ನರೇಗಲ್:
ನರೇಗಲ್ ಹೋಬಳಿಯ ಜಕ್ಕಲಿ ಗ್ರಾಮದಲ್ಲಿರುವ ಪವಾಡ ಪುರುಷ ಅಣ್ಣಯ್ಯ– ತಮ್ಮಯ್ಯ ಶರಣರ ಗದ್ದುಗೆ ಎಲ್ಲಾ ಜಾತಿ ಮತ ಪಂಥದ ಜನರನ್ನೂ ಆಕರ್ಷಿಸುತ್ತಿದೆ.
ಯಾವುದೇ ಧಾರ್ಮಿಕ ಕಾರ್ಯಗಳು ನಡೆದರೂ ಉಭಯ ಶರಣರ ಗದ್ದುಗೆಯಿಂದಲೇ ಆರಂಭವಾಗುತ್ತವೆ. ಮೊಹರಂನಲ್ಲಿ ಅಲೈದೇವರು, ಅನ್ನದಾನೇಶ್ವರ ಮಠದ ಪಲ್ಲಕ್ಕಿ, ವೀರಭದ್ರೇಶ್ವರ ಕಲ್ಮೇಶ್ವರ ದೇವಸ್ಥಾನದ ಕಳಸ ಪೂಜೆ ಮಾಡಿ ಇಲ್ಲಿಂದಲೇ ಹೊರಡುತ್ತವೆ.
1811 ಮತ್ತು 1814ರಲ್ಲಿ ಜನಿಸಿದ ಅಣ್ಣಯ್ಯ ಮತ್ತು ತಮ್ಮಯ್ಯ ಸಹೋದರರು ಪವಾಡಗಳನ್ನು ಮಾಡಿದ್ದರೆಂಬ ನಂಬಿಕೆಯಿದೆ.
ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಜನ ಹಿತಕ್ಕಾಗಿ ಬದುಕಿದ ಈ ಶರಣರು ತಮ್ಮ ತಂದೆಯವರ ಬಳಿಯಿಟ್ಟಿದ್ದ ಸಾವಿರಾರು ಸಾಲದ ಕಾಗದಗಳನ್ನು ಸುಟ್ಟು ಹಾಕಿದರು.
ಸಾಲ ಮಾಡಿದ್ದ ರೈತರ ಮನೆಯಲ್ಲಿ ನೀರು ಕುಡಿದು ಅಣ್ಣಯ್ಯ-ತಮ್ಮಯ್ಯನವರು ನಿಮ್ಮ ಸಾಲ ತೀರಿತು ಎಂದು ಅವರ ಆಸ್ತಿಪತ್ರಗಳನ್ನು ಮರಳಿ ನೀಡಿದರು.
ಭೀಕರ ಬರಗಾಲದಲ್ಲಿ ಅನೇಕ ದಾಸೋಹ ನಡೆಸಿದರು.