ಬಸವಾದಿ ಶರಣರ ತತ್ವ ಪುರಾಣವಲ್ಲ, ವಾಸ್ತವ ವೈಚಾರಿಕತೆಯ ತತ್ವ
ಹರಪನಹಳ್ಳಿ:
ಭಾರತ ಅರ್ಥವಾದರೆ ಮಾತ್ರ ನಮಗೆ ಸಾಂಸ್ಕೃತಿಕ ನಾಯಕನ ಬಗ್ಗೆ ಅರ್ಥವಾಗುತ್ತದೆ. ದೇಶ ಅರ್ಥವಾಗದ ಹೊರತು ಸಂಸ್ಕೃತಿ ಅರ್ಥವಾಗುವುದಿಲ್ಲ. ಪ್ರಜ್ಞಾವಂತ ಮನುಷ್ಯನಲ್ಲಿ ಯಾವಾಗ ಪ್ರಶ್ನಿಸುವ ಗುಣ ಹುಟ್ಟುತ್ತದೆ, ಆಗ ಅದಕ್ಕೆ ಉತ್ತರ ಕಂಡುಕೊಂಡಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯ, ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಹೇಳಿದರು.
ಪಟ್ಟಣದ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ, ಕಾಲೇಜು ಐ.ಕ್ಯೂ.ಎ.ಸಿ. ಸಹಬಾಗಿತ್ವದೊಂದಿಗೆ 893ನೇ ಬಸವ ಜಯಂತಿ ಪ್ರಯುಕ್ತ ‘ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ವಿಶೇಷ ಉಪನ್ಯಾಸ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ವೈಚಾರಿಕ ಹಿನ್ನೆಲೆಯ ಲಿಖಿತ ಸಂವಿಧಾನಕ್ಕಿಂತ, ಮೌಢ್ಯತೆ, ಅಜ್ಞಾನ ತುಂಬಿರುವ ಅಲಿಖಿತ ಸಂವಿಧಾನದ ಪ್ರಭಾವ ಬೀರಲು ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಇವುಗಳನ್ನು ಅರ್ಥೈಸಿಕೊಂಡು, ಸಾಂಸ್ಕೃತಿಕ ನಾಯಕ ಎಂದು ಗೌರವಿಸಲ್ಪಡುವ ಬಸವಣ್ಣನವರ ಅದರ್ಶ, ತತ್ವಗಳನ್ನು, ಅವರ ಸಮಕಾಲಿನವರ ವಚನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.

ಬುದ್ದ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳು ಜನಪರ ಸಿದ್ದಾಂತಗಳಾಗಿವೆ. ಆದರೆ ಅಂತಹ ತತ್ವ, ಸಿದ್ದಾಂತಗಳನ್ನು ಶತಶತಮಾನಗಳಿಂದ ದೇವಸ್ಥಾನ, ಪುರಾಣಗಳಿಂದ ಉಂಡವರು ಇವುಗಳನ್ನು ವಿರೋಧಿಸುತ್ತಿದ್ದಾರೆ ಎಂದ ಅವರು, ಧರ್ಮ ದೇಶವನ್ನು ಆಳಬೇಕು ಆದರೆ ಜಾತಿಯಲ್ಲ.
ಧರ್ಮ ಮೊದಲೋ, ಜಾತಿ ಮೊದಲೋ ಎನ್ನುವುದು ಅಂದಿನಿಂದ ಇಂದಿನವರೆಗೂ ಚರ್ಚೆ ನಡೆದಿದೆ. ಆದರೆ ಧರ್ಮ ಜಾತಿಯ ಕೈಗೆ ಬಂದು ದೇವರು ಸಂಕೋಲೆಗೆ ಸಿಲುಕಿದ. ಇದನ್ನು ಬಸವಣ್ಣ ವಿರೋಧ ಮಾಡಿದರು ಎಂದು ಹೇಳಿದರು.
ಅವರು ಜಾತ್ಯತೀತವಾಗಿ ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದರು. ಇವ ನಮ್ಮವ, ಇವ ನಮ್ಮವ ಎಂದು ಭೇದಭಾವ ಮಾಡದೆ ಸಕಲರನ್ನು ಒಪ್ಪಿ ಅಪ್ಪಿಕೊಂಡವರು ಸಾಂಸ್ಕೃತಿಕ ನಾಯಕರಾಗುತ್ತಾರೆ. ಬಸವಣ್ಣನವರದು ಪುರಾಣವಲ್ಲ ವಾಸ್ತವದ ವೈಚಾರಿಕತೆಯ ತತ್ವ ಆಗಿತ್ತು ಎಂದರು.

ಪುರಾಣ, ಚರಿತ್ರೆ ಮೂಲಕ ಜನರಲ್ಲಿ ಅಜ್ಞಾನ ತುಂಬಿದ ನಾಡಿನಲ್ಲಿ ವೈಚಾರಿಕತೆಯ ವಾಸ್ತವ ಪರಿಚಯಿಸಿ, ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಧರ್ಮವನ್ನು ಪರಿಷ್ಕರಿಸಿದರು. ಕಾಯಕ ಸಿದ್ದಾಂತವ ಪ್ರತಿಪಾದಕರಾಗಿದ್ದರು. ಕಾಯಕ ಸಿದ್ದಾಂತವನ್ನು ತಂದರು, ಇದರ ಹಿಂದೆ ಇರುವುದು ದಾಸೋಹ ಪರಂಪರೆಯಾಗಿತ್ತು. ಅಂದರೆ ಎಲ್ಲರೂ ದುಡಿದು, ಉಣ್ಣಬೇಕು ಎನ್ನುವ ನಿಲುವು ಅವರಾದಾಗಿತ್ತು.
ಬಸವಣ್ಣನವರ ವಚನ ಚಳುವಳಿಗಳ ನಡುವೆ ಸಂಸ್ಕೃತಿ ಹುಟ್ಟಿತು. ಈಗ ಅವರನ್ನು ಜಗತ್ತು ಕೊಂಡಾಡುತ್ತಿದೆ. ಇಂದು ಅಂಬೇಡ್ಕರ್ ಬರೆದ ಸಂವಿಧಾನ ಬಸವಣ್ಣನವರ ಆದರ್ಶದ್ದೆ ಆಗಿದೆ, ಅದರಡಿಯಲ್ಲಿ ಎಲ್ಲವೂ ನಡೆಯುತ್ತಿದೆ.
12ನೇ ಶತಮಾನದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಲಾಯಿತು. ಲಿಂಗಭೇದ ತೊರೆದು ಎಲ್ಲರಿಗೂ ಅವಕಾಶ ಕೊಟ್ಟಿದ್ದು ಅನುಭವ ಮಂಟಪವಾಗಿತ್ತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದ ಅವರು ಅಂದಿನ ಮೂಢನಂಬಿಕೆಗಳು, ಪುರಾಣಗಳು, ಜನರಿಗೆ ಅಮಾನವೀಯವಾಗಿದ್ದವು ಇವುಗಳನ್ನು ಒಪ್ಪಿಕೊಳ್ಳದೇ ಬಸವಣ್ಣನವರು ಬದ್ದತೆ, ಶಿಸ್ತುಬದ್ದ ಜೀವನದ ಮೂಲಕ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದರು.

ಇಂದಿನ ಯುವಜನತೆ ದುಶ್ಚಟಗಳಿಂದ ಹೊರಬಂದು, ಅಡ್ಡದಾರಿಗೆ ಹೋಗದೆ ಕಾಯಕದ ಮೂಲಕ ಬಸವಣ್ಣನವರ ಅನುಯಾಯಿಗಳಾಗಬೇಕು. ಇಲ್ಲವಾದಲ್ಲಿ ಅಸಂಸ್ಕೃತಿ ಹುಟ್ಟು ಹಾಕಿದಂತಾಗುತ್ತದೆ ಎಂದರು. ಬಸವಣ್ಣನವರ ವಚನಗಳಂತೆ, ಅವರ ಹಾಗೆ ಪ್ರಶ್ನೆ, ಅನ್ಯಾಯದ ವಿರೋಧ ಮಾಡುವ ಕೆಲಸ ನಾವು ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಆಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿ ಅದ್ಯಕ್ಷ ಕೆ. ಕೋಟ್ರೇಶ್ವರ ನೇರವೇರಿಸಿದರು. ಕಾಲೇಜು ಪ್ರಾಚಾರ್ಯ ಡಾ. ಸಿದ್ದಲಿಂಗ ಮೂರ್ತಿ ಎಸ್. ಎಂ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಡಾ. ಕೆ ರವೀಂದ್ರನಾಥ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕ ಅಧ್ಯಕ್ಷ ಮಾವಿನಹಳ್ಳಿ ಎಸ್. ಬಸವರಾಜ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಉದಯಶಂಕರ ಮಾಗಾನಹಳ್ಳಿ ವಕೀಲರು, ಪತ್ರಕರ್ತರಾದ ಪಿ. ಕರಿಬಸಪ್ಪ, ಕಾಲೇಜು ಐ.ಕ್ಯೂ.ಎ.ಸಿ ಸಂಚಾಲಕ ಡಾ. ಜಿ. ವೈ. ಗೋವರ್ಧನ ಯಾದವ್, ಎನ್‌ಎಸ್‌ಎಸ್ ಅಧಿಕಾರಿ ರಾಜಶೇಖರ, ಶರಣ ಸಾಹಿತ್ಯ ಪರಿಷತ್ ಅದ್ಯಕ್ಷ ಬಿ. ರಾಜಶೇಖರ, ಅಕ್ಕಿ ಮಲ್ಲಿಕಾರ್ಜುನ, ಅಡಿವಿಹಳ್ಳಿ ಪೂಜಾರ ಬಸವರಾಜ, ಬಾಗಳಿ ಶಿವಕುಮಾರ, ಗುಡಿಹಳ್ಳಿ ಹಾಲೇಶ ಸೇರಿದಂತೆ ಇತರರು ಇದ್ದರು.
