದ ಹಿಂದೆ ಸರಿದು, ‘ಲಿಂಗ’ವನ್ನು ಕಟ್ಟಿಕೊಂಡರು, ಲಿಂಗತತ್ವ ದರ್ಪಣ ಎಂಬ ಮಹತ್ವದ ಕೃತಿಯನ್ನು ರಚಿಸಿದರು. ಕೊನೆಗೆ ಬೆಳಗಾವಿಗೆ ಭಾಷಣಕ್ಕೊಮ್ಮೆ ಬಂದಾಗ ‘ಆಗ ನಾನು ಶ್ರೀಗಳ ಪ್ರಸಾದ ನಿಲಯದಲ್ಲಿ ಈ ಲಿಂಗಕ್ಕೆ ‘ಗೇಟ್ ಪಾಸ್ ಆಫ್ ದಿ ಡೈನಿಂಗ್ ಹಾಲ್’ ಎಂದು ಟೀಕೆ ಮಾಡುತ್ತಿದ್ದೆ. ಆದ್ದರಿಂದ ನನಗೆ ಸ್ಪಷ್ಟವಾದ ಅರಿವಿಗೆ ಬಂದು ಈಗ ಹೇಳುತ್ತಿದ್ದೇನೆ – ‘ಇದು ಗೇಟ್ ಪಾಸ್ ಆಫ್ ದಿ ಕಿಂಗಡಂ ಆಫ್ ಗಾಡ್’ ಎಂದು ಹೆಮ್ಮೆಯಿಂದ ಹೇಳಿದ್ದರು. (ಈ ಸಂಗತಿ ಮಾತೆ ಮಹಾದೇವಿ ಅವರು ೧೯೯೬ರಲ್ಲಿ ಸಂಪಾದಿಸಿ ಪ್ರಕಟಿಸಿದ ಬಸವ ಕಿರಣ ಪುಸ್ತಕದಲ್ಲಿ ದಾಖಲಾಗಿದೆ ಗಮನಿಸಬೇಕು) ಇದೇ ಲಿಂಗಾನಂದರು ‘ಹಿಂದೂ ಯಾರು?’ ಎಂಬ ಒಂದು ಉಪನ್ಯಾಸ ಮಾಡಿ ಕ್ಯಾಸೆಟ್ ಸಿದ್ಧಗೊಳಿಸಿದ್ದರು. ಮಾತಾಜಿಯವರು ಕೂಡ ‘ಹಿಂದೂ ಯಾರು?’ ಎಂಬ ಪುಸ್ತಕ ಬರೆದಿದ್ದಾರೆ. ಅದನ್ನು ಈಗಿನ ಅವರ ಶಿಷ್ಯರಾರೂ ಓದುತ್ತಿಲ್ಲ. ಅಲ್ಲಿಯ ವಿಚಾರಗಳನ್ನು ಗಮನಿಸಿದರೆ, ಹಿಂದೂ ಧರ್ಮದ ಬಗ್ಗೆ ಲಿಂಗಾನಂದರ-ಮಾತಾಜಿಯವರ ದೃಷ್ಟಿಕೋನ ಏನಿತ್ತು ಎಂಬುದರ ಅರಿವು ಮೂಡುತ್ತದೆ.
ಪರಿವರ್ತನೆ ಜಗದ ನಿಯಮ. ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯಾಗುವುದು ಸಹಜ. ಈ ಬದಲಾವಣೆಗೆ ಸ್ಪಂದಿಸುತ್ತಲೇ ಸಮಾಜವನ್ನು ಮುನ್ನಡೆಸುವ ಕೃತಸಂಕಲ್ಪವನ್ನು ಆ ಕಾಲದ ಹಾನಗಲ್ಲ ಕುಮಾರ ಶಿವಯೋಗಿಗಳು ಮತ್ತು ಇತರ ಹಿರಿಯರು ಮಾಡಿದರು. ಅವರು ಮಾಡಿದ ಸೇವಾಕಾರ್ಯಗಳನ್ನು ಟೀಕಿಸಿ ಈಗ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ.
ಈ ಮೇಲಿನ ವಾದಗಳೆಲ್ಲವೂ ತೀರ ಬಾಲೀಶವಾದ ವಾದಗಳಾಗಿವೆ. ಸುಮ್ಮನೆ ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಯಾರೂ ಬಸವನಿಷ್ಠರೆನಿಸಿಕೊಂಡವರು ಮಾಡಬಾರದು. ಅದು ಅವರ ಬಸವನಿಷ್ಠೆಗೆ ಶೋಭೆ ತರುವ ಸಂಗತಿಯಲ್ಲ.