ಹತಾಶೆಯಿಂದ ಯತ್ನಾಳ್ ತುಂಬಾ ಮಾನಸಿಕ ಕ್ಷೋಭೆಗೊಳಗಾಗಿದ್ದಾರೆ. ಎಷ್ಟರಮಟ್ಟಿಗೆಂದರೆ ತಾವು ಹುಟ್ಟಿದ ಧರ್ಮವನ್ನೆ ದ್ವೇಷಿಸುವಷ್ಟು, ತಮ್ಮ ಧರ್ಮಗುರುವನ್ನೆ ನಿಂದಿಸುವಷ್ಟು ಹಾಗೂ ಕೊನೆಗೆ ತಮ್ಮನ್ನೆ ತಾವು ದ್ವೇಷಿಸಿಕೊಳ್ಳುವಷ್ಟು.
ವಿಜಯಪುರ
ಕರ್ನಾಟಕದ ರಾಜಕೀಯದ ಕರಾಳ ಮುಖಗಳಲ್ಲಿ ಬಸನಗೌಡ ಯತ್ನಾಳ್ ಅಗ್ರಗಣ್ಯರಾಗುವತ್ತ ದಾಪುಗಾಲು ಹಾಕುತ್ತಿದ್ದಾರೆ. ಮೊನ್ನೆ ಬೀದರಿನಲ್ಲಿ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಆಡಿದ ಮಾತಂತೂ ಅವರ ಅನಾಗರಿಕ ಹಾಗು ಹುಚ್ಚುತನದ ಪರಮಾವಧಿಯ ಸಂಕೇತ.
ಅವರ ಹೇಳಿಕೆಗಳಿಂದ ರೋಸಿ ಹಾಗು ಕುತೂಹಲಗೊಂಡು ಹಲವಾರು ದೂರದ ಸ್ನೇಹಿತರು ಇವರೇಕೆ ಹೀಗೆ, ಇವರು ಮೊದಲಿನಿಂದ ಹೀಗೆ ಇದ್ರಾ ಅಥವಾ ಇವಾಗ ಹೀಗಾಡುತ್ತಿದ್ದಾರಾ ಎಂದೆಲ್ಲಾ ಪ್ರಶ್ನಿಸುತ್ತಾರೆ. ಆದರೆ ನಾವು — ಅಂದರೆ ಅವರ ತವರು ಜಿಲ್ಲೆ ವಿಜಯಪುರದವರು — ಯತ್ನಾಳರನ್ನು ಯಾವತ್ತೂ ಗಂಭೀರವಾಗಿ ತೆಗೆದುಕೊಂಡಿಲ್ಲˌ ಇಲ್ಲಿನ ಪತ್ರಕರ್ತರೂ ಕೂಡ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಪತ್ರಕರ್ತರಿಗೆ ಅವರ ಪತ್ರಿಕಾಗೋಷ್ಠಿಗಳೆಂದರೆ ಬೇಕಂತಲೆ ವಿವಾದಾತ್ಮಕ ವಿಷಯಗಳ ಕುರಿತು ಮಾತನಾಡುವಂತೆ ಪ್ರಚೋದಿಸಿ ಮಜಾ ತಗೊಳ್ಳುವುದು ಮತ್ತು ಅದನ್ನು TRPಗೆ ಬಳಸಿಕೊಳ್ಳುವ ಅವಕಾಶವಷ್ಟೇ.
ಅವರ ಸಭೆಗಳಿಗೆ ಬರುವ ಜನರು ಕೂಡ ಬೇಜಾರಾದಾಗ ಬಂದು ಹೊಟ್ಟೆ ತುಂಬ ನಕ್ಕು ಮನೆಗೆ ಹೋಗುತ್ತಾರೆ. ಒಂದಷ್ಟು ಅವರ ಹಿಂಬಾಲಕರು ನಗುತ್ತಾ ಜೋರಾಗಿ ಸಿಳ್ಳೆ ಚಪ್ಪಾಳೆಗಳನ್ನು ಹೊಡೆದು ಆ ಸಭೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದಿರುವಂತೆ ನೋಡಿಕೊಳ್ಳುತ್ತಾರೆ.
ಮುಸ್ಲಿಂ ದ್ವೇಷ
ಕೆಲವು ಸ್ನೇಹಿತರು ಯತ್ನಾಳ್ ನಿಜವಾಗಿಯೂ ಮುಸ್ಲಿಮರನ್ನು ಅಷ್ಟೊಂದು ದ್ವೇಷಿಸುತ್ತಾರಾ? ಏಕೆ ಅವರಿಗೆ ಈ ಪರಿಯ ದ್ವೇಷ ಎಂತಲೂ ಪ್ರಶ್ನಿಸುತ್ತಾರೆ. ಖಂಡಿತವಾಗಿಯೂ ಯತ್ನಾಳ್ ಅವರಿಗೆ ವೈಯಕ್ತಿಕವಾಗಿ ಮುಸ್ಲಿಮ್ ದ್ವೇಷ ಲವಲೇಶವೂ ಇಲ್ಲ. ಅವರು ಸ್ಥಳೀಯವಾಗಿ ಮುಸ್ಲಿಮ್ ಸಮುದಾಯದೊಂದಿಗೆ ಚೆನ್ನಾಗಿದ್ದಾರೆ, ಅವರಲ್ಲಿ ಕೆಲವರೊಂದಿಗೆ ಹಳೇ ವ್ಯವಹಾರಗಳೂ ಇದೆ ಎನ್ನುವ ಮಾತೂ ವಿಜಯಪುರದಲ್ಲಿ ಹರಿದಾಡುತ್ತದೆ. ಯತ್ನಾಳ್ ಅವರು ಜಾತ್ಯಾತೀತ ಜನತಾದಳದಲ್ಲಿದ್ದಾಗ ಮುಸ್ಲಿಮ್ ಟೋಪಿ ಹಾಕಿಕೊಂಡು ತಿರುಗಾಡುತ್ತಿದ್ದ ನೆನಪೂ ಇಲ್ಲಿ ಹಸಿರಾಗಿದೆ. ಇಂದಿಗೂ ಮುಸ್ಲಿಮ್ ಹಬ್ಬಗಳಲ್ಲಿ ಯತ್ನಾಳ್ ತಮ್ಮ ಸ್ನೇಹಿತರಿಗೆ ಗಿಫ್ಟ್ ಗಳನ್ನು ತಲುಪಿಸುತ್ತಾರೆ ಎಂದು ಕೂಡ ಬಲ್ಲವರು ಹೇಳುತ್ತಾರೆ.
ಆದರೆ ಯತ್ನಾಳ್ ಅವರು ಹೀಗೇಕೆ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆˌ ಯಡಿಯೂರಪ್ಪ ಕುಟುಂಬವನ್ನು ಏಕೆ ದ್ವೇಷಿಸುತ್ತಾರೆˌ ನಿಜವಾಗಿಯೂ ಯತ್ನಾಳ್ ಪಕ್ಷಕ್ಕೆ ತಮ್ಮ ಸಮುದಾಯದ ಮತಗಳನ್ನು ಸೆಳೆಯಬಲ್ಲ ಶಕ್ತಿ ಇದೆಯೆ, ಅವರ ಮೇಲೆ ಬಿಜೆಪಿ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಮುಂತಾದ ಇನ್ನೂ ಅನೇಕ ಪ್ರಶ್ನೆಗಳು ಕೆಲವರು ಹಾಕುತ್ತಾರೆ.
ಅನಂತಕುಮಾರ್ ಬಿತ್ತಿದ ಬೀಜ
ಯತ್ನಾಳ್ ಅವರು ೯೦ರ ದಶಕದಲ್ಲಿ ಈ ರೀತಿಯಾಗಿ ಇರಲಿಲ್ಲ. ನಿಮ್ಮಲ್ಲಿ ನಾಯಕತ್ವದ ಗುಣವಿದೆ, ಬಿಜೆಪಿಯಲ್ಲಿ ನೀವು ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರಾಗಬಲ್ಲಿರಿ ಎಂಬ ಭ್ರಮೆಯನ್ನು ಅವರಲ್ಲಿ ಬಿತ್ತಿದವರು ದಿವಂಗತ ಅನಂತಕುಮಾರ ಅವರು.
೨೦೧೦ರ ತನಕ ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದರು. ಆನಂತರ ಅವರ ಪ್ರಭಾವವನ್ನು ತಗ್ಗಿಸುವ ಪ್ರಯತ್ನಗಳು ಬಿಜೆಪಿಯನ್ನು ನಿಯಂತ್ರಿಸುವ ಸಂಘದ ಶಕ್ತಿಗಳು ಮಾಡಲು ಆರಂಭಿಸಿದವು. ಅವು ಯತ್ನಾಳ್ ರನ್ನು ಯಡಿಯೂರಪ್ಪ ಅವರ ವಿರುದ್ಧ ತಿರುಗಿಬೀಳುವಂತೆ ಮಾಡಿದವು. ಅದರಿಂದ ಕೆರಳಿದ ಯಡಿಯೂರಪ್ಪ ಅವರನ್ನು ಪಕ್ಷದಿಂದ ಹೊರಹಾಕಿದರು. ಆಗ ಅವರ ಬಂಡಾಯ ಪ್ರಚೋದಿಸಿದ ಶಕ್ತಿಗಳು ಅವರ ಸಹಾಯಕ್ಕೆ ಬರಲಿಲ್ಲ. ಯಡಿಯೂರಪ್ಪ ಯತ್ನಾಳ್ ರ ಸಹಾಯಕ ಅಪ್ಪಾಸಾಹೇಬ್ ಪಟ್ಟಣಶೆಟ್ಟಿಯನ್ನು ಪರ್ಯಾಯವಾಗಿ ಬೆಳೆಸಿ ಮಂತ್ರಿಯಾಗಿಸಿದ್ದು ಯತ್ನಾಳರನ್ನು ಇನ್ನಷ್ಟು ಕೆರಳಿಸಿತು.
ಅನಂತಕುಮಾರ ಬಿತ್ತಿದ್ದ ಪರ್ಯಾಯ ನಾಯಕತ್ವದ ಭ್ರಮೆಯ ಮೂಲಕ ಮೂಡಿದ್ದ ಯಡಿಯೂರಪ್ಪ ದ್ವೇಷ ಯತ್ನಾಳರನ್ನು ಕ್ರಮೇಣ ಆವರಿಕೊಂಡು ಬಿಟ್ಟಿತು. ರಾಜಕೀಯವಾಗಿ ಸಂಪೂರ್ಣವಾಗಿ ಸೋತುಹೋದ ಯತ್ನಾಳ್ ಅವರು ಸಿದ್ಧೇಶ್ವರ ಬ್ಯಾಂಕ್ ಮತ್ತು ಸಕ್ಕರೆ ಕಾರ್ಖಾನೆಯ ಹುದ್ದೆಗಳಿಂದಲೂ ಹೊರಹಾಕಲಾಯಿತು. ಅದಕ್ಕೆ ಅವರ ದುರಾಡಳಿತವೂ ಕಾರಣವಾಗಿತ್ತು. ಬೇರೆ ದಾರಿಯಿಲ್ಲದೆ ಯತ್ನಾಳ್ ಮತ್ತೆ ಯಡಿಯೂರಪ್ಪನವರ ಕಾಲಿಗೆ ಬಿದ್ದು ಬಿಜೆಪಿಗೆ ಮರು ಸೇರ್ಪಡೆಗೊಳ್ಳಲು ಹರಸಾಹಸ ಪಡಬೇಕಾಯಿತು. ಆಗ ಅವರ ಪಕ್ಷ ಸೇರ್ಪಡೆಯನ್ನು ಬಲವಾಗಿ ವಿರೋಧಿಸಿದವರು ಧಾರವಾಡದ ಜೋಡಿ ಜಗದೀಶ್ ಶೆಟ್ಟರ್ ಮತ್ತು ಪ್ರಲ್ಹಾದ್ ಜೋಶಿ. ಯಡಿಯೂರಪ್ಪ ಮನಸ್ಸು ಬದಲಾಯಿಸಿ ಜೋಶಿ ಮತ್ತು ಶೆಟ್ಟರ ವಿರೋಧವನ್ನು ಮೀರಿ ಯತ್ನಾಳರನ್ನು ಬಿಜೆಪಿಗೆ ಸೇರಿಸಿಕೊಂಡರು.
ಆದರೆ ಯಡಿಯೂರಪ್ಪನವರೊಡನೆ ಅವರ ಸಂಬಂಧ ಬಹಳ ದಿನ ಮಧುರವಾಗಿ ಉಳಿಯಲಿಲ್ಲ. ಅಷ್ಟರಲ್ಲೆ ರಾಷ್ಟ್ರ ರಾಜಕಾರಣದಲ್ಲಿ ಹಾಗು ಬಿಜೆಪಿ ಹೈಕಮಾಂಡ್ ನಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳು ಆಗಿಹೋಗಿದ್ದವು.
ಹರಕೆಯ ಕುರಿ
ಮೋದಿ ಪ್ರವರ್ಧಮಾನಕ್ಕೆ ಬಂದಂತೆ ಕರ್ನಾಟಕದ ಬಿಜೆಪಿ ಮೇಲೆ ಸಂಘದ ಹಿಡಿತ ಬಲಗೊಂಡಿತು. ಸಂಘ ಹಿನ್ನೆಲೆಯ ಉಡುಪಿ ಮೂಲದ ಬಿ. ಎಲ್ ಸಂತೋಷ್ ಸಾಕಷ್ಟು ಮುನ್ನೆಲೆಗೆ ಬಂದಿದ್ದರು. ಬಿಜೆಪಿ ಮೇಲಿನ ಯಡಿಯೂಪ್ಪನವರ ಹಿಡಿತ ಸಡಿಲಗೊಳಿಸುವ ಕಾರ್ಯಕ್ಕೆ ಚಾಲನೆ ದೊರಕಿತು. ಈಗ ಮತ್ತೊಮ್ಮೆ ಯತ್ನಾಳ್ ಅವರು ಸಂಘ ಹಾಗು ಸಂತೋಷ ಗಾಳಕ್ಕೆ ಬಲಿಯಾದರು. ಪಂಚಮಸಾಲಿ ಮೀಸಲಾತಿ ಹೋರಾಟದ ನೆಪದಲ್ಲಿ ಯಡಿಯೂರಪ್ಪನವರ ವಿರುದ್ಧ ಯತ್ನಾಳರನ್ನು ವ್ಯವಸ್ಥಿತವಾಗಿ ಪ್ರಾಯೋಜಿಸಲಾಯಿತು. ಇದರಿಂದ ಯಡಿಯೂರಪ್ಪ ಹೆಚ್ಚಿನದೇನನ್ನು ಕಳೆದುಕೊಳ್ಳಲಿಲ್ಲ.
ಆದರೆ ಯತ್ನಾಳ್ ಅವರು ಹರಕೆಯ ಕುರಿಯಾಗಿ ಇಡೀ ಕರ್ನಾಟಕದ ಎದುರಿಗೆ ಬಫೂನ್ ತರ ಕಂಡರುˌ ಅವರ ಮುಸ್ಲಿಮ್ ದ್ವೇಷದ ಉಡಾಫೆ ಮಾತುಗಳು ಅವರನ್ನು ಒಬ್ಬ ವಿಧೂಷಕನ ರೀತಿಯಲ್ಲಿ ಬಿಂಬಿಸಿದವು. ಪಕ್ಷದಲ್ಲಿ ತಮಗಿಂತ ಚಿಕ್ಕವರೆಲ್ಲ ಮುಂದೆ ಬರುವುದು ನೋಡಿˌ ಯತ್ನಾಳ್ ಹತಾಶರಾದರು. ಸಾಂದರ್ಭಿಕವಾಗಿದ್ದ ಯಡಿಯೂರಪ್ಪ ದ್ವೇಷ ಶಾಶ್ವತವಾಗಿ ಒಂದು ಗುಣಪಡಿಸಲಾರದ ರೋಗದ ರೂಪದಲ್ಲಿ ಅವರನ್ನು ಆವರಿಸಿ ಅವರು ನಿಜವಾಗಿಯೂ ಮಾನಸಿಕ ಕ್ಷೋಭೆಗೊಳಗಾದರು.
ತಾವು ವಾಜಪೇಯಿ ಸಂಪುಟದಲ್ಲಿ ರಾಜ್ಯ ಮಂತ್ರಿಯಾಗಿದ್ದು ತಮ್ಮ ಸಿನಿಯಾರಿಟಿಯ ಮೂಲಕ ಎನ್ನುವ ಭ್ರಮೆ ಇಂದಿಗೂ ಯತ್ನಾಳರನ್ನು ಆವರಿಸಿದೆ. ಅಂದು ಕರ್ನಾಟಕದ ಬಿಜೆಪಿಯ ಮೇಲೆ ಯಡಿಯೂರಪ್ಪನವರ ನಿಯಂತ್ರಣ ಯಾರೂ ಪ್ರಶ್ನಿಸುವಂತಿರಲಿಲ್ಲ. ಅವರು ಹೇಳಿದವರನ್ನು ಮಾತ್ರ ಕೇಂದ್ರದಲ್ಲಿ ಮಂತ್ರಿಯಾಗಲಿ ಅಥವಾ ಪಕ್ಷದ ಹುದ್ದೆಗಾಗಲಿ ನೇಮಿಸಲು ಸಾಧ್ಯವಿತ್ತು. ಆದರೆ ಯತ್ನಾಳ್ ಅವರಲ್ಲಿ ತಾವೊಬ್ಬ ಪ್ರಬಲ ಪರ್ಯಾಯ ನಾಯಕˌ ಹಾಗು ತಮ್ಮೊಂದಿಗೆ ಇಡೀ ಪಂಚಮಸಾಲಿ ಸಮುದಾಯ ಇದೆ ಎಂದು ಅಂದು ಬಿತ್ತಿದ ಭ್ರಮೆ ಇಂದಿಗೂ ಇದೆ. ಆ ಭ್ರಮೆಯೇ ಅವರನ್ನು ರಾಜಕೀಯ ಅದಃಪತನಕ್ಕೆ ತಂದು ನೂಕಿದ್ದು ಎನ್ನುವುದು ಅಷ್ಟೆ ಸತ್ಯ.
ಯಡಿಯೂರಪ್ಪನವರ ಕುಟುಂಬ ರಾಜಕಾರಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಯತ್ನಾಳ್ ವಿಜಯಪುರದಲ್ಲಿ ಯಾವೊಬ್ಬ ಯುವ ಹಿಂದೂ ನಾಯಕನನ್ನಾಗಲಿˌ ಅಥವಾ ತಮ್ಮದೇ ಸಮುದಾಯದ ಲಿಂಗಾಯತ ಅಥವಾ ಪಂಚಮಸಾಲಿ ನಾಯಕನನ್ನಾಗಲಿ ಬೆಳೆಸದೆ ತಮ್ಮ ಮಗನನ್ನು ಕ್ರಮೇಣವಾಗಿ ಮುನ್ನೆಲೆಗೆ ತರುತ್ತಿದ್ದಾರೆ. ಮೊದಲಿದ್ದ ಆರ್ಥಿಕ ಸಂಕಷ್ಟವೂ ಈಗಿಲ್ಲ.
ಮಾನಸಿಕ ಕ್ಷೋಭೆ
ಆದರೆ ಈಗ ಯತ್ನಾಳ್ ತುಂಬಾ ಮಾನಸಿಕ ಕ್ಷೋಭೆಗೊಳಗಾಗಿದ್ದಾರೆ. ಎಷ್ಟರಮಟ್ಟಿಗೆಂದರೆ ಅವರು ಅದರಿಂದ ಹೊರಬರಲಾರದಷ್ಟು, ತಾವು ಹುಟ್ಟಿದ ಧರ್ಮವನ್ನೆ ದ್ವೇಷಿಸುವಷ್ಟು, ತಮ್ಮ ಧರ್ಮಗುರುವನ್ನೆ ನಿಂದಿಸುವಷ್ಟು ಹಾಗು ಕೊನೆಗೆ ತಮ್ಮನ್ನೆ ತಾವು ದ್ವೇಷಿಸಿಕೊಳ್ಳುವಷ್ಟು.
ಮತ್ತೊಮ್ಮೆ ಯತ್ನಾಳ್ ಅವರು ಸಂಘ ಹಾಗು ಬಿಜೆಪಿ ಹೈಕಮಾಂಡಿನ ಹರಕೆಯ ಕುರಿಯಾಗುವದರಲ್ಲಿ ಯಾವುದೇ ಅನುಮಾನಗಳಿಲ್ಲ. ಯಡಿಯೂರಪ್ಪನವರ ವಿರುದ್ಧ ಎತ್ತಿಕಟ್ಟಲಾದ ಪ್ರತಾಪ್ ಸಿಂಹˌ ಸಿಟಿ ರವಿˌ ಮಂತಾದವರ ಸಾಲಿನಲ್ಲಿ ಯತ್ನಾಳರು ಅಗ್ರಗಣ್ಯರು. ಆದರೆ ಉಳಿದವರು ತಮ್ಮ ಸಮುದಾಯದಲ್ಲಿ ಸಾಕಷ್ಟು ಅನುಕಂಪವನ್ನು ಉಳಿಸಿಕೊಂಡಿದ್ದಾರೆ. ಯತ್ನಾಳರ ಕುರಿತು ಇಡೀ ಲಿಂಗಾಯತ ಸಮುದಾಯಲ್ಲಾಗಲಿ ಅಥವಾ ಪಂಚಮಸಾಲಿ ಉಪವರ್ಗದಲ್ಲಾಗಲಿ ಯಾವ ಬಗೆಯ ಅನುಕಂಪವೂ ಇಲ್ಲ.
ವಿಜಯಪುರ ಜಿಲ್ಲೆಯಲ್ಲಿ ಬೆರಳೆಣಿಕೆಯ ಬಾಲಂಗೋಚಿಗಳು ಹಾಗು ಹತ್ತೆಂಟು ಸಾವಿರ ಮುಗ್ಧ ಪಂಚಮಸಾಲಿಗಳನ್ನು ಬಿಟ್ಟರೆ ಅವರನ್ನು ಯಾರೂ ಬೆಂಬಲಿಸುವುದಿಲ್ಲ. ಹಿಂದೂ ಮುಸ್ಲಿಮ್ ತಿಕ್ಕಾಟವೆ ಅವರನ್ನು ತಿಣುಕಿ ತಿಣುಕಿ ಒಬ್ಬ ಶಾಸಕನನ್ನಾಗಿ ಮಾಡುತ್ತದೆಯೆ ಹೊರತು ಅದಕ್ಕಿಂತ ಹೆಚ್ಚಿನ ಶಕ್ತಿ ಅವರಲ್ಲಿಲ್ಲ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇವರೊಬ್ಬ ಖಳನಾಗಿಯು ಹಾಗು ದುರಂತನಾಯಕನಾಗಿಯೂ ಉಳಿಯಬಲ್ಲರೆ ಹೊರತು ಅದಕ್ಕಿಂತ ಹೆಚ್ಚಿನದೇನನ್ನು ಇವರು ಸಾಧಿಸುವ ಲಕ್ಷಣಗಳಿಲ್ಲ.
ಹರಕು ಬಾಯಿಯ ಹರಕೆಯ ಕುರಿ
ಯನ್ನಾಳ ಆರ್ ಎಸ್ಎಸ್ ನ ಮನುವಾದಿಗಳ ಮಾತನ್ನು ಕೆಳಿಕೊಂಡು ಒಬ್ಬ ಮಜಬೂತಾದ ಜೊಕರಾಗಿದ್ದಾನೆ.ಅವರೂ ಕೂಡಾ ಇನ್ನೇನು ಪಗಡೆ ಕಾಯಿಯಾಗಿ ಉಪಯೊಗಿಸುತ್ತಾಯಿದ್ದಾರೆ.
ನಿಮ್ಮ ಬರಹದಲ್ಲಿ ಸೂಕ್ಷ್ಮ ಸಂವೇದನೆ ಇದೆ. ಸಮತೋಲನ ಇದೆ. ಯತ್ನಾಳರವರು ಸುಧಾರಿಸಿಕೊಳ್ಳಬೇಕೆಂಬ ಕಳಕಳಿ ಇದೆ.
ಇದನ್ನು ಅರ್ಥ ಮಾಡಿಕೊಳ್ಳದೇ ಅವರು ಹೀಗೆ ಮುಂದುವರೆದರೆ ಎಸೆದ ಬಾಳೆಹಣ್ಣಿನ ಸಿಪ್ಪೆಯಾಗುವುದರಲ್ಲಿ ಕಾಲ ದೂರವಿಲ್ಲ
ಬಸವಣ್ಣ ನವರ ಹೆಸರಿಟ್ಟುಕೊಂಡು ಹಣ ಅಧಿಕಾರ ಗದ್ದುಗೆ ಇಡದುಕೊಂಡಿರುವ ಯತ್ನಾಳ್….ನಿಮ್ಮ ಹೆಸರನ್ನು ಗೋವಿಂದಪ್ಪ ಎಂದು ಬದಲಾಯಿಸಿಕೊಂಡಿದ್ದಾರೆ ಬಹಳ ಚೆನ್ನಾಗಿರುತಿತ್ತು…..ಬಸವ ಧರ್ಮಕ್ಕೆ ಕಳಂಕ ನೀನು…ವಿಶ್ವಗುರು ಬಸವಣ್ಣನವರ ಲಿಂಗೈಕ್ಯ ಸಂಧರ್ಭವನ್ನೇ …ನೀರಿಗೆ ಬಿದ್ದು ಸುತ್ತರು ಎಂದು ಹೇಳುವ ಯತ್ನಾಳ್….ನಿನ್ನ ಸ್ವಾರ್ಥತೆ….ಅಧಿಕಾರ ದಾಹ. ಬಸವ ದ್ರೋಹಿಗಳ ಕೂಡಿ ದೋಸ್ತಿ ಎಷ್ಟಿದೆ ಎಂಬುವುದು ತಿಳಿಯುತ್ತದೆ…ವಿನೋಚಕಾಲಕ್ಕೆ ವಿಪರೀತ ಬುದ್ಧಿ ಎಂಬುವುದು ಜನರಿಗೆ ತಿಳಿಯದಿರದು…ಯತ್ನಾಳ್….
ಇವರನ್ನು ರಾಜಕೀಯವಾಗಿ ಬಹಿಷ್ಕರಿಸಲು ಕೆಲಸ ಮಾಡಿ.