“ದೇಶಕ್ಕೆ ಅವಶ್ಯ ಇಲ್ಲದವರು ಜನಸಂಖ್ಯಾ ನಿಯಂತ್ರಣ ಕಾಯಿದೆ ಪಾಲಿಸುತ್ತಿಲ್ಲ. ಆದರೆ, ಇಡೀ ಜಗತ್ತಿಗೆ ಬೇಕಾದ ಹವ್ಯಕರು ಮದುವೆ, ಮಕ್ಕಳಿಂದ ದೂರವಾಗುತ್ತಿದ್ದಾರೆ,” ಎಂದು ರಾಘವೇಶ್ವರ ಭಾರತೀ ಶ್ರೀ ಹೇಳಿದರು.
ಬೆಂಗಳೂರು
ಹವ್ಯಕರು ಹೆಚ್ಚಿನ ಮಕ್ಕಳನ್ನು ಹೆತ್ತು ಜನಸಂಖ್ಯೆ ಹೆಚ್ಚಿಸಬೇಕು ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ನೀಡಿದ್ದ ಕರೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅನುಮೋದಿಸಿದ್ದಾರೆ.
“ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಕರೆಯಂತೆ ಹವ್ಯಕರು ತಮ್ಮ ಸಂತತಿ ಹೆಚ್ಚಿಸುವತ್ತ ಗಮನಹರಿಸಬೇಕು. ಹವ್ಯಕ ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು ಹೊಸ ಪೀಳಿಗೆಯ ಅವಶ್ಯಕತೆಯಿದೆ,” ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶನಿವಾರ ಹೇಳಿದರು.
ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಹವ್ಯಕ ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಅವರು ಉನ್ನತ ಹುದ್ದೆಯಲ್ಲಿದ್ದು, ಎಲ್ಲರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ, ಎಂದರು.
ಅದಕ್ಕೆ ಮುಂಚೆ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ 30 ವರ್ಷಗಳ ಹಿಂದೆಯಿದ್ದ ಜನಸಂಖ್ಯೆ ಇಂದು ಅದರ ಅರ್ಧದಷ್ಟಿಲ್ಲ, ಎಂದು ವಿಷಾದ ವ್ಯಕ್ತಪಡಿಸಿದರು.

ದೇಶಕ್ಕೆ ಅವಶ್ಯ ಇಲ್ಲದವರು, ಇರುವವರು
“ದೇಶಕ್ಕೆ ಅವಶ್ಯ ಇಲ್ಲದವರು ಜನಸಂಖ್ಯಾ ನಿಯಂತ್ರಣ ಕಾಯಿದೆ ಪಾಲಿಸುತ್ತಿಲ್ಲ. ಆದರೆ, ಇಡೀ ಜಗತ್ತಿಗೆ ಅವಶ್ಯವಾಗಿ ಬೇಕಾದ ಹವ್ಯಕರು ಕಾಯಿದೆ ಪಾಲನೆ ಮಾಡುವ ಮೂಲಕ ಮದುವೆ, ಮಕ್ಕಳಿಂದ ದೂರವಾಗುತ್ತಿದ್ದಾರೆ.
ಆದ್ದರಿಂದಲೇ ದಕ್ಷಿಣ ಕೊರಿಯಾದಂತೆ ನಮ್ಮಲ್ಲಿಯೂ ಹವ್ಯಕರ ಸಂಖ್ಯೆ ಕುಸಿಯುತ್ತಿದೆ. ಅಪರೂಪದ ಈ ಹವ್ಯಕ ತಳಿ ಉಳಿಸುವ ಅಭಿಯಾನ ಇಂದು ಅನಿವಾರ್ಯವಾಗಿದ್ದು, ಮಕ್ಕಳೆಂಬ ಸಂಪತ್ತು ಗಳಿಸುವ ಮೂಲಕ ಭೂಮಿ ಮೇಲೆ ನಮ್ಮ ಶಕ್ತಿ ಉಳಿಸಬೇಕು.
ಸಮಾಜದಲ್ಲಿ ಹವ್ಯಕ ಜನಾಂಗದ ಸಂಖ್ಯೆ ಕಡಿಮೆ ಇದ್ದರೂ ಜ್ಞಾನ ಭಂಡಾರ ಅಪಾರ. ಇಡೀ ನಾಡು ದೇಹವಿದ್ದಂತೆ, ಹವ್ಯಕರು ಮೆದುಳಿದ್ದಂತೆ,” ಎಂದು ಕರೆ ನೀಡಿದರು.
ಮಠಗಳಿಂದ ಪೋಷಣೆ
ಹವ್ಯಕರು ಹೆಚ್ಚಿನ ಮಕ್ಕಳನ್ನು ಹೆತ್ತರೆ ಅವರ ಪೋಷಣೆ ಮತ್ತು ಶಿಕ್ಷಣದ ಜವಾಬ್ದಾರಿ ರಾಮಚಂದ್ರಾಪುರ ಮಠ ವಹಿಸಿಕೊಳ್ಳುತ್ತದೆ ಎಂದು ಘೋಷಿಸಿದರು.
ಸಮ್ಮೇಳನದಲ್ಲಿ ರವಿವಾರ ಮಾತನಾಡಿದ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಮುದಾಯದ ಯುವಕ–ಯುವತಿಯರಿಗೆ 18–21 ವರ್ಷಕ್ಕೆ ವಿವಾಹ ಮಾಡಿಸಬೇಕು. ಹವ್ಯಕ ಸಂತತಿ ವೃದ್ಧಿಗೆ ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಮ್ಮ ಮಠಕ್ಕೆ ನೀಡಬಹುದು’ ಎಂದು ಹೇಳಿದರು.
ಹೃದ್ರೋಗ ತಜ್ಞೆ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ, ಮಾಜಿ ಸಚಿವ ರಾಮಚಂದ್ರ ಗೌಡ, ಸಂಸದ ಮತ್ತು ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್, ವಾಗ್ರಿ ಡಾ| ಕೆ.ಪಿ.ಪುತ್ತೂರಾಯ ಸಮ್ಮೇಳನದಲ್ಲಿ ಭಾಗವಹಿಸಿದರು.


ರಾಮಚಂದ್ರಾಪುರದ ಮಠದ ಸ್ವಾಮೀಜಿಯವರು “ದೇಶಕ್ಕೆ ಅವಶ್ಯ ಇಲ್ಲದವರು ಜನಸಂಖ್ಯಾ ನಿಯಂತ್ರಣ ಕಾಯಿದೆ ಪಾಲಿಸುತ್ತಿಲ್ಲ. ಆದರೆ, ಇಡೀ ಜಗತ್ತಿಗೆ ಅವಶ್ಯವಾಗಿ ಬೇಕಾದ ಹವ್ಯಕರು ಕಾಯಿದೆ ಪಾಲನೆ ಮಾಡುವ ಮೂಲಕ ಮದುವೆ, ಮಕ್ಕಳಿಂದ ದೂರವಾಗುತ್ತಿದ್ದಾರೆ”. ಎಂಬ ನುಡಿಮುತ್ತುಗಳನ್ನು ಉದುರಿಸಿದ್ದಾರೆ ಎಂಬ ವರದಿಗಳು ಬಂದಿವೆ. “ದೇಶಕ್ಕೆ ಅವಶ್ಯಕತೆ ಇರುವವರು ಮತ್ತು ಇಲ್ಲದವರು” ಎಂದು ನಿರ್ಧಾರ ಮಾಡಲು ಹಾಗೂ ಇಂದಿನ ನಾಗರೀಕ ಸಮಾಜದಲ್ಲಿ ಇಂತಹ ಅನಾಗರೀಕ ಮಾತುಗಳನ್ನಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇವರಿಗೆ ಬೇಕಿದ್ದರೆ ಹವ್ಯಕ ಸಮಾಜದವರಿಗೆ ಮತ್ತು ಅವರ ಭವಿಷ್ಯದ ದೃಷ್ಟಿಯಿಂದ ಏನು ಬೇಕೋ ಅಥವಾ ಎಷ್ಟು ಮಕ್ಕಳನ್ನು ಮಾಡಿಕೊಳ್ಳಬೇಕೆಂದು ಆಶೀರ್ವಾದ ಮಾಡಲಿ. ಬೇರೆಯವರನ್ನು ತುಚ್ಚಿವಾಗಿ ಕಾಣುವುದು ಅಥವಾ ಅವಮಾನವಾಗುವಂತೆ ಮಾತನಾಡುವುದು ನಾಗರೀಕ ಸಮಾಜದಲ್ಲಿ ಅಪೇಕ್ಷಣೀಯವಲ್ಲ.