ಹರ್ಡೇಕರ್ ಮಂಜಪ್ಪನವರ ಬದುಕ ಬದಲಿಸಿದ ವಚನ ಸಾಲು

ರಾಯಚೂರು :

ನಗರದ ಬಸವ ಕೇಂದ್ರದಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಹಾಗೂ ಗದಗ ತೋಂಟದ ಸಿದ್ಧಲಿಂಗ ಶ್ರೀಗಳ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ನಿವೃತ್ತ ಪ್ರೊ. ಅಮರೇಗೌಡ ಪಾಟೀಲ ಮಾತನಾಡಿ, ಹರ್ಡೇಕರ್ ಮಂಜಪ್ಪನವರು ಆರಂಭದಲ್ಲಿ ಆರ್ಯ ಸಮಾಜದ ಪ್ರತಿಪಾದಕರಾಗಿದ್ದರು. “ದಾಸಿಯ ಪುತ್ರನಾಗಲಿ, ವೇಶ್ಯೆಯ ಪುತ್ರನಾಗಲಿ…” ಎಂಬ ವಚನವನ್ನು ಓದಿದ ತಕ್ಷಣ ಲಿಂಗಾಯತ ಧರ್ಮದಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳನ್ನು ಅರಿತು ಆರ್ಯ ಸಮಾಜವನ್ನು ತ್ಯಜಿಸಿ ಬಸವ ಧರ್ಮವನ್ನು ಸ್ವೀಕರಿಸಿದರು.

ಲಿಂಗದೀಕ್ಷೆ ಪಡೆದ ನಂತರ 1913ರಲ್ಲಿ ಬಸವ ಜಯಂತಿ ಮತ್ತು 1935ರಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಮೊದಲಿಗೆ ಆಚರಣೆಗೆ ತಂದ ಶ್ರೇಯಸ್ಸು ಮಂಜಪ್ಪನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಅಶೋಕ್ ಕಾರ್ಪೆ ಮಾತನಾಡಿ, ಮಂಜಪ್ಪನವರು ಬಸವ ತತ್ವದ ಬೆಳವಣಿಗೆ ಮತ್ತು ಅನುಷ್ಠಾನಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ದಾರ್ಶನಿಕರೆಂದರು.  

ವಕೀಲರಾದ ಸಿ.ಬಿ. ಪಾಟೀಲ ಮಂಜಪ್ಪನವರು ರಚಿಸಿದ ಬಸವ ಚರಿತ್ರೆ, ಸ್ವಕರ್ತವ್ಯ ಸಿದ್ಧಾಂತ, ಮಹಾತ್ಮ ಗಾಂಧಿಯವರ ಚರಿತ್ರೆ ಮುಂತಾದ ಅಮೂಲ್ಯ ಗ್ರಂಥಗಳನ್ನು ಸ್ಮರಿಸಿದರು.

ಹಿರಿಯರಾದ ಹರವಿ ಶಂಕರಗೌಡರು ಮಾತನಾಡಿ, ಮಹಾತ್ಮ ಗಾಂಧಿಯವರ ನಿರ್ದೇಶನದಂತೆ ಆಲಮಟ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದವರು ಮಂಜಪ್ಪನವರು ಎಂದರು.  ಬಂಥನಾಳ ಸಂಗನಬಸವ ಶಿವಯೋಗಿಗಳ ಜೊತೆ ವಿಜಯಪುರ ಜಿಲ್ಲೆಯಲ್ಲಿ ಸಂಚರಿಸಿ ದುಶ್ಚಟ ಮತ್ತು ಮೌಢ್ಯಾಚರಣೆಗಳನ್ನು ಹೋಗಲಾಡಿಸಲು ಶ್ರಮಿಸಿದರು. 1925ರ ಶ್ರಾವಣ ಮಾಸದಲ್ಲಿ ಬಂಥನಾಳ ಮಠದಲ್ಲಿ ಒಂದು ತಿಂಗಳ ಕಾಲ ಬಸವ ಪುರಾಣವನ್ನು ನಡೆಸಿಕೊಟ್ಟರೆಂದು ತಿಳಿಸಿದರು.

ಶರಣಬಸವ ಜಾಡಲದಿನ್ನಿ ಮಾತನಾಡಿ, ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗ ಶ್ರೀಗಳು ಅಪ್ಪಟ ಬಸವತತ್ವವಾದಿಗಳು. ಅವರು ಕೇವಲ ಭಾಷಣಕಾರರಲ್ಲ; ತಾವು ಹೇಳಿದ ಮಾತುಗಳಿಗೆ ಬದ್ಧರಾಗಿದ್ದರು. ಸಾರ್ವಜನಿಕ ಹಿತಕ್ಕೆ ಧಕ್ಕೆ ಬರುವ ಸಮಸ್ಯೆಗಳ ವಿರುದ್ಧ ಉಗ್ರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಜಪಾನ್ ಮೂಲದ ಪೋಸ್ಕೊ ಉದ್ದಿಮೆಗೆ ಕಪ್ಪತ್ತಗುಡ್ಡದ ಸಾವಿರಾರು ಎಕರೆ ಜಮೀನನ್ನು ನೀಡಲು ಸರ್ಕಾರ ಮುಂದಾದಾಗ ಜನರೊಂದಿಗೆ ಸೇರಿ ಹೋರಾಡಿ ಕಪ್ಪತ್ತಗುಡ್ಡವನ್ನು ಉಳಿಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಹೇಳಿದರು.

ಡಾ. ಪ್ರಿಯಾಂಕಾ ಗದ್ವಾಲ್ ಗೋಕಾಕ ಚಳುವಳಿಯಲ್ಲಿ ತೋಂಟದ ಶ್ರೀಗಳ ಮುಂಚೂಣಿ ಪಾತ್ರವನ್ನು ಸ್ಮರಿಸಿ, ಲಿಂಗಾನುಸಂಧಾನ ವಿಷಯದ ಕುರಿತು ವಿವರಿಸಿದರು.

ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡರು ಮಾತನಾಡಿ, ಹರ್ಡೇಕರ್ ಮಂಜಪ್ಪನವರು ಮತ್ತು ತೋಂಟದ ಸಿದ್ಧಲಿಂಗ ಶ್ರೀಗಳು ಶರಣ ತತ್ವದ ಪ್ರಚಾರ ಮತ್ತು ಅನುಷ್ಠಾನಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಬಸವ ಕೇಂದ್ರವು ಶರಣರ ಜಯಂತಿ ಹಾಗೂ ಸ್ಮರಣೋತ್ಸವಗಳನ್ನು ಆಚರಿಸುವ ಮೂಲಕ ಅವರ ಆದರ್ಶಗಳನ್ನು ಜನಮನಕ್ಕೆ ತಲುಪಿಸುತ್ತಿರುವುದು ಶ್ಲಾಘನೀಯವೆಂದರು.

ಅಧ್ಯಕ್ಷತೆ ವಹಿಸಿದ್ದ  ರಾಚನಗೌಡ ಕೋಳೂರು ಮಾತನಾಡಿ, ಬಸವ ಕೇಂದ್ರವು ರಚನಾತ್ಮಕ ಮತ್ತು ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಎಲ್ಲರೂ ಸಹಕಾರ ನೀಡುವಂತೆ ಕರೆ ನೀಡಿದರು. ಕೋಶಾಧ್ಯಕ್ಷ ಎಸ್. ಶಂಕರಗೌಡರು ಕೇಂದ್ರದ ಲೆಕ್ಕಪತ್ರ ವರದಿಯನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರದ ಕಟ್ಟಡ ನಿಧಿಗೆ ₹ 25 ಸಾವಿರ ದಾಸೋಹವಾಗಿ ನೀಡಿದ ಶರಣೇಗೌಡ ಹಂಚಿನಾಳ ವಕೀಲರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚನ್ನಬಸವ, ವನಜಾಕ್ಷಿ ಗಿರಿಜಾ ಶಂಕರ, ಕುರುಗೋಡು ಬಸವರಾಜ ಸೇರಿದಂತೆ ಅನೇಕ ಶರಣ-ಶರಣೆಯರು ಉಪಸ್ಥಿತರಿದ್ದರು.

ವಚನ ಗಾಯನವನ್ನು ರಾಘವೇಂದ್ರ ಆಶಾಪುರ ಮತ್ತು ನಾಗೇಶ್ವರಪ್ಪ ತಂಡ ನೆರವೇರಿಸಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಜಗದೇವಿ ಚನ್ನಬಸವ ನಡೆಸಿಕೊಟ್ಟರು. ಜೆ. ಬಸವರಾಜ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಮಲ್ಲಿಕಾರ್ಜುನ ಗುಡಿಮನಿ ವಂದಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *